More

    ಬಿಕೋ ಎನ್ನುತ್ತಿವೆ ಮೈದಾನ, ಕ್ರೀಡಾಂಗಣದತ್ತ ಸುಳಿಯದ ಕ್ರೀಡಾಪಟುಗಳು

    ಭರತ್ ಶೆಟ್ಟಿಗಾರ್ ಮಂಗಳೂರು

    ಮಳೆಯಿರಲಿ, ಬಿಸಿಲಿರಲಿ ಮಂಗಳೂರಿನ ಮೈದಾನಗಳು ಸದಾ ಕ್ರೀಡಾಚಟುವಟಿಕೆಗೆ ಸಾಕ್ಷಿಯಾಗುತ್ತಿದ್ದವು. ರಾಜ್ಯ, ರಾಷ್ಟ್ರ ಮಟ್ಟದ ಕ್ರೀಡಾಕೂಟಗಳಿಗೆ ಸಾಕ್ಷಿಯಾದ ಹೆಗ್ಗಳಿಕೆ ಇಲ್ಲಿನ ಮೈದಾನಗಳಿಗಿವೆ. ಆದರೆ ಪ್ರಸ್ತುತ ಕ್ರೀಡಾ ಕಲರವವೇ ಇಲ್ಲದೆ, ಮೈದಾನಗಳು ಬಿಕೋ ಅನ್ನುತ್ತಿವೆ.

    ಕರೊನಾ ಮೊದಲ ಅಲೆಯ ಬಳಿಕ ಕ್ರೀಡಾಚಟುವಟಿಕೆಗಳು ನಿಧಾನವಾಗಿ ಆರಂಭವಾಗಿದ್ದರೂ, ಏಪ್ರಿಲ್ ಬಳಿಕ ಮತ್ತೆ ಸ್ಥಗಿತಗೊಂಡಿವೆ. ಬೇಸಿಗೆಯಲ್ಲಿ ನಿಗದಿಯಾಗಿದ್ದ ಹಲವು ಟೂರ್ನಮೆಂಟ್ ರದ್ದಾಗಿವೆ. ಕ್ರೀಡಾಪಟುಗಳು ತರಬೇತಿ ಪಡೆಯಲೂ ಅವಕಾಶ ಇಲ್ಲ. ಪ್ರತಿನಿತ್ಯ ಒಂದಿಲ್ಲೊಂದು ಕ್ರೀಡಾಕೂಟಗಳು ನಡೆಯುತ್ತಿದ್ದ ಮಂಗಳೂರಿನ ಉರ್ವ ಮೈದಾನ, ನೆಹರೂ ಮೈದಾನ (ಕ್ರಿಕೆಟ್ ಮತ್ತು ಫುಟ್‌ಬಾಲ್), ಮಂಗಳಾ ಕ್ರೀಡಾಂಗಣಗಳು ಕ್ರೀಡಾಳುಗಳ ನಿರೀಕ್ಷೆಯಲ್ಲಿ ದಿನ ದೂಡುತ್ತಿವೆ.

    ಇನ್ನು ಕೆಲವು ದಿನಗಳಲ್ಲಿ ಮಳೆಗಾಲ ಆರಂಭವಾಗಲಿದ್ದು, ಬಳಿಕ ಒಳಾಂಗಣ ಹೊರತುಪಡಿಸಿ ಯಾವುದೇ ಕ್ರೀಡಾಚಟುವಟಿಕೆಗಳು ನಡೆಯುವುದಿಲ್ಲ. ಫುಟ್‌ಬಾಲ್, ಬಾರಿಶ್ ಕ್ರಿಕೆಟ್ ಮೊದಲಾದವು ಕೆಲವೆಡೆ ಮಾತ್ರ ಆಯೋಜಿಸಲ್ಪಡುತ್ತದೆ. ಆದರೆ ಈ ಬಾರಿ ಅದೂ ಆಯೋಜನೆಗೊಳ್ಳುವುದು ಅನುಮಾನ. ಎಲ್ಲ ಸರಿಯಾದರೆ ಸೆಪ್ಟೆಂಬರ್-ಅಕ್ಟೋಬರ್ ವೇಳೆಗೆ ಮತ್ತೆ ಮೈದಾನದಲ್ಲಿ ಕ್ರೀಡಾ ಕಲರವ ಕಂಡುಬರಬಹುದು.

    ಕ್ರೀಡಾ ಭವಿಷ್ಯದ ಮೇಲೆ ಪರಿಣಾಮ: ರಾಷ್ಟ್ರ,ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸುವರಿಗೆ ತಮ್ಮ ಪ್ರದರ್ಶನದಲ್ಲಿ ಸ್ಥಿರತೆ ಕಾಯ್ದುಕೊಳ್ಳುವ ಅವಶ್ಯಕತೆಯಿರುತ್ತದೆ. ಅದಕ್ಕೆ ಪ್ರತಿನಿತ್ಯ ತರಬೇತಿಯಲ್ಲಿ ಪಾಲ್ಗೊಳ್ಳಬೇಕು. ಒಂದು ಪಂದ್ಯಾವಳಿಯಲ್ಲಿ ಭಾಗವಹಿಸಲು ಅವಕಾಶ ಸಿಗದಿದ್ದರೆ ಒಂದು ವರ್ಷ ವ್ಯರ್ಥವಾದಂತೆ. ಇದು ಅವರ ಕ್ರೀಡಾ ಭವಿಷ್ಯದ ಮೇಲೂ ಪರಿಣಾಮ ಬೀಳುತ್ತದೆ. ಇಂತಿಷ್ಟು ವರ್ಷದ ಬಳಿಕ ಅವರಲ್ಲಿ ಫಿಟ್ನೆಸ್ ಇದ್ದರೂ, ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶ ಇರುವುದಿಲ್ಲ. ಆದ್ದರಿಂದ ಪ್ರತಿದಿನ ಪ್ರಾಕ್ಟೀಸ್ ಅಗತ್ಯ. ಅದರಲ್ಲೂ ಸ್ವಿಮ್ಮಿಂಗ್‌ನಂತಹ ಆಟಗಳಿಗೆ ಯಾವ ಭವಿಷ್ಯವಿದೆ ಎಂದು ಸದ್ಯ ಹೇಳುವುದು ಕಷ್ಟ ಎನ್ನುವುದು ಕ್ರೀಡಾಪಟುಗಳ ಮಾತು.

    ಮನೆಯಲ್ಲೇ ಆಟ: ಕ್ರಿಕೆಟ್ ಕುರಿತಂತೆ ಹೆಚ್ಚು ಕ್ರೇಜ್ ಹೊಂದಿರುವವರು ಮನೆ ಅಂಗಳದಲ್ಲೇ ಆಡುವ ಮೂಲಕ ಪ್ರಾಕ್ಟೀಸ್ ಮುಂದುವರಿಸಿದ್ದಾರೆ. ಷಟ್ಲ್ ಬ್ಯಾಡ್ಮಿಂಟನ್‌ನಂತಹ ಆಟಗಳೂ ಮನೆಯಂಗಳದಲ್ಲೇ ಆಡಲು ಸಾಧ್ಯವಿದ್ದು, ಸ್ಥಳಾವಕಾಶ ಇದ್ದವರಿಗೆ ಸಮಸ್ಯೆಯಾಗಿಲ್ಲ. ಗ್ರಾಮೀಣ ಭಾಗದಲ್ಲಿ ಪೊಲೀಸರಿಗೆ ಗೊತ್ತಾಗದಂತೆ ಗದ್ದೆ ಬಯಲಿನಲ್ಲಿ ಯುವಕರು ವಾಲಿಬಾಲ್, ಕ್ರಿಕೆಟ್‌ನಂತ ಆಟಗಳನ್ನು ಆಡುತ್ತಿದ್ದಾರೆ. ಕೆಲವೆಡೆ ಪೊಲೀಸರು ಆಟವಾಡುತ್ತಿದ್ದವರನ್ನು ಓಡಿಸಿರುವ ಉದಾಹರಣೆಯೂ ಇದೆ.

    ಕೆಲವು ಕ್ರೀಡೆಗಳು ಇಂತಿಷ್ಟು ವರ್ಷದವರೆಗೆ ಮಾತ್ರ ಆಡಬಹುದಾಗಿದೆ. ಆದ್ದರಿಂದ ಕ್ರೀಡಾಳುವಿಗೆ ಪ್ರತಿ ದಿನ, ತಿಂಗಳು, ವರ್ಷವೂ ಮುಖ್ಯವಾಗಿರುತ್ತದೆ. ಕ್ರೀಡಾಕೂಟ ರದ್ದಾಗುವುದೆಂದರೆ ಕ್ರೀಡಾಪಟುವಿನ ವರ್ಷದ ಪ್ರಯತ್ನ ವ್ಯರ್ಥ, ದೈಹಿಕ ಸಾಮರ್ಥ್ಯದ ಮೇಲೂ ಪರಿಣಾಮ ಬೀರುತ್ತದೆ. ಸರ್ಕಾರದ ಮುಂದಿನ ಆದೇಶದವರೆಗೆ ಕ್ರೀಡಾಕೂಟಗಳಿಗೆ ಅವಕಾಶವಿಲ್ಲ.

    ಪ್ರದೀಪ್ ಡಿಸೋಜ
    ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts