More

    ಶೈಕ್ಷಣಿಕ ಕಟ್ಟಡಗಳ ಲೋಕಾರ್ಪಣೆ

    ಕಲಬುರಗಿ: ಭಾರತ ೨೦೪೭ರಲ್ಲಿ ಸ್ವಾತಂತ್ರ್ಯದ ಶತಮಾನೋತ್ಸವ ಸಂಭ್ರಮದಲ್ಲಿದ್ದು, ಆ ಹೊತ್ತಿಗೆ ದೇಶವನ್ನು ವಿಶ್ವಗುರು ಸ್ಥಾನಕ್ಕೆ ಕೊಂಡೊಯ್ಯುವ ಹೊಣೆಗಾರಿಕೆ ಯುವಕರ ಮೇಲಿದೆ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಹೇಳಿದರು.

    ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ವಿವಿಧ ಶೈಕ್ಷಣಿಕ ಕಟ್ಟಡಗಳ ಲೋಕಾರ್ಪಣೆಯ ವರ್ಚುವಲ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಯುವಶಕ್ತಿ ಮೇಲೆ ಪ್ರಧಾನಿಗೆ ವಿಶ್ವಾಸವಿದೆ. ಇದಕ್ಕೆ ಪೂರಕವಾಗಿ ಇತ್ತೀಚಿನ ಮಧ್ಯಂತರ ಬಜೆಟ್‌ನಲ್ಲಿ ಸಂಶೋಧನೆ ಮತ್ತು ಅನ್ವೇಷಣಾ ಕ್ಷೇತ್ರದಲ್ಲಿ ಯುವಕರ ಪ್ರತಿಭೆ ಅನಾವರಣಕ್ಕೆ ಅನುವು ಆಗುವಂತೆ ಒಂದು ಲಕ್ಷ ಕೋಟಿ ಅನುದಾನ ಮೀಸಲಿರಿಸಿದ್ದಾರೆ. ಹೀಗಾಗಿ ಯುವಕರು ದೇಶಕ್ಕಾಗಿ ಪರಿಶ್ರಮದ ಮೂಲಕ ಸಕಾರಾತ್ಮಕ ಕೊಡುಗೆ ನೀಡಬೇಕು ಎಂದು ಕಿವಿಮಾತು ಹೇಳಿದರು.

    ಇಂದು ಭಾರತ ಜಗತ್ತಿನ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. ನಮ್ಮ ಜಿಡಿಪಿ ಬೆಳವಣಿಗೆ ವಿಶ್ವದ ಗಮನ ಸೆಳೆಯುತ್ತಿದೆ. ಇದಕ್ಕೆ ಪೂರಕವಾಗಿ ೨.೬೦ ಲಕ್ಷ ತಜ್ಞರು ಹಾಗೂ ಸಾರ್ವಜನಿಕ ಕ್ಷೇತ್ರದ ಪರಿಣತರ ಸಲಹೆ ಪಡೆದು ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸಲಾಗಿದೆ. ಇದರಿಂದಾಗಿ ಯುವಕರು ಮತ್ತು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಳವಾಗಲಿದೆ ಎಂದರು.

    ನಮ್ಮ ಸಂಸ್ಕೃತ ಶ್ಲೋಕಗಳಲ್ಲಿ ಭೂಮಿ ಆಕಾರ, ವೈಮಾನಿಕ ತಂತ್ರಜ್ಞಾನದ ಉಲ್ಲೇಖವಿದೆ. ಇದರ ಜ್ಞಾನ ಬಹಳ ಉಪಯೋಗಕಾರಿಯಾಗಿದೆ ಎಂದು ಚಂದ್ರಯಾನ-೩ ಯಶಸ್ವಿ ಉಡಾವಣೆ ಬಳಿಕ ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ ಎಂದು ಸಚಿವ ಖೂಬಾ ಹೇಳಿದರು.
    ಸಿಯುಕೆ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಮಾತನಾಡಿ, ಕೇಂದ್ರ ಮಂತ್ರಿ ಭಗವಂತ ಖೂಬಾ ಸಿಯುಕೆಯಲ್ಲಿ ಓಪನ್ ಜಿಮ್ ನಿರ್ಮಾಣ ಮಾಡಿಕೊಡಲಿದ್ದಾರೆ. ಕಾಮಗಾರಿ ನಾಳೆಯಿಂದಲೇ ಪ್ರಾರಂಭವಾಗಲಿದ್ದು, ತಿಂಗಳಲ್ಲಿ ಕೆಲಸ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.

    ಕ್ಯಾಂಪಸ್ ಅಭಿವೃದ್ಧಿ ಅಧಿಕಾರಿ ಪ್ರೊ.ಚನ್ನವೀರ ಆರ್.ಎಂ., ಹಣಕಾಸು ಅಧಿಕಾರಿ ಕೋಟಾ ಸಾಯಿಕೃಷ್ಣ, ಪ್ರೊ.ಪುಷ್ಪಾ ಸವದತ್ತಿ, ಪ್ರೊ.ಬಸವರಾಜ ಡೋಣೂರ, ಪ್ರೊ.ವಿಕ್ರಮ ವಿಸಾಜಿ, ಪ್ರೊ.ರವೀಂದ್ರ ಹೆಗಡಿ, ಪ್ರೊ.ಗಣೇಶ ಪವಾರ್ ಇತರರಿದ್ದರು. ಕುಲಸಚಿವ ಪ್ರೊ.ಆರ್.ಆರ್. ಬಿರಾದಾರ್ ವಂದಿಸಿದರು. ಡಾ.ಅಂಕಿತಾ ಸತ್ಪತಿ ಹಾಗೂ ಡಾ.ಸ್ವಪ್ನಿಲ್ ಚಾಪೇಕರ್ ನಿರೂಪಣೆ ಮಾಡಿದರು. ಡಾ.ಜಯದೇವಿ ಜಂಗಮಶೆಟ್ಟಿ, ಡಾ.ರವಿಕಿರಣ ನಾಕೋಡ ನಾಡಗೀತೆ, ರಾಷ್ಟ್ರಗೀತೆ ಹಾಡಿದರು.

    ೮೪ ಕೋಟಿ ಅನುದಾನದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಇಂಜಿನಿಯರಿಂಗ್ ಲ್ಯಾಬ್, ಇನ್‌ಸ್ಟ್ರುಮೆಂಟೇಶನ್ ಸೆಂಟರ್, ಕ್ಲಾಸ್ ರೂಮ್ ಕಾಂಪ್ಲೆಕ್ಸ್, ಇನ್‌ಕ್ಯೂಬೇಷನ್ ಮತ್ತು ಕೌಶಲ ಅಭಿವೃದ್ಧಿ ಕೇಂದ್ರ ನಿರ್ಮಿಸಲಾಗಿದೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸದುಪಯೋಗ ಪಡೆದು ಉತ್ತಮ ಸಂಶೋಧನೆ, ಕಲಿಕೆ ಮಾಡಬೇಕು.
    | ಪ್ರೊ.ಬಟ್ಟು ಸತ್ಯನಾರಾಯಣ ಸಿಯುಕೆ ಕುಲಪತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts