More

    ಅಯೋಧ್ಯಾ ರಾಮಮಂದಿರ ನಿರ್ಮಾಣಕ್ಕೆ ಟ್ರಸ್ಟ್​ ರಚನೆ ಮಾಡಿದ ಕೇಂದ್ರ ಸರ್ಕಾರ; ಯೋಜನೆ ಸಿದ್ಧವಾಗಿದೆ ಎಂದ ಪ್ರಧಾನಿ ಮೋದಿ

    ನವದೆಹಲಿ: ಅಯೋಧ್ಯಾ ರಾಮಜನ್ಮಭೂಮಿ-ಬಾಬ್ರಿ ಮಸೀದಿ ಭೂ ವಿವಾದವನ್ನು ಸುಪ್ರೀಂಕೋರ್ಟ್​ ಇತ್ಯರ್ಥಗೊಳಿಸಿ ತಿಂಗಳುಗಳೇ ಕಳೆದಿದೆ.

    ವಿವಾದಿತ ಜಾಗದಲ್ಲಿ ಹಿಂದುಗಳು ರಾಮಮಂದಿರ ಕಟ್ಟಬೇಕು, ಮಸೀದಿ ಕಟ್ಟಲು ಅಯೋಧ್ಯೆಯಲ್ಲಿಯೇ ಬೇರೆ ಕಡೆಯಲ್ಲಿ ಮುಸ್ಲಿಮರಿಗೆ 5 ಎಕರೆ ಜಾಗ ನೀಡಬೇಕು ಎಂದು ಸುಪ್ರೀಂಕೋರ್ಟ್​ ಆದೇಶ ನೀಡಿದ್ದು, ಜವಾಬ್ದಾರಿಯನ್ನು ಕೇಂದ್ರ ಸರ್ಕಾರಕ್ಕೆ ವಹಿಸಿತ್ತು. ಅಲ್ಲದೆ ಮಂದಿರ ನಿರ್ಮಾಣಕ್ಕೆ ಟ್ರಸ್ಟ್​ ರಚನೆ ಮಾಡಬೇಕು ಎಂದು ಸೂಚನೆ ನೀಡಿತ್ತು.

    ಅದರಂತೆ ಕೇಂದ್ರ ಸರ್ಕಾರ ರಾಮಮಂದಿರ ನಿರ್ಮಾಣಕ್ಕಾಗಿ ಟ್ರಸ್ಟ್​ ರಚಿಸಿದ್ದಾಗಿ ಇಂದು ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

    ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಯೋಜನೆ ರೂಪಿಸಿದ್ದೇವೆ. ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಎಂಬ ಹೆಸರಿನಲ್ಲಿ ಟ್ರಸ್ಟ್​ ರಚನೆ ಮಾಡಲಾಗಿದೆ ಎಂದು ಪ್ರಧಾನಿ ತಿಳಿಸಿದರು.

    ಕೇಂದ್ರ ಸರ್ಕಾರ ಟ್ರಸ್ಟ್​ಗೆ 67.703 ಎಕರೆ ಭೂಮಿಯನ್ನು ನೀಡಲು ನಿರ್ಧಾರ ಮಾಡಿದೆ. ರಾಮಮಂದಿರ ನಿರ್ಮಾಣಕ್ಕೆ ಸಂಬಂಧಪಟ್ಟ ಎಲ್ಲ ನಿರ್ಧಾರಗಳನ್ನೂ ತೆಗೆದುಕೊಳ್ಳುವ ಅಧಿಕಾರ ಟ್ರಸ್ಟ್​ಗೆ ಇರುತ್ತದೆ ಎಂದು ಹೇಳಿದರು.

    ಅಲ್ಲದೆ ಮಸೀದಿ ನಿರ್ಮಾಣಕ್ಕಾಗಿ ಸುನ್ನಿ ವಕ್ಫ್​ ಬೋರ್ಡ್​ಗೆ 5 ಎಕರೆ ಜಾಗ ನೀಡಲು ಉತ್ತರ ಪ್ರದೇಶ ಸರ್ಕಾರ ಒಪ್ಪಿಗೆ ನೀಡಿದೆ ಎಂದು ಹೇಳಿದ್ದಾರೆ.

    ಅಷ್ಟೇ ಅಲ್ಲದೆ ಅಯೋಧ್ಯಾ ಭೂವಿವಾದ ಅಂತಿಮ ತೀರ್ಪನ್ನು ಈ ದೇಶದ ಜನರು ಸ್ವೀಕರಿಸಿದ ರೀತಿಯನ್ನು ಮೋದಿ ಹೊಗಳಿದರು. ರಾಮಜನ್ಮಭೂಮಿ ತೀರ್ಪನ್ನು ಸುಪ್ರೀಂಕೋರ್ಟ್ ನೀಡಿದ ಬಳಿಕ ದೇಶದ ಜನರು ಪ್ರಜಾಪ್ರಭುತ್ವದ ಪ್ರಕ್ರಿಯೆಗಳಲ್ಲಿ ಹಾಗೂ ಕಾರ್ಯವಿಧಾನಗಳಲ್ಲಿ ತಮ್ಮ ನಂಬಿಕೆ ಎಷ್ಟು ಎಂಬುದನ್ನು ತೋರಿಸಿದ್ದಾರೆ. ಅವರೆಲ್ಲರಿಗೂ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts