More

    ಯಾವುದಕ್ಕೂ ಲೆಕ್ಕ ಇರಲಿ ಪಕ್ಕಾ.. ಜೀವನದ ಆಚಾರದಲ್ಲಿ ಲೆಕ್ಕ ಸೇರಿಕೊಳ್ಳಲಿ…

    ಯಾವುದಕ್ಕೂ ಲೆಕ್ಕ ಇರಲಿ ಪಕ್ಕಾ.. ಜೀವನದ ಆಚಾರದಲ್ಲಿ ಲೆಕ್ಕ ಸೇರಿಕೊಳ್ಳಲಿ...ಗೆಳೆಯ ಹೊಸದಾಗಿ ಲಕ್ಷುರಿ ಕಾರು ಕೊಂಡಿದ್ದ. ನನಗೆ ಅಚ್ಚರಿಯಾಯಿತು. ಯಾಕೆಂದರೆ, ಹದಿನೈದು ವರ್ಷದಿಂದ ಸಿಂಗಲ್ ಕಲರ್ ಮಷಿನ್​ನಲ್ಲೇ ಪ್ರೆಸ್ ನಡೆಸುತ್ತಿದ್ದ. ಆದರೆ ಕೊಂಡುಕೊಂಡಿದ್ದ ಕಾರ್ ಮಾತ್ರ ಅವನ ಸಂಪಾದನೆಗೆ ತಕ್ಕದ್ದಲ್ಲ. ದುಡಿದ ಹಣವನ್ನು ವ್ಯಾಪಾರದಲ್ಲಿ ತೊಡಗಿಸುವ ಬದಲಿಗೆ ಅನಗತ್ಯವಾಗಿ ಕಾರಿನ ಮೇಲೆ ಸುರಿದಿದ್ದ. ಒಂದು ಹಂತದವರೆಗೂ ದುಡಿದ ಹಣವನ್ನು ವ್ಯವಹಾರದಲ್ಲೇ ತೊಡಗಿಸಬೇಕಿತ್ತು, ಅಗತ್ಯವಿರುವ ಫೋರ್ ಕಲರ್ ಪ್ರಿಂಟಿಂಗ್ ಯಂತ್ರ ಖರೀದಿಸಬೇಕಿತ್ತು. ಇದರಿಂದ ಬೇರೆ ಪ್ರೆಸ್ಸಿನಲ್ಲಿ ಮಾಡಿಸುತ್ತಿದ್ದ ಕಲರ್ ಪ್ರಿಂಟಿಂಗಿನ ಹಣ ಉಳಿದು ಲಾಭ ಹೆಚ್ಚಾಗುತ್ತಿತ್ತು. ಆದ್ದರಿಂದ ಅವನಿಗೆ ವಿವರಿಸಿದೆ. ‘ನೀನು ಒಂದು ವರ್ಷದಲ್ಲಿ ಕಾರಿಗೆ ಹಾಕುವ ಪೆಟ್ರೋಲ್, ಸರ್ವೀಸ್ ಚಾರ್ಜು, ರಜಾ ದಿನಗಳಲ್ಲಿ ಮನೆಯವರನ್ನೆಲ್ಲ ಊರು ಸುತ್ತಿಸುವ ಖರ್ಚು, ಒಂದು ವೇಳೆ ಕಾರು ಓಡಿಸಲಾಗದಾಗ ಡ್ರೖೆವರ್​ನ ಸಂಬಳ, ದುರಸ್ತಿ ವೆಚ್ಚಗಳು, ಇನ್ಶೂರೆನ್ಸ್, ಸಾಲದ ಕಂತು, ಬಡ್ಡಿ… ಇತ್ಯಾದಿ ಎಲ್ಲ ಲೆಕ್ಕ ಹಾಕಿ ಅದನ್ನು 365ರಿಂದ ಭಾಗಿಸಿ ನೋಡು. ಅದರ ಕಾಲು ಭಾಗದಷ್ಟು ಹಣದಲ್ಲಿ ನೀನು ಆಟೋರಿಕ್ಷಾದಲ್ಲೋ, ಟ್ಯಾಕ್ಸಿಯಲ್ಲೋ ಓಡಾಡಬಹುದು… ಅಷ್ಟಿರುತ್ತದೆ’ ಎಂದಾಗ ಅವನು ಬೆರಗಾದ.

    ನೀವು ಗಣಿತಜ್ಞರಾಗಿರಬೇಕು. ಅಂದ್ರೆ ನಿಮ್ಮ ಜೀವನದ ಆಚಾರದಲ್ಲಿ ಲೆಕ್ಕವನ್ನು ಸೇರಿಸಿಕೊಳ್ಳಬೇಕು. ಅದೇ ಲೆಕ್ಕಾಚಾರ! ನನ್ನ ಸ್ನೇಹಿತ ಉದ್ಯಮಿಯೊಬ್ಬರು ಅದೆಷ್ಟು ಲೆಕ್ಕಾಚಾರದ ಮನುಷ್ಯ ಅಂದ್ರೆ ಅವರನ್ನು ಜಿಪುಣ ಅಂತ ಕರೀಬೇಕು ಅಂತಲೇ ಅನ್ಸುತ್ತೆ. ಆದರೆ ಅವರು ಜಿಪುಣರಲ್ಲ. ಖರ್ಚು ಮಾಡಲೇಬೇಕಾದ ಕಡೆ ಖರ್ಚು ಮಾಡುತ್ತಾರೆ. ಆದರೆ ಅನಗತ್ಯವಾಗಿ ಒಂದು ಪೈಸೆಯನ್ನೂ ವ್ಯಯಿಸುವುದಿಲ್ಲ. ಅವರ ಉದ್ಯಮದಲ್ಲಿ ಬೇರೆಡೆಗೆ ನೀಡುವ ವೇತನದಲ್ಲಿ ಅರ್ಧದಷ್ಟು ಕೊಡುತ್ತಿದ್ದರು. ಐದನೇ ತಾರೀಕು ಸಂಬಳ ಕೊಟ್ಟುಬಿಡುತ್ತಿದ್ದರು. ಅವರಲ್ಲಿ ಕೆಲಸ ಮಾಡಿದವರು ಇಂದು ಉತ್ತಮ ಹುದ್ದೆಗಳಲ್ಲಿ ಇದ್ದಾರೆ.

    ‘ಖರ್ಚು ಮಾಡೋದ್ರಲ್ಲಿ ದಿಲ್​ದಾರಮ್ಮಾ ಅವನು’ ಅಂತ ಯಾರೋ ಗೆಳೆಯರು ಹೊಗಳುತ್ತಾರೆ ಅಂತ ಲೆಕ್ಕಾಚಾರ ಮಾಡದೇ ನೀರಿನಂತೆ ಹಣ ಖರ್ಚು ಮಾಡುವವರು ಸಾಕಷ್ಟು ಮಂದಿ ಕಾಣುತ್ತಾರೆ. ಆದರೆ ‘ದಿಲ್​ದಾರ್’ನ ಬಳಿ ಹಣ ಇಲ್ಲದಿದ್ದಾಗ ಹೊಗಳಿದವರೇ ‘ಪಾಪರ್’ ಎಂದು ಹೀಗಳೆಯುತ್ತಾರೆ!

    ಮದುವೆ ಆಗುವ ಮುನ್ನ..: ನಮ್ಮ ದೇಶದಲ್ಲಿ ಹುಡುಗನಿಗೆ ಇಪ್ಪತೆôದು ದಾಟಿತೆಂದರೆ ಮದುವೆ ಬಗ್ಗೆ ಹಿರಿಯರು ಯೋಚಿಸೋಕೆ ಶುರು ಮಾಡುತ್ತಾರೆ. ಅವನಿಗೆ ಸರಿಯಾದ ಒಂದು ಕೆಲಸ ಇದೆಯೋ, ಇಲ್ವೋ ಅಂತ ಯೋಚಿಸದೆ ಮದುವೆ ಮಾಡೋದಕ್ಕೆ ಆತುರ ತೋರಿಸ್ತಾರೆ. ಇನ್ನೊಂದೆಡೆ, ಹೆಣ್ಣುಮಕ್ಕಳಿಗೆ ವಯಸ್ಸು ಹೆಚ್ಚಾದಂತೆಲ್ಲ ಹೆತ್ತವರ ಚಿಂತೆಯೂ ಹೆಚ್ಚಾಗುತ್ತದೆ. ‘ಎರಡು ಹೊತ್ತು ಊಟ ಹಾಕಿದ್ರೆ ಸಾಕು, ಒಂದು ಹೆಣ್ಣಿಗೆ ಗಂಡನಿಂದ ಅದಕ್ಕಿಂತ ಇನ್ನೇನು ಬೇಕಾಗುತ್ತೆ’ ಅನ್ನೋ ಹಳೆಯ ತಲೆಮಾರಿನ ತಂದೆ-ತಾಯಿಗೆ ಮಗಳ ಮದುವೆ ಮಾಡಿಬಿಟ್ಟರೆ ಕರ್ತವ್ಯ, ಜವಾಬ್ದಾರಿ ಮುಗಿದು ಹೋಗುತ್ತೆ ಅನ್ನೋದಷ್ಟೇ ಆಲೋಚನೆ. ಅದಕ್ಕಾಗಿ ಕಣ್ಣಿಗೆ ಬಿದ್ದ ಯುವಕರ ಹಿಂದುಮುಂದೆಲ್ಲ ವಿಚಾರಿಸತೊಡಗುತ್ತಾರೆ(ಆದರೆ ಈಗ ಅನೇಕ ಸಮುದಾಯಗಳಲ್ಲಿ ಹುಡುಗಿಯರ ಕೊರತೆ ಕಾಡುತ್ತಿದೆ. ಅದು ಬೇರೆ ವಿಷಯ). ಯುವಕರಿಗೂ ವಯಸ್ಸಿನ ಪ್ರಭಾವದಿಂದಾಗಿ ಕನ್ಯೆಯರ ಕುಡಿಗಣ್ಣಿನ ನೋಟ ಇಷ್ಟವಾಗುವ ಹಂತ… ಆದರೆ ಭವಿಷ್ಯದಲ್ಲಿ ಸಂಸಾರ ನಡೆಸುವಾಗ ಬೇಕಾದ ಅವಶ್ಯಕತೆಗಳೇನು, ಅವುಗಳನ್ನು ತಮ್ಮಿಂದ ಪೂರೈಸಲು ಸಾಧ್ಯವೇ ಅಂತ ಯೋಚಿಸುವವರು ಕಡಿಮೆ.

    ‘ಆಯಾ ಕಾಲಕ್ಕೆ ಏನೇನು ಆಗಬೇಕೋ ಅವೆಲ್ಲ ಆದರೇನೇ ಸರಿ. ಪ್ರಾಯ ಕಳೆದ ಮೇಲೆ ಮದುವೆ ಆಗಿ ಏನು ಪ್ರಯೋಜನ?’ ಅಂತ ಹೇಳೋರು ಇವತ್ತಿಗೂ ಸಿಕ್ತಾರೆ. ಆದರೆ ‘ಹೆಂಡ್ತಿ ಯಾವತ್ತಿಗೂ ನೆಸೆಸಿಟಿ ಅಲ್ಲ, ಲಕ್ಷುರಿ’ ಅನ್ನೋದು ಕೆಲವರ ಅನುಭವದ ನುಡಿ. ಯಾವುದೋ ಒಂದು ಉದ್ಯೋಗ ಮಾಡಿಕೊಂಡು, ಬರುವಷ್ಟು ಅಲ್ಪಾದಾಯದಲ್ಲೇ ಆರಾಮಾಗಿ ಇರುವ ಯುವಕನಿಗೆ ಮದುವೆ ಆಗೋ ಯೋಚನೆ ಬಂದ ಕೂಡಲೇ ‘ಅರೆ, ಅಮ್ಮ ಹೇಳೋದೂ ಸರಿ… ನಾನು ಮದ್ವೆ ಆದ್ರೆ ಅಡುಗೆ ಮಾಡೋದು, ಬಟ್ಟೆ ಒಗೆಯೋದು, ಪಾತ್ರೆ ತೊಳೆಯೋದು, ಮನೆ ನೀಟಾಗಿ ಇಟ್ಕೊಳ್ಳೋದು ಎಲ್ಲದಕ್ಕೂ ಸಹಾಯ ಆಗುತ್ತದೆ. ಹೋಟೆಲಿನಲ್ಲಿ ಊಟ ಮಾಡುವ ಒಬ್ಬರ ಖರ್ಚಲ್ಲಿ ಇಬ್ಬರಿಗೆ ಆಗುತ್ತದೆ’ ಅನ್ನೋ ಲೆಕ್ಕಾಚಾರ ತಪ್ಪೆಂದು ಮದುವೆಯ ನಂತರ ಅರಿವಾಗುತ್ತದೆ. ಆಗಾಗ ಹೆಂಡತಿನೂ ‘ಹೋಟೆಲಿಗೆ ಹೋಗೋಣ, ಅಡುಗೆ ಮಾಡಿ ನಂಗೆ ಬೋರಾಗಿದೆ’ ಎನ್ನುತ್ತಾಳೆ. ಅಲ್ಲದೆ ಹೆಂಡ್ತಿ ಮನೆಗೆ ಬರ್ತಿದ್ದ ಹಾಗೇ ಅವಳ ಜೊತೆಗೆ ಬೇಡಿಕೆಗಳ ಪಟ್ಟಿನೂ ಬಂದಿರುತ್ತೆ. ಪೂರೈಸದಿದ್ದರೆ ಅಸಹಕಾರ ಚಳವಳಿ… ಸರಿ ಪೂರೈಸೋಣ ಅಂದರೆ ಅದು ಅಲ್ಲಿಗೆ ಮುಗಿಯೋ ಪಟ್ಟಿಯಲ್ಲ. ಅಂದರೆ ಮದುವೆ ಆಗೋದೇ ತಪು್ಪ ಅಂತ ಹೇಳ್ತಿಲ್ಲ. ಆರ್ಥಿಕ ಪರಿಸ್ಥಿತಿ ಚೆನ್ನಾಗಿಟ್ಟುಕೊಂಡು ಮದುವೆ ಆಗೋದು ಒಳ್ಳೇದು ಅಂತ ನನ್ನ ಮಾತಿನ ಅರ್ಥ.

    ನನಗೆ ಮನೆಯಲ್ಲಿ ಮದುವೆ ಆಗು ಅಂತ ಹೇಳ್ತಿದ್ದ ಕಾಲದಲ್ಲೇ ‘ನಾನು ಒಂದು ಲಕ್ಷ ರೂಪಾಯಿ ಕೂಡಿ ಹಾಕೋವರೆಗೂ ಮದುವೆ ಆಗೋದಿಲ್ಲ’ ಅಂತ ಹೇಳಿ ಲಕ್ಷ ರೂಪಾಯಿ ಕೂಡಿಟ್ಟ ನಂತರಾನೇ ಮದ್ವೆ ಆಗಿದ್ದು. ನೀವು ಕೇಳಬಹುದು, ‘ಹಣ ಒಂದಿದ್ರೆ ಸಂಸಾರ ಸುಗಮವಾಗಿ ಸಾಗುತ್ತಾ?’ ಅಂತ. ಆದರೆ ಹಣ ಇಲ್ದೆ ಮದ್ವೆ ಆಗಿ ಒದ್ದಾಡ್ತಾ ಇರೋರನ್ನ ಒಂದ್ಸಲ ಗಮನಿಸಿ, ನಿಮಗೇ ಹೊಳೆಯುತ್ತೆ, ಹಣ ಇದ್ರೆ ಎಷ್ಟರಮಟ್ಟಿಗೆ ನೆಮ್ಮದಿ ಸಿಗುತ್ತೆ ಅಂತ.

    ಸಂಸಾರ ಬೆಳೀತಾ ಹೋಗುತ್ತೆ. ಮೊದಲಿಗೆ ನೀವು ಒಂಟಿಯಾಗಿರ್ತಿದ್ರಿ. ಮದುವೆಯಾದಾಗ ಹೆಂಡ್ತಿ, ನಂತರ ಮಕ್ಕಳು, ಆಮೇಲೆ ಅವರ ಬೆಳವಣಿಗೆಗೆ ಬೇಕಾದ ಎಲ್ಲ ಖರ್ಚುಗಳು… ದೈನಂದಿನ ವೆಚ್ಚವಲ್ಲದೆ, ಆರೋಗ್ಯ, ಶಿಕ್ಷಣ, ಭವಿಷ್ಯಕ್ಕಾಗಿ ಉಳಿತಾಯ, ಪ್ರವಾಸ… ಹೀಗೆ ಹತ್ತು ಹಲವು ವಿಧಗಳಲ್ಲಿ ದುಡಿಮೆಯ ಹಣವೆಲ್ಲ ಖಾಲಿಯಾಗುತ್ತದೆ. ಆದ್ದರಿಂದ ಇದನ್ನೆಲ್ಲ ಭರಿಸಲು ಸಾಧ್ಯವಾಗುವಷ್ಟು ಹಣ ಇದ್ದರೆ ಮಾತ್ರ ಮದುವೆ ಆಗಬೇಕು, ಹೆಂಡತಿಯನ್ನೂ ಚೆನ್ನಾಗಿ ನೋಡಿಕೊಳ್ಳಬಹುದು. ಹೆಂಡತಿಯೂ ಉದ್ಯೋಗಸ್ಥಳಾಗಿದ್ದರೆ ಇಬ್ಬರ ದುಡಿಮೆ ಹಣ ಸೇರಿ ಸಂಸಾರ ನಡೆಸಲು ಅನುಕೂಲವಾಗುತ್ತದೆ. ಆದರೆ ಇಂಥ ಸಂದರ್ಭದಲ್ಲಿ, ಇಬ್ಬರೂ ಮನೆ ಒಳಗೆ, ಹೊರಗೆ ದುಡಿಯಬೇಕಾದ ಅನಿವಾರ್ಯತೆಯಿಂದ ದಾಂಪತ್ಯದಲ್ಲಿನ ಸಾಮರಸ್ಯ ಹದಗೆಡದಂತೆ ಎಚ್ಚರ ವಹಿಸಬೇಕಾಗುತ್ತದೆ. ಹಾಗೇ ಸತತ

    ದುಡಿಮೆಯ ಕಾರಣ ಅನಾರೋಗ್ಯವೂ ಶುರುವಾಗುವ ಸಾಧ್ಯತೆ ಇರುತ್ತದೆ. ಈ ಬಗೆಗೂ ಎಚ್ಚರಿಕೆ ಬೇಕು.

    ಆದ್ದರಿಂದ ಒಳ್ಳೆಯ ಸಂಪಾದನೆ, ಸಂಸಾರ ನಿಭಾಯಿಸುವ ಸಾಮರ್ಥ್ಯ ಹೀಗೆ ಎಲ್ಲವೂ ಇದ್ದರೆ ಮದುವೆ ಮಾಡಿಕೊಳ್ಳುವುದು ಒಳ್ಳೆಯದು. ಏಕೆಂದರೆ ಮದುವೆ, ಮನೆ ಮತ್ತು ಸಿನಿಮಾ ಇವು ಮೂರೂ ಯಾವತ್ತಿಗೂ ಅಂದಾಜಿಗಿಂತ ಮೂರ್ನಾಲ್ಕು ಪಟ್ಟು ಹೆಚ್ಚಾಗಿ ಖರ್ಚಾಗುವ ಕ್ಷೇತ್ರಗಳು. ಯಾಕೆ ಹೀಗೆ ಗೊತ್ತಾ ನಿಮಗೆ.

    ಮದುವೆ ಮಾಡಿಕೊಳ್ಳುವಾಗ ಮೊದಲನೆಯದು ಲಗ್ನಪತ್ರಿಕೆ. ಎಷ್ಟು ಪ್ರಿಂಟ್ ಮಾಡಿಸಬೇಕು?, ಛತ್ರ ಬುಕ್ ಮಾಡಬೇಕು, ನಂತರ ಬಟ್ಟೆ, ಒಡವೆಗಳು, ವಾಲಗದವರು, ಪುರೋಹಿತರು, ವಿಡಿಯೋ ಚಿತ್ರೀಕರಣ, ಮೂರು ದಿನಗಳ ಕಾಲ ಬಂದವರಿಗೆ ಊಟೋಪಚಾರ ವ್ಯವಸ್ಥೆ, ರಿಸೆಪ್ಶನ್ ಇದ್ದರೆ ಆ ಸಮಯದಲ್ಲಿ ಮನರಂಜನೆಗಾಗಿ ಆರ್ಕೆಸ್ಟ್ರಾದಂಥ ಕಾರ್ಯಕ್ರಮ, ಹೆಂಡತಿಯ ಖುಷಿಗಾಗಿ ಹನಿಮೂನ್… ಹೀಗೆ ಮಿತಿಯಿಲ್ಲದಂತೆ ಹಣ ನೀರಿನಂತೆ ಖರ್ಚಾಗುತ್ತದೆ. ಇನ್ನು ನಿಮ್ಮಿಷ್ಟ.

    ಜೋಕು

    ಗಂಡ: ‘ಏನೇ, ಇನ್ನೂ ಅಡುಗೆ ಆಗಿಲ್ವಾ? ನಾನು ಹೋಟೆಲಿಗೆ ಹೋಗ್ತೀನಿ’.

    ಹೆಂಡತಿ: ‘ಐದು ನಿಮಿಷ ನಿಲ್ರಿ…’

    ಗಂಡ: ‘ಏನು! ಐದೇ ನಿಮಿಷದಲ್ಲಿ ಅಡುಗೆ ಆಗುತ್ತಾ, ಸರಿ ಕಾಯ್ತೀನಿ’

    ಹೆಂಡತಿ: ‘ಇಲ್ಲಾರಿ, ನಾನೂ ರೆಡಿಯಾಗಿ ನಿಮ್ಮ ಜತೆ ಬರ್ತೀನಿ!’

    (ಲೇಖಕರು ಖ್ಯಾತ ಜಾದೂಗಾರರು, ಬರಹಗಾರರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts