More

  ಪ್ಲೆಸಿಸ್ ಪಡೆಗೆ ಕೈಕೊಟ್ಟ ಬ್ಯಾಟಿಂಗ್, ತವರಿನಲ್ಲೇ ಸತತ 2ನೇ ಸೋಲು: ಲಖನೌಗೆ ಸೂಪರ್ ಗೆಲುವು

  ಪ್ರಸಾದ್ ಶೆಟ್ಟಿಗಾರ್ ಬೆಂಗಳೂರು

  ಯುವ ವೇಗಿ ಮಯಾಂಕ್ ಯಾದವ್ (14ಕ್ಕೆ 3) ಮಾರಕ ದಾಳಿಗೆ ನಲುಗಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್-17ರಲ್ಲಿ ಲಖನೌ ಸೂಪರ್​ಜೈಂಟ್ಸ್ ತಂಡಕ್ಕೆ 28 ರನ್​ಗಳಿಂದ ಶರಣಾಗಿದೆ. ಬ್ಯಾಟಿಂಗ್ ವೈಫಲ್ಯದಿಂದಾಗಿ ತವರಿನಲ್ಲೇ ಸತತ 2ನೇ ಸೋಲು ಅನುಭವಿಸಿದ ಫಾಫ್ ಡು ಪ್ಲೆಸಿಸ್ ಪಡೆ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲೇ ಉಳಿದಿದೆ. ಸತತ 2ನೇ ಜಯ ಕಂಡ ಕೆಎಲ್ ರಾಹುಲ್ ಪಡೆ 4ನೇ ಸ್ಥಾನಕ್ಕೇರಿತು.

  ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಂಗಳವಾರ ತನ್ನ 4ನೇ ಲೀಗ್ ಮತ್ತು 3ನೇ ತವರು ಪಂದ್ಯ ಆಡಿದ ಆರ್​ಸಿಬಿ ಟಾಸ್ ಅದೃಷ್ಟ ಒಲಿಸಿಕೊಂಡರೂ, ಚೇಸಿಂಗ್ ವೇಳೆ ಪ್ರಮುಖ ಬ್ಯಾಟರ್​ಗಳು ಕೈಕೊಟ್ಟ ಕಾರಣ ಮುಗ್ಗರಿಸಿತು. ಮೊದಲು ಬ್ಯಾಟಿಂಗ್​ಗೆ ಇಳಿದ ಲಖನೌ ತಂಡ, ಇಬ್ಬರು ಸ್ಥಳೀಯ ಬ್ಯಾಟರ್​ಗಳ ವೈಫಲ್ಯದ ನಡುವೆಯೂ ಎಡಗೈ ಆರಂಭಿಕ ಕ್ವಿಂಟನ್ ಡಿಕಾಕ್ (81 ರನ್, 56 ಎಸೆತ, 8 ಬೌಂಡರಿ, 5 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ಮತ್ತು ನಿಕೋಲಸ್ ಪೂರನ್ (40*ರನ್, 21 ಎಸೆತ, 1 ಬೌಂಡರಿ, 5 ಸಿಕ್ಸರ್) ಹೋರಾಟದಿಂದ 5 ವಿಕೆಟ್​ಗೆ 181 ರನ್ ಕಲೆಹಾಕಿತು. ಪ್ರತಿಯಾಗಿ 58 ರನ್ ಗಳಿಸುವಷ್ಟರಲ್ಲೇ ಪ್ರಮುಖ ನಾಲ್ವರು ಬ್ಯಾಟರ್​ಗಳ ವಿಕೆಟ್ ಕಳೆದುಕೊಂಡ ಆರ್​ಸಿಬಿ ಚೇಸಿಂಗ್​ನಲ್ಲಿ ಪರದಾಡಿತು. ಅಂತಿಮವಾಗಿ ಆರ್​ಸಿಬಿ 19.4 ಓವರ್​ಗಳಲ್ಲಿ 153 ರನ್​ಗಳಿಗೆ ಆಲೌಟಾಗಿ ಟೂರ್ನಿಯಲ್ಲಿ 3ನೇ ಸೋಲು ಅನುಭವಿಸಿತು.

  ಮಯಾಂಕ್ ದಾಳಿಗೆ ಆರ್​ಸಿಬಿ ತತ್ತರ: ಐಪಿಎಲ್ ಪದಾರ್ಪಣೆಯ ಪಂದ್ಯದಲ್ಲೇ ಅತಿವೇಗದ ಎಸೆತಗಳಿಂದ ಗಮನಸೆಳೆದಿದ್ದ ದೆಹಲಿಯ 21 ವರ್ಷದ ಮಯಾಂಕ್ ಯಾದವ್ ತನ್ನ 2ನೇ ಪಂದ್ಯದಲ್ಲೂ ಅಂಥದ್ದೇ ಮಾರಕ ದಾಳಿ ನಡೆಸಿ ಆರ್​ಸಿಬಿ ಬ್ಯಾಟರ್​ಗಳನ್ನು ಕಂಗೆಡಿಸಿದರು. ಪ್ಲೆಸಿಸ್-ಕೊಹ್ಲಿ ಜೋಡಿ ಮೊದಲ ವಿಕೆಟ್​ಗೆ 26 ಎಸೆತಗಳಲ್ಲಿ 40 ರನ್ ಸೇರಿಸಿ ಉತ್ತಮ ಆರಂಭ ಒದಗಿಸಲು ಪ್ರಯತ್ನಿಸಿತು. ಆದರೆ, ಎಡಗೈ ಸ್ಪಿನ್ನರ್ ಎಂ. ಸಿದ್ಧಾರ್ಥ್ ಎಸೆತದಲ್ಲಿ ವಿರಾಟ್ (22) ಔಟ್ ಆಗುವುದರೊಂದಿಗೆ ಆರ್​ಸಿಬಿ ಕುಸಿತ ಆರಂಭಗೊಂಡಿತು.

  ನಾಯಕ ಪ್ಲೆಸಿಸ್ (19) ರನೌಟ್ ಆದರೆ, ಆಸೀಸ್ ಆಟಗಾರರಾದ ಗ್ಲೆನ್ ಮ್ಯಾಕ್ಸ್​ವೆಲ್ (0) ಮತ್ತು ಕ್ಯಾಮರಾನ್ ಗ್ರೀನ್ (9) ವಿಕೆಟ್ ಕಬಳಿಸಿದ ಮಯಾಂಕ್ ಆರ್​ಸಿಬಿ ಸಂಕಷ್ಟ ಹೆಚ್ಚಿಸಿದರು. ಆಗ ಜತೆಗೂಡಿದ ರಜತ್ ಪಾಟೀದಾರ್-ಅನುಜ್ ರಾವತ್ 31 ಎಸೆತಗಳಲ್ಲಿ 36 ರನ್ ಸೇರಿಸಿ ಪರದಾಡಿದರು. ಇದು ಆರ್​ಸಿಬಿ ಚೇಸಿಂಗ್​ಅನ್ನು ಇನ್ನಷ್ಟು ಜಟಿಲಗೊಳಿಸಿತು. ರನ್​ಗೆ ತಿಣುಕಾಡಿದ ಅನುಜ್ ರಾವತ್ 21 ಎಸೆತಗಳಲ್ಲಿ ಕೇವಲ 11 ರನ್ ಗಳಿಸಿ ನಿರಾಸೆ ಮೂಡಿಸಿದರೆ, ರಜತ್ ಪಾಟೀದಾರ್ (29) ಮಯಾಂಕ್​ಗೆ 3ನೇ ಬಲಿಯಾದರು. ಕೊನೆಯಲ್ಲಿ ಇಂಪ್ಯಾಕ್ಟ್ ಆಟಗಾರ ಮಹಿಪಾಲ್ ಲೊಮ್ರೊರ್ (33) ಹೋರಾಟ ಸೋಲಿನ ಅಂತರವನ್ನಷ್ಟೇ ತಗ್ಗಿಸಿತು.

  ಲಖನೌಗೆ ಕ್ವಿಂಟನ್ ಡಿಕಾಕ್, ಪೂರನ್ ಆಸರೆ: ರೀಸ್ ಟಾಪ್ಲೆ ಎಸೆದ ಪಂದ್ಯದ ಮೊದಲ ಓವರ್​ನಲ್ಲೇ 3 ಬೌಂಡರಿ ಬಾರಿಸುವ ಮೂಲಕ ಕ್ವಿಂಟನ್ ಡಿಕಾಕ್ ಲಖನೌಗೆ ಬಿರುಸಿನ ಆರಂಭ ಒದಗಿಸಿದರು. ನಂತರ ಸಿರಾಜ್ ಎಸೆದ ಪಂದ್ಯದ 3ನೇ ಓವರ್​ನಲ್ಲಿ ಸತತ 2 ಸಿಕ್ಸರ್ ಸಿಡಿಸಿದರೆ, ಇದರಿಂದ ಸ್ಪೂರ್ತಿ ಪಡೆದ ಕೆಎಲ್ ರಾಹುಲ್ (20) ಕೂಡ 2 ಸಿಕ್ಸರ್ ಸಿಡಿಸಿದರು. ಆದರೆ 3ನೇ ಸಿಕ್ಸರ್ ಸಿಡಿಸುವ ಪ್ರಯತ್ನದಲ್ಲಿ ರಾಹುಲ್, ಎಕ್ಸ್ ಟ್ರಾ ಕವರ್​ನಲ್ಲಿ ಮಯಾಂಕ್ ದಾಗರ್​ಗೆ ಕ್ಯಾಚ್ ನೀಡಿ, ಗ್ಲೆನ್ ಮ್ಯಾಕ್ಸ್​ವೆಲ್​ಗೆ (23ಕ್ಕೆ 2) ವಿಕೆಟ್ ಒಪ್ಪಿಸಿದರು. ಮೊದಲ ವಿಕೆಟ್​ಗೆ 33 ಎಸೆತಗಳಲ್ಲಿ 53 ರನ್ ಕಲೆಹಾಕುವ ಮೂಲಕ ಡಿಕಾಕ್-ರಾಹುಲ್ ಜೋಡಿ ಲಖನೌಗೆ ಉತ್ತಮ ಅಡಿಪಾಯವನ್ನೇ ಹಾಕಿಕೊಟ್ಟಿತು.

  ರಾಹುಲ್ ಬೆನ್ನಲ್ಲೇ ಮತ್ತೋರ್ವ ಕನ್ನಡಿಗ ದೇವದತ್ ಪಡಿಕ್ಕಲ್ (6) ಟೂರ್ನಿಯ ಸತತ 3ನೇ ಇನಿಂಗ್ಸ್​ನಲ್ಲೂ ಎರಡಂಕಿ ತಲುಪದೆ ನಿರಾಸೆ ಮೂಡಿಸಿದರು. 3ನೇ ವಿಕೆಟ್​ಗೆ ಡಿಕಾಕ್, ಮಾರ್ಕಸ್ ಸ್ಟೋಯಿನಿಸ್ (24) ಜತೆಗೆ 30 ಎಸೆತಗಳಲ್ಲಿ 56 ರನ್ ಸೇರಿಸಿ ಲಖನೌ ತಂಡವನ್ನು ಉತ್ತಮ ಮೊತ್ತದತ್ತ ಮುನ್ನಡೆಸಿದರು. ಈ ಜತೆಯಾಟವನ್ನು ಮತ್ತೆ ಮ್ಯಾಕ್ಸ್​ವೆಲ್ ಮುರಿದರು. 36 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಡಿಕಾಕ್, ಟಾಪ್ಲೆಗೆ ವಿಕೆಟ್ ಒಪ್ಪಿಸಿ ಶತಕ ಸಿಡಿಸುವ ಅವಕಾಶ ಕೈಚೆಲ್ಲಿದರು. ಬಳಿಕ ತಂಡದ ಮೊತ್ತ ಏರಿಸಲು ನಿಕೋಲಸ್ ಪೂರನ್ ಹೋರಾಡಿದರು. ಟಾಪ್ಲೆ ಎಸೆದ ಇನಿಂಗ್ಸ್​ನ 19ನೇ ಓವರ್​ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಹಿತ 20 ರನ್ ದೋಚಿದ ಪೂರನ್, ಸಿರಾಜ್ ಎಸೆದ ಇನಿಂಗ್ಸ್​ನ ಕೊನೇ ಓವರ್​ನಲ್ಲಿ ಮತ್ತೆ 2 ಸಿಕ್ಸರ್ ಸಿಡಿಸಿದರು.

  Virat Kohli: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಶೇಷ ದಾಖಲೆ ಬರೆದ ಕಿಂಗ್ ಕೊಹ್ಲಿ!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts