More

    ಪ್ರಧಾನಿ ಮೋದಿ ಭೇಟಿಯಾದ ಪೇಜಾವರ ಶ್ರೀ, ತುಳುವಿಗೆ ಸಾಂವಿಧಾನಿಕ ಮಾನ್ಯತೆ ಕೋರಿಕೆ

    ಉಡುಪಿ: ಕೀರ್ತಿಶೇಷ ವಿಶ್ವೇಶತೀರ್ಥ ಸ್ವಾಮೀಜಿಯವರಿಗೆ ಮರಣೋತ್ತರವಾಗಿ ಘೋಷಿಸಿದ್ದ ಪದ್ಮವಿಭೂಷಣ ಪ್ರಶಸ್ತಿ ಸ್ವೀಕರಿಸಲು ನವದೆಹಲಿಗೆ ಆಗಮಿಸಿದ್ದ ಅಯೋಧ್ಯೆ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಸದಸ್ಯ, ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಸೋಮವಾರ ಸಾಯಂಕಾಲ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.

    ಶೀಘ್ರದಲ್ಲಿ ಉಡುಪಿ ಕೃಷ್ಣ ದರ್ಶನಕ್ಕೆ ಆಗಮಿಸುವಂತೆ ಶ್ರೀಗಳು ಪ್ರಧಾನಿಯವರನ್ನು ಆಹ್ವಾನಿಸಿದರು. ಸಮಯ ಒದಗಿ ಬಂದಾಗ ಖಂಡಿತ ಬರುತ್ತೇನೆ ಎಂದು ಮೋದಿ ಉತ್ತರಿಸಿದರು. ನಂತರ ಶ್ರೀಗಳು ಪ್ರಧಾನಿಯವರಿಗೆ, ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಬೇಕು. ದೇಶದಲ್ಲಿ ಗೋಹತ್ಯಾ ನಿಷೇಧ ಕಾನೂನು ಜಾರಿಗೊಳಿಸುವುದು, ದೇಶಾದ್ಯಂತ ಹಿಂದೂ ಶ್ರದ್ಧಾಕೇಂದ್ರಗಳನ್ನು ಸರ್ಕಾರಿ ವ್ಯವಸ್ಥೆಯಿಂದ ಸ್ವಾಯತ್ತಗೊಳಿಸುವುದು, ಮಹರ್ಷಿ ವೇದವ್ಯಾಸರ ಜಯಂತಿಯನ್ನು ತತ್ತ್ವಜ್ಞಾನ ದಿನ ಅಥವಾ ಅಧ್ಯಾತ್ಮ ದಿನ ಎಂದು ಘೋಷಿಸಿ ಸರ್ಕಾರಿ ಆಚರಣೆಗೆ ವ್ಯವಸ್ಥೆಗೊಳಿಸಬೇಕು ಎಂಬ ಮನವಿ ಪತ್ರವನ್ನು ಪ್ರಧಾನಿಯವರಿಗೆ ನೀಡಿದರು. ಈ ಬಗ್ಗೆ ಗಮನಹರಿಸುವುದಾಗಿ ಮೋದಿ ತಿಳಿಸಿದರು.

    ಈ ಸಂದರ್ಭದಲ್ಲಿ ಶ್ರೀಗಳೊಂದಿಗೆ ಕುಶಲೋಪರಿ ನಡೆಸಿದ ಮೋದಿಯವರು, ಶ್ರೀ ವಿಶ್ವೇಶತೀರ್ಥರನ್ನು ವಿಶೇಷವಾಗಿ ಸ್ಮರಿಸಿದರು. ರಾಮಮಂದಿರ ನಿರ್ಮಾಣ ಕಾರ್ಯಗಳ ಪ್ರಗತಿಯ ಕುರಿತು ಸಮಾಲೋಚನೆಗೈದರು.

    ಮೋದಿಯವರಿಗೆ ಪೇಜಾವರ ಶ್ರೀಗಳು ಯಕ್ಷಗಾನದ ಕೇದಗೆ ಮುಂಡಾಸಿನ ಕಿರೀಟ ತೊಡಿಸಿ ಜರತಾರಿ ಶಾಲು, ಬೆಳ್ಳಿಯ ತಟ್ಟೆಯಲ್ಲಿ ಉಡುಪಿ ಕೃಷ್ಣನ ಗಂಧ, ನಿರ್ಮಾಲ್ಯ ತುಳಸಿ ನೀಡಿ ಆಶೀರ್ವದಿಸಿದರು. ಉಡುಪಿಯ ಚಿತ್ರಕಲಾವಿದೆ ವಸಂತಲಕ್ಷ್ಮೀ ಹೆಬ್ಬಾರ್ ರಚಿಸಿದ ಮೋದಿಯವರು ಉಡುಪಿ ಕೃಷ್ಣನಿಗೆ ಕೈಮುಗಿಯುವ ಭಂಗಿಯ ಸುಂದರ ತೈಲಚಿತ್ರ ಹಾಗೂ ಸಂಸ್ಕೃತ, ಕನ್ನಡ, ತುಳು ಲಿಪಿಗಳಲ್ಲಿ ನರೇಂದ್ರ ಮೋದಿಯವರ ಹೆಸರನ್ನು ಕೆತ್ತಿದ ಸ್ಮರಣಿಕೆಯನ್ನು ಪ್ರಧಾನ ಮಂತ್ರಿಯವರಿಗೆ ನೀಡಿದರು.
    ಪೇಜಾವರ ಮಠದ ದಿವಾನರಾದ ಎಂ.ರಘುರಾಮಾಚಾರ್ಯ, ಡಿ.ಪಿ.ಅನಂತ್, ಸಾಮಾಜಿಕ ಕಾರ್ಯಕರ್ತ ವಾಸುದೇವ ಭಟ್ ಪೆರಂಪಳ್ಳಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts