More

    ನೇಮಕಾತಿ ಅಕ್ರಮಕ್ಕಿಲ್ಲ ತಡೆಬೇಲಿ; ಮುಗಿಯದ ಪೊಲೀಸ್ ಹುದ್ದೆ ಗೋಲ್ಮಾಲ್: ಆರು ಆರೋಪಿಗಳ ಬಂಧನ

    | ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು

    ರಾಜ್ಯದಲ್ಲಿ 545 ಪಿಎಸ್​ಐ ಹುದ್ದೆಗಳ ನೇಮಕಾತಿಯಲ್ಲಿ ನಡೆದಿದೆಯೆನ್ನಲಾದ ಅಕ್ರಮ ಪ್ರಕರಣ ಸಂಬಂಧ 6 ಆರೋಪಿಗಳನ್ನು ಶನಿವಾರ ಸಿಐಡಿ ಪೊಲೀಸರು ಶನಿವಾರ ಬಂಧಿಸಿದ ಬೆನ್ನಲ್ಲೇ ಈ ಅಕ್ರಮದ ಸುಳಿಯ ಆಳ, ಅಗಲದ ವಿಚಾರ ಮತ್ತೆ ಚರ್ಚೆಯ ಮುನ್ನೆಲೆಗೆ ಬಂದಿದೆ. ಪೊಲೀಸ್ ಸಬ್ ಇನ್​ಸ್ಪೆಕ್ಟರ್ ಹಾಗೂ ಕಾನ್​ಸ್ಟೆಬಲ್ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮದ ಆರೋಪ ಇದೇ ಮೊದಲೇನಲ್ಲ. ಪ್ರತಿಬಾರಿ ನೇಮಕಾತಿಯಲ್ಲೂ ಅಕ್ರಮದ ವಾಸನೆ ಬಡಿಯುತ್ತದೆ. ಸಬ್ ಇನ್​ಸ್ಪೆಕ್ಟರ್ ಹುದ್ದೆಗೆ 30 ಲಕ್ಷ ರೂ.ನಿಂದ 1 ಕೋಟಿ ರೂ.ವರೆಗೆ ಡೀಲ್ ನಡೆಯುತ್ತದೆ ಎಂದು ಇಲಾಖಾಧಿಕಾರಿಗಳೇ ಹೇಳುತ್ತಾರೆ. ಮಧ್ಯವರ್ತಿಗಳ ಜತೆ ಇಲಾಖೆಯ ಕೆಲ ಅಧಿಕಾರಿಗಳು ಮತ್ತು ಸಿಬ್ಬಂದಿ ಅಕ್ರಮ ನೇಮಕಾತಿಗೆ ಕೈಜೋಡಿಸುತ್ತಿದ್ದಾರೆ. ಈಗಿನ 545 ಎಸ್​ಐ ಹುದ್ದೆ ನೇಮಕಾತಿಯಲ್ಲೂ ಪರೀಕ್ಷಾ ಕೇಂದ್ರಗಳ ಮೇಲ್ವಿಚಾರಕ ಸಿಬ್ಬಂದಿ ಸೇರಿ ಕೆಲ ಅಧಿಕಾರಿಗಳು ಅಕ್ರಮಕ್ಕೆ ಸಾಥ್ ಕೊಟ್ಟಿರುವ ವಿಚಾರ ಸಿಐಡಿ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಐಡಿ ಅಧಿಕಾರಿಗಳು, ಶನಿವಾರ ಕಲಬುರಗಿಯಲ್ಲಿ ಮೂವರು ಅಭ್ಯರ್ಥಿಗಳು ಹಾಗೂ ಮೂವರು ಪರೀಕ್ಷಾ ಕೇಂದ್ರದ ಮಹಿಳಾ ಮೇಲ್ವಿಚಾರಕರನ್ನು ಬಂಧಿಸಿದ್ದಾರೆ. ಅಕ್ರಮದಲ್ಲಿ ಕೆಲ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗಿಯಾಗಿರುವ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಶೀಘ್ರ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಿದ್ದಾರೆ. ತಲಾ ಹುದ್ದೆಗೆ 30 ಲಕ್ಷ ರೂ.ನಿಂದ 1 ಕೋಟಿ ರೂವರೆಗೆ ಡೀಲ್ ನಡೆದಿರುವ ಶಂಕೆ ವ್ಯಕ್ತವಾಗಿದೆ. ಈ ಹಿಂದೆ ನೇಮಕಾತಿ ಸಂದರ್ಭದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಬದಲಿ ಅಭ್ಯರ್ಥಿಗಳನ್ನು ಪರೀಕ್ಷೆಗೆ ಕೂರಿಸಿ ಬರೆಸಿರುವುದು ಬಯಲಾಗಿತ್ತು.

    ಗೌಪ್ಯ ಸ್ಥಳದಲ್ಲಿ ಕುಳಿತು ಭರ್ತಿ: ಪೊಲೀಸ್ ನೇಮಕಾತಿ ಅಕ್ರಮ ದಂಧೆಯಲ್ಲಿ ಇದು ಹಳೇ ಪದ್ದತಿ. ಪರೀಕ್ಷೆ ನಡೆಯುವ ಹಿಂದಿನ ದಿನ ಓಎಂಆರ್ ಶೀಟ್​ಗಳನ್ನು ಅಭ್ಯರ್ಥಿಗೆ ಕೊಟ್ಟು ಗೌಪ್ಯ ಸ್ಥಳದಲ್ಲಿ ಬರೆಸುವುದು ಅಥವಾ ಪ್ರಶ್ನೆಗಳನ್ನು ಕೊಟ್ಟು ಉತ್ತರಗಳನ್ನು ಹೇಳಿಕೊಟ್ಟು ನೇರ ಪರೀಕ್ಷಾ ಕೇಂದ್ರಕ್ಕೆ ಕರೆತರುವುದು. ಭರ್ತಿ ಮಾಡಿದ ಓಎಂಆರ್ ಶೀಟ್​ಗಳನ್ನು ಪರೀಕ್ಷಾ ದಿನ ಸೀಲ್ಡ್ ಮಾಡಿ ಮೌಲ್ಯಮಾಪನ ಕೇಂದ್ರಕ್ಕೆ ರವಾನಿಸುತ್ತಾರೆ.

    ಪರಿವೀಕ್ಷಕರ ಬುಕಿಂಗ್: ಕೊಠಡಿ ಪರಿವೀಕ್ಷಕರನ್ನೇ ಬುಕ್ ಮಾಡಲಾಗುತ್ತದೆ. ತಮಗೆ ಬೇಕಾದ ಸೆಂಟರ್​ಗೆ ಪರಿವೀಕ್ಷಕರನ್ನು ನೇಮಕ ಮಾಡಿಕೊಂಡು ಅವರ ಮೂಲಕ ಅಭ್ಯರ್ಥಿಗಳಿಗೆ ಅನುಕೂಲ ಮಾಡಿಕೊಡುವುದು, ಬ್ಲೂಟೂತ್ ಬಳಕೆಗೆ ಅಥವಾ ಉತ್ತರ ಹೇಳಿಕೊಡುವುದು, ಓಎಂಆರ್ ಶೀಟ್​ನಲ್ಲಿ ಖಾಲಿ ಬಿಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ ಸೀಲ್ಡ್ ಮಾಡುವುದು. ಇಲ್ಲವಾದರೆ ಓಎಂಆರ್ ಶೀಟ್ ಖಾಲಿ ಬಿಟ್ಟಿರುವ ಅಭ್ಯರ್ಥಿಗಳ ಹೆಸರು, ನೋಂದಣಿ ಸಂಖ್ಯೆಯನ್ನು ಬರೆದು ದಾಖಲೆ ಮಾಡದೆ ನಿರ್ಲಕ್ಷ್ಯ ತೋರುವುದು. ಇದರಿಂದ ಮುಂದೆ ಪೊಲೀಸ್ ತನಿಖೆಗೆ ಅಡ್ಡಿ ಉಂಟಾಗುತ್ತದೆ. ಓಎಂಆರ್ ಶೀಟ್ ಖಾಲಿ ಬಿಟ್ಟ ಅಥವಾ ಬೇಗ ಕೊಠಡಿಯಿಂದ ಹೊರ ಹೋದ ಅಭ್ಯರ್ಥಿಗಳ ಹೆಸರು ಮತ್ತು ನೋಂದಣಿ ಸಂಖ್ಯೆ ದಾಖಲೆ ಮಾಡಿದ್ದರೆ ಅಂತಹ ಅಭ್ಯರ್ಥಿಗಳ ಓಎಂಆರ್ ಶೀಟ್​ಗಳನ್ನು ಎಫ್​ಎಸ್​ಎಲ್​ಗೆ ಕಳುಹಿಸಿದರೆ ಸತ್ಯಾಂಶ ಹೊರಬರುತ್ತದೆ.

    ಓಎಂಆರ್ ಶೀಟ್​ನಲ್ಲೇ ಡೀಲ್

    • ಲಿಖಿತ ಪರೀಕ್ಷೆ ಪತ್ರಿಕೆ-1ರಲ್ಲಿ 50 ಅಂಕ ಮತ್ತು ಪತ್ರಿಕೆ-2ರಲ್ಲಿ 150 ಅಂಕಗಳಿರುತ್ತವೆ. ಇದರಲ್ಲಿ ಹೆಚ್ಚು ಅಂಕ ಪಡೆದವರು ಆಯ್ಕೆಯಾಗುತ್ತಾರೆ. ಅದಕ್ಕಾಗಿ ಅಂಕಗಳ ಮೇಲೆಯೇ ಲಕ್ಷ ಲಕ್ಷ ಡೀಲ್ ನಡೆಯುತ್ತದೆ
    • ಪತ್ರಿಕೆ-1ರಲ್ಲಿ 50ಕ್ಕೆ ಪ್ರಬಂಧ (20 ಅಂಕ), ಸಾರಾಂಶ ಬರಹ (10 ಅಂಕ), ಭಾಷಾಂತರಕ್ಕೆ (20 ಅಂಕ) ನಿಗದಿ ಮಾಡಲಾಗಿದೆ. ಇದರಲ್ಲಿ 35 ಅಂಕ ಪಡೆಯುವುದು ಸಹ ಕಷ್ಟಸಾಧ್ಯ. ಡೀಲ್ ನಡೆದಿದ್ದರೆ 40 ಅಂಕಗಳಿಗೆ ಮೇಲ್ಪಟ್ಟು ಸಿಗುತ್ತದೆ.
    • ಪತ್ರಿಕೆ-2ರಲ್ಲಿ 150ಕ್ಕೆ ಬಹು ಆಯ್ಕೆ ಪ್ರಶ್ನೆಗಳಿಗೆ ಉತ್ತರಿಸಬೇಕಾಗಿರುತ್ತದೆ. ಸರಿ ಬರೆದರೆ ಅಂಕ ಸಿಗುತ್ತದೆ. ತಪು್ಪ ಉತ್ತರ ಬರೆದರೆ ಶೇ.25 ಅಂಕ ಕಡಿತವಾಗುತ್ತದೆ. ಸರಿ ಉತ್ತರ ಗೊತ್ತಿದ್ದರೆ ಅಭ್ಯರ್ಥಿಗಳು ಓಎಂಆರ್ ಶೀಟ್​ನಲ್ಲಿ ಬರೆದು ಉಳಿದವನ್ನು ಖಾಲಿ ಬಿಟ್ಟು ಬರುತ್ತಾರೆ.
    • ಮೌಲ್ಯಮಾಪನಕ್ಕೂ ಮೊದಲು ಖಾಲಿ ಬಿಟ್ಟ ಪ್ರಶ್ನೆಗಳಿಗೆ ಉತ್ತರ ತುಂಬಿ ಸೀಲ್ಡ್ ಕವರ್​ನಲ್ಲಿ ಪ್ಯಾಕ್ ಮಾಡಿ ಕಳುಹಿಸಲಾಗುತ್ತದೆ. ಇಂತಹ ಅಭ್ಯರ್ಥಿಗಳು ನಕಲು ಓಎಂಆರ್ ಶೀಟ್​ನ್ನು ನಾಶ ಮಾಡಿ ಸಾಕ್ಷ್ಯ ಸಿಗದಂತೆ ನೋಡಿಕೊಳ್ಳುತ್ತಾರೆ.

    ಮೌಖಿಕ ಅಂಕ ಕೈಬಿಟ್ರು ತಪ್ಪಲಿಲ್ಲ: ನೇಮಕಾತಿ ಅಕ್ರಮ ತಡೆಯುವ ಉದ್ದೇಶದಿಂದ ಈ ಮೊದಲಿನ ವ್ಯವಸ್ಥೆಯಲ್ಲಿದ್ದ 10 ಅಂಕದ ಮೌಖಿಕ ಪರೀಕ್ಷೆ ಕೈಬಿಡಲಾಗಿತ್ತು. ಈ ಆದೇಶ ಜಾರಿಯಾದ ಮೇಲೆ ಮೊದಲ ಬ್ಯಾಚ್ 545 ಎಸ್​ಐ ನೇಮಕಾತಿ ನಡೆದಿತ್ತು. ಈಗ ಇದಕ್ಕೂ ಸೆಡ್ಡು ಹೊಡೆದು ಅಕ್ರಮ ದಂಧೆ ನಡೆದಿದೆ.

    ಅಕ್ರಮ ತಡೆಗೆ ಏನಾಗಬೇಕು?

    • ಪೊಲೀಸ್ ಸೇವೆಗೆ ಸೇರಬೇಕೆಂಬ ಆಸೆಯಿಂದ ಕಷ್ಟಪಟ್ಟು ಓದುವ ಅಭ್ಯರ್ಥಿಗೆ ಅಂತಿಮವಾಗಿ ನೌಕರಿ ಸಿಗದಿದ್ದರೂ ತನ್ನ ಸಾಮರ್ಥ್ಯದ ಬಗ್ಗೆ ತಿಳಿದುಕೊಳ್ಳುವ ಆಸೆ ಇರುತ್ತದೆ. ಆದರೆ, ಆಯ್ಕೆಯಾದ ಅಭ್ಯರ್ಥಿಗಳ ಅಂಕಪಟ್ಟಿ ಮತ್ತು ರ್ಯಾಂಕ್ ಮಾತ್ರ ಪ್ರಕಟಿಸಲಾಗುತ್ತದೆ. ಉಳಿದವರ ಅಂಕ ಅಥವಾ ಉತ್ತರ ಪತ್ರಿಕೆಗಳು ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದರೂ ಸಿಗುವುದಿಲ್ಲ.
    • 8.50 ಲಕ್ಷ ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳು ಬರೆಯುವ 6 ಉತ್ತರ ಪತ್ರಿಕೆಗಳು ಮತ್ತು ಅಂಕಪಟ್ಟಿ ಆನ್​ಲೈನ್​ನಲ್ಲಿ ಸಿಗುತ್ತದೆ. ಆದರೆ, 545 ಎಸ್​ಐ ಹುದ್ದೆಗೆ ಬರೆದ 56 ಸಾವಿರ ಅಭ್ಯರ್ಥಿಗಳ ಅಂಕಪಟ್ಟಿ ಮತ್ತು ಓಎಂಆರ್ ಶೀಟ್​ಗಳು ಯಾಕೆ ಸಿಗುವುದಿಲ್ಲ? ಆನ್​ಲೈನ್​ನಲ್ಲಿ ಬಿಡುವ ವ್ಯವಸ್ಥೆಯಾಗಬೇಕು ಎಂಬುದು ಸಾರ್ವಜನಿಕರ ಆಗ್ರಹ.

    ಹಿಂದಿನ ಅಕ್ರಮಗಳು

    • 2018ರ ನ.25ರ 2113 ಕಾನ್​ಸ್ಟೆಬಲ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ. ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನಲ್ಲಿ 116 ಅಭ್ಯರ್ಥಿಗಳನ್ನು ಬಂಧಿಸಿದ ಸಿಸಿಬಿ
    • 2019ರ ಜ.14ರಂದು ಗೋಕಾಕ್ ತಾಲೂಕಿನ ಕಳ್ಳಿಗುದ್ದಿ ತೋಟದ ಮನೆಯಲ್ಲಿ ಎಸ್​ಐ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದ್ದ ತಂಡವನ್ನು ಸಿಸಿಬಿ ಬಂಧಿಸಿತ್ತು.
    • 2020-21ನೇ ಸಾಲಿನ ಕಾನ್​ಸ್ಟೆಬಲ್ ನೇಮಕಾತಿಯಲ್ಲಿ ಬದಲಿ ಅಭ್ಯರ್ಥಿಗಳ ಹಾಜರಿ ಬೆಳಕಿಗೆ. ಪರಿಶೀಲನೆ ಸಂದರ್ಭದಲ್ಲಿ ಸಿಕ್ಕಿಬಿದ್ದಿದ್ದರು.

    ಹೇಗಿರುತ್ತೆ ಡೀಲ್?

    • ಪೊಲೀಸ್ ನೇಮಕಾತಿಗೆ ಸರ್ಕಾರ ಅಧಿಸೂಚನೆ ಹೊರಡಿಸಿದ ಕೂಡಲೇ ಅಕ್ರಮ ದಂಧೆಯಲ್ಲಿ ಗುರುತಿಸಿಕೊಂಡಿರುವ ಏಜೆಂಟ್​ಗಳು ಮತ್ತು ಕೆಲ ಸರ್ಕಾರಿ ಅಧಿಕಾರಿ, ಸಿಬ್ಬಂದಿ ಸಕ್ರಿಯ
    • ಕಾನ್​ಸ್ಟೆಬಲ್ ಮತ್ತು ಎಸ್​ಐ ಹುದ್ದೆಗೆ ದೇಹದಾರ್ಢ್ಯದಲ್ಲಿ ಫಿಟ್ ಆಗಿರುವ ಅಭ್ಯರ್ಥಿಗಳನ್ನು ಏಜೆಂಟ್​ಗಳು ಗುರುತಿಸಿ ಅವರನ್ನು ಸಂರ್ಪಸಿ ಡೀಲ್ ಕುದುರಿಸುತ್ತಾರೆ
    • ಪರಿಚಯ ಇರುವ ಏಜೆಂಟ್ ಅಥವಾ ಸರ್ಕಾರಿ ನೌಕರರ ಮೂಲಕ ಡೀಲ್ ಮಾತನಾಡಿ ಅರ್ಜಿ ಸಲ್ಲಿಸುವ ದಿನದಿಂದಲೇ ಪ್ರಯತ್ನ ಆರಂಭ -ಠಿ; ಪೊಲೀಸ್ ಇಲಾಖೆಗೆ ಮಕ್ಕಳನ್ನು ಸೇರಿಸಬೇಕೆಂದು ಕೆಲ ಪಾಲಕರು ಜಮೀನು, ಮನೆ, ಚಿನ್ನಾಭರಣ ಮಾರಾಟ ಮಾಡಿಯಾದರೂ ಲಕ್ಷಾಂತರ ರೂ. ಹೊಂದಿಸಿ ಅರ್ಧ ಹಣವನ್ನು ಮೊದಲೇ ಕೊಡುತ್ತಾರೆ. ಇದಲ್ಲದೆ, ಮನೆ ಅಳಿಯ ಅಥವಾ ಭಾವಿವರನಿಗೆ ಕೆಲಸ ಕೊಡಿಸುವ ಡೀಲ್​ಗಳು ಸಹ ಕೆಲವರಿಂದ ನಡೆಯುತ್ತವೆ.

    ಅಕ್ರಮ ನೇಮಕ ಮಾರ್ಗ

    • ಕೊಠಡಿ ಪರಿವೀಕ್ಷಕರನ್ನು ಬುಕ್ ಮಾಡಿ ಅಭ್ಯರ್ಥಿಗಳಿಗೆ ಅನುಕೂಲ
    • ಅಭ್ಯರ್ಥಿಗಳಿಗೆ ಬ್ಲೂಟೂತ್ ಸೌಲಭ್ಯ ಒದಗಿಸಿ ಪರೀಕ್ಷೆ ಬರೆಯಲು ಅವಕಾಶ
    • ಓಎಂಆರ್ ಶೀಟ್ ಖಾಲಿ ಬಿಟ್ಟು ಆನಂತರ ಉತ್ತರ ಭರ್ತಿ ಮಾಡುವುದು
    • ದೇಹದಾರ್ಢ್ಯ ಪರೀಕ್ಷೆಯಲ್ಲಿ ಅರ್ಹತೆ ಸಿಗದಿದ್ದರೆ ಪಾಸ್ ಮಾಡಿ ಅರ್ಹತೆ ನೀಡುವುದು
    • ಚೆನ್ನಾಗಿ ಓದುವ ಅಭ್ಯರ್ಥಿ ಪಕ್ಕದಲ್ಲಿಯೇ ಪರೀಕ್ಷೆಯಲ್ಲಿ ಕೂರಿಸುವ ವ್ಯವಸ್ಥೆ
    • ಪತ್ರಿಕೆ-1ರಲ್ಲಿ ಅಂಕ ಕೊಟ್ಟು 2ನೇ ಪತ್ರಿಕೆ ಪರೀಕ್ಷೆ ಬರೆಯಲು ಅರ್ಹ ಮಾಡುವುದು
    • ಪರೀಕ್ಷೆ ಹಿಂದಿನ ರಾತ್ರಿ ಗೌಪ್ಯ ಸ್ಥಳದಲ್ಲಿ ಓಎಂಆರ್ ಶೀಟ್ ತುಂಬಿ ಕೊಡುವುದು

    ಮೇಲ್ವಿಚಾರಕರು, ಅಭ್ಯರ್ಥಿಗಳ ಬಂಧನ

    ಕಲಬುರಗಿ: 545 ಪಿಎಸ್​ಐ ಹುದ್ದೆಗಳ ಅಕ್ರಮ ನೇಮಕಾತಿ ಪ್ರಕರಣದ ಸಂಬಂಧ ಶನಿವಾರ ಸಿಐಡಿ ಪೊಲೀಸರು ಬಂಧಿಸಿರುವ ಆರೋಪಿಗಳ ಪೈಕಿ ಮೂವರು ಪರೀಕ್ಷಾ ಮೇಲ್ವಿಚಾರಕರಾದರೆ, ಉಳಿದ ಮೂವರು ಅಭ್ಯರ್ಥಿಗಳಾಗಿದ್ದಾರೆ. ಇದರೊಂದಿಗೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ. ಪರೀಕ್ಷೆ ಬರೆದ ರಾಯಚೂರಿನ ಪ್ರವೀಣಕುಮಾರ ಕೆ., ರಾಯಚೂರಿನಲ್ಲಿ ಜೈಲು ವಾರ್ಡನ್ ಆಗಿರುವ ಚೇತನ ನಂದಗಾಂವ, ಕಲಬುರಗಿಯ ಅರುಣ ಹಾಗೂ ಅಕ್ರಮ ನಡೆದಿರುವ ಜ್ಞಾನಜ್ಯೋತಿ ಶಾಲೆ ಪರೀಕ್ಷಾ ಕೇಂದ್ರದ ಮೇಲ್ವಿಚಾರಕರಾಗಿದ್ದ ಸಾವಿತ್ರಿ, ಸಿದ್ದಮ್ಮ ಮತ್ತು ಸುಮಾ ಬಂಧಿತರು. ಈ ಹಿಂದೆ ವೀರೇಶ ನಿಡಗುಂದಾ ಎಂಬಾತನನ್ನು ಸಿಐಡಿ ಬಂಧಿಸಿತ್ತು. ವೀರೇಶನ ತಂದೆ ಕಲಬುರಗಿ ಜಿಲ್ಲೆ ಸೇಡಂ ಠಾಣೆಯಲ್ಲಿ ಮುಖ್ಯ ಪೇದೆಯಾಗಿದ್ದಾರೆ.

    ಬಿಜೆಪಿಯ ಪ್ರಭಾವಿ ನಾಯಕಿಯೊಬ್ಬರಿಗೆ ಸೇರಿರುವ ಜಿಡಿಎ ಬಡಾವಣೆ ಗೋಕುಲ್ ನಗರದಲ್ಲಿರುವ ಜ್ಞಾನಜ್ಯೋತಿ ಸ್ಕೂಲ್ ಕೇಂದ್ರದಲ್ಲಿ ಬಂಧಿತರೆಲ್ಲರೂ ಪರೀಕ್ಷೆ ಬರೆದಿದ್ದರು. ಬಂಧಿತ ವೀರೇಶ ಒಎಂಆರ್ ಶೀಟ್​ನಲ್ಲಿ ಕೇವಲ 21 ಪ್ರಶ್ನೆಗೆ ಉತ್ತರ ಬರೆದಿದ್ದ. ನಂತರ ನೋಡಿದಾಗ ಎಲ್ಲ 100 ಪ್ರಶ್ನೆಗಳಿಗೆ ಉತ್ತರಿಸಿರುವುದು ಬೆಳಕಿಗೆ ಬಂದು, ಆತನನ್ನು ಬಂಧಿಸಲಾಗಿತ್ತು. ಸಿಐಡಿ ಅಧಿಕಾರಿಗಳು ಬಂಧಿತ ಆರೋಪಿಗಳನ್ನು 4ನೇ ಹೆಚ್ಚುವರಿ ಜೆಎಂಎಫ್​ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಭಾನುವಾರದವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ, ಸೋಮವಾರ ವಶಕ್ಕೆ ಪಡೆಯುವಂತೆ ಸಿಐಡಿಗೆ ಸೂಚಿಸಿದೆ.

    ಹುಬ್ಬಳ್ಳಿಯಲ್ಲಿ ಪೊಲೀಸ್ ಠಾಣೆ ಎದುರೇ ಕಲ್ಲು ತೂರಾಟ; ವಾಹನ ಪಲ್ಟಿ ಮಾಡಿ ಆಕ್ರೋಶ, ಪರಿಸ್ಥಿತಿ ಉದ್ವಿಗ್ನ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts