More

    ವೈಯಕ್ತಿಕ ಲೋಪದಿಂದ ಕಳೆದ ಚುನಾವಣೆಯಲ್ಲಿ ಸೋಲು: ಅಮರಾವತಿ ಚಂದ್ರಶೇಖರ್ ಹೇಳಿಕೆ

    ಮಂಡ್ಯ: ಕಳೆದ ಬಾರಿ ಮಂಡ್ಯ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗಣಿಗ ರವಿಕುಮಾರ್ ಅವರ ವೈಯಕ್ತಿಕ ಲೋಪದಿಂದಾಗಿ ಕಡಿಮೆ ಮತಗಳ ಅಂತರದಿಂದ ಹಿನ್ನಡೆ ಅನುಭವಿಸಬೇಕಾಗಿಯಿತು. ಮಾತ್ರವಲ್ಲದೆ ಹಲವು ಬೂತ್‌ನಲ್ಲಿ ಏಜೆಂಟರೇ ಇರಲಿಲ್ಲ. ಕಾರ್ಯಕರ್ತರು ತುಂಬಾ ಚೆನ್ನಾಗಿ ಕೆಲಸ ಮಾಡಿದ್ದರು. ಅಭ್ಯರ್ಥಿಯ ತಪ್ಪು ನಿರ್ಧಾರ ಮುಳುವಾಗಿತ್ತು ಎಂದು ಜಿಲ್ಲಾ ಕಾಂಗ್ರೆಸ್ ಮಾಜಿ ಖಜಾಂಚಿ ಅಮರಾವತಿ ಚಂದ್ರಶೇಖರ್ ಹೇಳಿದರು.
    ಈಗಾಗಲೇ ಮಂಡ್ಯ ವಿಧಾನಸಭಾ ಕ್ಷೇತ್ರದಿಂದ 16 ಜನರು ಆಕಾಂಕ್ಷಿತರಿದ್ದೇವೆ. ಎಲ್ಲರೂ ಅವರವರ ರೀತಿಯಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದೇವೆ. ಪ್ರತ್ಯೇಕ ಪ್ರಚಾರದಿಂದ ಪಕ್ಷದ ವರ್ಚಸ್ಸು ಕುಂದುವುದಿಲ್ಲ. ಮತದಾರರಲ್ಲಿ ಗೊಂದಲವೂ ಆಗುವುದಿಲ್ಲ. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷರೇ ನಿಮ್ಮದೇ ಆದ ರೀತಿಯಲ್ಲಿ ಪಕ್ಷ ಸಂಘಟನೆ ಮಾಡುವಂತೆ ಸಲಹೆ ನೀಡಿದ್ದಾರೆ. ಹಾಗಾಗಿ ಎಲ್ಲರೂ ಪಕ್ಷ ಸಂಘಟನೆ ನಿಟ್ಟಿನಲ್ಲಿ ಪ್ರತ್ಯೇಕ ಪ್ರಚಾರದಲ್ಲಿ ತೊಡಗಿದ್ದೇವೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಯಾರಿಗೆ ಟಿಕೆಟ್ ನೀಡುತ್ತದೆಯೋ ಅವರಿಗೆ ಎಲ್ಲರೂ ಒಗ್ಗೂಡಿ ಈ ಬಾರಿ ಕೆಲಸ ಮಾಡಲಾಗುವುದು. ಜಿಲ್ಲಾದ್ಯಂತ ಒಗ್ಗಟ್ಟು ಪ್ರದರ್ಶನದಿಂದ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ನಿರ್ಧಾರವನ್ನು ಪ್ರತಿಯೊಬ್ಬರೂ ಮಾಡಿದ್ದೇವೆ. ಈಗಾಗಲೇ ಎರಡು ಮೂರು ಸಭೆಗಳಲ್ಲೂ ನಮ್ಮ ನಾಯಕರು ಸಲಹೆ ನೀಡಿದ್ದಾರೆ. ಅದಕ್ಕೆ ಎಲ್ಲರೂ ಸಹಮತ ವ್ಯಕ್ತಪಡಿಸಿದ್ದಾರೆ ಎಂದ ಅವರು, ಅಂಬರೀಷ್ ಅವರ ಒಡನಾಟದಲ್ಲಿ ಸಕ್ರಿಯ ಕಾರ್ಯಕರ್ತನಾಗಿ ಪಕ್ಷದ ಕೆಲಸ ಮಾಡಿದ್ದೇನೆ. ನಾನಂತೂ ಅವರ ಕುಟುಂಬಕ್ಕೆ ನಿಷ್ಠನಾಗಿದ್ದೆ. ಯಾವುದೇ ಅಪರಾಧವನ್ನೂ ಮಾಡಿಲ್ಲ. ಆದರೂ ಅವರು ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ನಾನು ಕೂಡ 25 ವರ್ಷದಿಂದ ಪಕ್ಷಕ್ಕಾಗಿ ದುಡಿದಿದ್ದೇನೆ. ಆದ್ದರಿಂದ ಮುಂಬರುವ ಚುನಾವಣೆಯಲ್ಲಿ ಪ್ರಬಲ ಆಕಾಂಕ್ಷಿಯಾಗಿದ್ದೇನೆ. ಪಕ್ಷ ನನಗೆ ಅವಕಾಶ ನೀಡಿದಲ್ಲಿ ಸುಮಲತಾ ಅವರನ್ನು ಭೇಟಿಯಾಗಿ ಸಹಕಾರ ಕೋರುತ್ತೇನೆ ಎಂದರು.
    ಜ.22ರಂದು ತಾಲೂಕಿನ ಹುಲಿವಾನ ಗ್ರಾಮದಲ್ಲಿ ಮಂಡ್ಯ ವಿಧಾನ ಸಭಾ ಕ್ಷೇತ್ರದ ಬೃಹತ್ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಆಯೋಜಿಸಲಾಗಿದೆ. ಅಂದು ಮಧ್ಯಾಹ್ನ 12 ಗಂಟೆಗೆ ಗ್ರಾಮದ ಕಲ್ಯಾಣ ಮಂಟಪದ ಪಕ್ಕದ ಮೈದಾನದಲ್ಲಿ ಸಮಾವೇಶ ನಡೆಯಲಿದೆ. ಮಾಜಿ ಸಚಿವ ಎನ್.ಚಲುವರಾಯಸ್ವಾಮಿ, ಸಂಸದ ಡಿ.ಕೆ.ಸುರೇಶ್, ಪಿ.ಎಂನರೇಂದ್ರಸ್ವಾಮಿ, ಧೃವನಾರಾಯಣ್, ಜೆ.ಸಿ. ಚಂದ್ರಶೇಖರ್ ಸೇರಿದಂತೆ ಹಲವರು ಭಾಗವಹಿಸುವರು ಎಂದು ತಿಳಿಸಿದರು.
    ಮುಖಂಡರಾದ ಯೋಗೇಶ್, ಪುನೀತ್, ಗಿರೀಶ್ ಪಟೇಲ್, ಜಿ.ಸಿ.ಆನಂದ್, ಅನಿಲ್‌ಕುಮಾರ್, ಶಂಕರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts