More

    ಸಾಧನೆಗೆ ಯೋಗವೇ ಸಾಧನ, ಆನೆಗೊಂದಿ ರಾಜವಂಶಸ್ಥ ಕೃಷ್ಣದೇವರಾಯ ಹೇಳಿಕೆ

    ಹೊಸಪೇಟೆ: ಸಾವಿರಾರು ವರ್ಷಗಳ ಹಿಂದೆಯೇ ಸಾಧನೆಗೆ ಯೋಗವೇ ಸಾಧನ ಎಂದು ಋಷಿಮುನಿಗಳು ಸಾರಿದ್ದರು. ಸರ್ಕಾರ ಶಾಲಾ ಹಂತದಲ್ಲೆ ಯೋಗ ಕಡ್ಡಾಯಗೊಳಿಸುವುದರಿಂದ ಮಕ್ಕಳ ಏಕಾಗ್ರತೆ ಹೆಚ್ಚಿ ಕಲಿಕೆಯಲ್ಲಿ ಬದಲಾವಣೆ ಕಾಣಬಹುದು ಎಂದು ಕನ್ನಡ ವಿವಿ ಸಿಂಡಿಕೇಟ್ ಸದಸ್ಯ, ಆನೆಗೊಂದಿ ರಾಜವಂಶಸ್ಥ ಕೃಷ್ಣದೇವರಾಯ ಹೇಳಿದರು.

    ಕನ್ನಡ ವಿವಿ ಮಂಟಪ ಸಭಾಗಂಗಣದಲ್ಲಿ ಯೋಗ ಅಧ್ಯಯನ ಕೇಂದ್ರ ಗುರುವಾರ ಪತಂಜಲಿ ಯೋಗ ಸಮಿತಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಭಾರತೀಯ ಯೋಗ ಪರಂಪರೆ ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಮಾತನಾಡಿದರು. ಕನ್ನಡ ವಿವಿ ಯೋಗ ಅಧ್ಯಯನ ಕೇಂದ್ರ ಭವಿಷ್ಯದಲ್ಲಿ ಯೋಗ ವಿವಿಯಾಗಿ ಬೆಳೆಯಬೇಕು. ಯೋಗದಿಂದ ಆಗುವ ಪ್ರಯೋಜನ ಕುರಿತು ಸಾಮಾನ್ಯ ಜನರಿಗೂ ಅರ್ಥವಾಗುವಂತೆ ಪ್ರಾಯೋಗಿಕವಾಗಿ ತಿಳಿಸಬೇಕು. ಎಲ್ಲರೂ ಒಂದಾಗಿ, ನಿರೋಗಿಗಳಾಗಿ ನವ ಭಾರತ ಕಟ್ಟಬೇಕು ಎಂದರು.

    ಯೋಗಗುರು ಬಾಬಾ ರಾಮದೇವ್ ಮಾತನಾಡಿ, ಯೋಗ ಶಿಕ್ಷಣ ಇತರ ಸ್ನಾತಕ, ಸ್ನಾತಕೋತ್ತರ ಪದವಿಗಳಿಗಿಂತ ಭಿನ್ನವಾಗಿದೆ. ಯೋಗ ಶಿಕ್ಷಣದಲ್ಲಿ ಪ್ರಾಯೋಗಿಕತ್ವಕ್ಕೆ ಹೆಚ್ಚಿನ ಮಹತ್ವ ನೀಡುವುದರಿಂದ, ಪದವಿ ಪೂರ್ಣಗೊಳಿಸಿದ ನಂತರ ಕಲಿಕೆಯ ಸರ್ಟಿಫಿಕೇಟ್ ಬೇಕಿರುವುದಿಲ್ಲ. ನೇರವಾಗಿ ಉದ್ಯೋಗ ಕಂಡುಕೊಳ್ಳಬಹುದು. ವಯಸ್ಸಿನ ಮಿತಿ ಇಲ್ಲದ ಶಿಕ್ಷಣವಾಗಿದ್ದು, ವೈದ್ಯಕೀಯ, ವೈಜ್ಞಾನಿಕ ಹಾಗೂ ಕೌಶಲದ ಶಿಕ್ಷಣವಾಗಿದೆ. ಯೋಗ ಪ್ರದರ್ಶನಕ್ಕಾಗಿ ಅಲ್ಲ ಆರೋಗ್ಯ ಹಾಗೂ ನೆಮ್ಮದಿಗಾಗಿ ಇದೆ. ಭಾರತೀಯರು ವಿದೇಶಿ ವಸ್ತಗಳಿಗೆ ಮಾರುಹೋಗಿ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಸ್ವದೇಶಿ ವಸ್ತುಗಳಿಂದ ಆರೋಗ್ಯ ಜತೆಗೆ ದೇಶವನ್ನು ಆರ್ಥಿಕವಾಗಿ ಅಭಿವೃದ್ಧಿಪಡಿಸಬಹುದು ಎಂದು ತಿಳಿಸಿದರು.

    ಕುಲಪತಿ ಡಾ.ಸ.ಚಿ.ರಮೇಶ ಅಧ್ಯಕ್ಷತೆವಹಿಸಿ ಮಾತನಾಡಿ, ಮನಸ್ಸು ಮತ್ತು ಶರೀರ ಹಿಡಿತದಲ್ಲಿರಲು ಯೋಗ ಅಗತ್ಯ ಎಂದರು. ಯೋಗ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಎಫ್.ಟಿ.ಹಳ್ಳಿಕೇರಿ ಮಾತನಾಡಿದರು. ಪತಂಜಲಿ ಯೋಗ ಸಮಿತಿ ರಾಜ್ಯ ಪ್ರಭಾರ ಭವರಲಾಲ್ ಆರ್ಯ, ಕುಲಸಚಿವ ಡಾ.ಎ.ಸುಬ್ಬಣ್ಣ ರೈ, ಹರಿದ್ವಾರದ ದೇವಪ್ರಿಯ ಮಾತಾಜಿ, ಶೈಕ್ಷಣಿಕ ಉಪಕುಲಸಚಿವ ಡಾ.ಎಸ್.ವೈ. ಸೋಮಶೇಖರ ಇತರರಿದ್ದರು.

    ಯೋಗದಿಂದ ಪ್ರಧಾನಿ ಮೋದಿ ನಿರಾಯಸವಾಗಿ ದೇಶದ ಅಭಿವೃದ್ಧಿಯಲ್ಲಿ ತೊಡಗಿದ್ದಾರೆ. ಯೋಗ ಮತ್ತು ಆಯುರ್ವೇದದಿಂದ ಪೂರ್ಣ ಸ್ವಾವಲಂಬಿಗಳಾಗಿ ಸಶಕ್ತ ಭಾರತ ನಿರ್ಮಾಣ ಕಾರ್ಯ ನಮ್ಮಿಂದಲೇ ಆರಂಭವಾಗಬೇಕೆಂದು ಸಂಕಲ್ಪ ತೊಡಬೇಕು. ಭಾರತಕ್ಕೆ ಬಡತನವಿಲ್ಲ. ಜಗತ್ತಿನ ಇತರ ರಾಷ್ಟ್ರಗಳು ಭಾರತದತ್ತ ಮುಖಮಾಡಿವೆ. ಸ್ವದೇಶಿ ವಸ್ತುಗಳ ಬಳಕೆ ಹಾಗೂ ಸ್ವಾವಲಂಬಿಗಳಾಗಲು ಜಾಗೃತಿ ಮೂಡಿಸುತ್ತಿರುವುದರಿಂದ ನನಗೆ ವೈರಿಗಳು ಹೆಚ್ಚಾಗಿದ್ದಾರೆ. ಸರ್ಕಾರ ನನಗೆ ಭದ್ರತೆ ಒದಗಿಸಿದೆ.
    | ಬಾಬಾ ರಾಮದೇವ್ ಯೋಗಗುರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts