More

    ಹೆಜಮಾಡಿ ಚೆಕ್‌ಪೋಸ್ಟ್‌ಗೆ ಮತ್ತೆ ಪೊಲೀಸರ ನಿಯೋಜನೆ

    ಪಡುಬಿದ್ರಿ: ಉಡುಪಿ ಜಿಲ್ಲೆ ಪ್ರವೇಶಿಸುವ ಹೆಜಮಾಡಿ ಗಡಿ ತಪಾಸಣಾ ಕೇಂದ್ರದಲ್ಲಿ ಬುಧವಾರ ಹಿಂಪಡೆದಿದ್ದ ಹಗಲು ವೇಳೆಯ ಪೊಲೀಸ್ ತಪಾಸಣಾ ವ್ಯವಸ್ಥೆಯನ್ನು ಗುರುವಾರ ಮತ್ತೆ ಆರಂಭಿಸಲಾಗಿದೆ.

    ಪೊಲೀಸರ ಕರ್ತವ್ಯವನ್ನು ರದ್ದುಗೊಳಿಸಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬುಧವಾರ ಸ್ಪಷ್ಟನೆ ನೀಡಿದ್ದರೂ, ರಾತ್ರಿ 10 ಗಂಟೆವರೆಗೆ ಯಾವೊಬ್ಬ ಪೊಲೀಸರು ಚೆಕ್‌ಪೋಸ್ಟ್‌ನಲ್ಲಿ ಕರ್ತವ್ಯದಲ್ಲಿರಲಿಲ್ಲ. ರಾತ್ರಿ 10ರ ಬಳಿಕ ಗುರುವಾರ ಮುಂಜಾನೆ 6 ರವರೆಗೆ ಪೊಲೀಸರು ಕರ್ತವ್ಯ ನಿರ್ವಹಿಸಿ ತೆರಳಿದ್ದರು. ಬಳಿಕ ತಪಾಸಣಾ ಕೇಂದ್ರದಲ್ಲಿ ಬೆಳಗ್ಗಿನ ಪಾಳಿಯಲ್ಲಿ ಶಿಕ್ಷಕರಷ್ಟೇ ಕುಳಿತಿದ್ದರು.

    ಈ ಅವಧಿಯಲ್ಲಿ ಅದೆಷ್ಟೋ ವಾಹನಗಳು ನಿರಾತಂಕವಾಗಿ ಜಿಲ್ಲೆ ಪ್ರವೇಶಿಸಿದ್ದವು. ಗುರುವಾರ ಬೆಳಗ್ಗೆ 10.30ರ ಬಳಿಕ ಪಡುಬಿದ್ರಿ ಠಾಣಾಧಿಕಾರಿ ಇಬ್ಬರು ಕಾನ್‌ಸ್ಟೆಬಲ್‌ಗಳೊಂದಿಗೆ ತಪಾಸಣಾ ಕೇಂದ್ರಕ್ಕೆ ಆಗಮಿಸಿದರು. ಕರ್ತವ್ಯ ಪಾಲನೆಯ ಛಾಯಾಚಿತ್ರ ತೆಗೆದ ಬಳಿಕ ಇಬ್ಬರು ಕಾನ್‌ಸ್ಟೆಬಲ್‌ಗಳನ್ನು ನಿಯೋಜಿಸಿ ಎಸ್‌ಐ ತೆರಳಿದರು. ಜತೆಗೆ ನಾಲ್ವರು ಗೃಹರಕ್ಷಕ ದಳ ಸಿಬ್ಬಂದಿಯನ್ನೂ ಕರ್ತವ್ಯಕ್ಕೆ ನಿಯೋಜಿಸಿದರು.

    ಠಾಣೆ ಪ್ರವೇಶ ನಿರ್ಬಂಧ: ಜಿಲ್ಲೆಯ ಹಲವು ಪೊಲೀಸ್ ಠಾಣೆಗಳ ಸಿಬ್ಬಂದಿಗೆ ಕರೊನಾ ವಕ್ಕರಿಸಿದ ಪರಿಣಾಮ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ಠಾಣೆ ಪ್ರವೇಶ ದ್ವಾರಕ್ಕೆ ಬ್ಯಾರಿಕೇಡ್ ಹಾಕಿ ಜನ ಪ್ರವೇಶ ನಿಷೇಧಿಸಲಾಗಿದೆ. ಕರೊನಾ ಪರೀಕ್ಷೆಯಲ್ಲಿ ಪಡುಬಿದ್ರಿ ಠಾಣೆಯ 36 ಪೊಲೀಸರ ವರದಿಯೂ ನೆಗೆಟಿವ್ ಬಂದಿದೆ. ಪ್ರಕರಣಗಳ ವಿಚಾರಣೆಯನ್ನೂ ಹೊರಗಡೆಯಿಂದಲೇ ಮಾಡಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts