ಮಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಇದಾಗಲೇ ಮಂಗಳೂರಿಗೆ ಆಗಮಿಸಿದ್ದಾರೆ. ಹೆಲಿಕಾಪ್ಟರ್ ಮೂಲಕ ಆಗಮಿಸಿರುವ ಪ್ರಧಾನಿಯವರು ಮಧ್ಯಾಹ್ನ 3.30ಕ್ಕೆ ನಡೆಯಲಿರುವ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ನಗರದ ಗೋಲ್ಡ್ ಫಿಂಚ್ ಸಿಟಿಯಲ್ಲಿ ಹಮ್ಮಿಕೊಳ್ಳಲಾಗಿರುವ ಪ್ರಧಾನಿ ಮೋದಿಯವರ ಸಮಾವೇಶಕ್ಕೆ ಜನಸಾಗರವೇ ಹರಿದು ಬರುತ್ತಿದೆ.
ಕಾರ್ಯಕ್ರಮಕ್ಕೆ ಆಗಮಿಸಿದವರಿಗೆ ಬೆಳಗ್ಗಿನ ಉಪಹಾರದ ವ್ಯವಸ್ಥೆ ಮಾಡಲಾಗಿದೆ. ದ.ಕ ಜಿಲ್ಲಾ ಕ್ಯಾಟರಿಂಗ್ ಮಾಲೀಕರ ಸಂಘದಿಂದ 1.25 ಲಕ್ಷ ಮಂದಿಗೆ ಬೇಕಾಗುವಷ್ಟು ವೆಜ್ ಪಲಾವ್, ಸಲಾಡ್, ನೀರಿನ ವ್ಯವಸ್ಥೆ ಮಾಡಲಾಗಿದೆ. 60 ಕೌಂಟರ್‌ಗಳಲ್ಲಿ 3,600 ಮಂದಿ ಕೆಲಸಗಾರರು ಮುಂಜಾನೆಯಿಂದಲೇ ಕಾರ್ಯನಿರ್ವಹಿಸುತ್ತಿದ್ದಾರೆ. ಅಸೋಸಿಯೇಶನ್ ಅಧ್ಯಕ್ಷ ರಾಜಗೋಪಾಲ್ ರೈ ಮತ್ತು ಗೌರವಾಧ್ಯಕ್ಷ ಸುಧಾಕರ ಕಾಮತ್ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಜತೆಗೆ ಒಂದು ಲಕ್ಷ ಪ್ಯಾಕೆಟ್ ಬಿಸ್ಕೆಟ್, ಒಂದು ಲಕ್ಷ ಚಾಕೋಲೆಟ್ ವ್ಯವಸ್ಥೆ ಇದೆ.
ಬಂಗ್ರ ಕೂಳೂರು ಗೋಲ್ಡ್ ಫಿಂಚ್ ಸಿಟಿಯಲ್ಲಿ ಆಯೋಜಿಸಿರುವ ಪ್ರಧಾನಿ ಕಾರ್ಯಕ್ರಮದಲ್ಲಿ ಎಲ್ಲ ವ್ಯವಸ್ಥೆ ಅಚ್ಚು ಕಟ್ಟಾಗಿ ಮಾಡಲಾಗಿದೆ.
ಆರೋಗ್ಯ ಸಮಸ್ಯೆ ಎದುರಾದರೆ ಪ್ರಥಮ ಚಿಕಿತ್ಸಾ ಘಟಕ, ವಿಚಾರಣೆ ಕೌಂಟರ್, ಕುಡಿಯುವ ನೀರು, ಶೌಚಾಲಯ, ಆಹಾರದ ವ್ಯವಸ್ಥೆ ಸೇರಿದಂತೆ ಫಲಾನುಭವಿಗಳಿಗೆ ಹಾಗೂ ಪಕ್ಷದ ಕಾರ್ಯಕರ್ತರಿಗೆ ಪೂರಕವಾಗಿ ವ್ಯವಸ್ಥೆ ಜೋಡಿಸಲಾಗಿದೆ.