More

    ದೊಡ್ಡಳಿಕೆ-ಕರ್ಪೆ ಅಣೆಕಟ್ಟು ಶೀಘ್ರ ಲೋಕಾರ್ಪಣೆ

    ಗುರುಪುರ: ಕೃಷಿ, ಬಹುಗ್ರಾಮ ಕುಡಿಯುವ ನೀರು, ಅಂತರ್ಜಲ ಮಟ್ಟ ವೃದ್ಧಿಸುವ ಗುರಿ ಹೊಂದಿರುವ ಹಾಗೂ ಮಂಗಳೂರು ತಾಲೂಕಿನ ಕುಪ್ಪೆಪದವು ಮತ್ತು ಬಂಟ್ವಾಳ ತಾಲೂಕಿನ ಕರ್ಪೆ ಮಧ್ಯೆ ರಸ್ತೆ ಸಂಪರ್ಕ ಹೊಂದಿರುವ ಫಲ್ಗುಣಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿರುವ ಕರ್ಪೆ-ದೊಡ್ಡಳಿಕೆ ಬೃಹತ್ ಅಣೆಕಟ್ಟು ಶೀಘ್ರ ಲೋಕಾರ್ಪಣೆಗೊಳ್ಳಲಿದೆ.

    ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಉಸ್ತುವಾರಿಯಲ್ಲಿ ನಡೆಯುತ್ತಿರುವ ಒಟ್ಟು 36 ಕೋಟಿ ರೂ. ವೆಚ್ಚದ ಕಾಮಗಾರಿ ಇದಾಗಿದೆ. ಈಗಾಗಲೇ ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ.

    ನದಿ ತಳಮಟ್ಟದಿಂದ 25 ಮೀ. ಎತ್ತರದ ಅಣೆಕಟ್ಟೆ ಮೇಲ್ಭಾಗದಲ್ಲಿ 5.50 ಮೀ. ಅಗಲದ ರಸ್ತೆ ನಿರ್ಮಾಣಗೊಂಡಿದೆ. ಇದು ವಾಹನ ಸಂಚಾರಕ್ಕೆ ಅನುಕೂಲವಾಗಿದೆ. ಅಣೆಕಟ್ಟು ಒಟ್ಟು 375.40 ಮೀ. ಉದ್ದವಿದೆ. 51 ಹೈಡ್ರಾಲಿಕ್ ಗೇಟ್‌ಗಳಿರುವ ಅಣೆಕಟ್ಟೆ 51 ಪಿಲ್ಲರ್‌ಗಳನ್ನು ಹೊಂದಿದೆ. 48.40 ಮೀ. ನೀರಿನ ಶೇಖರಣಾ ಸಾಮರ್ಥ್ಯ ಹೊಂದಿದ್ದು, ಅಣೆಕಟ್ಟೆಯಲ್ಲಿ ಸುಮಾರು ಒಂದೂವರೆ ಕಿ.ಮೀ ದೂರದವರೆಗೆ ನೀರು ಸಂಗ್ರಹವಾಗಲಿದೆ. ಇದರಿಂದ ಸ್ಥಳೀಯ ಹಾಗೂ ಆಸುಪಾಸಿನ ರೈತರ 500ಕ್ಕೂ ಹೆಚ್ಚು ಎಕರೆ ಜಮೀನಿಗೆ ನೀರು ಲಭ್ಯವಾಗಲಿದೆ. ಜತೆಗೆ ಸುತ್ತಲಿನ ಗ್ರಾಮಗಳ ಬಹುತೇಕ ಪ್ರದೇಶಗಳಲ್ಲಿ ಅಂತರ್ಜಲ ವೃದ್ಧಿಯಾಗಲಿದೆ.

    ರಸ್ತೆ ಸಂಚಾರಕ್ಕೆ ಅವಕಾಶ: ಅಣೆಕಟ್ಟು ರಸ್ತೆ ನಿರ್ಮಾಣದಿಂದ ಇರುವೈಲು, ಕುಪ್ಪೆಪದವು ಮತ್ತು ಗಂಜಿಮಠದ ಜನರಿಗೆ ಕರ್ಪೆ ಮೂಲಕ ಬಂಟ್ವಾಳ ಮತ್ತು ಬೆಳ್ತಂಗಡಿಗೆ ಹತ್ತಿರದ ಮಾರ್ಗವೊಂದು ಲಭಿಸಲಿದೆ. ಅಣೆಕಟ್ಟು ರಸ್ತೆ ಕಾಮಗಾರಿ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಒಳಪಡದ್ದರಿಂದ, ರಸ್ತೆಗಾಗಿ ಜಾಗ ಕಳೆದುಕೊಂಡ ಖಾಸಗಿಯವರಿಗೆ ಸಂಬಂಧಿತ ಇಲಾಖೆ ಪರಿಹಾರ ನೀಡಿ ರಸ್ತೆ ಸಂಚಾರಕ್ಕೆ ಅವಕಾಶ ನೀಡಬೇಕಿದೆ ಎಂದು ಅಧಿಕೃತ ಮೂಲ ತಿಳಿಸಿದೆ.

    ಕರ್ಪೆ-ದೊಡ್ಡಳಿಕೆ ಅಣೆಕಟ್ಟಿಗೆ ಗೇಟ್‌ಗಳ ಅಳವಡಿಕೆ ಕಾರ್ಯ ಪೂರ್ಣಗೊಂಡಿದೆ. ನವೆಂಬರ್ ವೇಳೆಗೆ ನೀರು ಸಂಗ್ರಹವಾಗಲಿದೆ. ಇದರಿಂದ ರೈತರ ಜಮೀನಿಗೆ ನೀರು ಸಹಿತ ಅಂತರ್ಜಲ ವೃದ್ಧಿಯಾಗಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ.

    ಶಿವ ಪ್ರಸನ್ನ, ಸಹಾಯಕ ಇಂಜಿನಿಯರ್, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts