More

    ಪಿಎಂಜಿಎಸ್​ವೈ ಕಾಮಗಾರಿ ಕಳಪೆ

    ಶಿರಹಟ್ಟಿ: ಪ್ರಧಾನಮಂತ್ರಿ ಗ್ರಾಮೀಣ ಸಡಕ್ ಯೋಜನೆಯಡಿ(ಪಿಎಂಜಿಎಸ್​ವೈ) ಸುಮಾರು ಒಂದು ಕೋಟಿ ರೂ. ವೆಚ್ಚದಲ್ಲಿ ಕೈಗೊಂಡ ಜಲ್ಲಿಗೇರಿ-ವರವಿ, ಕಪ್ಪತ್ತಗುಡ್ಡ-ಕಡಕೋಳ, ಛಬ್ಬಿ-ಆದ್ರಳ್ಳಿ ಸಂಪರ್ಕ ರಸ್ತೆಗಳ ಕಾಮಗಾರಿ ಕಳಪೆಯಾಗಿದ್ದು, 3 ತಿಂಗಳಲ್ಲಿ ಹಳ್ಳ ಹಿಡಿದಿವೆ ಎಂದು ಸದಸ್ಯ ತಿಪ್ಪಣ್ಣ ಕೊಂಚಿಗೇರಿ, ದೇವಪ್ಪ ಲಮಾಣಿ ಅವರು ಪಿಎಂಜಿಎಸ್​ವೈ ಎಇ ಅಶೋಕ ಚಲವಾದಿ ಅವರನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.

    ಪಟ್ಟಣದ ತಾಪಂ ಸಾಮರ್ಥ್ಯಸೌಧದ ಸಭಾಭವನದಲ್ಲಿ ಶನಿವಾರ ಸಾಮಾನ್ಯ ಸಭೆ ಆಯೋಜಿಸಲಾಗಿತ್ತು. ವಿವಿಧ ಇಲಾಖೆಗಳ ಕಾ ಮೇಲೆ ಚರ್ಚೆಯ ಸಂದರ್ಭದಲ್ಲಿ ಪಿಎಂಜಿಎಸ್ ಯೋಜನೆಯಡಿ ಕೈಗೊಂಡ ಕಾಮಗಾರಿ ಪ್ರಗತಿ ಬಗ್ಗೆ ಎಇ ಚಲವಾದಿ ವಿವರಿಸುತ್ತಿದ್ದ ವೇಳೆ, ಸದಸ್ಯ ತಿಪ್ಪಣ್ಣ ಕೊಂಚಿಗೇರಿ, ‘ತಾಲೂಕಿನ ವಿವಿಧೆಡೆ ಕೈಗೊಂಡ ಕೋಟ್ಯಂತರ ರೂ. ವೆಚ್ಚದ ರಸ್ತೆ ಕಾಮಗಾರಿ ವಾಸ್ತವಿಕ ಸ್ಥಿತಿ ಕಣ್ಣಾರೆ ನೋಡಿದ್ದೀರಾ’ ಎಂದು ಪ್ರಶ್ನಿಸಿದರು. ಅದಕ್ಕೆ, ನೋಡಿದ್ದೀನಿ ಏನಾಗಿದೆ ಹೇಳಿ ಎಂದು ಎಇ ಚಲವಾದಿ ಪ್ರತಿಕ್ರಿಯಿಸಿದಾಗ, ಸಿಡಿಮಿಡಿ ಗೊಂಡ ಸದಸ್ಯ ದೇವಪ್ಪ ಲಮಾಣಿ, ‘ನೀವು ಮಾಡಿದ ರಸ್ತೆ ಕಾಮಗಾರಿ ಪೂರ್ಣ ಕಳಪೆ ಆಗಿದ್ದರಿಂದ ಮಾಡಿದ 3 ತಿಂಗಳಲ್ಲಿ ಡಾಂಬರ್ ಕಿತ್ತು ಹಾಳಾಗಿ ಹೋಗಿವೆ. ಸರ್ಕಾರದ ಕೋಟ್ಯಂತರ ಹಣ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಯಾವುದೇ ಸಬೂಬು ನೀಡದೆ ರಸ್ತೆ ಸುಧಾರಣೆ ಮಾಡಿ ಸಂಚಾರಕ್ಕೆ ಅನುಕೂಲ ಮಾಡಿ’ ಎಂದು ತಾಕೀತು ಮಾಡಿದರು.

    ನೋಂದಣಿ ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ: ಅಲ್ಪಸ್ವಲ್ಪ ಜಮೀನು ಇಲ್ಲವೇ ನಿವೇಶನ ಖರೀದಿಯ ಸಂಬಂಧ ನೋಂದಣಿಗೆ ಬರುವ ರೈತರು ಹಾಗೂ ಸಾರ್ವಜನಿಕರಿಂದ ಸರ್ಕಾರದ ನೀತಿ, ನಿಯಮಕ್ಕಿಂತ ಹೆಚ್ಚಿನ ಶುಲ್ಕ ಪಡೆಯುವ ಜೊತೆಗೆ ಕಚೇರಿಯ ಸಿಬ್ಬಂದಿ ಅಲ್ಲದ ಕೆಲ ಮಧ್ಯವರ್ತಿಗಳು ಅವರಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಾರೆ ಎಂಬ ದೂರು ಕೇಳಿ ಬಂದಿದ್ದು, ಅದಕ್ಕೆ ನಿತಮ್ಮ ಸಹಮತವಿದೆ ಎನ್ನಲಾಗುತ್ತಿದೆ ನಿಜವೇ? ಎಂದು ಸದಸ್ಯ ದೇವಪ್ಪ ಲಮಾಣಿ ನೋಂದಣಿ ಇಲಾಖೆ ಅಧಿಕಾರಿ ಎಂ.ವಿ. ಪತ್ತಾರ ಅವರನ್ನು ಪ್ರಶ್ನಿಸಿದಾಗ, ಹಾಗೇನು ಇಲ್ಲ ಎಂದುತ್ತರಿಸಿದರು.

    ಕೆಲ ದಸ್ತಾ ಬರಹಗಾರರು ಸೇರಿದಂತೆ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕದಿದ್ದರೆ ರೈತರೇ ತಕ್ಕಪಾಠ ಕಲಿಸುತ್ತಾರೆ, ಎಚ್ಚರದಿಂದಿರಿ ಎಂದು ಸದಸ್ಯ ಕೊಂಚಿಗೇರಿ ಅಧಿಕಾರಿಗೆ ಹೇಳಿದರು.

    ಕಳೆದೆರಡು ತಿಂಗಳಿಂದ ಹಳ್ಳಿಗಳಲ್ಲಿನ ಅಂಗನವಾಡಿ ಮಕ್ಕಳಿಗೆ ಮೊಟ್ಟೆ ಹಾಗೂ ಪೌಷ್ಟಿಕ ಆಹಾರ ಒದಗಿಸುತ್ತಿಲ್ಲ. ಇಲಾಖೆಯ ಮೇಲ್ವಿಚಾರಕಿಯರು ಯಾವ ಹಳ್ಳಿಗೂ ಭೇಟಿ ನೀಡುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ ಎಂದು ತಾಪಂ ಉಪಾಧ್ಯಕ್ಷೆ ಪವಿತ್ರಾ ಶಂಕಿನದಾಸರ ಮತ್ತು ಸದಸ್ಯೆ ಉಮಾ ಹೊನಗಣ್ಣವರ ಸಿಡಿಪಿಒ ಮೃತ್ಯುಂಜಯ ಅವರನ್ನು ಪ್ರಶ್ನಿಸಿದಾಗ, ಈ ಬಗ್ಗೆ ತಾವೇ ಖುದ್ದು ಭೇಟಿ ನೀಡಿ ಪರಿಶೀಲಿಸುವುದಾಗಿ ಸಿಡಿಪಿಒ ತಿಳಿಸಿದರು.

    ಕೋವಿಡ್ ನಿಯಂತ್ರಣದಲ್ಲಿ ಪ್ರಥಮ

    ಕೋವಿಡ್ ನಿಯಂತ್ರಣದಲ್ಲಿ ಶಿರಹಟ್ಟಿ ತಾಲೂಕು ಜಿಲ್ಲೆಯಲ್ಲಿ ಪ್ರಥಮ ಸ್ಥಾನದಲ್ಲಿದೆ. ಈವರೆಗೆ ಸುಮಾರು 10 ಸಾವಿರ ಜನರನ್ನು ಕೋವಿಡ್ ಟೆಸ್ಟ್​ಗೊಳಪಡಿಸಿದ್ದು ಅವರಲ್ಲಿ ಶೇ. 98.25 ಫಲಿತಾಂಶ ವರದಿ ನೆಗೆಟಿವ್ ಬಂದಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಸುಭಾಸ ದೈಗೊಂಡ ಸಭೆಗೆ ಮಾಹಿತಿ ನೀಡಿದರು.

    ಅನುದಾನ ಲ್ಯಾಪ್ಸ್ ಮಾಡಬೇಡಿ

    ರಾಜ್ಯದಲ್ಲಿ ಗ್ರಾಪಂಗಳಿಗೆ ಅತಿ ಶೀಘ್ರದಲ್ಲಿ ಚುನಾವಣೆ ನಡೆಯುವ ಸಾಧ್ಯತೆಯಿದೆ. ಆದ್ದರಿಂದ ಆಯಾ ಇಲಾಖೆ ಅಧಿಕಾರಿಗಳು ತಾಲೂಕಿನ ಎಲ್ಲ ಗ್ರಾಪಂ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಾದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ತಕ್ಷಣ ಪ್ರಾರಂಭಿಸುವ ಜೊತೆಗೆ ಕ್ರಿಯಾ ಯೋಜನೆಗೆ ಮೇಲಾಧಿಕಾರಿಗಳಿಂದ ಒಪ್ಪಿಗೆ ಪಡೆಯಬೇಕು. ಯಾವುದೇ ಕಾರಣಕ್ಕೆ ಅನುದಾನ ಲ್ಯಾಪ್ಸ್ ಮಾಡಬೇಡಿ ಎಂದು ತಾಪಂ ಇಒ ಡಾ.ಎನ್.ಎಚ್. ಓಲೇಕಾರ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts