More

    ಸಾಹಿತ್ಯ ರಂಗದಲ್ಲಿ ರಾಜಕೀಯ ರಂಗು

    ಸುಭಾಸ ಧೂಪದಹೊಂಡ ಕಾರವಾರ

    ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ಮೇ 9ರಂದು ಚುನಾವಣೆ ಘೊಷಣೆಯಾಗಿದೆ. ಸಾಹಿತ್ಯ ವಲಯದಲ್ಲಿ ರಾಜಕೀಯ ಗಾಳಿ ಶುರುವಾಗಿದೆ.

    ಜಿಲ್ಲೆಯಲ್ಲಿ ಆಕಾಂಕ್ಷಿಗಳು ಸ್ಪರ್ಧೆಗೆ ಸಿದ್ಧತೆ ನಡೆಸಿದ್ದಾರೆ. ಹಾಲಿ ಅಧ್ಯಕ್ಷ ಅರವಿಂದ ರ್ಕಕೋಡಿ ಹಾಗೂ ಹಿಂದಿನ ಚುನಾವಣೆಯಲ್ಲಿ ಪರಾಭವಗೊಂಡಿದ್ದ ದಾಂಡೇಲಿಯ ಬಿ.ಎನ್. ವಾಸರೆ ಮತ್ತೊಮ್ಮೆ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡುವುದಾಗಿ ಘೊಷಿಸಿಕೊಂಡಿದ್ದಾರೆ. ಇನ್ನೂ ಕೆಲವರು ಸ್ಪರ್ಧಿಸಲು ಪೂರ್ವ ತಯಾರಿ ನಡೆಸಿದ್ದಾರೆ ಎಂಬ ಮಾಹಿತಿ ಇದೆ.

    ಸದಸ್ಯತ್ವ ಹೆಚ್ಚಳ: 2021, ಮೇ 9ಕ್ಕೆ ಮೂರು ವರ್ಷ ಹಿಂದಿನಿಂದಲೂ ಸತತವಾಗಿ ಕಸಾಪ ಸದಸ್ಯತ್ವ ಹೊಂದಿರುವವರಿಗೆ ಮತದಾನದ ಹಕ್ಕು ನೀಡಲಾಗುತ್ತಿದೆ. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವವರು ಸತತವಾಗಿ 10 ವರ್ಷ ಹಿಂದಿನಿಂದ ಕಸಾಪ ಸದಸ್ಯತ್ವ ಹೊಂದಿರಬೇಕು ಎಂಬ ನಿಯಮ ವಿಧಿಸಲಾಗಿದೆ. ಈಗಾಗಲೇ ಚುನಾವಣೆಗೆ ಸಂಬಂಧಿಸಿದಂತೆ ಮತದಾರರ ಪಟ್ಟಿಯನ್ನು ಸಂಬಂಧಪಟ್ಟ ತಹಸೀಲ್ದಾರ್ ಕಚೇರಿಗಳಲ್ಲಿ ಪ್ರಕಟಿಸಲಾಗಿದೆ. ಕಾರವಾರ ತಹಸೀಲ್ದಾರರನ್ನು ಚುನಾವಣಾಧಿಕಾರಿ ಎಂದು ಘೊಷಿಸಲಾಗಿದೆ. ಅಧ್ಯಕ್ಷ ಸ್ಥಾನದ ಚುನಾವಣೆಗೆ ಮಾರ್ಚ್ 29ರಿಂದ ಏಪ್ರಿಲ್ 7ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ. ಏ.8 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ಏ.12 ಕೊನೆಯ ದಿನವಾಗಿದೆ. ಇದುವರೆಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್​ಗೆ 1500ರಷ್ಟು ಮಾತ್ರ ಸದಸ್ಯರಿದ್ದರು. ಈಗ ಸದಸ್ಯರ ಸಂಖ್ಯೆ 4751ಕ್ಕೆ ಏರಿಕೆಯಾಗಿದೆ. ಇದರಿಂದ ಸಹಜವಾಗಿ ಪೈಪೋಟಿಯೂ ಹೆಚ್ಚಿದೆ.

    ಸಾಹಿತ್ಯ ಪರಿಷತ್ ರಾಜಕೀಯ ಹೊರತಾಗಿಲ್ಲ. ಜಾತಿ, ಎಡ ಮತ್ತು ಬಲ ಮುಂತಾದ ಪೈಪೋಟಿ ಇದ್ದೇ ಇದೆ. ಚುನಾವಣೆ ಬಂದಾಗ ಅವುಗಳು ಮುನ್ನೆಲೆಗೆ ಬರುತ್ತಿವೆ. ಆಕಾಂಕ್ಷಿಗಳು ಈಗಾಗಲೇ ತಮ್ಮ ಆಪ್ತರನ್ನು, ಮತದಾರರನ್ನು ಸಂರ್ಪಸಿ ಸ್ಪರ್ಧೆಯ ಬಗ್ಗೆ ಮಾತನಾಡುತ್ತಿದ್ದಾರೆ.

    ನಾನು ಕಳೆದ ವರ್ಷಗಳಲ್ಲಿ ಸಾಹಿತ್ಯ ಪರಿಷತ್​ನಲ್ಲಿ ಇದ್ದ ಏಕತಾನತೆಯನ್ನು ದೂರಮಾಡಿ ಹಲವು ಹೊಸತನ ತಂದಿದ್ದೇನೆ. ಇನ್ನೂ ಆಗಬೇಕಾದ ಸಾಕಷ್ಟು ಕೆಲಸಗಳಿವೆ. ಇದರಿಂದ ಮತ್ತೊಮ್ಮೆ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದು, ಸ್ಪರ್ಧೆ ಮಾಡುತ್ತಿದ್ದೇನೆ.

    | ಅರವಿಂದ ರ್ಕಕೋಡಿ , ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ

    ನಾನು ಕಳೆದ ಬಾರಿ ಜಿಲ್ಲಾ ಕಸಾಪ ಚುನಾವಣೆಗೆ ಸ್ಪರ್ಧಿಸಿ ಐದಾರು ಮತಗಳ ಅಂತರದಿಂದ ಸೋತಿದ್ದೆ. ಈ ಐದು ವರ್ಷದ ಅವಧಿಯಲ್ಲಿ ಜಿಲ್ಲಾ ಕಸಾಪದಲ್ಲಿ ಆಗಬೇಕಾದಷ್ಟು ಕಾರ್ಯ ಆಗಿಲ್ಲ ಎಂಬುದು ನನ್ನ ಭಾವನೆ. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಸ್ಪರ್ಧಿಸುತ್ತಿದ್ದೇನೆ.

    | ಬಿ.ಎನ್.ವಾಸರೆ ಕಸಾಪ ಅಧ್ಯಕ್ಷ ಸ್ಥಾನದ ಸ್ಪರ್ಧಾಕಾಂಕ್ಷಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts