More

    ಪ್ರಾಣ ಪ್ರತಿಷ್ಠಾ ಸಮಾರಂಭದ ಸುತ್ತ ರಾಜಕೀಯ: ಎಡಪಕ್ಷ, ಸಿಬಲ್​ ಪಾಲ್ಗೊಳ್ಳುವುದಿಲ್ಲ; ಅಡ್ವಾಣಿ, ಸೋನಿಯಾ, ಖರ್ಗೆ ಏನು ಮಾಡುತ್ತಾರೆ?

    ನವದೆಹಲಿ: ಮುಂದಿನ ತಿಂಗಳು 22ರಂದು ಅಯೋಧ್ಯೆಯಲ್ಲಿ ರಾಮ ಮಂದಿರದಲ್ಲಿ ವಿಗ್ರಹ ಪ್ರತಿಷ್ಠಾಪನೆ (ಪ್ರಾಣ ಪ್ರತಿಷ್ಠಾ) ಸಮಾರಂಭ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆಯಲಿದೆ. ನಿರೀಕ್ಷೆಯಂತೆ ಈ ವಿಷಯವು ಮುಂದಿನ ನಾಲ್ಕೈದು ತಿಂಗಳೊಳಗೆ ನಡೆಯಲಿರುವ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಬಹುದೊಡ್ಡ ರಾಜಕೀಯ ವಿಷಯವಾಗುವುದು ನಿಶ್ಚಿತ. ಜ. 22ರ ಸಮಾರಂಭಕ್ಕಾಗಿ ಧಾರ್ಮಿಕ ಮುಖಂಡರು ಮತ್ತು ನಟರಿಗೆ ಆಮಂತ್ರಣ ಕಳುಹಿಸಲಾಗಿದೆ, ಇದೇ ವೇಳೆ ಕೆಲ ವಿರೋಧ ಪಕ್ಷಗಳ ನಾಯಕರು ಈ ಕಾಯರ್ಕ್ರಮದಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿದ್ದಾರೆ. ತಮ್ಮ ತೀರ್ಮಾನಕ್ಕೆ ಅವರು ಕಾರಣಗಳನ್ನೂ ನೀಡಿದ್ದಾರೆ.

    “ಈ ಧಾರ್ಮಿಕ ಕಾರ್ಯಕ್ರಮವನ್ನು ರಾಜಕೀಯಗೊಳಿಸಲಾಗುತ್ತಿದೆ” ಎಂದು ಸಿಪಿಐ (ಎಂ) ನಾಯಕಿ ಬೃಂದಾ ಕಾರಟ್ ಟೀಕಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಿರುವ ತಮ್ಮ ಪಕ್ಷದ ನಿರ್ಧಾರವನ್ನು ಅವರು ಒತ್ತಿ ಹೇಳಿದ್ದಾರೆ. “ಇಲ್ಲ, ನಾವು ಹೋಗುವುದಿಲ್ಲ, ನಾವು ಧಾರ್ಮಿಕ ನಂಬಿಕೆಗಳನ್ನು ಗೌರವಿಸುತ್ತೇವೆ. ಆದರೆ, ಅವರು ಧಾರ್ಮಿಕ ಕಾರ್ಯಕ್ರಮವನ್ನು ರಾಜಕೀಯದೊಂದಿಗೆ ಜೋಡಿಸುತ್ತಿದ್ದಾರೆ. ಧರ್ಮವನ್ನು ರಾಜಕೀಯ ಅಸ್ತ್ರವಾಗಿ ಬಳಸುವುದು ಅಥವಾ ರಾಜಕೀಯ ಅಜೆಂಡಾವನ್ನು ಮುನ್ನಡೆಸುವುದು ಸರಿಯಲ್ಲ” ಎಂದು ಕಾರಟ್ ಹೇಳಿದ್ದಾರೆ.

    ಕಾರಟ್‌ ಟೀಕೆಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಅವರು, “ಎಲ್ಲರಿಗೂ ಆಮಂತ್ರಣಗಳನ್ನು ಕಳುಹಿಸಲಾಗಿದೆ. (ಆದರೆ) ಭಗವಾನ್ ರಾಮನಿಂದ ಕರೆದವರು ಮಾತ್ರ ಬರುತ್ತಾರೆ” ಎಂದರು.

    ರಾಮ ಮಂದಿರದ ಕಾರ್ಯಕ್ರಮದ ಆಹ್ವಾನವನ್ನು ನಿರಾಕರಿಸಿದವರು ಎಡ ಪಕ್ಷಗಳ ನಾಯಕರು ಮಾತ್ರವ್ಲಲ. ಮಾಜಿ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಅವರೂ ಇದೇ ನಿರ್ಧಾರ ಪ್ರಕಟಿಸಿದ್ದಾರೆ.
    “ನನ್ನ ಹೃದಯದಲ್ಲಿ ಭಗವಾನ್ ರಾಮ” ಇದ್ದಾರೆ ಮತ್ತು ಆದ್ದರಿಂದ, ಸಮಾರಂಭದಲ್ಲಿ ಪಾಲ್ಗೊಳ್ಳುವ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ, ಇದು ಚುನಾವಣೆಯ ಮೊದಲು ಬಿಜೆಪಿಯ ಶಕ್ತಿ ಪ್ರದರ್ಶನವಾಗಿದೆ ಎಂದೂ ಅವರು ಹೇಳಿದ್ದಾರೆ.

    “ಅವರು ಭಗವಾನ್ ರಾಮನ ಬಗ್ಗೆ ಮಾತನಾಡುತ್ತಾರೆ. ಆದರೆ ಅವರ ವರ್ತನೆಯು ರಾಮನ ಹತ್ತಿರವಿಲ್ಲ. ಸತ್ಯತೆ, ಸಹಿಷ್ಣುತೆ, ತ್ಯಾಗ ಮತ್ತು ಇತರರನ್ನು ಗೌರವಿಸುವುದು ರಾಮನ ಕೆಲವು ಗುಣಲಕ್ಷಣಗಳು. ಆದರೆ ಅವರು ಇದಕ್ಕೆ ವಿರುದ್ಧವಾಗಿ ಮಾಡುತ್ತಾರೆ. ಹೃದಯದಲ್ಲಿ ರಾಮನ ತತ್ವಗಳು ಇರಬೇಕು” ಎಂದು ಸಿಬಲ್​ ಟೀಕಿಸಿದ್ದಾರೆ.

    ಇನ್ನೊಂದು ಎಡಪಕ್ಷವಾದ ಸಿಪಿಐ ಕೂಡ ರಾಮಮಂದಿರ ಕಾರ್ಯಕ್ರಮದಿಂದ ಹೊರಗುಳಿಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

    ಈ ನಡುವೆ ಎಲ್ಲರ ಕಣ್ಣುಗಳು ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಸೇರಿದಂತೆ ಹಿರಿಯ ಕಾಂಗ್ರೆಸ್​ ನಾಯಕರ ಮೇಲೆ ನೆಟ್ಟಿವೆ. ಲೋಕಸಭೆಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನೂ ಆಹ್ವಾನಿಸಲಾಗಿದೆ, ಆದರೆ ರಾಹುಲ್ ಗಾಂಧಿ ಅವರು ಆಹ್ವಾನ ಸ್ವೀಕರಿಸಿದ್ದಾರೆಯೇ ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ.

    ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಆಹ್ವಾನ ಬಂದಿರುವುದನ್ನು ದೃಢಪಡಿಸಿದ್ದಾರೆ. ಪಕ್ಷದ ನಿಲುವಿನ ಬಗ್ಗೆ ನಿಮಗೆ (ಜನವರಿ 22 ರಂದು ತಿಳಿಸಲಾಗುವುದು) ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

    ತಮ್ಮನ್ನು ಆಹ್ವಾನಿಸದ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ ಸಿಂಗ್, “ಅವರು (ಸೋನಿಯಾ ಗಾಂಧಿ) ಹೋಗುತ್ತಾರೆ ಅಥವಾ ನಿಯೋಗ ಹೋಗುತ್ತದೆ” ಎಂದು ಹೇಳಿದರು.

    ಆಮಂತ್ರಣ ವಿವಾದವು ವಿರೋಧ ಪಕ್ಷದ ನಾಯಕರಿಗೆ ಮಾತ್ರ ಸೀಮಿತವಾಗಿಲ್ಲ, ಬಿಜೆಪಿ ಇಬ್ಬರು ಹಿರಿಯ ನಾಯಕರಾದ ಎಲ್‌.ಕೆ. ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಶಿ ಅವರನ್ನು ಸಮಾರಂಭಕ್ಕೆ ಆಹ್ವಾನಿಸಿಲ್ಲ ಎಂಬ ಆಕ್ಷೇಪಗಳು ಈ ಮೊದಲು ಕೇಳಿಬಂದಿದ್ದವು. ಬಿಜೆಪಿಯ ಹಿಂದಿನ ನಾಯಕರನ್ನು ಅವಮಾನಿಸಲಾಗುತ್ತಿದೆ ಎಂದು ಹಲವರು ಆರೋಪಿಸಿದರು. ಈ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷತ್​, ಮಾಜಿ ಉಪಪ್ರಧಾನಿ ಅಡ್ವಾಣಿ ಮತ್ತು ಮಾಜಿ ಕೇಂದ್ರ ಸಚಿವ ಮುರಳಿ ಮನೋಹರ್​ ಜೋಶಿ ಅವರಿಗೆ ಆಹ್ವಾನಗಳನ್ನು ಕಳುಹಿಸಲಾಗಿದೆ ಎಂದು ಸ್ಪಷ್ಟನೆ ನೀಡಿತು. ಹೀಗಿದ್ದರೂ ಈ ಇಬ್ಬರೂ ನಾಯಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಇನ್ನೂ ಖಚಿತವಾಗಿಲ್ಲ.

    ಪ್ರಧಾನಿ ಅಭ್ಯರ್ಥಿಯಾಗಿ ಖರ್ಗೆ ಬಿಂಬಿಸುವ ವಿಚಾರದಲ್ಲಿ ಭಾರತ ಬಣದಲ್ಲಿ ಬಿರುಕು: 1977ರ ಚುನಾವಣೆಯನ್ನು ಶರದ್ ಪವಾರ್ ಉಲ್ಲೇಖಿಸಿದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts