More

    ಕೇಂದ್ರಕ್ಕೆ ಪ್ಲಾಸ್ಟಿಕ್ ಪಾರ್ಕ್ ಪ್ರಸ್ತಾವನೆ

    – ಪ್ರಕಾಶ್ ಮಂಜೇಶ್ವರ, ಮಂಗಳೂರು

    ಐದು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಮಂಗಳೂರು ಪ್ಲಾಸ್ಟಿಕ್ ಪಾರ್ಕ್ ಯೋಜನೆ ಜಾರಿ ಪೂರ್ವ ತಯಾರಿ ಒಂದು ಹೆಜ್ಜೆ ಮುಂದೆ ಸಾಗಿದೆ.
    ಗಂಜಿಮಠದ ರಫ್ತು ಉತ್ತೇಜನಾ ಪಾರ್ಕ್ ಸಮೀಪ ಅನುಷ್ಠಾನಗೊಳ್ಳಲಿರುವ ಯೋಜನೆ ಸಂಬಂಧಿಸಿ ಕೆಐಎಡಿಬಿ ವತಿಯಿಂದ ಡಿ.14 ರಂದು ಕೇಂದ್ರ ಸರ್ಕಾರದ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದಿಂದ ಮಂಜೂರುಗೊಂಡ ದೇಶದ 8 ಪ್ಲಾಸ್ಟಿಕ್ ಪಾರ್ಕ್‌ಗಳಲ್ಲಿ ಮಂಗಳೂರು ಕೂಡ ಒಂದು.

    ಪೂರಕ ಪರಿಸ್ಥಿತಿ: ಸಮೀಪದ ಎಂಆರ್‌ಪಿಎಲ್ ತೃತೀಯ ಹಂತದ ಘಟಕಗಳಾದ ಪಾಲಿಪ್ರಾಪೆಲಿನ್ ಉದ್ದಿಮೆ ಮೂಲಕ ಕಚ್ಚಾ ಪ್ಲಾಸ್ಟಿಕ್ ಪೂರೈಕೆ ಮಾಡುತ್ತಿದೆ. ಇದು ಕರಾವಳಿಯಲ್ಲಿ ನಿರ್ಮಾಣವಾಗುವ ಪ್ಲಾಸ್ಟಿಕ್ ಸಂಬಂಧಿ ಉದ್ದಿಮೆಗಳಿಗೆ ಹೆಚ್ಚಿನ ಅನುಕೂಲ ಒದಗಿಸಲಿದೆ. ನಿರ್ವಹಣೆ ವೆಚ್ಚ ತುಂಬ ಕಡಿಮೆಗೊಳಿಸಲಿದೆ. ಪ್ರಸ್ತುತ ಎಂಆರ್‌ಪಿಎಲ್ ನಿಂದ ಕಚ್ಚಾ ಪ್ಲಾಸ್ಟಿಕ್ ಗುಜರಾತ್, ಮಹಾರಾಷ್ಟ್ರಗಳತ್ತ ಕಳುಹಿಸಲಾಗುತ್ತದೆ. ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವರಾಗಿ ದಕ್ಷಿಣ ಕನ್ನಡ ಜಿಲ್ಲೆಯ ಡಿ.ವಿ.ಸದಾನಂದ ಗೌಡ ಅವರೇ ಇರುವುದು ಅನುಕೂಲ. ಯೋಜನೆಯನ್ನು ವಿಸ್ತರಿಸಲು ಮತ್ತು ಪೂರಕ ಅವಕಾಶಗಳನ್ನು ಪಡೆಯಲು ಕರಾವಳಿಗೆ ಇತರರಿಗಿಂತ ಹೆಚ್ಚು ಅವಕಾಶವಿದೆ.

    32 ಕಂಪನಿಗಳ ನೋಂದಣಿ: ಪ್ಲಾಸ್ಟಿಕ್ ಕಂಪನಿಯಲ್ಲಿ ಉದ್ದಿಮೆ ಸ್ಥಾಪಿಸಲು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಒಟ್ಟು 32 ಕಂಪನಿಗಳು ನೋಂದಣಿ ಮಾಡಿಕೊಂಡಿದ್ದು, ಹೊರ ಜಿಲ್ಲೆಗಳ ಉದ್ಯಮಿಗಳು ಕೂಡ ಆಸಕ್ತಿ ವಹಿಸಿದ್ದಾರೆ. ಮುಂದಿನ ಹಂತದಲ್ಲಿ ಈ ಬಗ್ಗೆ ಪರಿಶೀಲಿಸಲಾಗುವುದು ಎನ್ನುತ್ತಾರೆ ಜಿಲ್ಲಾ ಕೈಗಾರಿಕೆ ಸಂಘ(ದಕ್ಷಿಣ ಕನ್ನಡ ಮತ್ತು ಉಡುಪಿ) ಜಂಟಿ ನಿರ್ದೇಶಕ ಗೋಕುಲ್‌ದಾಸ್ ನಾಯಕ್. ಯೋಜನೆ ಅನುಷ್ಠಾನಕ್ಕೆ ಕೇಂದ್ರದಿಂದ 40 ಕೋಟಿ ರೂ. ಅನುದಾನ ದೊರೆಯಲಿದೆ. ಪ್ಲಾಸ್ಟಿಕ್ ಪಾರ್ಕ್‌ಗೆಂದು ಗಂಜಿಮಠದಲ್ಲಿ 104 ಎಕರೆ ಸ್ಥಳ ಗುರುತಿಸಲಾಗಿದೆ. ಇನ್ನೂ 50 ಎಕರೆಯಷ್ಟು ಭೂಮಿ ಸ್ವಾಧೀನಕ್ಕೆ ಲಭ್ಯವಿದ್ದು, ಕೆಐಎಡಿಬಿಯವರು ಮಾಡಿಕೊಡಬಹುದು.

    ಗಂಜಿಮಠದಲ್ಲಿ ನಿರ್ಮಾಣವಾಗಲಿರುವ ಪ್ಲಾಸ್ಟಿಕ್ ಪಾರ್ಕ್‌ನಿಂದ ನೇರವಾಗಿ 2 ಸಾವಿರ ಜನರು ಹಾಗೂ ಪರೋಕ್ಷವಾಗಿ 3 ಸಾವಿರಕ್ಕೂ ಅಧಿಕ ಉದ್ಯೋಗ ಸೃಷ್ಟಿಯಾಗಬಹುದು. ಅನುಷ್ಠಾನ ಸಂಸ್ಥೆಯಾದ ಕೆಐಎಡಿಬಿ ಕಳುಹಿಸಿರುವ ಪ್ರಸ್ತಾವನೆಗೆ ಕೇಂದ್ರದ ಮಂಜೂರಾತಿ ದೊರೆತ ಕೂಡಲೇ ಯೋಜನೆ ಜಾರಿ ಪ್ರಕ್ರಿಯೆ ಆರಂಭಗೊಳ್ಳಲಿದೆ.
    – ಗೋಕುಲ್‌ದಾಸ್ ನಾಯಕ್, ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕೆ ಸಂಘ, ದ.ಕ ಮತ್ತು ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts