More

    ಟಿ20 ವಿಶ್ವಕಪ್‌ನಲ್ಲಿ ಭಾರತ-ಪಾಕ್ ಸೆಣಸಾಟಕ್ಕೆ ಮುನ್ನ ಮಾಜಿ ಕ್ರಿಕೆಟಿಗರ ವಾಕ್ಸಮರ

    ಬೆಂಗಳೂರು: ರಾಜತಾಂತ್ರಿಕ ಬಿಕ್ಕಟ್ಟು, ಉಗ್ರರು-ಕರೊನಾ ಹಾವಳಿ, ಬಿಸಿಸಿಐ-ಪಿಸಿಬಿ ಜಟಾಪಟಿ, ಬಲಾಬಲದ ಲೆಕ್ಕಾಚಾರದ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ-ಪಾಕಿಸ್ತಾನ ಕ್ರಿಕೆಟ್ ತಂಡಗಳು 2019ರ ಏಕದಿನ ವಿಶ್ವಕಪ್ ಲೀಗ್ ಹಂತದ ಕಾದಾಟದ ಬಳಿಕ ಮೊದಲ ಮುಖಾಮುಖಿ ಆಗಲು ಸಜ್ಜಾಗಿವೆ. ಏಕದಿನ ಅಥವಾ ಟಿ20 ವಿಶ್ವಕಪ್‌ನಲ್ಲಿ ಒಮ್ಮೆಯೂ ಪಾಕ್ ವಿರುದ್ಧ ಸೋಲದ ಅಜೇಯ ದಾಖಲೆ ಭಾರತ ತಂಡದ್ದಾಗಿದೆ. ಏಕದಿನ ವಿಶ್ವಕಪ್‌ನ 7 ಮುಖಾಮುಖಿಗಳಲ್ಲದೆ ಟಿ20 ವಿಶ್ವಕಪ್‌ನ 5 ಮುಖಾಮುಖಿಗಳಲ್ಲೂ ಗೆದ್ದ ಅಜೇಯ ದಾಖಲೆ ಭಾರತ ತಂಡದ್ದಾಗಿದೆ. ಭಾರತ ತಂಡ ಈ ಅಜೇಯ ದಾಖಲೆಯನ್ನು ಈ ಸಲವೂ ಕಾಯ್ದುಕೊಳ್ಳುತ್ತದೆ ಎಂದು ಹಲವು ಮಾಜಿ ಕ್ರಿಕೆಟಿಗರು ಹೇಳುತ್ತಿದ್ದಾರೆ. ಇನ್ನು ಕೆಲವರು ಈ ಬಾರಿ ಪಾಕ್ ತಂಡ ಜಯಿಸಲಿದೆ ಎನ್ನುತ್ತಿದ್ದಾರೆ. ಮಾಜಿ ಕ್ರಿಕೆಟಿಗರ ಈ ವಾಕ್ಸಮರದ ಸಂಕ್ಷಿಪ್ತ ವಿವರ ಇಲ್ಲಿದೆ…

    *ಟಿ20 ವಿಶ್ವಕಪ್‌ನಲ್ಲಿ ಪಾಕ್ ತಂಡ ಭಾರತದ ವಿರುದ್ಧ ಆಡುವುದರಲ್ಲಿ ಅರ್ಥವೇನಿದೆ? ನಮಗೆ ವಾಕ್‌ಓವರ್ ನೀಡುವುದು ಉತ್ತಮ. ನೀವು ಮತ್ತೊಮ್ಮೆ ಸೋಲುತ್ತೀರಿ, ಮತ್ತೆ ನಿರಾಸೆ ಅನುಭವಿಸುತ್ತೀರಿ. ನಮ್ಮ ತಂಡ ಬಲಿಷ್ಠವಾಗಿದೆ. ಸುಲಭವಾಗಿ ನಿಮ್ಮನ್ನು ಸೋಲಿಸುತ್ತೇವೆ ಎಂದು ಶೋಯಿಬ್ ಅಖ್ತರ್‌ಗೆ ಹೇಳಿರುವೆ.
    | ಹರ್ಭಜನ್ ಸಿಂಗ್, ಟೀಮ್ ಇಂಡಿಯಾ ಸ್ಪಿನ್ನರ್

    *ಭಾರತ ತಂಡದ ಹಾಲಿ ಫಾರ್ಮ್ ಮತ್ತು ಅಂಕಿಅಂಶಗಳನ್ನು ಗಮನಿಸಿದಾಗ, ಪಾಕಿಸ್ತಾನ ತಂಡದಿಂದ ಹೆಚ್ಚಿನ ಸವಾಲು ಎದುರಾಗುವುದು ಅನುಮಾನವೆನಿಸುತ್ತದೆ.
    | ಅಜಿತ್ ಅಗರ್ಕರ್, ಟೀಮ್ ಇಂಡಿಯಾ ಮಾಜಿ ವೇಗಿ

    *ಭಾರತ ತಂಡ ಯಾವಾಗಲೂ ವಿಶ್ವಕಪ್‌ನಲ್ಲಿ ಪಾಕ್ ವಿರುದ್ಧ ಹೆಚ್ಚಿನ ಒತ್ತಡವಿಲ್ಲದೆ ಆಡಿದೆ. ಜತೆ ಉತ್ತಮ ಸಿದ್ಧತೆಯೊಂದಿಗೆ ಕಣಕ್ಕಿಳಿದಿದೆ. ಆದರೆ ಪಾಕಿಸ್ತಾನಕ್ಕೆ ಏಕದಿನಕ್ಕಿಂತ ಟಿ20ಯಲ್ಲಿ ಭಾರತವನ್ನು ಸೋಲಿಸಲು ಹೆಚ್ಚಿನ ಅವಕಾಶಗಳಿವೆ. ಯಾಕೆಂದರೆ ಈ ಕ್ರಿಕೆಟ್ ಪ್ರಕಾರವೇ ಹಾಗಿದೆ. ಒಬ್ಬ ಆಟಗಾರನ ಅತ್ಯುತ್ತಮ ನಿರ್ವಹಣೆಯಿಂದಲೇ ಯಾವುದೇ ತಂಡವನ್ನು ಸೋಲಿಸಬಹುದಾಗಿದೆ.
    | ವೀರೇಂದ್ರ ಸೆಹ್ವಾಗ್, ಟೀಮ್ ಇಂಡಿಯಾ ಮಾಜಿ ಬ್ಯಾಟ್ಸ್‌ಮನ್

    *ಭಾರತ-ಪಾಕ್ ನಡುವಿನ ಪಂದ್ಯದಲ್ಲಿ ನಾಯಕತ್ವ ನಿರ್ಣಾಯಕ ಪಾತ್ರ ವಹಿಸಲಿದೆ. ನಾಯಕ ಮತ್ತು ಬ್ಯಾಟ್ಸ್‌ಮನ್ ಆಗಿ ಮಿಂಚಬೇಕಾದ ಒತ್ತಡ ಬಾಬರ್ ಅಜಮ್ ಮೇಲಿದೆ. ಪಾಕ್ ತಂಡಕ್ಕೆ ಕೆಎಲ್ ರಾಹುಲ್ ಮತ್ತು ರಿಷಭ್ ಪಂತ್ ಅಪಾಯಕಾರಿ ಆಗಬಲ್ಲರು.
    | ಮ್ಯಾಥ್ಯೂ ಹೇಡನ್, ಪಾಕ್ ಬ್ಯಾಟಿಂಗ್ ಸಲಹೆಗಾರ

    *ಪಾಕ್ ಕ್ರಿಕೆಟ್‌ನಲ್ಲಿನ ಸಮಸ್ಯೆ ಏನೆಂದರೆ, ನಮಗೆ ತಕ್ಷಣಕ್ಕೆ ಲಿತಾಂಶ ಸಿಗಬೇಕು, ಇಲ್ಲದಿದ್ದರೆ ಬಲಿಪಶುಗಳನ್ನು ಹುಡುಕುತ್ತೇವೆ. ವ್ಯವಸ್ಥೆಯನ್ನು ಸುಧಾರಿಸಲು ಯೋಜನೆಯ ಕೊರತೆ ಇದೆ.
    | ಮಿಸ್ಬಾ ಉಲ್ ಹಕ್, ಪಾಕ್ ತಂಡದ ಮಾಜಿ ಕೋಚ್, ನಾಯಕ

    *ಪಾಕ್ ವಿರುದ್ಧ ಭಾರತ ತಂಡ ಸ್ಪರ್ಧೆಯೊಡ್ಡಬಲ್ಲುದು ಎನಿಸುವುದಿಲ್ಲ. ಪಾಕ್ ತಂಡ ಪ್ರತಿಭೆ ಸಂಪೂರ್ಣ ಭಿನ್ನವಾದುದು. ಉಭಯ ತಂಡಗಳು ಆಗಾಗ ಮುಖಾಮುಖಿ ಆಗುತ್ತಿದ್ದರೆ, ಭಾರತಕ್ಕಿಂತ ಪಾಕ್ ತಂಡ ಎಷ್ಟು ಪ್ರತಿಭಾನ್ವಿತವಾದುದು ಎಂದು ಎಲ್ಲರಿಗೂ ಗೊತ್ತಾಗುತ್ತದೆ.
    | ಅಬ್ದುಲ್ ರಜಾಕ್, ಪಾಕ್ ಮಾಜಿ ಆಲ್ರೌಂಡರ್

    *ನಾವು ಕಳೆದ 3-4 ವರ್ಷಗಳಿಂದ ನಿರಂತರವಾಗಿ ಯುಎಇಯಲ್ಲಿ ಆಡುತ್ತಿದ್ದೇವೆ. ಹೀಗಾಗಿ ಇಲ್ಲಿನ ವಾತಾವರಣದ ಬಗ್ಗೆ ನಮಗೆ ಹೆಚ್ಚು ತಿಳಿದಿದೆ. ಭಾರತವನ್ನು ಸೋಲಿಸುವ ವಿಶ್ವಾಸ ನಮಗಿದೆ. ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಭಾರತವನ್ನು ಸೋಲಿಸಿದ 7-8 ಆಟಗಾರರು ಈಗಲೂ ತಂಡದಲ್ಲಿದ್ದಾರೆ.
    | ಬಾಬರ್ ಅಜಮ್, ಪಾಕ್ ನಾಯಕ

    *ಭಾರತವನ್ನು ಸೋಲಿಸಬೇಕಾದರೆ ಪಾಕ್ ತಂಡ ನಿರ್ಭೀತಿಯ ಅಟವಾಡುವುದು ಅಗತ್ಯ. ಟೂರ್ನಿಯಲ್ಲಿ ಲಯ ಕಂಡುಕೊಳ್ಳಲು ಭಾರತವನ್ನು ಸೋಲಿಸುವುದು ಪ್ರಮುಖವಾಗಿದೆ. ಭಾರತ ತಂಡ ಬಲಿಷ್ಠವಾಗಿದೆ. ಆದರೆ ಪಾಕ್ ತಂಡ ಒತ್ತಡವಿಲ್ಲದೆ ಆಡಿದರೆ ಗೆಲ್ಲಬಹುದಾಗಿದೆ.
    | ಜಾವೇದ್ ಮಿಯಾಂದಾದ್, ಪಾಕ್​ ಮಾಜಿ ಕ್ರಿಕೆಟಿಗ

    *ಯಾವುದೇ ತಂಡ ಸುಲಭವಾಗಿ ಚಾಂಪಿಯನ್ ಆಗಲು ಸಾಧ್ಯವಿಲ್ಲ. ಭಾರತ ತಂಡ ಪ್ರತಿಭೆ ಹೊಂದಿದೆ. ಸಾಕಷ್ಟು ರನ್ ಗಳಿಸುವ ಮತ್ತು ವಿಕೆಟ್ ಕಬಳಿಸುವ ಸಾಮರ್ಥ್ಯವೂ ಇದೆ. ಆದರೆ ವಿಶ್ವಕಪ್ ಗೆಲ್ಲಬೇಕಾದರೆ ಪಕ್ವತೆಯ ಆಟ ಅಗತ್ಯ. ಆರಂಭದಲ್ಲೇ ಪ್ರಶಸ್ತಿಯ ಬಗ್ಗೆ ಚಿಂತಿಸದೆ, ಪ್ರತಿ ಪಂದ್ಯದತ್ತ ಗಮನಹರಿಸುವುದು ಅಗತ್ಯ.
    | ಸೌರವ್ ಗಂಗೂಲಿ, ಬಿಸಿಸಿಐ ಅಧ್ಯಕ್ಷ

    *ಭಾರತ-ಪಾಕ್ ಪಂದ್ಯದ ಬಗ್ಗೆ ಭಾರಿ ಹೈಪ್ ಇದೆ. ಟಿಕೆಟ್‌ಗಳಿಗೂ ಭಾರಿ ಬೇಡಿಕೆ ಇದೆ. ಆದರೆ ನಮಗೆ ಇದು ಮತ್ತೊಂದು ಕ್ರಿಕೆಟ್ ಪಂದ್ಯವಷ್ಟೇ ಆಗಿದೆ. ಅಭಿಮಾನಿಗಳು ಪಂದ್ಯದ ಬಗ್ಗೆ ಸಾಕಷ್ಟು ಕಾತರಗೊಂಡಿದ್ದಾರೆ. ಆಟಗಾರರಾಗಿ ನಾವು ವೃತ್ತಿಪರವಾಗಿ ಪಂದ್ಯದತ್ತ ಗಮನಹರಿಸಿದ್ದೇವೆ.
    | ವಿರಾಟ್ ಕೊಹ್ಲಿ, ಟೀಮ್ ಇಂಡಿಯಾ ನಾಯಕ

    *ಇದು ಫೈನಲ್‌ಗೂ ಮೊದಲಿನ ಫೈನಲ್ ಪಂದ್ಯವಿದ್ದಂತೆ. ಈ ಪಂದ್ಯ ಗೆದ್ದ ತಂಡಕ್ಕೆ ಸಾಕಷ್ಟು ಆತ್ಮವಿಶ್ವಾಸ ಸಿಗಲಿದೆ ಮತ್ತು ಶೇ.50 ಒತ್ತಡ ಕಡಿಮೆಯಾಗಲಿದೆ. ಭಾರತ ತಂಡವೇ ಪಂದ್ಯದ ಫೇವರಿಟ್ ಎನಿಸಿದೆ. ಯುಎಇ ವಾತಾವರಣ ಮತ್ತು ಆಟಗಾರರ ಟಿ20 ಅನುಭವದ ಹಿನ್ನೆಲೆಯಲ್ಲಿ ಭಾರತವೇ ಗೆಲುವಿನ ಉತ್ತಮ ಅವಕಾಶ ಹೊಂದಿದೆ.
    | ಇಂಜಮಾಮ್ ಉಲ್ ಹಕ್, ಪಾಕ್ ಮಾಜಿ ನಾಯಕ

    *ಭಾರತ ತಂಡ ಬಾಬರ್ ಅಜಮ್‌ರನ್ನು ಬೇಗನೆ ಔಟ್ ಮಾಡಿದರೆ ಪಾಕ್ ತಂಡ ತರಗಲೆಯಂತೆ ಉದುರಲಿದೆ. ಪಾಕ್ ತಂಡ ಸಾಕಷ್ಟ ಒತ್ತಡದಲ್ಲಿದೆ. ಭಾರತ ತಂಡ ಅಂಥ ಒತ್ತಡ ಹೊಂದಿಲ್ಲ. ಜಡೇಜಾ-ಅಶ್ವಿನ್ ಜೋಡಿ ಉತ್ತಮ ನಿರ್ವಹಣೆ ತೋರಿದರೆ ಭಾರತ ವಿಶ್ವಕಪ್ ಗೆಲ್ಲಬಹುದಾಗಿದೆ.
    | ಮಾಂಟಿ ಪನೇಸರ್, ಇಂಗ್ಲೆಂಡ್ ಮಾಜಿ ಸ್ಪಿನ್ನರ್

    *ಭಾರತ ವಿರುದ್ಧ ಪಂದ್ಯದಲ್ಲಿ ಸೋತರೆ, ಪಾಕಿಸ್ತಾನ ಸೆಮಿಫೈನಲ್‌ಗೇರುವುದಿಲ್ಲ. ಪಾಕ್ ವಿರುದ್ಧ ಗೆದ್ದರೆ ಭಾರತ ಖಂಡಿತವಾಗಿಯೂ ಸೆಮಿಫೈನಲ್‌ಗೇರಲಿದೆ.
    | ಬ್ರಾಡ್ ಹಾಗ್, ಆಸೀಸ್ ಮಾಜಿ ಸ್ಪಿನ್ನರ್

    *ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡ ಭಾರತವನ್ನು ಸೋಲಿಸಿದರೆ ಖಾಲಿ ಚೆಕ್ ಬಹುಮಾನವಾಗಿ ನೀಡುವುದಾಗಿ ಉದ್ಯಮಿಯೊಬ್ಬರು ಹೇಳಿದ್ದಾರೆ.
    | ರಮೀಜ್ ರಾಜಾ, ಪಾಕ್ ಕ್ರಿಕೆಟ್ ಮಂಡಳಿ ಅಧ್ಯಕ್ಷ

    *ಯುಎಇಯಲ್ಲಿ ಐಪಿಎಲ್​ ಪಂದ್ಯ ಆಡಿರುವ ಅನುಭವಿ ವಿರಾಟ್​ ಕೊಹ್ಲಿ ಬಳಗಕ್ಕೆ ವರದಾನವಾಗಲಿದೆ. ಭಾರತ ತಂಡದ ಬ್ಯಾಟಿಂಗ್​ ಕ್ರಮಾಂಕ ಬಲಿಷ್ಠವಾಗಿದೆ. ಉಭಯ ತಂಡಗಳ ನಾಯಕರು ಮುಂಚೂಣಿಯಲ್ಲಿ ನಿಂತು ತಂಡ ಮುನ್ನಡೆಸುವ ನಿರೀಕ್ಷೆ ಇದೆ. ನಾಯಕತ್ವದ ಜತೆಯಲ್ಲೇ ಬ್ಯಾಟಿಂಗ್​ನಲ್ಲೂ ಮಿಂಚುವ ಸಾಮಥ್ಯರ್ ಇಬ್ಬರಿಗೂ ಕರಗತವಾಗಿದೆ.

    | ಸುರೇಶ್​ ರೈನಾ, ಟೀಮ್​ ಇಂಡಿಯಾ ಮಾಜಿ ಬ್ಯಾಟ್ಸ್​ಮನ್​

    ಭಾರತ-ಪಾಕಿಸ್ತಾನ ನಡುವಿನ ಟಿ20 ವಿಶ್ವಕಪ್ ಹಿಂದಿನ ಪಂದ್ಯಗಳ ಮೆಲುಕು…

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts