More

    ಇಲಿ ಹಿಡಿಯಲು ಬೆಟ್ಟ ಅಗೆದರು, ವಂಚನೆಯ ಬೃಹತ್​ ಭಂಡಾರವನ್ನೇ ಹೊರತೆಗೆದರು!

    ನವದೆಹಲಿ: ಐಷಾರಾಮಿ ಕಾರು ಕಳುವಾಗಿದೆ ಹುಡುಕಿ ಕೊಡಿ ಎಂದು ವ್ಯಕ್ತಿಯೊಬ್ಬ ದಾಖಲಿಸಿದ್ದ ದೂರನ್ನು ಆಧರಿಸಿ ತನಿಖೆಗೆ ಮುಂದಾದ ಪೊಲೀಸರು ವಂಚನೆಯ ಬೃಹತ್ ಜಾಲವನ್ನೇ ಬೇಧಿಸಿದ್ದಾರೆ.​ ಈ ಸಂಬಂಧ ಇಬ್ಬರನ್ನು ಬಂಧಿಸಿದ್ದಾರೆ.

    ಸುನಿಲ್​ ಜೈಸ್ವಾಲ್​ ಮತ್ತು ರಾಜ್​ಕುಮಾರ್​ ಗುಪ್ತಾ ಬಂಧಿತರು. ಇವರಿಬ್ಬರೂ ನಕಲಿ ಗುರುತಿನಚೀಟಿಗಳು ಮತ್ತಿತರ ದಾಖಲಾತಿಗಳನ್ನು ಸೃಷ್ಟಿಸಿ, ಬ್ಯಾಂಕ್​ಗಳಿಂದ ವೈಯಕ್ತಿಕ ಸಾಲ ಮತ್ತು ಕಾರುಗಳ ಸಾಲ ಪಡೆದು ವಂಚಿಸುವ ಬೃಹತ್​ ಜಾಲದ ಭಾಗವಾಗಿದ್ದರು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

    ಈ ಹಿಂದೆ ಮನೋಜ್​ ಶಾಸ್ತ್ರಿ ಎಂಬಾತ ಈ ಬೃಹತ್​ ಜಾಲ ಮುಖ್ಯಸ್ಥನಾಗಿದ್ದ. ಆದರೆ, ಕಳೆದ ತಿಂಗಳು ಕೋವಿಡ್​-19 ಸೋಂಕಿಗೆ ತುತ್ತಾದ ಆತ ಮೃತಪಟ್ಟಿದ್ದಾನೆ. ಇದಾದ ನಂತರದಲ್ಲಿ ಸುನಿಲ್​ ಜೈಸ್ವಾಲ್​ ಮತ್ತು ರಾಜ್​ಕುಮಾರ್​ ಗುಪ್ತಾ ವಂಚನೆಯ ಜಾಲದ ನೇತೃತ್ವ ವಹಿಸಿಕೊಂಡಿದ್ದರು ಎಂದು ಹೇಳಿದ್ದಾರೆ.

    ಜುಲೈ 7ರಂದು ದೆಹಲಿಯ ಕೆ.ಎನ್​. ಕಾಟ್ಜು ಮಾರ್ಗ ಪೊಲೀಸ್​ ಠಾಣೆಗೆ ಕರೆ ಮಾಡಿದ್ದ ಸುನಿಲ್​ ಜೈಸ್ವಾಲ್​ ತನ್ನ ಮನೆಗೆ ನುಗ್ಗಿದ ದುಷ್ಕರ್ಮಿಗಳು 17 ಲಕ್ಷ ರೂ. ಮೌಲ್ಯದ ಕಾರು ಹಾಗೂ 50 ಸಾವಿರ ರೂ. ನಗದು ದೋಚಿ ಪರಾರಿಯಾಗಿರುವುದಾಗಿ ದೂರು ನೀಡಿದ್ದ. ಇದನ್ನೂ ಆಧರಿಸಿ ಪೊಲೀಸರು ಎಫ್​ಐಆರ್​ ಅನ್ನೂ ದಾಖಲಿಸಿದ್ದರು.

    ಇದನ್ನೂ ಓದಿ: ಟಿಕ್​ಟಾಕ್​ ಸೇರಿ ಚೀನಾದ ಆ್ಯಪ್​ಗಳ ಮಾಲೀಕರಿಗೆ 77 ಪ್ರಶ್ನೆಗಳನ್ನು ಕೇಳಿದ ಭಾರತ

    ನಂತರ ತನಿಖೆ ಆರಂಭಿಸಿದ ಅವರು, ಸುನಿಲ್​ ಜೈಸ್ವಾಲ್​​ ಸಲೂನ್​ ಮತ್ತು ಸ್ಪಾಗಳಲ್ಲಿ ಮಸಾಜರ್​ ಆಗಿ ಕೆಲಸ ಮಾಡುತ್ತಿದ್ದು, ಆತನಿಗೆ ಐದಾರು ಸಾವಿರ ರೂಪಾಯಿ ಸಂಬಳ ಬರುತ್ತದೆ ಎಂಬುದನ್ನು ಪತ್ತೆ ಮಾಡಿದ್ದರು. ಇಷ್ಟು ಸಣ್ಣ ಸಂಬಳ ಬರುತ್ತಿದ್ದರೂ ಆತ 17 ಲಕ್ಷ ರೂ. ಮೌಲ್ಯದ ಕಾರು ಹಾಗೂ ಐಷಾರಾಮಿ ಬಂಗಲೆ ಖರೀದಿಸಲು ಹೇಗೆ ಸಾಧ್ಯ ಎಂಬ ಪ್ರಶ್ನೆಯೊಂದಿಗೆ ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದರು.

    ತನಿಖೆಯ ಆಳಕ್ಕೆ ಇಳಿಯುತ್ತಿರುವಂತೆ ಸುನಿಲ್​ ಜೈಸ್ವಾಲ್​ನ ನಿಜವಾದ ಹೆಸರು ಸುಮಿತ್​ ಜೈಸ್ವಾಲ್​ ಎಂದೂ, ಈತ ನಕಲಿ ಐಡಿ ಮತ್ತು ವಾಸಸ್ಥಳದ ದೃಢೀಕರಣ ಪತ್ರಗಳನ್ನು ಸೃಷ್ಟಿಸಿ ಕಳುವಾಗಿದ್ದ ಕಾರು ಖರೀದಿಸಿರುವುದನ್ನು ಪತ್ತೆ ಮಾಡಿದರು. ಅಲ್ಲದೆ, ಕಾರು ಕಳುವಾಗಿದೆ ಎಂಬ ಮನೆಯನ್ನು ಮನೋಜ್​ ಶಾಸ್ತ್ರಿ ಎಂಬಾತ ಇವರಿಗೆ ಬಾಡಿಗೆಗೆ ಕೊಟ್ಟಿದ್ದು, ಆತ ಒಂದು ತಿಂಗಳ ಹಿಂದೆ ಕೋವಿಡ್​ಗೆ ಬಲಿಯಾಗಿರುವುದನ್ನೂ ಪತ್ತೆ ಹಚ್ಚಿದ್ದರು.

    ಇದನ್ನು ಆಧರಿಸಿ ಸುನಿಲ್​ ಜೈಸ್ವಾಲ್​ನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ, ರಾಜ್​ಕುಮಾರ್​ ಗುಪ್ತಾ ಜು.7ರಂದು ಒಬ್ಬ ವ್ಯಕ್ತಿಯನ್ನು ಜೈಸ್ವಾಲ್​ ಮನೆಗೆ ಕಳುಹಿಸಿ, ಕಾರು ತರಿಸಿಕೊಂಡಿದ್ದ. ಇದಾದ ಬಳಿಕ ಪೊಲೀಸರಿಗೆ ಕರೆ ಮಾಡಿದ್ದ ಜೈಸ್ವಾಲ್​, ಕಾರು ಕಳುವಾಗಿರುವುದಾಗಿ ದೂರು ಕೊಟ್ಟಿದ್ದ. ಪೊಲೀಸರು ಎಫ್​ಐಆರ್​ ದಾಖಲಿಸಿಕೊಂಡ ನಂತರದಲ್ಲಿ ಅದನ್ನು ಪಡೆದುಕೊಂಡು ಕಾರಿನ ವಿಮೆ ಹಣವನ್ನು ಪಡೆದುಕೊಳ್ಳಲು ಹುನ್ನಾರ ನಡೆಸಿದ್ದರು. ಅಷ್ಟೇ ಅಲ್ಲ, ಕಾರಿನ ಸಾಲದ ಇಎಂಐ ಹಾಗೂ ವೈಯಕ್ತಿಕ ಸಾಲದ ಇಎಂಐ ಪಾವತಿಯಿಂದ ಪಾರಾಗಲು ಅವರು ಮನೆಯ ವಿಳಾಸವನ್ನೂ ಬದಲಿಸುತ್ತಿದ್ದರು ಎಂಬುದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಅವರಿಬ್ಬರನ್ನೂ ಬಂಧಿಸಿ, ಹೆಚ್ಚಿನ ತನಿಖೆ ನಡೆಸುವುದಾಗಿ ಪೊಲಿಸರು ತಿಳಿಸಿದ್ದಾರೆ.

    ಸಚಿವರ ಬುಡಕ್ಕೆ ಬೆಂಕಿಯಿಟ್ಟ ಅಂತಾರಾಷ್ಟ್ರೀಯ ‘ಸ್ಮಂಗ್ಲಿಂಗ್‌ ರಾಣಿ’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts