More

    ಕವಿ ಒಡನಾಟದ ಕ್ಷಣ ನಿತ್ಯ ನಿತ್ಯೋತ್ಸವ

    ಬೆಳಗಾವಿ: ಬಾರದ ಲೋಕಕ್ಕೆ ತೆರಳಿದ ಕವಿ ನಿಸಾರ್ ಅಹಮ್ಮದ್ ಅವರು ರಚಿಸಿದ್ದ ಕವನಗಳು ಮತ್ತು ಗೀತೆಗಳು ಕನ್ನಡ ಸುಗಮ ಸಂಗೀತವನ್ನು ಎತ್ತರಕ್ಕೆ ಕೊಂಡೊಯ್ದಿದ್ದವು. ಸಂವೇದನಾಶೀಲ ಕವಿಗಳಾಗಿದ್ದ ಅವರು ಶ್ರೇಷ್ಠ ಅನುವಾದಕರೂ ಹಾಗೂ ಭಾವೈಕ್ಯದ ದ್ಯೋತಕವಾಗಿದ್ದರು. ಅವರು ನಿರ್ಮಿಸಿದ ‘ನಿತ್ಯೋತ್ಸವ’ ಹಾಡು ಕನ್ನಡಿಗರ ಮನೆಮಾತಾಗಿದೆ. ಬರಹಗಳು ಪಠ್ಯಗಳಾಗಿವೆ. ಈ ಶತಮಾನ ಕಂಡ ಶ್ರೇಷ್ಠ ಕನ್ನಡ ಕವಿ ನಿಸಾರ್ ಅಹ್ಮದ್ ಅವರು ನಾಡೋಜ, ರಾಜ್ಯೋತ್ಸವ ಸೇರಿ ಅನೇಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾಗಿದ್ದರು.

    ದುಬೈ ದೇಶದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಪಾಲ್ಗೊಳ್ಳಲು ಜತೆಯಲ್ಲಿಯೇ ವಿಮಾನಯಾನ ಮಾಡಿ, ಕನ್ನಡ ಸಾಹಿತ್ಯದ ಮಹತ್ವ ತಿಳಿಸಿ ಇಂದು ಬಾರದ ಲೋಕಕ್ಕೆ ಪ್ರಯಾಣ ಮಾಡಿರುವ ನಾಡೋಜ, ನಿತ್ಯೋತ್ಸವ ಕವಿ ಡಾ. ಕೆ.ಎಸ್. ನಿಸಾರ್ ಅಹಮದ್ ಅವರ ನೆನಪುಗಳು ಅವಿಸ್ಮರಣೀಯ ಎಂದು ಏರ್‌ವಿಂಗ್ ಎನ್‌ಸಿಸಿ ಸೂಪರಿಂಟೆಡೆಂಟ್ ಸುಭಾಷಚಂದ್ರ ಚಿಕ್ಕಪ್ಪನವರ ಅವರು ನಿಸಾರ್ ಅಹಮದ್ ಅವರೊಂದಿಗೆ ಕಳೆದ ದಿನಗಳನ್ನು ಸ್ಮರಿಸಿಕೊಂಡಿದ್ದಾರೆ.

    ನಿಸಾರ್ ಅಹಮದ್ ಅವರು ತಾಯಿ ಕನ್ನಡತಿಯ ಸಾಹಿತ್ಯ ಕೃಷಿಗೆ ನೀಡಿದ ಕೊಡುಗೆ ಅಪಾರ. ದೂರದ ಬೆಂಗಳೂರಿನಲ್ಲಿದ್ದರೂ, ಅವರೊಡನೆ ನಾಲ್ಕು ದಿನ ಕಳೆಯುವ ಅವಕಾಶ ನನಗೆ ಹಾಗೂ ನನ್ನ ಸ್ನೇಹಿತರ ಬಳಗಕ್ಕೆ ಒದಗಿ ಬಂದಿದ್ದು ಅವಿಸ್ಮರಣೀಯ ನೆನಪುಗಳಲ್ಲಿ ಒಂದು. ಇಂದು ಅವರು ನಮ್ಮನ್ನು ಅಗಲಿದ ಸಂಗತಿ ನಿಜಕ್ಕೂ ಬೇಸರ ಎಂದು ಚಿಕ್ಕಪ್ಪನವರ ದುಃಖ ವ್ಯಕ್ತಪಡಿಸಿದ್ದಾರೆ.

    ದುಬೈನಲ್ಲಿ 2016ರಲ್ಲಿ ನಡೆದ ಕನ್ನಡ ರಾಜ್ಯೋತ್ಸವದ ಅಧ್ಯಕ್ಷತೆಯನ್ನು ಕವಿ ಡಾ.ನಿಸ್ಸಾರ್ ಅಹಮದ್ ವಹಿಸಿದ್ದರು. ಅದಕ್ಕಾಗಿ ನಮ್ಮೊಂದಿಗೆ ದುಬೈಗೆ ಪ್ರಯಾಣ ಬೆಳೆಸಲು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕೂಡಿಕೊಂಡ ದಿನ ಎನ್ನುವ ಬದಲು ನಾವು ಅವರೊಂದಿಗೆ ಕೂಡಿದ ದಿನ ಹಾಗೂ ಅವರೊಂದಿಗಿನ ಒಡನಾಟ ಎಂದಿಗೂ ಸ್ಮತಿ ಪಟಲದಲ್ಲಿರುತ್ತದೆ. ಸಮಾರಂಭ ಮುಗಿದ ನಂತರ ದುಬೈ ಪ್ರಯಾಣ ಮುಗಿಸಿ, ನಾವು ಅವರು ಬೇರ್ಪಟ್ಟಿದ್ದು ಮತ್ತದೇ ವಿಮಾನ ನಿಲ್ದಾಣದಲ್ಲಿ. ಆದರೆ, ಇವತ್ತು ಅವರು ಮತ್ತೆ ಮರಳಿ ಬರಲಾರದ ವಿಮಾನ ಹತ್ತಿ ಹೋಗಿರುವ ಘಳಿಗೆ ನಿಜಕ್ಕೂ ನೋವಿನ ಸಂಗತಿ. ಆದರೂ ಅವರೊಂದಿಗೆ ಕಳೆದ ಸಮಯ, ನಮ್ಮೆಲ್ಲರ ಪಾಲಿಗೆ ಚಿರಸ್ಮರಣೀಯ ಎಂದು ಹಳೇ ದಿನಗಳನ್ನು ಚಿಕ್ಕಪ್ಪನವರ ನೆನಪಿಸಿಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts