More

    ರಮೇಶ್ ಜಾರಕಿಹೊಳಿ ಸೆಕ್ಸ್ ಸಿ.ಡಿ. ಪ್ರಕರಣದ ಹಿಂದಿನ ಕೈಗಳ ಹುಡುಕಾಟದಲ್ಲಿ ಕಬ್ಬನ್ ಪಾರ್ಕ್ ಪೊಲೀಸರು

    ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಲೈಂಗಿಕ ಹಗರಣದ ಸಂಬಂಧ ಎಫ್‌ಐಆರ್ ದಾಖಲಿಸದೆ ಕಬ್ಬನ್ ಪಾರ್ಕ್ ಪೊಲೀಸರು, ಅಶ್ಲೀಲ ಸಿಡಿ ಹಿಂದಿರುವ ಶಕ್ತಿಗಳ ಪತ್ತೆಗೆ ಕಾರ್ಯ ಶುರು ಮಾಡಿದ್ದಾರೆ. ಮತ್ತೊಂದೆಡೆ ಜೀವ ಬೆದರಿಕೆ ಕಾರಣ ಪೊಲೀಸರ ವಿಚಾರಣೆಗೆ ದಿನೇಶ್ ಕಲ್ಲಹಳ್ಳಿ ಗೈರು ಆಗಿದ್ದಾರೆ. ಇದರಿಂದ ದಿನೇಶ್ ಕಲ್ಲಹಳ್ಳಿಗೆ ಸಂಕಷ್ಟ ಎದುರಾಗುತ್ತಾ ಎಂಬುದನ್ನು ಕಾದು ನೋಡಬೇಕಾಗಿದೆ.

    ರಮೇಶ್ ಜಾರಕಿಹೊಳಿ ರಾಜೀನಾಮೆಗೆ ಕಾರಣವಾದ ಲೈಂಗಿಕ ಹಗರಣದ ಸಿಡಿ ಬಹಿರಂಗಕ್ಕೂ ಮುನ್ನ ದಿನೇಶ್ ಕಲ್ಲಹಳ್ಳಿ ಎಲ್ಲೆಲ್ಲಿ ಓಡಾಡಿದ್ದರು, ಯಾರನ್ನೆಲ್ಲ ಭೇಟಿಯಾಗಿದ್ದರು ಎಂಬುದರ ಶೋಧನೆಗೆ ಖಾಕಿ ಪಡೆ ಮುಂದಾಗಿದೆ. ಮಾರ್ಚ್ 1ರಂದು ಗಾಂಧಿನಗರದ ರಾಮಕೃಷ್ಣ ಲಾಡ್ಜ್‌ನಲ್ಲಿ ಸಂತ್ರಸ್ತೆ ಕಡೆಯ ವ್ಯಕ್ತಿಯನ್ನು ಕಲ್ಲಹಳ್ಳಿ ಭೇಟಿಯಾಗಿದ್ದರು ಎಂಬ ಮಾಹಿತಿ ಪಡೆದ ಪೊಲೀಸರು, ಗುರುವಾರ ಲಾಡ್ಜ್‌ಗೆ ತೆರಳಿ ಸಿಸಿ ಕ್ಯಾಮರಾದ ಡಿವಿಆರ್ ಜಪ್ತಿ ಮಾಡಿದ್ದಾರೆ. ಲಾಡ್ಜ್‌ನಲ್ಲಿ ಕಲ್ಲಹಳ್ಳಿ ಭೇಟಿಯಾಗಿದ್ದು ಸಂತ್ರಸ್ತೆಯ ಕುಟುಂಬ ಸದಸ್ಯನಾ? ಅಥವಾ ಬೇರೆ ಯಾರೆಂಬ ಕುರಿತು ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

    ದಿನೇಶ್ ಕಲ್ಲಹಳ್ಳಿ ಸಂಪರ್ಕ ಜಾಲ ಭೇದಿಸಲು ಪತ್ತೆದಾರಿಕೆ ಆರಂಭಿಸಿರುವ ಪೊಲೀಸರು, 1 ತಿಂಗಳ ಅವಧಿಯಲ್ಲಿ ದಿನೇಶ್ ಮೊಬೈಲ್ ಕರೆಗಳ ಮಾಹಿತಿ (ಸಿಡಿಆರ್) ಸಂಗ್ರಹಿಸುತ್ತಿದ್ದಾರೆ ಎನ್ನಲಾಗಿದೆ. ಒಂದು ತಿಂಗಳ ಅವಧಿಯಲ್ಲಿ ಕಲ್ಲಹಳ್ಳಿ ಮೊಬೈಲ್‌ ಫೋನ್​ಗೆ ಬಂದಿರುವ ಒಳ ಮತ್ತು ಹೊರ ಕರೆಗಳ ಮಾಹಿತಿ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ. ನಿರಂತರವಾಗಿ ಸಂಭಾಷಣೆ ನಡೆಸಿರುವ ಮೊಬೈಲ್ ಫೋನ್​ ಸಂಖ್ಯೆಗಳನ್ನು ಪತ್ತೆ ಹಚ್ಚಿ, ಅದರ ಮೂಲಕ ಸಂತ್ರಸ್ತೆ ಹಾಗೂ ಸ್ಫೋಟಕದ ಹಿಂದಿರುವ ಕಾಣದ ಕೈಗಳನ್ನು ಬಯಲುಗೊಳಿಸಲು ಪೊಲೀಸರು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಇದನ್ನೂ ಓದಿ: ಜಾರಕಿಹೊಳಿ ಸೆಕ್ಸ್​ ಸಿಡಿ ರಿಲೀಸ್​ಗೂ ಮುನ್ನ ದಿನೇಶ್ ಕಲ್ಲಹಳ್ಳಿ ಲಾಡ್ಜ್​ಗೆ ಹೋಗಿದ್ದೇಕೆ? ಸಿಸಿ ಕ್ಯಾಮರಾದಲ್ಲಿ ಸೆರೆ

    ಮತ್ತೊಂದೆಡೆ ದಿನೇಶ್ ಕಲ್ಲಹಳ್ಳಿ, ಅಭದ್ರತೆ ಕಾರಣ ಹೇಳಿ ಗುರುವಾರ ಕಬ್ಬನ್‌ಪಾರ್ಕ್ ಪೊಲೀಸರ ವಿಚಾರಣೆಗೆ ಗೈರು ಆಗಿದ್ದಾರೆ. ಮಾರ್ಚ್ 9ಕ್ಕೆ ಬರುವುದಾಗಿ ಪತ್ರ ಬರೆದಿದ್ದಾರೆ. ಮಾ.2ರಂದು ರಮೇಶ್ ಜಾರಕಿಹೊಳಿ ವಿರುದ್ಧ ದೂರು ನೀಡಿರುವ ಸಂಬಂಧ ಮತ್ತಷ್ಟು ದಾಖಲೆ ಮತ್ತು ಹೇಳಿಕೆ ಪಡೆಯುವ ಅಗತ್ಯ ಇದೆ. ಈ ಕಾರಣಕ್ಕೆ ಗುರುವಾರ ಬೆಳಗ್ಗೆ 11 ಗಂಟೆಗೆ ಕಬ್ಬನ್ ಪಾರ್ಕ್ ಠಾಣೆಗೆ ಹಾಜರಾಗುವಂತೆ ದಿನೇಶ್ ಕಲ್ಲಹಳ್ಳಿಗೆ ಇನ್‌ಸ್ಪೆಕ್ಟರ್ ಬಿ. ಮಾರುತಿ, ನೋಟಿಸ್ ಜಾರಿ ಮಾಡಿದ್ದರು. ಗೈರು ಆಗಿರುವ ದಿನೇಶ್ ಕಲ್ಲಹಳ್ಳಿ, ಇನ್‌ಸ್ಪೆಕ್ಟರ್‌ಗೆ ಪತ್ರ ಬರೆದು ಮಾರ್ಚ್ 9ಕ್ಕೆ ವಿಚಾರಣೆಗೆ ಬರುತ್ತೇನೆ. ಮಾಜಿ ಸಚಿವರ ವಿರುದ್ಧ ದೂರು ನೀಡಿದ ಮೇಲೆ ಬೆದರಿಕೆ ಕರೆಗಳು ಬರುತ್ತಿವೆ. ಈ ಬಗ್ಗೆ ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದೇನೆ. ಅವರ ಸೂಚನೆ ಮೇರೆಗೆ ಕನಕಪುರ ಗ್ರಾಮಾಂತರ ಠಾಣೆಗೂ ದೂರು ಕೊಟ್ಟಿದ್ದೇನೆ. ನನಗೆ ಜೀವ ಬೆದರಿಕೆ ಇರುವುದರಿಂದ ಸೂಕ್ತ ಭದ್ರತೆ ಇಲ್ಲದ ಕಾರಣ ವಿಚಾರಣೆಗೆ ಬರಲು ಸಾಧ್ಯವಾಗಿಲ್ಲ. ಸೂಕ್ತ ಭದ್ರತೆ ಒದಗಿಸಿದ ಮೇಲೆ ವಿಚಾರಣೆಗೆ ಹಾಜರಾಗಿ ಹೇಳಿಕೆ ದಾಖಲಿಸುತ್ತೇನೆ ಎಂದು ಪತ್ರದಲ್ಲಿ ದಿನೇಶ್ ಕಲ್ಲಹಳ್ಳಿ ಉಲ್ಲೇಖಿಸಿದ್ದಾರೆ. ಅವರು ಕನಕಪುರದ ಕಲ್ಲಹಳ್ಳಿಯಲ್ಲಿಯೇ ಉಳಿದುಕೊಂಡಿದ್ದಾರೆ.

    ಎಫ್ಐಆರ್​ ದಾಖಲಿಸಲು ಅಸಾಧ್ಯ

    ಕೆಪಿಟಿಸಿಎಲ್‌ನಲ್ಲಿ ನೌಕರಿ ಕೊಡಿಸುವುದಾಗಿ ನಂಬಿಸಿ ಉತ್ತರ ಕರ್ನಾಟಕ ಮೂಲದ ಯುವತಿಯನ್ನು ಲೈಂಗಿಕವಾಗಿ ಬಳಸಿಕೊಂಡು ರಮೇಶ್ ಜಾರಕಿಹೊಳಿ ವಂಚಿಸಿದ್ದಾರೆ ಎಂದು ಆರೋಪಿಸಿ ಕಬ್ಬನ್ ಪಾರ್ಕ್ ಠಾಣೆಯಲ್ಲಿ ದಿನೇಶ್ ಕಲ್ಲಹಳ್ಳಿ ದೂರು ಸಲ್ಲಿಸಿದ್ದಾರೆ. ಪ್ರಕರಣದಲ್ಲಿ ದಿನೇಶ್, 3ನೇ ವ್ಯಕ್ತಿ ಆಗಿರುವ ಕಾರಣ ಈ ದೂರಿನ ಮೇಲೆ ಎಫ್‌ಐಆರ್ ದಾಖಲಿಸಲು ಸಾಧ್ಯವಿಲ್ಲ. ಪ್ರಾಥಮಿಕ ಹಂತದ ವಿಚಾರಣೆ ನಡೆಸಲು ದಿನೇಶ್ ಕಲ್ಲಹಳ್ಳಿಯನ್ನು ಕರೆಯಲಾಗಿತ್ತು, ಆದರೆ ಅವರು ಬಂದಿಲ್ಲ. ಸಂತ್ರಸ್ತೆಯಿಂದ ಹೇಳಿಕೆ, ಕೆಲ ಸಾಕ್ಷ್ಯಾಧಾರಗಳು ಬೇಕಾಗಿವೆ. ಆನಂತರ ಎಫ್​ಐಆರ್​ ದಾಖಲಿಸಿ ಮುಂದಿನ ಕ್ರಮ ತೆಗೆದುಕೊಳ್ಳುವುದಾಗಿ ಪೊಲೀಸರು ನಿರ್ಧರಿಸಿದ್ದಾರೆ.

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಸದನದಲ್ಲೇ ಅಂಗಿ ಬಿಚ್ಚಿದ ಶಾಸಕ! ಸಿಎಂ ಮತ್ತು ಈಶ್ವರಪ್ಪ ವಿರುದ್ಧ ಆಕ್ರೋಶ…

    ಜಾರಕಿಹೊಳಿ ಸೆಕ್ಸ್​ ಸಿಡಿ ಪ್ರಕರಣ: ಹಲವು ಅನುಮಾನ ಹುಟ್ಟಿಸಿದೆ ಡಾ.ಸುಧಾಕರ್​ ಹೇಳಿಕೆ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts