More

    ಅಯೋಧ್ಯೆಗೆ ಹೊರಟ ಪವಿತ್ರ ಮೃತ್ತಿಕೆ

    ಉಡುಪಿ/ಕಟೀಲು: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಉಡುಪಿ ಕೃಷ್ಣಮಠ ಹಾಗೂ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಗಳಿಂದ ಪವಿತ್ರ ಮೃತ್ತಿಕೆ ಸಂಗ್ರಹಿಸಿ ಸೋಮವಾರ ವಿಶ್ವ ಹಿಂದು ಪರಿಷತ್ ಮೂಲಕ ಹಸ್ತಾಂತರಿಸಲಾಯಿತು.

    ರಾಮ ಮಂದಿರಕ್ಕೆ ಆ.5ರಂದು ಶಿಲಾನ್ಯಾಸ ನಡೆಸಲು ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನಿರ್ಧರಿಸಿದ್ದು, ಮಂದಿರದ ತಳಭಾಗದಲ್ಲಿ ದೇಶದ ನೂರಾರು ನದಿ, ಅನೇಕ ಪುಣ್ಯ ಕ್ಷೇತ್ರಗಳ ಪವಿತ್ರ ಮೃತ್ತಿಕೆ ಸೇರಿಸಲು ವಿಹಿಂಪ ಸಂಕಲ್ಪ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ಉಡುಪಿಯ ಪವಿತ್ರ ಮಣ್ಣಿಗೆ ಪರ್ಯಾಯ ಅದಮಾರು ಮಠಾಧೀಶ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ, ಕೃಷ್ಣ ದೇವರ ಮುಂಭಾಗ ಗಂಧ ಪ್ರಸಾದ, ನಿರ್ಮಾಲ್ಯವಿಟ್ಟು ಮಂಗಳಾರತಿ ಬೆಳಗಿ ಮಂದಿರ ನಿರ್ಮಾಣ ಕಾರ್ಯ ನಿರ್ವಿಘ್ನವಾಗಿ ಯಶಸ್ವಿಯಾಗಿ ನಡೆದು ಲೋಕಕಲ್ಯಾಣವಾಗಲಿ ಎಂದು ಪ್ರಾರ್ಥಿಸಿ ಮೃತ್ತಿಕೆ ಹಸ್ತಾಂತರಿಸಿದರು.

    ವಿಹಿಂಪ ಕಾರ್ಯಕರ್ತರು ರಥಬೀದಿಯಲ್ಲಿ ರಾಮನಾಮ ಸ್ಮರಣೆಯೊಂದಿಗೆ ಪ್ರದಕ್ಷಿಣೆ ಬಂದು ಅನಂತೇಶ್ವರ ದೇವಳಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಹಿತ್ತಾಳೆಯ ಕರಂಡಕದಲ್ಲಿ ಮೃತ್ತಿಕೆ ತುಂಬಿಸಿ ಕಳುಹಿಸಲಾಯಿತು.
    ವಿಹಿಂಪ ಜಿಲ್ಲಾಧ್ಯಕ್ಷ ಪಿ.ವಿಷ್ಣುಮೂರ್ತಿ ಆಚಾರ್ಯ, ಕಾರ್ಯದರ್ಶಿ ದಿನೇಶ್ ಮೆಂಡನ್, ಬಜರಂಗದಳ ಪ್ರಾಂತ ಸಹಸಂಚಾಲಕ ಸುನೀಲ್ ಕೆ.ಆರ್, ಮಠದ ವ್ಯವಸ್ಥಾಪಕ ಗೋವಿಂದರಾಜ್, ವಿದ್ವಾನ್ ರಾಮನಾಥ ಆಚಾರ್ಯ, ವಾಸುದೇವ ಭಟ್ ಪೆರಂಪಳ್ಳಿ ಮೊದಲಾದವರು ಉಪಸ್ಥಿತರಿದ್ದರು.

    ದ.ಕ. ಜಿಲ್ಲೆಯ 7 ಕ್ಷೇತ್ರಗಳಿಂದ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಭೂಮಿ ಪೂಜೆಗಾಗಿ ದಕ್ಷಿಣ ಕನ್ನಡದ 7 ಪವಿತ್ರ ಕ್ಷೇತ್ರಗಳ ಮೃತ್ತಿಕೆ ಹಾಗೂ ಎರಡು ನದಿಗಳ ತೀರ್ಥಗಳನ್ನು ಕಳುಹಿಸಲು ವಿಶ್ವ ಹಿಂದು ಪರಿಷತ್ ತೀರ್ಮಾನಿಸಿದೆ.
    ಶ್ರೀಕ್ಷೇತ್ರ ಧರ್ಮಸ್ಥಳ, ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ, ಕಟೀಲು ಶ್ರೀ ದುರ್ಗಾಪರಮೇಶ್ವರಿ, ಮಹತೋಭಾರ ಶ್ರೀ ಮಂಗಳಾದೇವಿ, ಕದ್ರಿ ಶ್ರೀ ಮಂಜುನಾಥೇಶ್ವರ, ಪೊಳಲಿ ಶ್ರೀ ರಾಜರಾಜೇಶ್ವರಿ ಮತ್ತು ಉಳ್ಳಾಲ ಸೋಮೇಶ್ವರ ಶ್ರೀ ಸೋಮನಾಥ ದೇವಸ್ಥಾನಗಳಿಂದ ಮೃತ್ತಿಕೆ ಸಂಗ್ರಹಿಸುವುದು ಹಾಗೂ ನೇತ್ರಾವತಿ ಮತ್ತು ನಂದಿನಿ ನದಿಗಳ ತೀರ್ಥವನ್ನು ಸಂಗ್ರಹಿಸಿ ಅಯೋಧ್ಯೆಗೆ ಕಳುಹಿಸಲು ನಿರ್ಧರಿಸಲಾಗಿದೆ ಎಂದು ವಿಹಿಂಪ ವಿಭಾಗ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ತಿಳಿಸಿದ್ದಾರೆ.

    ಲಾಕ್‌ಡೌನ್ ಇರುವುದರಿಂದ ಯಾವ ರೀತಿ ಇದನ್ನು ಕಳುಹಿಸುವುದು ಎನ್ನುವುದನ್ನು ನಿರ್ಧರಿಸಬೇಕಿದೆ. ಈಗಾಗಲೇ ಸಂಗ್ರಹಿಸಲಾಗಿರುವ ಮೃತ್ತಿಕೆ ಹಾಗೂ ತೀರ್ಥಕ್ಕೆ ಜು.21ರಂದು ವಿಹಿಂಪ ಕಚೇರಿಯಲ್ಲಿ ಪೂಜೆ ಸಲ್ಲಿಸಲಾಗುವುದು ಎಂದೂ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts