More

    ಪೆಟ್ರೋಲ್ ಬೆಲೆ ಶೇ. 25 ಇಳೀಬೇಕು!

    ರಾಜ್ಯ ಸರ್ಕಾರವು ಕಳೆದ ಬಜೆಟ್​ನಲ್ಲಿ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಏರಿಸಿದಾಗ ಬಡವರಿಗೆ ಬರೆ ಹಾಕಿದಂತೆ ಆಗಿತ್ತು. ಸರ್ಕಾರಕ್ಕೆ ಖರ್ಚು ಇರುತ್ತದೆ; ಅದಕ್ಕೆ ತೆರಿಗೆ ಏರಿಸಬೇಕಾಗುತ್ತದೆ. ಇದು ಒಪ್ಪಬೇಕಾದ ಮಾತೇ. ಆದರೆ ಸರ್ಕಾರದ ಖರ್ಚು ಎಂದೆಂದಿಗೂ ಹೆಚ್ಚುವುದೇ ಹೊರತು ಎಂದೂ ತಗ್ಗಿದ ಸಮಾಚಾರ ನಾವು ಕೇಳೇ ಇಲ್ಲ. ಸರ್ಕಾರದ ಅನುತ್ಪಾದಕ ಖರ್ಚು ಕಡಿಮೆ ಮಾಡುವ ವಿಚಾರವು ಎಂದೂ ಸರ್ಕಾರಗಳಿಗೆ ಬಂದಿಲ್ಲ. ಬರಗಾಲ ಇರಲಿ ಪ್ರವಾಹ ಇರಲಿ, ಕಂಟ್ರಾಕ್ಟರ್​ಗಳಿಗೆ ಸರ್ಕಾರ ಹಣ ಹಂಚಲೇ ಬೇಕು! ಎಲ್ಲೆಲ್ಲೂ ನೋಡಿದರೂ ಪೊಲೀಸ್ ಭವನ ಕಂದಾಯ ಭವನ ಬಂದಿವೆ! ಇವು ಕಾರ್ಪೆರೇಟ್ ಕಚೇರಿಗಳ ಐಭೋಗ ಪಡೆದಿವೆ. ಖಂಡಿತ ಇವು ಅನುತ್ಪಾದಕ ವೆಚ್ಚ. ಈ ಭವನಗಳಿಂದ ಕಂಟ್ರಾಕ್ಟರುಗಳು ಕುಬೇರರು ಆಗಬಹುದು. ಅಷ್ಟು ಬಿಟ್ಟರೆ ಇನ್ನು ಯಾವುದೇ ಸಾಮಾಜಿಕ ಪ್ರಯೋಜನವೂ ಸಾರ್ಥಕತೆಯೂ ಇದರಲ್ಲಿ ಇಲ್ಲ. ಹೋಗಲಿ ಬಿಡಿ, ತೆರಿಗೆ ಏರಿಸುವುದು ಸರ್ಕಾರದ ಮರ್ಜಿ. ಆದರೆ ಜನರ ಮರ್ಜಿ ಕೇಳುವ ಕಾಲ ಈಗ ಬಂದಿದೆ! ಪೆಟ್ರೋಲ್ ಡೀಸೆಲ್ ಬೆಲೆ ಶೇ. 25ರಷ್ಟು ಇಳಿಸಿ ಎಂದು ರಾಜ್ಯ- ಕೇಂದ್ರ ಸರ್ಕಾರಗಳ ಮೇಲೆ ನಾವು ಈಗ ಹಕ್ಕೊತ್ತಾಯ ಮಾಡಬೇಕಾಗಿದೆ. ಏಕೆಂದರೆ ವಿಶ್ವ ಪೇಟೆಯಲ್ಲಿ ಕಚ್ಚಾ ತೈಲ ಬೆಲೆ ಕುಸಿದಿದೆ. ಮಾರ್ಚ್ 9ರಂದು ವಿಶ್ವ ಪೇಟೆಯಲ್ಲಿ ತೈಲ ಬೆಲೆ ಸಡನ್ನಾಗಿ ಸುಮಾರು ಶೇ. 25ರಷ್ಟು ಕುಸಿದುಬಿದ್ದಿದೆ. ಅದರ ಲಾಭ ಶ್ರೀಸಾಮಾನ್ಯನಿಗೆ ಈಗ ಬರಲೇಬೇಕು. ಬೆಲೆ ಏರಿದಾಗ ಶ್ರೀಸಾಮಾನ್ಯನು ತಲೆ ಕೆಡಿಸಿಕೊಂಡರೂ ಪೆಟ್ರೋಲ್ ತುಂಬಿಸಿಕೊಂಡು ಜಾಸ್ತಿ ದುಡ್ಡು ತೆತ್ತಿದ್ದಾನೆ. ಈಗ ಬೆಲೆ ಇಳಿದಿದೆ. ಇದರ ಲಾಭ ಶ್ರೀಸಾಮಾನ್ಯನಿಗೆ ಬರಲೇಬೇಕು. ಇದು ಕನಿಷ್ಠ ನ್ಯಾಯ.

    ಪೆಟ್ರೋಲ್ ಬೆಲೆ ಶೇ. 25 ಇಳೀಬೇಕು!ಕಷ್ಟದಲ್ಲಿರುವ ಬಡವರಿಗೆ ನೆರವು ನೀಡುವ ವಿಚಾರ ಸರಕಾರಗಳ ಮುಂದೆ ಎಂದೂ ಬರುವುದಿಲ್ಲ. ಬರ ಇರಲಿ ಪ್ರವಾಹ ಇರಲಿ ಪೆಟ್ರೋಲ್-ಡೀಸೆಲ್ ಬೆಲೆ ಮಾತ್ರ ಅಷ್ಟೇ ಇರುತ್ತದೆ. ಏಕೆಂದರೆ ಸರ್ಕಾರ ನಡೆಸಲು ಖರ್ಚು ಇರುತ್ತದೆ; ಅದು ಜನಸಾಮಾನ್ಯರಿಂದಲೂ ಬರಬೇಕು! ಜನಸಾಮಾನ್ಯರಿಂದ ಹೀಗೆ ಸಂಗ್ರಹಿಸಿದ ದುಡ್ಡನ್ನು ಶ್ರೀಮಂತ ಕಂಟ್ರಾಕ್ಟರುಗಳು ಉದ್ಯಮಿಗಳಿಗೆ ಸರ್ಕಾರ ಹಂಚುವುದೇ ನಾವು ಈಚಿನ ವರ್ಷಗಳಲ್ಲಿ ಕಂಡುಕೊಂಡಿರುವ ಜಾಯಮಾನ. ಕಳೆದ 30 ವರ್ಷಗಳಿಂದ ಉದಾರೀಕರಣ ಕಾಲದಲ್ಲಿ ಸರ್ಕಾರಗಳು ನಡೆದುಬಂದ ಹಾದಿ ಇದೇ ಆಗಿದೆ.

    ಈ ಬಾರಿಯ ಕೇಂದ್ರ ಸರ್ಕಾರದ ಬಜೆಟ್ ಕೂಡ ಇದೇ ಜಾಯಮಾನದ್ದು ಆಗಿದೆ. ಕೇಂದ್ರ ಸರ್ಕಾರದ ಒಟ್ಟು ಖರ್ಚು 30.40 ಲಕ್ಷ ಕೋಟಿ ರೂಪಾಯಿ. ಇದರಲ್ಲಿ ಜನರ ಯೋಗಕ್ಷೇಮ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ನಡೆಯುವ ಎಲ್ಲಾ ಕೇಂದ್ರದ ಕಾರ್ಯಕ್ರಮಗಳಿಗೆ ಬೇಕಾಗಿರುವುದು 3.4 ಲಕ್ಷ ಕೋಟಿ ರೂಪಾಯಿ ಮಾತ್ರ. ಜನಕಲ್ಯಾಣ- ಯೋಗಕ್ಷೇಮಕ್ಕೆ ಇಷ್ಟು ದುಡ್ಡು ಸಾಕು. ಉಳಿದ ಹಣ ಸರ್ಕಾರದ ಅಗತ್ಯ ಹಾಗೂ ಅದಕ್ಕಿಂತ ವಿಪರೀತವಾಗಿರುವ ಅಪ್ರಯೋಜಕ ಹಾಗೂ ಅನುತ್ಪಾದಕ ಖರ್ಚುಗಳಿಗೆ ಬೇಕು!!

    ಕೇಂದ್ರ ಸರ್ಕಾರಕ್ಕೆ ತೆರಿಗೆ ಇತ್ಯಾದಿ ಮೂಲಗಳಿಂದ ಬರುವ ಬಜೆಟ್ ಹಣ 20 ಲಕ್ಷ ಕೋಟಿ ರೂಪಾಯಿ. ಇನ್ನು ಹತ್ತು ಲಕ್ಷ ಕೋಟಿ ರೂಪಾಯಿಯಲ್ಲಿ ಎಂಟು ಲಕ್ಷ ಕೋಟಿ ರೂಪಾಯಿ ಸಾಲದಿಂದ ಬರುತ್ತದೆ. ಇದು ಕೇಂದ್ರ ಸರ್ಕಾರದ ಬಜೆಟ್​ನ ರೂಪುರೇಷೆ. ರಾಜ್ಯ ಸರ್ಕಾರಗಳ ಜಾಡೂ ಇದೇ. ಒಟ್ಟಿನಲ್ಲಿ ಸರ್ಕಾರಕ್ಕೆ ಖರ್ಚಿಗಾಗಿ ಬೇಕಾಗುವ ಹಣ ಜನಸಾಮಾನ್ಯರಿಂದ ಬರಬೇಕು. ಕೇಂದ್ರ ಸರ್ಕಾರದ ಜಿಎಸ್ಟಿ ಸಂಗ್ರಹ ಬಾಬ್ತು 6.91 ಲಕ್ಷ ಕೋಟಿ ರೂಪಾಯಿ. ವರಮಾನ ತೆರಿಗೆಯಿಂದ ಸರ್ಕಾರಕ್ಕೆ 6.38 ಲಕ್ಷ ಕೋಟಿ ರೂಪಾಯಿ ಬರುತ್ತದೆ. ಇದು ಜನಸಾಮಾನ್ಯರಿಂದ ಬರುವ ಹಣ. ಅದೇ ಲಕ್ಷ ಕೋಟಿ ರೂಪಾಯಿ ಲೆಕ್ಕದಲ್ಲಿ ವಹಿವಾಟು ನಡೆಸುತ್ತಿರುವ ಕಂಪನಿಗಳು ನೀಡುವ ಕಂಪನಿ ತೆರಿಗೆಯಿಂದ ಬರುವುದು 6.81 ಲಕ್ಷ ಕೋಟಿ ರೂಪಾಯಿ ಮಾತ್ರ! ಹೀಗೇ ಅಬಕಾರಿ ಹಾಗೂ ಸೀಮಾ ಸುಂಕದಿಂದ 4 ಲಕ್ಷ ಕೋಟಿ ರೂಪಾಯಿ ಮಾತ್ರ ಸಂಗ್ರಹವಾಗುತ್ತದೆ. ಅಂದರೆ ಜನಸಾಮಾನ್ಯರೇ ಬೇಕು ತೆರಿಗೆ ಸಂಗ್ರಹಕ್ಕೆ; ಆದರೆ ಬಟವಾಡೆಗೆ ಮಾತ್ರ ಜನಸಾಮಾನ್ಯರು ಬೇಕಿಲ್ಲ! ವ್ಯಕ್ತಿಗತ ವರಮಾನ ತೆರಿಗೆ ಸಂಗ್ರಹ ಈ ಬಾರಿ ಕೇಂದ್ರದ ಬಜೆಟ್​ನಲ್ಲಿ ವೃದ್ಧಿಸಿದೆ. ಕಂಪನಿ ತೆರಿಗೆ ಪಾಲು ಇಳಿದಿದೆ! ಜೊತೆಗೆ ಜಿಎಸ್ಟಿ ಪಾಲು ಜಾಸ್ತಿ ಆಗಿದೆ! ಜನಸಾಮಾನ್ಯರ ಪಾಲು ಹೆಚ್ಚಾಗಿದೆ.

    ಸದ್ಯಕ್ಕೆ ಈ ಮಾತು ಬಿಡಿ. ಹೋದ ವರ್ಷ ಅಂತ್ಯದಲ್ಲಿ ಬೇಡಿಕೆ- ಬಳಕೆ ಪದಾರ್ಥ ಪೇಟೆಯಲ್ಲಿ ಕುಸಿದಿದೆ ಎಂದು ಆರ್ಥಿಕ ಮುಗ್ಗಟ್ಟಿನ ಬಾಯಿಮಾತು ಜೋರಾಗಿತ್ತು. ಇದಕ್ಕೆ ಕಾರಣ- ಸುದೀರ್ಘ ಮಳೆಗಾಲ, ಇಪ್ಪತೆôದು ವರ್ಷಗಳಲ್ಲಿ ಕಂಡ ಅತಿ ಹೆಚ್ಚು ದಿನಗಳ ಮಳೆಗಾಲ ಅದು. ಅದಕ್ಕೂ ಮೊದಲು ಬಂದಿತ್ತು ಬರಗಾಲ. ಇವು ಈ ಬೇಡಿಕೆ ಹಾಗೂ ಬಳಕೆ ಕುಸಿತಕ್ಕೆ ಕಾರಣವಾಗಿದ್ದವು. ಹೀಗೆ ಬೇಡಿಕೆ ಬಳಕೆ ಕುಸಿದಿದ್ದು ಗ್ರಾಮೀಣಪ್ರದೇಶದಲ್ಲಿ. ಅದಕ್ಕೆ ಪರಿಹಾರ ಏನು ಗೊತ್ತೆ? ಕೇಂದ್ರ ಸರ್ಕಾರದಿಂದ ಸರ್ಕಾರಿ ನೌಕರರ ಸಂಬಳ- ಪಿಂಚಣಿ ಹೆಚ್ಚಳ! ರಾಜ್ಯ ಸರ್ಕಾರಗಳೂ ಅದನ್ನೇ ಮಾಡಿದ್ದವು. ಇದರಿಂದ ನಗರ ಪ್ರದೇಶಗಳ ಜನರಿಗೆ, ಅರೆ ನಗರ ಪ್ರದೇಶದ ಜನರಿಗೆ ಲಾಭ ಆಯಿತು. ಹಳ್ಳಿಯಲ್ಲಿ ಯಾವ ಸರ್ಕಾರಿ ನೌಕರರು ಇರುತ್ತಾರೆ ಹೇಳಿ? ಹೀಗಾಗಿ ಸರ್ಕಾರದ ಕ್ರಮದ ಪರಿಹಾರವೆಲ್ಲ ನಗರ ಪ್ರದೇಶಕ್ಕೆ ಪ್ರಯೋಜನವಾಯಿತು. ಬರಗಾಲ ಪ್ರವಾಹ ಸಂತ್ರಸ್ತರೂ ಸಂಬಳದಾರರಂತೆ ಏರಿದ ಪೆಟ್ರೋಲ್ ಡೀಸೆಲ್ ಬೆಲೆ ತೆತ್ತರು. ಹೀಗಿದ್ದರೂ ಸರ್ಕಾರಗಳು ಬಡವರ ಪರ ಪರಿಹಾರ ಮಾಗೋಪಾಯ ಹುಡುಕಲಿಲ್ಲ. ಹೀಗಿರುವಾಗ ದೇವರೇ ದಿಕ್ಕು ಬಡವರಿಗೆ! ಅದೂ ಕೂಡ ಈಗ ನಿಜವಾಗಿಬಿಟ್ಟಿದೆ! ಭಾರತದ ಮಾತೇಕೆ, ವಿಶ್ವ ಪೇಟೆಯಿಂದ ಪರಿಹಾರ ಬರುತ್ತೆ, ತಗೋ ಎಂದು ಭಗವಂತನು ಬಡವರ ಮುಂದೆ ಪ್ರತ್ಯಕ್ಷನಾಗಿ ವರ ನೀಡಿದ್ದಾನೆ ಈಗ!! ವಿಶ್ವ ಪೇಟೆಯಲ್ಲಿ ಕಚ್ಚಾತೈಲ ಇಳಿದುಬಿಟ್ಟಿದೆ! ಒಂದೇ ಒಂದು ದಿನ ಸೋಮವಾರದಂದು ಮಾರ್ಚ್ 9ರಂದು ವಿಶ್ವ ಪೇಟೆಯಲ್ಲಿ ಕಚ್ಚಾತೈಲ ಬೆಲೆ ಸುಮಾರು ಶೇ. 25ರಷ್ಟು ಕುಸಿದು ಬ್ಯಾರೆಲ್​ಗೆ 31 ಡಾಲರ್ ತಲುಪಿದೆ.

    ಈಗ ತೈಲ ಬೆಲೆಯು ಇನ್ನೂ ಕೆಳಕ್ಕೆ ಕುಸಿಯುವ ಸಂಭವವಿದೆ. ಈ ತೈಲ ಬೆಲೆ ಇಳಿಕೆ ವರನನ್ನು ಭಗವಂತನೇನೋ ಕೊಟ್ಟಿದ್ದಾನೆ. ಆದರೆ ಅದನ್ನು ಸರ್ಕಾರ ಎಂಬ ಪೂಜಾರಿ ಈಗ ಜನತೆಗೆ ತಲುಪಿಸಬೇಕು. ಅಂದರೆ ಪ್ರಧಾನಿ ನರೇಂದ್ರ ಮೋದಿಯವರ ಮಾತಲ್ಲಿ ಹೇಳುವುದಾದರೆ ಜನತಾ ಜನಾರ್ದನನಿಗೆ ತಲುಪಿಸಬೇಕಾಗಿದೆ. ಇದು ಆಗಲೇಬೇಕು. ಅನಿಲ ಬೆಲೆ ಏರಿಕೆ, ಹಾಲು ಬೆಲೆ ಏರಿಕೆ, ಬಸ್ ದರ ಏರಿಕೆ ಇತ್ಯಾದಿ- ಇವು ಬಡವರನ್ನು ದಿನನಿತ್ಯ ಕಾಡುತ್ತಿವೆ. ಅನಿಲ ಸಿಲಿಂಡರ್ ಬೆಲೆ ಏರಿಕೆ ಎಂದು ಹೋಟೆಲ್ ತಿಂಡಿ- ತಿನಿಸುಗಳ ಬೆಲೆ ಕೂಡ ಈಗಲೇ ಬಿಸಿಬಿಸಿಯಾಗಿಬಿಟ್ಟಿದೆ. ಇದಾವುದೂ ಸರ್ಕಾರಗಳಿಗೆ ತಾಪತ್ರಯ ಎನಿಸಿಲ್ಲ. ಬೆಳೆ ಇಳಿಸುವ ಇರಾದೆ ಸರ್ಕಾರದ್ದಲ್ಲ. ಹೀಗಾಗಿ ಈಗ ಬಂದಿರುವ, ಭಗವಂತನು ಕೊಟ್ಟ ವರ ಅದೇ ಪೆಟ್ರೋಲ್- ಡೀಸೆಲ್ ದರ ಇಳಿಕೆ ಈಗ ಆಗಬೇಕು. ಈಗ ಜನತಾ ಜನಾರ್ದನನ ಸೇವೆ ಸಲ್ಲಿಸಲು ಪೆಟ್ರೋಲ್ ಡೀಸೆಲ್ ಬೆಲೆ ಇಳಿಸಿದರೆ ಬಡವ ಬದುಕಿಯಾನು; ನಿಟ್ಟುಸಿರು ಬಿಟ್ಟಾನು.

    ಆದರೆ ಒಂದು ಕಟು ಸತ್ಯ ಇದೆ. ಅದೆಂದರೆ ಇಲ್ಲಿಯವರೆಗೆ ವಿಶ್ವ ಪೇಟೆಯ ಅಗ್ಗದ ಬೆಲೆಯು ಜನಸಾಮಾನ್ಯನ ಮಟ್ಟಕ್ಕೆ, ಪೆಟ್ರೋಲ್ ಬಂಕುಗಳ ಮಟ್ಟಕ್ಕೆ ಬಂದದ್ದು ಕೇಳಿಯೇ ಇಲ್ಲ! ಈಗ ವಿಶ್ವ ಪೇಟೆಯಲ್ಲಿ ತೈಲ ಬೆಲೆ ಶೇ. 25ರವರೆಗೆ ಕುಸಿದಿದ್ದರೂ ಇಲ್ಲಿ ಡೀಸೆಲ್ ಬೆಲೆ ಮಾರ್ಚ್ ಎಂಟರಂದು 63.51 ರೂಪಾಯಿ ಇದ್ದುದು 11ರಂದು 63.1 ರೂಪಾಯಿಯಲ್ಲಿ ಇದೆ. ಪೆಟ್ರೋಲ್ ಬೆಲೆ ಆಗ 70.83 ಇದ್ದುದು 70.21 ರೂಪಾಯಿಗೆ ಮಾತ್ರ ಇಳಿದಿದೆ. ಶೇ. 25ರಷ್ಟು ಇಳಿಕೆ ಅಲ್ಲಿ, ಕಿಲುಬು ಕಾಸು ಇಳಿಕೆ ಇಲ್ಲಿ! ಇದು ಯಾವ ಸೀಮೆ ನ್ಯಾಯ? ಇದು ಅನ್ಯಾಯ. ಏಕೆಂದರೆ ಭಾರತ ಖರೀದಿಸುವ ತೈಲ ಕಚ್ಚಾ ಬೆಲೆ ಸರಾಸರಿಯು 2019 ರ ಏಪ್ರಿಲ್​ನಲ್ಲಿ 71 ಡಾಲರ್ ಇತ್ತು. ಅದು ಕಳೆದ ಅಕ್ಟೋಬರ್ ನಲ್ಲಿ 59.5 ಡಾಲರ್​ಗೆ ಬಂತು. ಈಗಿನ ಬೆಲೆ ಕುಸಿತದ ಮುಂಚೆ 51 ಡಾಲರ್​ನಲ್ಲಿ ಅದು ಇತ್ತು. ತೈಲ ಬೆಲೆ ಕುಸಿತದ ಬಳಿಕ 34 ಡಾಲರ್ ಮಟ್ಟಕ್ಕೆ ಈ ಸರಾಸರಿ ಬೆಲೆ ಕುಸಿದಿದೆ. ಹೋದ ವರ್ಷ 71 ಡಾಲರ್ ಸರಾಸರಿ ಇದ್ದಾಗ ನಾವು 80 ರೂಪಾಯಿ ಒಂದು ಲೀಟರ್ ಪೆಟ್ರೋಲ್​ಗೆ ಕೊಟ್ಟೆವು. ಈಗ ಈ ತೈಲ ಸರಾಸರಿ ಬೆಲೆ 34 ಡಾಲರ್​ಗೆ ಕುಸಿದಾಗಲೂ ನಾವು ಎಪ್ಪತ್ತು ರೂಪಾಯಿ ಕೊಡಬೇಕು! ಅದು ಶುದ್ಧ ಅನ್ಯಾಯ. ಆದ್ದರಿಂದ ಪೆಟ್ರೋಲ್-ಡೀಸೆಲ್ ಬೆಲೆ ಈಗ ದೊಡ್ಡ ಮಟ್ಟದಲ್ಲಿ ಇಳಿಯಬೇಕು. ಅದು ಈ ವರ್ಷ ಬ್ಯಾರೆಲ್​ಗೆ 20 ಡಾಲರ್​ಗೂ ಇಳಿಯುವ ಸಂಭವ ಇದೆ. ಇದನ್ನು ಬಡವರ ಸೇವೆಗೆ ಸುವರ್ಣಾವಕಾಶ, ಇದು ಜನತಾ ಜನಾರ್ದನನ ಪೂಜೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಪೆಟ್ರೋಲ್-ಡೀಸೆಲ್ ಬೆಲೆ ಇಳಿಕೆ ಮಾಡಬೇಕು. ಈಗ ಇಳಿಕೆ ಪೈಸೆ ಲೆಕ್ಕದಲ್ಲಿ ಇರಬಾರದು; ರೂಪಾಯಿ, ಹಲವು ರೂಪಾಯಿ ಲೆಕ್ಕದಲ್ಲಿ ಅದು ಆಗಬೇಕು. ಇದರಿಂದ ಜನತಾ ಜನಾರ್ದನನೇ ಸರಕಾರಕ್ಕೆ ವರ ಕೊಟ್ಟಾನು! ಈ ಬೆಲೆ ಇಳಿಕೆ ಬಂದರೆ ಅವನ ಜೇಬಿಗೆ ಹಣ ಉಳಿತಾಯವಾದರೆ ಅವನು ಹೆಚ್ಚು ಖರ್ಚು ಮಾಡುತ್ತಾನೆ. ಆಗ ಬಳಕೆ ಪದಾರ್ಥಗಳಿಗೆ ಬೇಡಿಕೆ ಬರುತ್ತೆ. ಇದಕ್ಕಾಗಿ ಕಳೆದ ವರ್ಷ ಸರ್ಕಾರ ಹರಸಾಹಸ ಮಾಡುತ್ತಿತ್ತು. ಅದನ್ನೇ ಈಗ ಜನತಾ ಜನಾರ್ದನ ಮಾಡಿಕೊಡುತ್ತಾನೆ- ಸರ್ಕಾರ ಪೆಟ್ರೋಲ್ ಡೀಸಲ್ ಬೆಲೆ ಇಳಿಸಿದರೆ. ತನ್ನ ಉದ್ಧಾರಕ್ಕೆ, ಸ್ವಾರ್ಥಕ್ಕೆ ಸರ್ಕಾರ ಈಗ ಬೆಲೆ ಇಳಿಸಲಿ.

    ಈ ರೀತಿ ತೈಲಬೆಲೆ ಇಳಿದು ಸರ್ಕಾರಕ್ಕೆ ಅನುಕೂಲಕರ ಸನ್ನಿವೇಶ ಉಂಟಾದ್ದು ಕಾಂಗ್ರೆಸ್ಸಿನವರಿಗೆ ತಳಮಳವನ್ನು ಉಂಟು ಮಾಡಿದೆ. ಪೆಟ್ರೋಲ್- ಡೀಸೆಲ್ ಬೆಲೆ ಇಳಿಸಬೇಕು ಎಂದು ಕಾಂಗ್ರೆಸ್ಸಿನವರು ಈಗಾಗಲೇ ದೊಡ್ಡದಾಗಿ ಕೂಗುತ್ತಿದ್ದಾರೆ. ಪೆಟ್ರೋಲ್ ಡೀಸೆಲ್ ಬೆಲೆ ಇಳಿಯಲಿ, ಬಡವರ ಉದ್ಧಾರ ಆಗಲಿ ಎಂದು ಕಾಂಗ್ರೆಸ್ಸಿನವರು ಹೇಳಿದರೆ ಅದಕ್ಕೆ ನಗಬೇಕೋ ಅಳಬೇಕೋ ಗೊತ್ತಿಲ್ಲ. ಪೆಟ್ರೋಲ್ ಡೀಸೆಲ್ ಬೆಲೆ ಇಳಿಕೆ ಆಗಲಿ. ಇದು ನನ್ನ ಆಸೆ. ಆದರೂ ಈ ಅಪಸ್ವರ ಏಕೆ ಎಂದು ನಿಮಗೆ ಅಚ್ಚರಿ ಆಗಬಹುದು ಹೇಳುತ್ತೇನೆ ಕೇಳಿ- ಈಗ ತೈಲ ಬೆಲೆ 34 ಡಾಲರಿಗೆ ಕುಸಿದು 2004ರ ಮಟ್ಟಕ್ಕೆ ಬಂದಿದೆ; ಲೀಟರಿಗೆ ಪೆಟ್ರೋಲ್ 37.84 ರೂಪಾಯಿ, ಡೀಸೆಲ್ 28.16 ರೂಪಾಯಿ ಆಗ ಇತ್ತು. ಈಗ ಅದೇ ಆಗಲಿ- ಇದು ಕಾಂಗ್ರೆಸ್ಸಿನವರ ಒತ್ತಾಯ. ಅದೇನೋ ಸರಿ. ಆದರೆ ಹಿಂದೆ ನೀವೇನು ಮಾಡಿದಿರಿ? ಇದು ನನ್ನ ಪ್ರಶ್ನೆ. ಈ ವಿಚಾರದಲ್ಲಿ ಕಾಂಗ್ರೆಸ್ಸಿನ ಚರಿತ್ರೆಯು ಚೆನ್ನಾಗಿಲ್ಲ; 2008ರಲ್ಲಿ ಏನಾಯಿತು ಸ್ವಲ್ಪ ಹೇಳಿ ಎಂದು ಅವರನ್ನು ಕೇಳಿ. ಆಗ ತೈಲಬೆಲೆ ಬ್ಯಾರೆಲ್​ಗೆ 34 ಡಾಲರ್ ಇತ್ತು. 30 ಡಾಲರ್ ಗೂ ಬಂದಿತ್ತು. ಆದರೆ ಬೆಲೆ ಏನಾಗಿತ್ತು? 2004ರಲ್ಲಿ 37.84 ಲೀಟರ್ ಪೆಟ್ರೋಲ್ ಬೆಲೆ ಇದ್ದರೆ 2009ರ ಫೆಬ್ರವರಿಯಲ್ಲಿ 47.4ಗೆ ಏರಿತ್ತು! 2014ರಲ್ಲಿ ಮನಮೋಹನ್ ಸಿಂಗ್ ಸರಕಾರ ಅಧಿಕಾರ ಬಿಟ್ಟಾಗ ಪೆಟ್ರೋಲ್ ಬೆಲೆ 71 ರೂಪಾಯಿ ದಾಟಿತ್ತು.

    ರಾಜಕೀಯ ಬಿಡಿ. ಅದೇನಿದ್ದರೂ ಮಾತಿನ ಚಪಲಕ್ಕೆ. ಅಸಲಿ ವಿಷಯಕ್ಕೆ ಬನ್ನಿ. ಕಡಿಮೆ ಕಚ್ಚಾತೈಲ ಬೆಲೆ ಎಂದೂ ಶ್ರೀಸಾಮಾನ್ಯನ ಮಟ್ಟಕ್ಕೆ, ಪೆಟ್ರೋಲ್ ಬಂಕ್ ಮಟ್ಟಕ್ಕೆ ಬಂದಿಲ್ಲ. 2015ರಲ್ಲಿ ಕಚ್ಚಾತೈಲ ಬೆಲೆ 34.37 ಡಾಲರಿಗೆ, 2016ರಲ್ಲಿ 26.21 ಡಾಲರಿಗೆ ಕನಿಷ್ಠ ಮಟ್ಟ ಕಂಡಿತ್ತು. ಆದರೂ ಬೆಲೆ ಮೇಲೇ ಇತ್ತು. ಈಗಲಾದರೂ ಶ್ರೀಸಾಮಾನ್ಯನಿಗೆ ಅನ್ಯಾಯ ಆಗಬಾರದು. ವಿಶ್ವ ಪೇಟೆಯ ಬೆಲೆಯೇ ಪೆಟ್ರೋಲ್ ಬಂಕ್ ಎಂಬ ಸಿದ್ಧಾಂತ ಈಗ ಜಾರಿಯಲ್ಲಿದೆ. ಈಗ ವಿಶ್ವ ಪೇಟೆಯಲ್ಲಿ ತೈಲ ಬೆಲೆ ಕುಸಿತವಾಗಿದೆ. ಅದು ಇಲ್ಲಿ ಜಾರಿಗೆ ತರಬೇಕು.

    ಅಲ್ಲದೆ, ನಾವು ನೀವು ಕೊಡುವ ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ ಶೇ. 50 ಭಾಗ ಸರ್ಕಾರಗಳಿಗೆ ತೆರಿಗೆಯಾಗಿ ಸಲ್ಲುತ್ತದೆ. ಅದು ಇದ್ದಿದ್ದೆ. ಆದರೂ ವಿಶ್ವ ಪೇಟೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಲೆ ಇಳಿದಿರುವುದರಿಂದ ಈಗ ಅದು ಪೆಟ್ರೋಲ್ ಬಂಕ್ ಮಟ್ಟದಲ್ಲಿ ಬರಬೇಕು. ಈಗ ಇಳಿಕೆಯು ಪೈಸೆ ಮಟ್ಟದಲ್ಲಿ ಇದೆ. ಅದು ಏನೇನೂ ಸಾಲದು. ಅದು ರೂಪಾಯಿ ಮಟ್ಟದಲ್ಲಿ, ಹಲವು ರೂಪಾಯಿ ಲೆಕ್ಕದಲ್ಲಿ ಬರಬೇಕು. ಅದನ್ನು ಈಗ ನಾವು ಕೇಳುವಂತಾಗಿದೆ. ಸರ್ಕಾರ ಅದನ್ನು ನಡೆಸಿಕೊಡಬೇಕು.

    ಕಣಿವೆ ರಾಜ್ಯದಲ್ಲಿ ಯೋಧರ ಗುಂಡಿನ ದಾಳಿಗೆ ಬಲಿಯಾದ ನಾಲ್ವರು ಉಗ್ರರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts