More

    ವಿಷ ಸೇವಿಸಲು ಯತ್ನಿಸಿದ ರೈತ

    ಬೆಳಗಾವಿ: ಜಿಲ್ಲೆಗೆ ಬರ ಅಧ್ಯಯನಕ್ಕಾಗಿ ಆಗಮಿಸಿದ್ದ ಕೇಂದ್ರ ತಂಡದ ಎದುರು ಬೈಲಹೊಂಗಲ ತಾಲೂಕಿನ ಕಲಕುಪ್ಪಿ ಗ್ರಾಮದಲ್ಲಿ ರೈತ ನೋರ್ವ ವಿಷ ಸೇವಿಸಲು ಯತ್ನಿಸಿದ ಘಟನೆ ಶುಕ್ರವಾರ ನಡೆಯಿತು. ‘ಬರ ಬಂದಾಗೆಲ್ಲ ಇವರೂ ಬರ್ತಾರೆ. ಆದರೆ, ನಮ್ಮ ಸಮಸ್ಯೆ ಆಲಿಸುವುದಿಲ್ಲ.

    ನಮ್ಮ ಅಧಿಕಾರಿಗಳು ತೋರಿಸಿದ್ದನ್ನು ನೋಡಿದರೂ ತಲೆ ಅಲ್ಲಾಡಿಸಿ ಕೇಂದ್ರಕ್ಕೆ ವರದಿ ಕೊಡ್ತಿವಿ ಎಂದು ಹೊರಟು ಹೋಗುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ರೈತ ಅಪ್ಪಾಸಾಹೇಬ ಲಕ್ಕುಂಡಿ ಎಂಬುವರು ಕೀಟನಾಶಕ ತೆಗೆದು ಸೇವಿಸಲು ಯತ್ನಿಸಿದರು. ಸ್ಥಳದಲ್ಲಿದ್ದ ಪೊಲೀಸರು ವಿಷದ ಬಾಟಲಿ ಕಸಿದುಕೊಂಡರು.

    ಮುಂಗಾರು ಹಂಗಾಮಿನಲ್ಲಿ ಸಮಯಕ್ಕೆ ಸರಿಯಾಗಿ ಮಳೆಯಾಗದಿರುವ ಕಾರಣ ಬೆಳೆಗಳು ಕಾಯಿ ಕಟ್ಟಿಲ್ಲ. ಇದರಿಂದಾಗಿ ಬಿತ್ತನೆಗಾಗಿ ಮಾಡಿರುವ ಸಾವಿರಾರು ರೂ.ಸಾಲ ತೀರಿಸಲು ಸಾಧ್ಯವಾಗದ ಸ್ಥಿತಿಯಲ್ಲಿದ್ದೇವೆ. 20 ರಿಂದ 30 ಎಕರೆ ಭೂಮಿಯಲ್ಲಿ ಶೇಂಗಾ, ಹುರಳಿ, ಸೋಯಾಬೀನ್ ಬೆಳೆದಿದ್ದೇನೆ. ಮಳೆ ಕೊರತೆಯಿಂದ ಬೆಳೆ ಸಂಪೂರ್ಣ ಹಾಳಾಗಿದೆ. ಆದರೆ, ಯಾರೂ ರೈತರ ಕಷ್ಟ ಕೇಳುತ್ತಿಲ್ಲ. ಹಾಗಾಗಿ, ಮನನೊಂದು ಆತ್ಮಹತ್ಯೆಗೆ ಯತ್ನಿಸಿದೆ ಎಂದು ರೈತ ಅಪ್ಪಾಸಾಹೇಬ ತಿಳಿಸಿದರು.

    ವಿಮೆ ಕಂಪನಿಗಳಿಂದ ಉಡುಗೊರೆ: ಪ್ರತಿ ವರ್ಷ ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ 5 ರಿಂದ 10 ಸಾವಿರ ರೂ. ವರೆಗೆ ವಿವಿಧ ಬೆಳೆಗಳ ವಿಮೆ ಕಟ್ಟುತ್ತೇವೆ. ಆದರೆ, ಇಲ್ಲಿಯವರೆಗೆ ಒಂದೇ ಒಂದು ರೂಪಾಯಿ ಹಣ ಬಂದಿಲ್ಲ. ನಮ್ಮ ಭಾಗದಲ್ಲಿ ಯಾರೂ ಬೆಳೆಯದ ಬೆಳೆಗಳಿಗೆ ವಿಮೆ ೋಷಣೆ ಮಾಡುತ್ತಾರೆ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗುತ್ತಿಲ್ಲ. ವಿಮೆ ಕಂಪನಿಗಳ ಏಜೆಂಟರಂತೆ ಕೃಷಿ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಕೋಟ್ಯಂತರ ರೂ. ಲಾಭ ಮಾಡಿಕೊಡುವ ಅಧಿಕಾರಿಗಳಿಗೆ ವಿಮೆ ಕಂಪನಿಗಳು ಲಕ್ಷಾಂತರ ರೂ. ಮೌಲ್ಯದ ಉಡುಗೊರೆ ನೀಡುತ್ತಿವೆ ಎಂದು ಬೈಲಹೊಂಗಲ, ಸವದತ್ತಿ, ರಾಮದುರ್ಗ ತಾಲೂಕಿನ ರೈತರು ಆರೋಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts