More

    ಪೊಲೀಸ್ ಕಣ್ಗಾವಲಲ್ಲಿ ಬಸ್ ಸಂಚಾರ

    ಬೆಳಗಾವಿ: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡಿದ್ದ ಸಾರಿಗೆ ನೌಕರರು, ಸರ್ಕಾರದ ಲಿಖಿತ ಭರವಸೆ ಹಿನ್ನೆಲೆಯಲ್ಲಿ ಜಿಲ್ಲೆಯ ನಗರ ಮತ್ತು ಗ್ರಾಮೀಣ ಸಾರಿಗೆ ನೌಕರರು ಸೋಮವಾರ ಕರ್ತವ್ಯಕ್ಕೆ ಹಾಜರಾದರು. ಕೆಲವು ಕಡೆ ಪೊಲೀಸ್ ಭದ್ರತೆಯಲ್ಲಿ ಬಸ್ ಸಂಚಾರ ಆರಂಭಗೊಂಡಿತು.

    ಸಾರಿಗೆ ನಿಗಮಗಳಲ್ಲಿನ ಸಿಬ್ಬಂದಿಯನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸುವುದು, ತರಬೇತಿ ಅವಧಿಯನ್ನು ಒಂದು ವರ್ಷಕ್ಕೆ ಸೀಮಿತಗೊಳಿಸುವುದು, ಆರೋಗ್ಯ ವಿಮಾ ಸೌಲಭ್ಯ, 6ನೇ ವೇತನ ಆಯೋಗ ಜಾರಿಗೆ ತರುವುದು, ಸರ್ಕಾರಿ ನೌಕರರಿಗೆ ಸಿಗುವ ಎಲ್ಲ ಸೌಲಭ್ಯ ಕಲ್ಪಿಸುವುದು, ವಿವಿಧ ಕಾರಣಗಳಿಂದ ನೌಕರರ ಅಮಾನತು ವಾಪಸ್ ಪಡೆಯುವುದು ಸೇರಿದಂತೆ ವಿವಿಧ ಬೇಡಿಕೆ ಮುಂದಿಟ್ಟು ಡಿ.11ರಿಂದ ರಾಜ್ಯಾದ್ಯಂತ ಸಾರಿಗೆ ನೌಕರರ ಒಕ್ಕೂಟವು ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡಿತ್ತು.

    ಇದನ್ನು ಬೆಂಬಲಿಸಿ ಬೆಳಗಾವಿ ನಗರದ ಕೇಂದ್ರ ಬಸ್ ನಿಲ್ದಾಣದ ಆವರಣದಲ್ಲಿ ಸಾರಿಗೆ ನೌಕರರು ಅಹೋರಾತ್ರಿ ಧರಣಿ ಕೈಗೊಂಡಿದ್ದರು.
    ನಿಲ್ದಾಣದಲ್ಲಿ ಪೊಲೀಸ್ ಬಂದೋಬಸ್ತ್: ಬೆಳಗಾವಿ ನಗರದ ಕೇಂದ್ರ ಬಸ್ ನಿಲ್ದಾಣದ ಆವರಣದಲ್ಲಿ ಮುಷ್ಕರ ಕೈಗೊಂಡಿದ್ದ ಸಾರಿಗೆ ನೌಕರರನ್ನು ಪೊಲೀಸರು ಭಾನುವಾರ ರಾತ್ರಿಯೇ ಖಾಲಿ ಮಾಡಿಸಿದ್ದರು. ಅಲ್ಲದೆ, ಆ ಸ್ಥಳದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಿ ಪ್ರತಿಭಟನಾ ಸ್ಥಳಕ್ಕೆ ಮತ್ತೆ ಯಾರೂ ಬಾರದಂತೆ ಹೆಚ್ಚಿನ ಭದ್ರತೆ ಮಾಡಲಾಗಿತ್ತು.

    ಜಿಲ್ಲಾಧಿಕಾರಿ ಭೇಟಿ: ಸೋಮವಾರ ಬೆಳ್ಳಂಬೆಳಗ್ಗೆ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಎಸ್ಪಿ ಲಕ್ಷ್ಮಣ ನಿಂಬರಗಿ ಹಾಗೂ ನಗರ ಪೊಲೀಸ್ ಆಯುಕ್ತ ಡಾ. ಕೆ.ತ್ಯಾಗರಾಜನ್ ಅವರು ನಗರದ ಕೇಂದ್ರ ಬಸ್ ನಿಲ್ದಾಣಕ್ಕೆ ಆಗಮಿಸಿದರು. ಪ್ರಯಾಣಿಕರಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ಮುಂಜಾಗ್ರತಾ ಕ್ರಮ ವಹಿಸಿದರು. ಅಲ್ಲದೆ, ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಿಂದ ಬಾಗಲಕೋಟೆ, ರಾಮದುರ್ಗ, ಚಿಕ್ಕೋಡಿ, ಸವದತ್ತಿ, ಬೈಲಹೊಂಗಲ, ಅಥಣಿ ಸೇರಿದಂತೆ ವಿವಿಧ ಮಾರ್ಗಗಳಿಗೆ ಪೊಲೀಸ್ ಭದ್ರತೆಯಲ್ಲಿ ಒಂದೊಂದೇ ಬಸ್ ಸಂಚಾರಕ್ಕೆ ವ್ಯವಸ್ಥೆ ಮಾಡಿದರು. ಬಳಿಕ ಪ್ರಯಾಣಿಕರಿಗೆ ಅನುಗುಣವಾಗಿ ಬಸ್ ಸೇವೆ ಒದಗಿಸಲಾಯಿತು. ಆದರೆ, ಬಸ್ ಸಂಚಾರ ಬಂದ್ ಎಂಬ ಕಾರಣಕ್ಕೆ ನಿಲ್ದಾಣಗಳಿಗೆ ನಿರೀಕ್ಷೆಯಷ್ಟು ಪ್ರಯಾಣಿಕರು ಬರಲಿಲ್ಲ. ಹೀಗಾಗಿ ಕೆಲ ಮಾರ್ಗಗಳಲ್ಲಿ ಬಸ್ ಸಂಚಾರ ಆರಂಭಗೊಂಡಿರಲಿಲ್ಲ.

    4 ಕೋಟಿ ರೂ. ನಷ್ಟ: ಕಳೆದ ನಾಲ್ಕು ದಿನದ ಮುಷ್ಕರದಿಂದಾಗಿ ವಾಯವ್ಯ ಸಾರಿಗೆ ವಿಭಾಗದ ಚಿಕ್ಕೋಡಿ ಮತ್ತು ಬೆಳಗಾವಿ ವಿಭಾಗಕ್ಕೆ ಬರೋಬ್ಬರಿ 4.20 ಕೋಟಿ ರೂಪಾಯಿಗೂ ಅಧಿಕ ನಷ್ಟ ಉಂಟಾಗಿದೆ. ಕೋವಿಡ್-19ನಿಂದಾಗಿ ತೀವ್ರ ಆರ್ಥಿಕ ನಷ್ಟದಲ್ಲಿರುವ ಸಾರಿಗೆ ವಿಭಾಗಗಳು ಇದೀಗ 4 ದಿನಗಳ ಮುಷ್ಕರಿಂದ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಿವೆ. ಮತ್ತೆ ಸುಧಾರಣೆಗೆ ಬರಬೇಕಾದರೆ ಕನಿಷ್ಠ ಒಂದು ತಿಂಗಳ ಕಾಲ ಸಮಯ ಬೇಕು ಎಂದು ಸಾರಿಗೆ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

    ಸಮಸ್ಯೆ ಅನುಭವಿಸಿದ್ದ ಗ್ರಾಮೀಣ ಪ್ರಯಾಣಿಕರು

    ವಾಯವ್ಯ ಸಾರಿಗೆ ವಿಭಾಗ ವ್ಯಾಪ್ತಿಯ ಚಿಕ್ಕೋಡಿ ಮತ್ತು ಬೆಳಗಾವಿ ವಿಭಾಗ ವ್ಯಾಪ್ತಿಯ ವಿವಿಧ ಡಿಪೋಗಳಲ್ಲಿ 7,450ಕ್ಕೂ ಅಧಿಕ ಸಿಬ್ಬಂದಿ ಮುಷ್ಕರದಲ್ಲಿ ಭಾಗಿಯಾಗಿದ್ದರು. ಹೀಗಾಗಿ 1,450ಕ್ಕೂ ಅಧಿಕ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದವು. ಇದರಿಂದ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಜನರು ತೀವ್ರ ಸಮಸ್ಯೆ ಎದುರಿಸಿದರು. ಕೆಲವು ಕಡೆ ಸಂಚಾರ ಇಲ್ಲದಿರುವ ಕಾರಣ ವ್ಯಾಪಾರ ಕುಂಠಿತಗೊಂಡಿತ್ತು. ಅಲ್ಲದೆ, ಚಿಕ್ಕೋಡಿ ಮತ್ತು ಬೆಳಗಾವಿ ವಿಭಾಗದಿಂದ ಮುಂಬೈ, ಬೆಂಗಳೂರು, ಹೈದರಾಬಾದ್, ಗೋವಾ, ಹುಬ್ಬಳ್ಳಿ-ಧಾರವಾಡ , ಬಾಗಲಕೋಟೆ, ಕಲಬುರ್ಗಿ, ವಿಜಯಪುರ, ಮಂಗಳೂರು, ಧರ್ಮಸ್ಥಳ, ತಿರುಪತಿ, ಶಿವಮೊಗ್ಗ, ಮೈಸೂರು ಸೇರಿದಂತೆ ವಿವಿಧ ಮಾರ್ಗದಲ್ಲಿ ಸಾರಿಗೆ ಬಸ್ ಸಂಚಾರ ಇಲ್ಲದ್ದರಿಂದ ಸರ್ಕಾರಿ, ಖಾಸಗಿ ಕಂಪನಿಗಳ ನೌಕರರು, ರೋಗಿಗಳು, ವಿದ್ಯಾರ್ಥಿಗಳು ತೀವ್ರ ಸಮಸ್ಯೆ ಎದುರಿಸಬೇಕಾಯಿತು.

    ಬೆಳಗಾವಿ ವಿಭಾಗದ ವಿವಿಧ ಡಿಪೋಗಳಲ್ಲಿ ಸೋಮವಾರದಿಂದಲೇ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಬಸ್ ಸಂಚಾರ ಆರಂಭಗೊಂಡಿದೆ. ಪ್ರಯಾಣಿಕರು ಯಾವುದೇ ಆತಂಕ ಇಲ್ಲದೆ ಸಾರಿಗೆ ಬಸ್‌ಗಳಲ್ಲಿ ಸಂಚಾರ ಮಾಡಬಹುದು.
    | ಎಂ.ಆರ್. ಮುಂಜಿ. ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ, ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts