More

    ಸ್ವಾವಲಂಬಿ ಬದುಕಿಗೆ ಬುನಾದಿ ಹಂದಿ ಸಾಕಣೆ

    ಗಣೇಶ್ ಮಾವಂಜಿ ಸುಳ್ಯ

    ಪ್ರಾಕೃತಿಕ ವಿಕೋಪ, ಅತಿವೃಷ್ಟಿ, ಅನಾವೃಷ್ಟಿಯ ಪರಿಣಾಮ ರೈತನ ಕೃಷಿ ಬದುಕು ಯಾವಾಗಲೂ ಅನಿಶ್ಚಿತತೆಯಿಂದಲೇ ಕೂಡಿರುತ್ತದೆ. ಹೀಗಿದ್ದಾಗ ಕೃಷಿ ಬದುಕಿನಲ್ಲಿ ಪರ‌್ಯಾಯ ಕಸುಬು ಇದ್ದರೆ ಮಾತ್ರ ಜೀವನ ಸಾಗಿಸಲು ಸಾಧ್ಯ ಎಂದರಿತ ತಾಲೂಕಿನ ಮುರುಳ್ಯ ಗ್ರಾಮದ ಪೊಳೆಂಜ ಗಂಗಾಧರ ಗೌಡರು ಕೃಷಿಯ ಜತೆಗೆ ಹಂದಿ ಸಾಕಣೆ ಮಾಡಿ ಸೈ ಎನಿಸಿಕೊಂಡಿದ್ದಾರೆ.

    ಯಾವುದೇ ಕೆಲಸವನ್ನು ಶ್ರದ್ಧೆಯಿಂದ ಮಾಡಿದರೆ ಯಶಸ್ಸು ಸಾಧ್ಯ ಎನ್ನುವುದಕ್ಕೆ ಗಂಗಾಧರ ಗೌಡ ಉತ್ತಮ ಉದಾಹರಣೆ. ಕೃಷಿಯಿಂದ ಬರುವ ಆದಾಯದಿಂದ ಮಾತ್ರ ಜೀವನ ನಿರ್ವಹಣೆ ಅಸಾಧ್ಯವೆಂದರಿತ ಇವರು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಹಂದಿ ಶೆಡ್ ನಿರ್ಮಿಸಿ ಹಂದಿ ಸಾಕಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
    ಪ್ರಾರಂಭದಲ್ಲಿ ಎರಡು ಹೆಣ್ಣು ಹಾಗೂ ಒಂದು ಗಂಡು ಹಂದಿಗಳನ್ನು ಸಾಕಿದ ಅವರು, ಅದರಿಂದಲೇ ಸಂತಾನಾಭಿವೃದ್ಧಿ ಮಾಡಿಸಿ, ಈಗ 35ಕ್ಕೂ ಹೆಚ್ಚು ಹಂದಿಗಳನ್ನು ಸಾಕುತ್ತಿದ್ದಾರೆ. ಪ್ರಾರಂಭದಲ್ಲಿ ಚಿಕ್ಕ ಶೆಡ್ ನಿರ್ಮಿಸಿ ಹಂದಿ ಸಾಕಣೆಗೆ ಅಡಿಯಿಟ್ಟಿದರು. ಬಳಿಕ ಉದ್ಯೋಗ ಖಾತ್ರಿ ಯೋಜನೆಯಡಿ ಕೆಳಗೆ ಕಲ್ಲು ಹಾಸಿ ದೊಡ್ಡ ಮಟ್ಟದಲ್ಲಿ ಶೆಡ್ ನಿರ್ಮಿಸಿದರು. ಐದು ವರ್ಷಗಳ ಹಿಂದೆ ಪ್ರಾರಂಭಿಸಿದ ಈ ಉದ್ಯೋಗ ಈಗ ಗಂಗಾಧರ ಅವರ ಕುಟುಂಬವನ್ನು ಕೈಹಿಡಿದು ನಡೆಸುತ್ತಿದೆ.

    ಹಾಗೆಂದು ಹಂದಿ ಸಾಕಣೆ ಸುಲಭದಲ್ಲಿ ಹಣ ಮಾಡುವ ಕಸುಬಲ್ಲ. ಬೆಳಗ್ಗೆದ್ದು ಶೆಡ್ ತೊಳೆದು, ಹಂದಿಗಳನ್ನೂ ಶುಚಿಗೊಳಿಸಬೇಕು. ಬಳಿಕ ಅವುಗಳಿಗೆ ಆಹಾರವಾಗಿ ಹಿಂಡಿ, ನುಚ್ಚು ಮತ್ತು ಬೂಸವನ್ನು ನೀಡಬೇಕಾಗುತ್ತದೆ. ಬೆಳಗ್ಗೆ ಐದು ಗಂಟೆಗೆ ಎದ್ದರೆ ಒಂಬತ್ತು ಗಂಟೆಯವರೆಗೂ ಕೆಲಸವಿರುತ್ತದೆ. ದಿನದಲ್ಲಿ ಎರಡು ಸಲ ಹಂದಿ ಹಾಗೂ ಶೆಡ್ ಶುಭ್ರಗೊಳಿಸಿದರೆ ಮಾತ್ರ ಹಂದಿಗಳು ಕೂಡ ಆರೋಗ್ಯವಾಗಿದ್ದು, ರೋಗ ಮುಕ್ತವಾಗಿರುತ್ತವೆ.

    ಸ್ಥಳೀಯವಾಗಿ ಹಂದಿಗಳಿಗೆ ಬೇಡಿಕೆ ಇದ್ದು, ಕೆಲವು ಹಬ್ಬಗಳ ಸಂದರ್ಭ ಹಂದಿ ಮಾಂಸಕ್ಕೆ ಹೆಚ್ಚು ಬೇಡಿಕೆ ಬರುತ್ತದೆ. ಕೆಲವೊಮ್ಮೆ ನೆರೆಯ ರಾಜ್ಯ ಕೇರಳದಿಂದಲೂ ಹಂದಿಗೆ ಬೇಡಿಕೆ ಇರುತ್ತದೆ. ಹಂದಿ ಮರಿ ಬೆಳೆದು ಮಾರಾಟ ಮಾಡಲು ಕನಿಷ್ಠ ಒಂದು ವರ್ಷ ಸಾಕಬೇಕಾಗುತ್ತದೆ. ಒಂದು ವರ್ಷದಲ್ಲಿ ಹಂದಿಯೊಂದು ಒಂದು ಕ್ವಿಂಟಾಲ್‌ನಷ್ಟು ತೂಗುತ್ತದೆ. ಹೀಗೆ ಮಾರಾಟವಾದಾಗ ಒಂದು ಹಂದಿಯಲ್ಲಿ 15 ಸಾವಿರ ರೂ. ಆದಾಯ ಸಿಗುತ್ತದೆ. ಹೆಚ್ಚೆಂದರೆ ಐದು ಸಾವಿರ ರೂ. ಖರ್ಚಾದರೂ ಉಳಿಕೆಯ ಹಣ ಹತ್ತು ಸಾವಿರ ರೂ. ದೊರಕುತ್ತದೆ. ಹೆಚ್ಚು ಹಂದಿ ಸಾಕಿದರೆ ಆದಾಯವೂ ಹೆಚ್ಚಾಗುತ್ತದೆ ಎನ್ನುತ್ತಾರೆ ಗಂಗಾಧರ್.

    ಜತೆಯಾಗಿ ಕೆಲಸ ಮಾಡಿದರೆ ಯಶ: ಗಂಗಾಧರ್ ಅವರದ್ದು ಇಬ್ಬರು ಮಕ್ಕಳ ಚಿಕ್ಕ ಚೊಕ್ಕ ಸಂಸಾರ. ಹಿರಿಯ ಮಗ ಸ್ವಸ್ತಿಕ್ ಈಗಾಗಲೇ ಪದವಿ ವಿದ್ಯಾಭ್ಯಾಸ ಪೂರೈಸಿದ್ದರೆ, ಕಿರಿಯ ಮಗ ಸ್ವರೂಪ್ ಮೆಕಾನಿಕಲ್ ಡಿಪ್ಲೊಮಾ ಮಾಡುತ್ತಿದ್ದಾರೆ. ಈರ್ವರು ಮಕ್ಕಳ ಜತೆ ಪತ್ನಿ ಕುಸುಮಾವತಿಯವರೂ ಹಂದಿ ಸಾಕಣೆಗೆ ನೆರವಾಗುತ್ತಾರೆ. ಮನೆಯವರೆಲ್ಲರೂ ಜತೆಯಾಗಿ ಕೆಲಸ ಮಾಡುವುದೇ ನಮ್ಮ ಯಶಸ್ಸಿನ ಗುಟ್ಟು ಎನ್ನುತ್ತದೆ ಈ ಸಂತೃಪ್ತ ಕುಟುಂಬ.

    ಪ್ರಾರಂಭದಲ್ಲಿ ಸಣ್ಣ ಮಟ್ಟದಲ್ಲಿ ಮಾಡಿ ಅನುಭವ ಹೊಂದಬೇಕೇ ಹೊರತು ಆರಂಭದಲ್ಲೇ ಅನುಭವ ಇಲ್ಲದೆ ಹೆಚ್ಚು ಆದಾಯ ಹೂಡಿ ಹಂದಿ ಸಾಕಣೆ ಮಾಡಲು ಹೊರಟರೆ ಅಪಾಯ ಹೆಚ್ಚು. ಶ್ರದ್ಧೆಯಿಂದ ಯಾವುದೇ ಕೆಲಸ ಮಾಡಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಹಂದಿ ಸಾಕಣೆಯಲ್ಲಿ ಕೆಲಸ ಹೆಚ್ಚಿರುವುದು ಹೌದಾದರೂ ಆದಾಯವೂ ಇದೆ. ನನ್ನ ಸ್ವಾವಲಂಬಿ ಬದುಕಿನ ಕನಸಿಗೆ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ನೆರವಾಗಿರುವುದು ನಿಜ.
    – ಗಂಗಾಧರ್ ಗೌಡ, ಪೊಳೆಂಜ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts