More

    ಬಿಜೆಪಿ ವಿರೋಧಿಸುವುದು ನಾಟಕೀಯವಲ್ಲವೇ?: ಜೆಡಿಎಸ್ ವಿರುದ್ಧ ಕೆಪಿಸಿಸಿ ಉಪಾಧ್ಯಕ್ಷ ಎನ್.ಚಲುವರಾಯಸ್ವಾಮಿ ವಾಗ್ದಾಳಿ

    ಮಂಡ್ಯ: ಬಿಜೆಪಿ, ಜೆಡಿಎಸ್ ನಾಯಕರು ಪರಸ್ಪರ ಅಪ್ಪಿಕೊಳ್ಳುವುದು ಹಾಗೂ ಬಹಿರಂಗ ಟೀಕೆ ವಿಚಾರ ನಮಗೆ ಅರ್ಥವಾಗುತ್ತಿಲ್ಲ. ಆದರೂ ರೈತ ವಿರೋಧಿ ಕಾಯ್ದೆ ಹಾಗೂ ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ಬೆಂಬಲಿಸಿ ಅಲ್ಪಸಂಖ್ಯಾತರ ಓಲೈಕೆಗಾಗಿ ಬಿಜೆಪಿ ವಿರೋಧಿಸುವುದು ನಾಟಕೀಯವಲ್ಲವೇ ಎಂದು ಕೆಪಿಸಿಸಿ ಉಪಾಧ್ಯಕ್ಷ ಎನ್.ಚಲುವರಾಯಸ್ವಾಮಿ ಪ್ರಶ್ನಿಸಿದರು.
    ಭವಿಷ್ಯದಲ್ಲಿ ಎಂತಹ ಸಂದರ್ಭದಲ್ಲೂ ಜೆಡಿಎಸ್ ಜತೆ ಮೈತ್ರಿಗೆ ಮುಂದಾಗುವುದಿಲ್ಲವೆಂದು ಪಕ್ಷದ ನಾಯಕರಾದ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಈಗಾಗಲೇ ಹೇಳಿಕೆ ನೀಡಿದ್ದಾರೆ. ಸೂರ್ಯ ಉದಯಿಸುವುದು ಎಷ್ಟು ಸತ್ಯವೋ, ಅದೇ ರೀತಿ ಸ್ಪಷ್ಪ ಬಹುಮತದೊಂದಿಗೆ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.
    ದೇಶದ ಎಲ್ಲ ವರ್ಗದ ಜನರಿಗೆ ಸಾಮಾಜಿಕ ನ್ಯಾಯಪಾಲನೆಯಂತೆ ಆಯಾ ಕಾಲಘಟ್ಟದಲ್ಲಿ ಅಧಿಕಾರ ನೀಡಿರುವ ಪಕ್ಷ ಕಾಂಗ್ರೆಸ್ ಹಾಗೂ ಇಂದಿರಾ ಗಾಂಧಿ ಕುಟುಂಬ ಮಾತ್ರ. ರಾಷ್ಟ್ರದಲ್ಲಿ ಬಿಜೆಪಿಯನ್ನು ಸದೃಢಗೊಳಿಸಿದ ಎಲ್.ಕೆ. ಅಡ್ವಾಣಿ ಅವರನ್ನು ಪ್ರಧಾನಿ ಅಥವಾ ರಾಷ್ಟ್ರಪತಿ ಹುದ್ದೆಯಿಂದ ವಂಚಿತರನ್ನಾಗಿಸಿದ ಬಿಜೆಪಿಯ ಇಂದಿನ ವರಿಷ್ಠರು ಕಾಂಗ್ರೆಸ್ ಕಡೆಗೆ ಬೊಟ್ಟು ಮಾಡಿ ತೋರಿಸುವುದನ್ನು ಬಿಟ್ಟು ತಮ್ಮ ಪಕ್ಷದ ಹಿರಿಯ ನಾಯಕರಿಗೆ ಆಗಿರುವ ಅನ್ಯಾಯದ ಬಗ್ಗೆ ಮನವರಿಕೆ ಮಾಡಿಕೊಳ್ಳಲಿ. ದೇಶದಲ್ಲಿ ಎಲ್ಲ ಪಕ್ಷಗಳು ಅನಿವಾರ್ಯವಾಗಿ ಕುಟುಂಬ ರಾಜಕಾರಣಕ್ಕೆ ಜೋತು ಬಿದ್ದಿವೆ. ಆದರೆ, ಕಾಂಗ್ರೆಸ್ ಇತರ ಪಕ್ಷಗಳಿಗೆ ಮಾದರಿಯಾಗಿ ಎಲ್ಲ ಸಮುದಾಯವನ್ನು ಪೋಷಿಸುತ್ತಿದೆ ಎಂದರು.
    ನಮ್ಮ ಪಕ್ಷದ ಪ್ರಣಾಳಿಕೆ ಜನಪರವಾಗಲಿದ್ದು, ಉತ್ತಮವಾದ ಕಾರ್ಯಕ್ರಮಗಳ ಮೇಲೆ ಕಾಂಗ್ರೆಸ್ ಚುನಾವಣೆ ಎದುರಿಸಲಿದೆ. ಬಿಜೆಪಿ ರಾಜ್ಯದಲ್ಲಿ ಎಂದೂ ಸ್ವಂತಬಲದಿಂದ ಅಧಿಕಾರಕ್ಕೆ ಬಂದಿಲ್ಲ. ಎಷ್ಟು ರಾಜ್ಯಗಳಲ್ಲಿ ಸ್ವಂತ ಬಲದಿಂದ ಅಧಿಕಾರದಲ್ಲಿದೆ ಎಂಬುದನ್ನು ಬಿಜೆಪಿ ವರಿಷ್ಠರು ಬಹಿರಂಗಗೊಳಿಸಲಿ. ನಂತರ ರಾಜ್ಯದಲ್ಲಿ ಮರಳಿ ಅಧಿಕಾರಕ್ಕೆ ಬರುವ ಮಾತನಾಡಲಿ ಎಂದು ಸವಾಲು ಹಾಕಿದರು.
    ರೈತರಿಗೆ 7 ಗಂಟೆ ವಿದ್ಯುತ್ ನೀಡಬೇಕೆಂಬ ನಿಯಮಕ್ಕೆ ತಿಲಾಂಜಲಿ ಹೇಳಿರುವ ರಾಜ್ಯ ಸರ್ಕಾರ ರಾತ್ರಿ ವೇಳೆಯಲ್ಲಿ ಕೇವಲ ಮೂರ‌್ನಾಲ್ಕು ಗಂಟೆ ವಿದ್ಯುತ್ ನೀಡುತ್ತಿದೆ. ಹಗಲು ವೇಳೆ ವಿದ್ಯುತ್ ನೀಡಬೇಕೆಂಬ ರೈತರ ಸಂಕಷ್ಟ ಜಿಲ್ಲೆಯ ಶಾಸಕರಿಗೆ ಅರ್ಥವಾಗುತ್ತಿಲ್ಲವೇ?. ರಸ್ತೆಗಳ ದುರಸ್ತಿ, ಸಮರ್ಪಕ ವಿದ್ಯುತ್ ಪೂರೈಕೆ, ಕೆಎಂಎಫ್ ವಿಲೀನದ ಬಗ್ಗೆ ಬದ್ಧತೆ ತೋರಬೇಕೆಂದು ಆಗ್ರಹಿಸಿದರು.
    ಜ.8ರಂದು ಚಿತ್ರದುರ್ಗದಲ್ಲಿ ಐತಿಹಾಸಿಕ ಐಕ್ಯತಾ ಸಮಾವೇಶ ನಡೆಯಲಿದೆ. ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರದಿಂದ ಈಗಾಗಲೇ ಪರಿಶಿಷ್ಟ ಸಮಾಜ ಮತ್ತು ಪಂಗಡಗಳ ಅಧ್ಯಕ್ಷರು ಸಭೆಗಳನ್ನು ಮಾಡಿದ್ದಾರೆ. ನಮ್ಮ ಜಿಲ್ಲೆಯಿಂದ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ತೆರಳುತ್ತಿದ್ದಾರೆ ಎಂದು ತಿಳಿಸಿದರು.
    ಕೆಪಿಸಿಸಿ ಉಪಾಧ್ಯಕ್ಷ ಪಿ.ಎಂ. ನರೇಂದ್ರಸ್ವಾಮಿ ಮಾತನಾಡಿ, ವೈಜ್ಞಾನಿಕ ಹಾಗೂ ಸಾಂವಿಧಾನಿಕವಾಗಿ ಜನಸಂಖ್ಯೆ ಆಧಾರದ ಮೇಲೆ ಯಾವುದೇ ಸಮುದಾಯಕ್ಕೆ ಒಳಮೀಸಲಾತಿ ನೀಡುವುದನ್ನು ಕಾಂಗ್ರೆಸ್ ಬೆಂಬಲಿಸುತ್ತದೆ. ಅಸಂವಿಧಾನವಾದ ಮೀಸಲಾತಿ ಬೇಡಿಕೆ ಈಡೇರಿಕೆಯ ಆಶ್ವಾಸನೆ ಸರಿಯಲ್ಲ ಎಂದರು.
    ಜೆಡಿಎಸ್ ವರಿಷ್ಠರು ಜಿಲ್ಲೆಯ ಅಭಿವೃದ್ಧಿ ಬಗ್ಗೆ 2018ರಲ್ಲಿ ನೀಡಿದ್ದ ಪ್ರಣಾಳಿಕೆ ಯಾವ ಪ್ರಮಾಣದಲ್ಲಿ ಅನುಷ್ಠಾನಗೊಂಡಿದೆ ಎಂಬುದನ್ನು ಸಾರ್ವತ್ರೀಕರಣಗೊಳಿಸಿ ಹೊಸ ಭರವಸೆ ನೀಡಲು ಮುಂದಾಗಲಿ. ಪದೇ ಪದೆ ಜನರನ್ನು ಮೂರ್ಖರನ್ನಾಗಿಸುವುದು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದರು.
    ಮಾಜಿ ಶಾಸಕ ರಮೇಶ ಬಂಡಿಸಿದ್ದೇಗೌಡ, ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ, ಮುಖಂಡರಾದ ಗಣಿಗ ರವಿಕುಮಾರ್, ಸಿದ್ಧಾರೂಢ ಸತೀಶ್‌ಗೌಡ, ಡಾ.ಎಚ್.ಕೃಷ್ಣ, ವಿಜಯಲಕ್ಷ್ಮೀ ರಘುನಂದನ್, ಸುರೇಶ್‌ಕಂಠಿ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts