More

    ಪಿಎಫ್‌ಐ, ಎಸ್‌ಡಿಪಿಐನ 10 ಮಂದಿ ಬಂಧನ; ಉಪ್ಪಿನಂಗಡಿ ಮಹಿಳಾ ಪೊಲೀಸರ ಮಾನಭಂಗ ಯತ್ನ, ಹಲ್ಲೆ ದೂರು

    ಉಪ್ಪಿನಂಗಡಿ: ಪ್ರತಿಭಟನೆ ವೇಳೆ ಪಿಎಫ್‌ಐ ಹಾಗೂ ಎಸ್‌ಡಿಪಿಐ ಸಂಘಟನೆಗಳ ಕಾರ್ಯಕರ್ತರು ಮಹಿಳಾ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಮೇಲೆ ಹಲ್ಲೆ, ಮಾನಭಂಗ ಯತ್ನ, ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿ 10 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
    ಡಿ.14ರಂದು ರಾತ್ರಿ 9 ಗಂಟೆ ಸುಮಾರಿಗೆ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು ಠಾಣೆಗೆ ನುಗ್ಗಲು ಯತ್ನಿಸಿದ್ದಾರೆ. ಇದನ್ನು ತಡೆಯಲು ಬಂದ ಮಹಿಳಾ ಸಿಬ್ಬಂದಿ ರೇಣುಕಾ ಹಾಗೂ ನನ್ನ ಮೇಲೆ ಹಲ್ಲೆ ನಡೆಸಿ ಸಮವಸ್ತ್ರ ಹರಿದು ಹಾಕಿ ಮಾನಭಂಗಕ್ಕೆ ಯತ್ನಿಸಿದ್ದಾರೆ. ಕೊಲೆಯತ್ನ ನಡೆಸಿದ್ದಲ್ಲದೆ ಕರ್ತವ್ಯಕ್ಕೆ ಅಡ್ಡಿ ಮಾಡಿರುವುದಾಗಿ ಎಸ್‌ಐ ಓಮನಾ ದೂರು ನೀಡಿದ್ದಾರೆ.

    ಘಟನೆಯ ದೃಶ್ಯಾವಳಿಯನ್ನು ಪರಿಶೀಲಿಸಿದ ಪೊಲೀಸರು ಪ್ರಕರಣದಲ್ಲಿ ಭಾಗಿಯಾದ ಮೊಹಮ್ಮದ್ ತಾಹೀರ್, ಸ್ವಾದಿಕ್, ಅಬ್ದುಲ್ ಮುಬಾರಕ್, ಅಬ್ದುಲ್ ಶರೀನ್, ಮೊಹಮ್ಮದ್ ಜಾಹೀರ್, ಸುಜೀರ್ ಮಹಮ್ಮದ್ ಫೈಜಲ್, ಮೊಹಮ್ಮದ್ ಹನೀಫ್, ಎನ್.ಕಾಸೀಂ, ಮೊಹಮ್ಮದ್ ಆಸೀಫ್, ತುಪೈಲ್ ಮಹಮ್ಮದ್ ಎಂಬುವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

    ಪ್ರತಿಭಟನಾಕಾರರು ಪೂರ್ವಯೋಜಿತವಾಗಿ ತಂದಿರಿಸಿದ ಮಾರಕಾಯುಧಗಳಿಂದ ಪೊಲೀಸ್ ಅಧಿಕಾರಿಗಳ ಮೇಲೆ ದಾಳಿ ನಡೆಸಲು ಮುಂದಾಗಿದ್ದರು. ಚೂರಿಯಿಂದ ತಿವಿಯಲು ಯತ್ನಿಸಿದ ಪ್ರತಿಭಟನಾಕಾರನನ್ನು ತಡೆಯುವ ವೇಳೆ ಬಂಟ್ವಾಳ ಠಾಣಾ ಉಪನಿರೀಕ್ಷಕ ಪ್ರಸನ್ನ ಕುಮಾರ್ ಅಂಗೈಗೆ ಗಾಯವಾಗಿದೆ. ಈ ಬಗ್ಗೆಯೂ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಶೋಧ ಕಾರ್ಯಾಚರಣೆ ನಡೆಯುತ್ತಿದೆ.

    ಮುಂದುವರಿದ ಪೊಲೀಸ್ ಭದ್ರತೆ: ಉಪ್ಪಿನಂಗಡಿ ಪರಿಸರದಲ್ಲಿ ಸದ್ಯ ಪರಿಸ್ಥಿತಿ ಸಹಜತೆಗೆ ಮರಳಿದ್ದರೂ ಪೊಲೀಸ್ ಭದ್ರತೆ ಮುಂದುವರಿಸಲಾಗಿದೆ. ಮೀನು ಮಾರಾಟ ಕೇಂದ್ರಕ್ಕೆ ದಾಳಿ ನಡೆಸಿ ಕೊಲೆ ಯತ್ನ ನಡೆಸಿದ ತಂಡದ ಓರ್ವ ಆರೋಪಿ ಸಿನಾನ್ ಕೊಯಿಲ ಎಂಬಾತನ ವಿಚಾರಣೆ ನಡೆಯುತ್ತಿದ್ದು, ಆತ ನೀಡಿದ ಮಾಹಿತಿ ಆಧಾರದಲ್ಲಿ ಉಳಿದ ಆರೋಪಿಗಳನ್ನು ಶೀಘ್ರ ಬಂಧಿಸಲಾಗುವುದು ಎಂದು ಇಲಾಖೆ ತಿಳಿಸಿದೆ. ಮಂಗಳವಾರದ ಗಲಭೆಯ ಆರೋಪಿಗಳನ್ನು ಬಂಧಿಸುವತ್ತ ಪೊಲೀಸರು ಗಮನ ಹರಿಸಿದ್ದು, ಬಹುತೇಕ ಆರೋಪಿಗಳು ಲಾಠಿಯೇಟಿಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಆಂಬುಲೆನ್ಸ್‌ನಲ್ಲಿ ಮಾರಕಾಯುಧ?: ಮಂಗಳವಾರ ಪ್ರತಿಭಟನೆ ಸಮಯದಲ್ಲೇ ಓಮ್ನಿ ಆಂಬುಲೆನ್ಸ್‌ಗಳು ಪೊಲೀಸ್ ಠಾಣೆ ಸಮೀಪದ ಮಸೀದಿ ಬಳಿ ಸಿದ್ಧವಾಗಿದ್ದವು. ರಾತ್ರಿಯಾಗುತ್ತಿದ್ದಂತೆಯೇ ಅದರಲ್ಲಿರಿಸಿದ್ದ ಮಾರಕಾಯುಧಗಳನ್ನು ಪ್ರತಿಭಟನಾಕಾರರಿಗೆ ಹಸ್ತಾಂತರಿಸಿರುವ ಶಂಕೆ ವ್ಯಕ್ತವಾಗಿದೆ. ಲಾಠಿಚಾರ್ಜ್ ನಡೆಯುತ್ತಿದ್ದಂತೆಯೇ ಈ ಆಂಬುಲೆನ್ಸ್ ಪೊಲೀಸ್ ಸೂಚನೆಯನ್ನು ಧಿಕ್ಕರಿಸಿ ಅತಿ ವೇಗವಾಗಿ ಸಂಚರಿಸಿರುವುದು ದೃಶ್ಯಗಳಲ್ಲಿ ಕಂಡುಬಂದಿದೆ. ಹೊರ ಪ್ರದೇಶಗಳಿಂದ ಬಂದ ದುಷ್ಕರ್ಮಿಗಳನ್ನು ಸುರಕ್ಷಿತವಾಗಿ ಸಾಗಿಸಲು, ಗಾಯಾಳುಗಳ ಸಾಗಾಟದ ಸೋಗಿನಲ್ಲಿ ಬಳಕೆಯಾಗುತ್ತಿದ್ದ ಸಾಧ್ಯತೆಯನ್ನು ಪೊಲೀಸರು ಅಂದಾಜಿಸಿದ್ದಾರೆ.
     
    ಯುವಕರಿಗೆ ಜೀವ ಬೆದರಿಕೆ ಕರೆ: ಪೊಲೀಸ್ ಕಾರ್ಯಾಚರಣೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸಂದೇಶಗಳನ್ನು ಹಂಚುತ್ತಿರುವುದನ್ನು ಆಕ್ಷೇಪಿಸಿ ವಿದೇಶಗಳಿಂದ ಹಲವು ಯುವಕರಿಗೆ ಜೀವ ಬೆದರಿಕೆ ಕರೆಗಳು ಹಾಗೂ ಧ್ವನಿ ಸಂದೇಶಗಳು ಬರುತ್ತಿವೆ. ಡಿ.18ರಂದು ಕೊನೆಯ ದಿನವೆಂದು ಕೆಲವು ಯುವಕರಿಗೆ ಬೆದರಿಕೆ ಹಾಕಲಾಗಿದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.
     
    ಮಂಗಳೂರಿನಲ್ಲಿ ಬಿಗು ಬಂದೋಬಸ್ತ್: ಉಪ್ಪಿನಂಗಡಿ ಘಟನೆ ಸಂಬಂಧ ಡಿ.17ರಂದು ಪಿಎಫ್‌ಐ ಹಮ್ಮಿಕೊಂಡಿರುವ ‘ಎಸ್ಪಿ ಕಚೇರಿ ಚಲೋ’ಗೆ ಪೊಲೀಸ್ ಇಲಾಖೆ ಅನುಮತಿ ನಿರಾಕರಿಸಿದ್ದು, ಕ್ಲಾಕ್ ಟವರ್ ಬಳಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ಅನುಮತಿ ನೀಡಿದೆ. ಯಾವುದೇ ಮೆರವಣಿಗೆ ನಡೆಸುವಂತಿಲ್ಲ ಎಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ. ಪ್ರಸ್ತುತ ಎಲ್ಲ ಪ್ರತಿಭಟನೆಗಳು ಕ್ಲಾಕ್ ಟವರ್ ಎದುರಲ್ಲೇ ನಡೆಯುತ್ತಿದ್ದು, ಅಲ್ಲಿಯೇ ಅವರು ಕೂಡ ನಡೆಸಬೇಕಾಗುತ್ತದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನಗರ ವ್ಯಾಪ್ತಿಯಲ್ಲಿ ಮುಂಜಾಗ್ರತಾ ಕ್ರಮವಾಗಿ ಬಿಗು ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಕೆಎಸ್‌ಆರ್‌ಪಿ, ಸಿಎಆರ್ ತುಕಡಿಗಳು, ಡಿಸಿಪಿಗಳು, ಎಸಿಪಿಗಳು, ಎಲ್ಲ ಠಾಣಾ ಇನ್‌ಸ್ಪೆಕ್ಟರ್, ಪಿಎಸ್‌ಐ ಸಹಿತ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಬೆಳಗ್ಗೆಯಿಂದಲೇ ಆಯಕಟ್ಟಿನ ಸ್ಥಳಗಳಲ್ಲಿ ಸಂಶಯಾಸ್ಪದ ವ್ಯಕ್ತಿಗಳ ಮೇಲೆ ನಿಗಾ ಹಾಗೂ ತಪಾಸಣೆ ನಡೆಯಲಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts