More

    VIDEO | ಒಲಿಂಪಿಕ್ಸ್‌ನಲ್ಲಿ ಗೆದ್ದವರಿಗೆ ಬೆನ್ನು ತಟ್ಟಿ, ಸೋತವರಿಗೆ ಸ್ಫೂರ್ತಿ ತುಂಬಿದ ಮೋದಿ

    ನವದೆಹಲಿ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ದಾಖಲೆಯ 7 ಪದಕ ಗೆದ್ದು ಇತಿಹಾಸ ನಿರ್ಮಿಸಿದ ಭಾರತ ತಂಡದ ಎಲ್ಲ ಸದಸ್ಯರ ಜತೆಗೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ತಮ್ಮ ನಿವಾಸದಲ್ಲಿ ಮನಬಿಚ್ಚಿ ಮಾತನಾಡಿದ್ದರು. ಈ ವೇಳೆ ಗೆದ್ದ ಕ್ರೀಡಾಪಟುಗಳ ಸಾಧನೆಗೆ ಬೆನ್ನುತಟ್ಟಿ ಪ್ರಶಂಸಿಸಿದ್ದ ಅವರು, ಸೋತ ಕ್ರೀಡಾಪಟುಗಳಿಗೂ ಕುಗ್ಗದಿರುವಂತೆ ಪ್ರೇರಣೆಯ ಮಾತುಗಳನ್ನು ನುಡಿದರು. ಈ ಕಾರ್ಯಕ್ರಮದ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹಾಲಿ ಮತ್ತು ಭವಿಷ್ಯದ ಕ್ರೀಡಾಪಟುಗಳಿಗೆ ಸ್ಫೂರ್ತಿ ತುಂಬಿದೆ.

    75 ಶಾಲೆಗಳಿಗೆ ಭೇಟಿ ನೀಡಿ
    ಭಾರತ ಒಲಿಂಪಿಕ್ಸ್ ತಂಡದ ಎಲ್ಲ ಕ್ರೀಡಾಪಟುಗಳು 2023ರ ಆಗಸ್ಟ್ 15ರೊಳಗೆ 75 ಶಾಲೆಗಳಿಗೆ ಭೇಟಿ ನೀಡಬೇಕೆಂದು ಮೋದಿ ಮನವಿ ಸಲ್ಲಿಸಿದರು. ಈ ಶಾಲೆಗಳಲ್ಲಿ ವಿದ್ಯಾರ್ಥಿಗಳ ಜತೆಗೆ ಸುಮಾರು 1 ಗಂಟೆ ಸಮಯ ಕಳೆಯಿರಿ ಮತ್ತು ಕ್ರೀಡೆಯಲ್ಲಿ ತೊಡಗಿಕೊಳ್ಳುವಂತೆ ಅವರಿಗೆ ಸ್ಫೂರ್ತಿ ತುಂಬಿರಿ. ಜತೆಗೆ ಅಪೌಷ್ಟಿಕತೆಯ ಬಗ್ಗೆ ಜಾಗೃತಿ ಮೂಡಿಸಿ ಎಂದಿದ್ದಾರೆ.

    ಹಸ್ತಾಕ್ಷರದ ಶಾಲು ಉಡುಗೊರೆ
    ಎಲ್ಲ ಒಲಿಂಪಿಕ್ಸ್ ಸ್ಪರ್ಧಿಗಳ ಹಸ್ತಾಕ್ಷರವಿದ್ದ ಶಾಲು (ಗಮುಚ) ಒಂದನ್ನು ಪ್ರಧಾನಿ ಮೋದಿಗೆ ತೊಡಿಸಿ ಸನ್ಮಾನಿಸಿದರು. ಈ ಮೂಲಕ ತಮಗೆ ನೀಡಿದ ಪ್ರೋತ್ಸಾಹಕ್ಕಾಗಿ ಕೃತಜ್ಞತೆ ಸಲ್ಲಿಸಿದರು. ಎಲ್ಲ ಕ್ರೀಡಾಪಟುಗಳ ಪರವಾಗಿ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು, ಮೋದಿಗೆ ಶಾಲು ಹೊದಿಸಿದರು.

    ನೀರಜ್ ಸಮಚಿತ್ತಕ್ಕೆ ಪ್ರಶಂಸೆ
    ‘ಯಶಸ್ಸು ಎಂದಿಗೂ ನಿಮ್ಮ ತಲೆಗೇರುವುದಿಲ್ಲ ಮತ್ತು ಸೋಲು ನಿಮ್ಮ ತಲೆಯಲ್ಲಿ ಇರುವುದೇ ಇಲ್ಲ’ ಎಂದು ನೀರಜ್ ಚೋಪ್ರಾರ ಸಮಚಿತ್ತದ ಬಗ್ಗೆ ಮೋದಿ ಪ್ರಶಂಸಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನೀರಜ್, ‘ನಮ್ಮ ಕ್ರೀಡೆಯಲ್ಲಿ ಎದುರಾಳಿ ಏನು ಮಾಡುತ್ತಾರೆ ಎಂಬುದಕ್ಕಿಂತ ನಮ್ಮ ಶ್ರೇಷ್ಠ ನಿರ್ವಹಣೆ ತೋರುವುದೇ ಮುಖ್ಯವಾಗಿರುತ್ತದೆ. ಹೀಗಾಗಿ ಅದರ ಕಡೆ ಮಾತ್ರ ಗಮನವಿರುತ್ತದೆ’ ಎಂದರು. 2ನೇ ಪ್ರಯತ್ನದಲ್ಲಿ ಜಾವೆಲಿನ್ ಎಸೆದ ಬೆನ್ನಲ್ಲೇ ಸಂಭ್ರಮ ಆಚರಿಸಿದ್ದು, ನಿಮ್ಮ ಆತ್ಮವಿಶ್ವಾಸವನ್ನು ತೋರಿಸುತ್ತದೆ ಎಂದು ಮೋದಿ ಹೇಳಿದಾಗ, ‘ಸರ್, ತರಬೇತಿಯಿಂದ ಅಂಥ ಆತ್ಮವಿಶ್ವಾಸ ಬರುತ್ತದೆ’ ಎಂದು ನೀರಜ್ ಪ್ರತಿಕ್ರಿಯಿಸಿದರು.

    ಪೋಡಿಯಂನಲ್ಲಿ ರವಿ ನಗದ ಬಗ್ಗೆ ಆಕ್ಷೇಪ!
    ಪೈಲ್ವಾನ್ ರವಿ ದಹಿಯಾ ಜತೆಗೆ ಮಾತನಾಡುತ್ತ ಮೋದಿ, ಪೋಡಿಯಂ ಮೇಲೆ ರಜತ ಪದಕದೊಂದಿಗೆ ಪೋಸ್ ನೀಡುವಾಗಲೂ ನಗುಮೊಗ ತೋರದ ಬಗ್ಗೆ ತಮಾಷೆಯಾಗಿ ಆಕ್ಷೇಪ ವ್ಯಕ್ತಪಡಿಸಿದರು. ನಿಮಗೆ ಚಿನ್ನ ಗೆಲ್ಲದ ಬಗ್ಗೆ ನಿರಾಸೆಯಾಗಿರಬಹುದು ನಿಜ. ಆದರೆ ಪೋಡಿಯಂ ಮೇಲಾದರೂ ನಗಬಹುದಾಗಿತ್ತು ಎಂದು ಮೋದಿ ಹೇಳಿದಾಗ ರವಿ, ಮುಂದಿನ ಬಾರಿ ಹೀಗಾಗದು ಎಂದರು.

    ಕೊರಿಯಾ-ಅಯೋಧ್ಯಾ ನಂಟು ನೆನಪು
    ಪಿವಿ ಸಿಂಧು ತಮ್ಮ ಕೋಚ್ ಪಾರ್ಕ್ ಟೀ ಸ್ಯಾಂಗ್‌ರನ್ನು ಪರಿಚಯಿಸಿದಾಗ ಮೋದಿ, ಅವರ ತವರೂರು ದಕ್ಷಿಣ ಕೊರಿಯಾ ಮತ್ತು ಅಯೋಧ್ಯಾ ನಡುವೆ ನಂಟು ಇದೆ ಎಂಬುದನ್ನು ನೆನಪಿಸಿದರು. 2000 ವರ್ಷಗಳ ಹಿಂದೆ ಅಯೋಧ್ಯೆಯ ರಾಣಿ ಸುರಿರತ್ನ ದಕ್ಷಿಣ ಕೊರಿಯಾಗೆ ತೆರಳಿ ಅಲ್ಲಿನ ರಾಜ ಕಿಂಗ್ ಕಿಮ್ ಸುರೋರನ್ನು ವಿವಾಹವಾಗಿದ್ದರು. ಇದೇ ನೆನಪಿಗಾಗಿ ಅಯೋಧ್ಯೆಯಲ್ಲಿ ಈಗ ದಕ್ಷಿಣ ಕೊರಿಯಾ ಮತ್ತು ಉತ್ತರ ಪ್ರದೇಶ ಸರ್ಕಾರದ ಸಹಭಾಗಿತ್ವದಲ್ಲಿ ಗಾರ್ಡನ್ ನಿರ್ಮಾಣಗೊಳ್ಳುತ್ತಿದೆ.

    ಸೋಲಿಗೆ ಕುಗ್ಗದಿರಿ
    ಪದಕ ನಿರೀಕ್ಷೆಯೊಂದಿಗೆ ಒಲಿಂಪಿಕ್ಸ್‌ಗೆ ತೆರಳಿದ್ದರೂ, ನಿರಾಸೆ ಅನುಭವಿಸಿದ್ದ ಕುಸ್ತಿಪಟು ವಿನೇಶ್ ಪೋಗಟ್‌ಗೆ ಮೋದಿ, ಸೋಲಿನಿಂದ ಕುಗ್ಗದಿರಿ ಎಂದು ಸಾಂತ್ವನ ಹೇಳಿದರು. ‘ಗೆಲುವಿಗೆ ಅಹಂಕಾರ ಪಡಬೇಡಿ, ಸೋಲನ್ನು ಮನಸ್ಸಿನಲ್ಲಿ ಇರಲು ಬಿಡಬೇಡಿ’ ಎಂದು ವಿನೇಶ್‌ಗೆ ಹೇಳಿದರು. ಬಾಕ್ಸರ್ ಮೇರಿ ಕೋಮ್ ಕೂಡ ಪದಕ ಗೆಲ್ಲಲಾಗದ ಬಗ್ಗೆ ಕ್ಷಮೆಯಾಚಿಸಿದಾಗ ಮೋದಿ, ‘ಸೋಲು-ಗೆಲುವು ಜೀವನದ ಭಾಗ. ನೀವು ಈಗಾಗಲೆ ಭಾರತ ಮತ್ತು ಕ್ರೀಡಾ ಜಗತ್ತಿಗೆ ಸಾಕಷ್ಟು ಕೊಡುಗೆ ನೀಡಿದ್ದೀರಿ. ನಿಮ್ಮಿಂದಾಗಿಯೇ ಮಹಿಳಾ ಕ್ರೀಡೆಗೆ ಹೆಚ್ಚಿನ ಮನ್ನಣೆ ಲಭಿಸಿದೆ’ ಎಂದರು.

    ಗನ್ ಉಡುಗೊರೆ ನೀಡಲಾಗದು!
    ಕ್ರೀಡಾಪಟುಗಳು ತಮ್ಮ ವಿವಿಧ ಪರಿಕರಗಳನ್ನು ಮೋದಿಗೆ ಉಡುಗೊರೆ ನೀಡಿದ್ದರು. ನೀರಜ್ ಜಾವೆಲಿನ್, ಸಿಂಧು ರ‌್ಯಾಕೆಟ್, ಲವ್ಲಿನಾ ಬಾಕ್ಸಿಂಗ್ ಗ್ಲೌಸ್, ಹಾಕಿ ಆಟಗಾರರು ಸ್ಟಿಕ್ ಉಡುಗೊರೆ ನೀಡಿದ್ದರು. ಆದರೆ ನಾವು ನಮ್ಮ ಅಸ ಗನ್ ಅಥವಾ ಪಿಸ್ತೂಲ್‌ಅನ್ನು ನಿಮಗೆ ಉಡುಗೊರೆ ನೀಡಲಾಗದು ಎಂದು ಶೂಟರ್ ರಾಹಿ ಸರ್ನೋಬಾತ್ ಹೇಳಿದರು. ಅದಕ್ಕೆ ಮೋದಿ ಕೂಡ, ‘ಹೌದು, ಒಳ್ಳೆಯ ಕೆಲಸ ಮಾಡಿದಿರಿ, ನೀವು ಗನ್ ತರುತ್ತಿದ್ದರೆ ನಮ್ಮ ಭದ್ರತಾ ಸಿಬ್ಬಂದಿ ನಿಮ್ಮನ್ನು ಒಳಗೆ ಬಿಡುತ್ತಿರಲಿಲ್ಲ’ ಎಂದು ನಕ್ಕರು.

    ಹಾಕಿಯಲ್ಲಿ ಪದಕ ಗೆದ್ದರೆ ಖುಷಿ
    ಭಾರತ ತಂಡ ಒಲಿಂಪಿಕ್ಸ್‌ನಲ್ಲಿ ಎಷ್ಟೇ ಪದಕ ಗೆಲ್ಲಬಹುದು. ಆದರೆ ಹಾಕಿ ಕ್ರೀಡೆಯಲ್ಲಿ ಪದಕ ಗೆದ್ದರೆ ಅದರ ಖುಷಿಯೇ ಬೇರೆ. ಬೇರೆ ಎಲ್ಲ ಪದಕಗಳಿಗಿಂತ ಹೆಚ್ಚಾಗಿ ಹಾಕಿ ಪದಕಕ್ಕೆ ಭಾರತೀಯರ ಹೃದಯದಲ್ಲಿ ವಿಶೇಷ ಸ್ಥಾನವಿದೆ ಎನ್ನುತ್ತ ಪ್ರಧಾನಿ ಮೋದಿ, ಪುರುಷರ ಹಾಕಿ ತಂಡವನ್ನು ಅಭಿನಂದಿಸಿದರು.

    ಕ್ಷಮೆ ಕೇಳಬೇಡಿ
    ಬಿಲ್ಗಾರ್ತಿ ದೀಪಿಕಾ ಕುಮಾರಿ ನಾನು 3ನೇ ಬಾರಿ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದರೂ ನಿರಾಸೆ ಮೂಡಿಸಿದ ಬಗ್ಗೆ ಪ್ರಧಾನಿ ಬಳಿ ಕ್ಷಮೆಯಾಚಿಸಿದರು. ಅದಕ್ಕೆ ಮೋದಿ, ‘ಕ್ಷಮೆ ಯಾಕೆ ಕೇಳುತ್ತೀರಿ. ಕ್ರೀಡಾಪಟುಗಳು ಎಂದೂ ಭರವಸೆ ಕಳೆದುಕೊಳ್ಳಬಾರದು. ಭರವಸೆ ಕಳೆದುಕೊಂಡರೆ ಅವರು ಕ್ರೀಡಾಪಟುಗಳಾಗುವುದಿಲ್ಲ’ ಎಂದರು. ದೀಪಿಕಾರ ಪತಿ ಹಾಗೂ ಬಿಲ್ಗಾರ ಅತನು ದಾಸ್, ‘ಆರ್ಚರಿ ನನ್ನ ಇಷ್ಟದ ಕ್ರೀಡೆ. ಸೋಲು-ಗೆಲುವು ಇದ್ದಿದ್ದೇ. ಆದರೆ ಈ ಕ್ರೀಡೆಯನ್ನು ಎಂದೂ ಬಿಡುವುದಿಲ್ಲ’ ಎಂದಾಗ ಮೋದಿ ಮೆಚ್ಚುಗೆ ಸೂಚಿಸಿದರು.

    ಮೀರಾಗೆ ಮೆಚ್ಚುಗೆ
    ರಜತ ವಿಜೇತೆ ವೇಟ್‌ಲ್ಟಿರ್ ಮೀರಾಬಾಯಿ ಚಾನು ತಮಗೆ ತರಬೇತಿಗೆ ತೆರಳಲು ನೆರವಾಗಿದ್ದ ಟ್ರಕ್ ಚಾಲಕರನ್ನು ಮನೆಗೆ ಕರೆದು ಸನ್ಮಾನಿಸಿದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಮೋದಿ, ‘ನಿಮ್ಮ ಪದಕ ಗೆಲುವು ಎಲ್ಲರಿಗೂ ಹೆಮ್ಮೆ ತಂದಿದೆ. ಆದರೆ ಟ್ರಕ್ ಚಾಲಕರನ್ನು ಕರೆದು ಕೃತಜ್ಞತೆ ಸಲ್ಲಿಸಿದ್ದು ಶ್ರೇಷ್ಠವಾದ ನಡೆ. ಪದಕ ಗೆಲುವಿಗೆ ಗರ್ವ ಹೊಂದಿರುವ ಜತೆಗೆ ಈ ನಮ್ರತೆಯ ಗುಣಕ್ಕೆ ನಿಮ್ಮ ಸಂಸ್ಕಾರ ಕಾರಣ’ ಎಂದರು. ಪದಕ ಗೆದ್ದ ಬಳಿಕವೂ ಎಲ್ಲರನ್ನು ಸ್ಮರಿಸಿದ್ದು ವಿಶೇಷವಾದುದು ಎಂದರು.

    ಒಲಿಂಪಿಕ್ಸ್ ಸ್ಪರ್ಧೆಯೇ ಗೆಲುವು
    ದೇಶದ ಜನಸಂಖ್ಯೆ 135 ಕೋಟಿ ಇದೆ. ಈ ಪೈಕಿ ಶೇ. 65 ಮಂದಿ ಯುವಕರು. ಅದರಲ್ಲಿ ನೀವು 128 ಕ್ರೀಡಾಪಟುಗಳು ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶ ಪಡೆದಿದ್ದೀರಿ. ಇದುವೇ ನಿಮ್ಮ ಅತಿದೊಡ್ಡ ಗೆಲುವು. ಭಾಗವಹಿಸುವ ಎಲ್ಲರೂ ಪದಕ ಗೆಲ್ಲಬೇಕೆಂದಿಲ್ಲ ಎಂದು ಮೋದಿ ಕ್ರೀಡಾಪಟುಗಳಿಗೆ ಹೇಳಿದರು.

    ಮಗುವಿನ ಶಸ್ತ್ರಚಿಕಿತ್ಸೆಗಾಗಿ ಒಲಿಂಪಿಕ್ಸ್ ಪದಕ ಹರಾಜು! ಖರೀದಿಸಿದವರು ನೀಡಿದ ಟ್ವಿಸ್ಟ್ ಏನು ಗೊತ್ತೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts