More

    ಕಾಮಗಾರಿ ಪೂರ್ಣಗೊಳಿಸದಿದ್ದರೆ ಶಿಸ್ತು ಕ್ರಮ ಅನಿವಾರ್ಯ

    ಬೆಳಗಾವಿ: ಮಹಾನಗರ ಪಾಲಿಕೆ ವ್ಯಾಪ್ತಿಯ ರಸ್ತೆಗಳಲ್ಲಿ ಸೃಷ್ಟಿಯಾಗಿರುವ ಗುಂಡಿ ಮುಚ್ಚುವುದು, ಹಾಳಾಗಿರುವ ಚರಂಡಿಗಳ ದುರಸ್ತಿ ಕಾಮಗಾರಿಗಳನ್ನು ನ.30ರ ಒಳಗಾಗಿ ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಶಿಸ್ತು ಕ್ರಮ ಜರಗಿಸಬೇಕಾಗುತ್ತದೆ ಎಂದು ಪಾಲಿಕೆಯ ಆಡಳಿತಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಸೂಚನೆ ನೀಡಿದ್ದಾರೆ.

    ಇಲ್ಲಿನ ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಗರದಲ್ಲಿ ಧಾರಾಕಾರ ಮಳೆಯಿಂದ ಸಾಕಷ್ಟು ರಸ್ತೆಗಳು ಹಾಳಾಗಿವೆ. ಆದರೆ, ಇಲ್ಲಿಯವರೆಗೆ ದುರಸ್ತಿ ಮಾಡಿಲ್ಲ. ಸರ್ಕಾರದಿಂದ ಅನುದಾನ ಬಿಡುಗಡೆ ಆಗಿದ್ದರೂ ಟೆಂಡರ್ ಏಕೆ ಕರೆದಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

    ನಾಲ್ಕೈದು ತಿಂಗಳಿಂದ ನಗರದ ವಿವಿಧೆಡೆ ಸ್ಮಾರ್ಟ್ ಸಿಟಿ ಕಾಮಗಾರಿಗಳು ನಡೆಯುತ್ತಿವೆ. ಆದರೆ, ಮಹಾನಗರ ಪಾಲಿಕೆ ವತಿಯಿಂದ ಯಾವುದೇ ಕಾಮಗಾರಿಗಳು ನಡೆಯುತ್ತಿಲ್ಲ. ಇದರಿಂದ ಸಾರ್ವಜನಿಕರು ನಿತ್ಯ ಸಮಸ್ಯೆ ಎದುರಿಸುತ್ತಿದ್ದು, ದೂರುಗಳು ಬರುತ್ತಿವೆ. ಹಾಗಾಗಿ ತಕ್ಷಣ ಕಾಮಗಾರಿ ಆರಂಭಿಸಬೇಕು. ಈ ವಿಷಯದಲ್ಲಿ ನಿರ್ಲಕ್ಷೃ ಮಾಡಿದರೆ ಕಠಿಣ ಕ್ರಮ ಜರುಗಿಸಬೇಕಾಗುತ್ತದೆ ಎಂದರು.

    ಪಾಲಿಕೆ ಆಯುಕ್ತ ಜಗದೀಶ ಕೆ.ಎಚ್. ಮಾತನಾಡಿ, ಈಗಾಗಲೇ ಕುಡಿಯುವ ನೀರು, ಒಳಚರಂಡಿ ದುರಸ್ತಿ, ರಸ್ತೆಗಳ ಹಾಗೂ ನಾಲಾಗಳ ದುರಸ್ತಿ ಸೇರಿ ಇನ್ನಿತರ ಅಭಿವೃದ್ಧಿ ಕಾಮಗಾರಿಗಳಿಗೆ ಸರ್ಕಾರ 15ನೇ ಹಣಕಾಸು ಯೋಜನೆಯಡಿ ಪಾಲಿಕೆಗೆ 23 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಕೆಲ ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದ್ದು, ಶೀಘ್ರ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು. ಸ್ವಚ್ಛ ಭಾರತ ಅಭಿಯಾನದಡಿ ಕಸ ವಿಲೇವಾರಿ ಸಮರ್ಪಕವಾಗಿ ನಿರ್ವಹಣೆ ಮಾಡುವ ವಾಹನಗಳನ್ನು ಖರೀದಿಸಲಾಗಿದೆ.

    ಹಸಿ ಮತ್ತು ಒಣ ಕಸ ಪ್ರತ್ಯೇಕವಾಗಿ ಸಂಗ್ರಹಿಸಿ ಸಾಗಿಸಲು ಯೋಜನೆ ರೂಪಿಸಲಾಗಿದೆ. ಮುಂದಿನ ದಿನಗಳಲ್ಲಿ ನಗರದ ಸೌಂದರ್ಯ ಹೆಚ್ಚಿಸಲು ಯೋಜನೆ ರೂಪಿಸಿ ಅನುಷ್ಠಾನಕ್ಕೆ ತರಲಾಗುತ್ತಿದೆ ಎಂದು ತಿಳಿಸಿದರು. ಪಾಲಿಕೆ ಇಂಜಿನಿಯರ್ ಲಕ್ಷ್ಮೀ ನಿಪ್ಪಾಣಿಕರ, ಸಚಿನ ಕಾಂಬಳೆ, ವಿ.ಎಸ್.ಹಿರೇಮಠ ಡಾ.ಡುಮ್ಮಗೋಳ ಇತರರು ಇದ್ದರು.

    ಇ-ಶೌಚಗೃಹ ನಿರ್ಮಿಸಿ: ಜಿಲ್ಲೆಯ ವಿವಿಧ ಗ್ರಾಮೀಣ ಪ್ರದೇಶಗಳಿಂದ ನಿತ್ಯ ನೂರಾರು ಜನರು ಜಿಲ್ಲಾಧಿಕಾರಿ ಕಚೇರಿಗೆ ಬರುತ್ತಾರೆ. ಆದರೆ, ಸಾಮೂಹಿಕ ಶೌಚಗೃಹಗಳ ಸೌಲಭ್ಯ ಇಲ್ಲ. ಹಾಗಾಗಿ ಪಾಲಿಕೆ ಅಧಿಕಾರಿಗಳು ತಕ್ಷಣ ಜಿಲ್ಲಾಧಿಕಾರಿ ಕಚೇರಿ ಇ-ಶೌಚಗೃಹ ನಿರ್ಮಾಣ ಮಾಡಬೇಕು. ಜತೆಗೆ ಸ್ವಚ್ಛ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts