More

    ಆಡಳಿತಕ್ಕೆ ಚುರುಕು ನೀಡಲು ಜನಸಂರ್ಪಕ ಸಭೆ

    ಶ್ರೀರಂಗಪಟ್ಟಣ: ಗ್ರಾಮೀಣ ಜನರ ಕೆಲಸ ಕಾರ್ಯಗಳನ್ನು ತ್ವರಿತವಾಗಿ ನಿರ್ವಹಿಸಿಕೊಡುವ ಜತೆಗೆ ಸರ್ಕಾರದ ಸೌಲಭ್ಯಗಳನ್ನು ಎಲ್ಲರ ಮನೆ ಬಾಗಿಲಿಗೂ ತಲುಪಿಸಲು ಜನಸಂಪರ್ಕ ಸಭೆಯನ್ನು ಕಾಂಗ್ರೆಸ್ ಸರ್ಕಾರ ಮುನ್ನೆಲೆಗೆ ತಂದು ಆಡಳಿತಕ್ಕೆ ಚುರುಕು ನೀಡಿದೆ ಎಂದು ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ತಿಳಿಸಿದರು.

    ತಾಲೂಕಿನ ದರಸಗುಪ್ಪೆ ಹಾಗೂ ಬಾಬುರಾಯನಕೊಪ್ಪಲು ಗ್ರಾಮ ಪಂಚಾಯಿತಿಗಳಲ್ಲಿ ಮಂಗಳವಾರ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಜನಸಂಪರ್ಕ ಸಭೆ, ಕಂದಾಯ ಅದಾಲತ್ ಹಾಗೂ ಇ-ಸ್ವತ್ತು ಆಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಪಹಣಿ ತಿದ್ದುಪಡಿ, ಜಮೀನು ಖಾತೆ, ಇ-ಸ್ವತ್ತು ಸೇರಿದಂತೆ ಇನ್ನಿತರ ಹತ್ತು ಹಲವು ಸಮಸ್ಯೆಗಳನ್ನು ಬಗೆಹರಿಸಲು ಈ ಜನಸಂಪರ್ಕ ಸಭೆ ನೆರವಾಗಲಿದೆ. ಇಲ್ಲಿ ಎಲ್ಲ ಇಲಾಖೆಗಳ ಅಧಿಕಾರಿಗಳು ನಿಮ್ಮ ಬಳಿಯೇ ಆಗಮಿಸಿ ಕೆಲಸ ನಿರ್ವಹಿಸಲಿದ್ದಾರೆ ಎಂದರು. ಜಲಧಾರೆ ಯೋಜನೆಯಡಿ ಕ್ಷೇತ್ರದ ಪ್ರತಿ ಹಳ್ಳಿಗೂ ಶುದ್ಧ ಕಾವೇರಿ ನೀರು ಪೂರೈಸಲು ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಎಂದು ಇದೇ ವೇಳೆ ತಿಳಿಸಿದರು.

    ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಗ್ರಾಮೀಣ ಜನರು ಸರ್ಕಾರಿ ಕಚೇರಿಗಳಿಗೆ ಈಗಲೂ ನಿತ್ಯ ಒಂದಿಲ್ಲೊಂದು ಸಮಸ್ಯೆಗಳನ್ನು ಹೊತ್ತು ಅಲೆಯುತ್ತಿದ್ದಾರೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜನರ ಕೆಲಸ ಕಾರ್ಯಗಳನ್ನು ಅಧಿಕಾರಿಗಳು ಮಾಡಿಕೊಡುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ. ಎಲ್ಲ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಒಗ್ಗಟ್ಟಿನಿಂದ ಕೆಲಸ ಮಾಡಿ ಜನರ ಸಮಸ್ಯೆಗೆ ಸ್ಪಂದಿಸದಬೇಕು ಎಂದು ಸೂಚಿಸಿದರು.
    ಜಿಪಂ ಸಿಇಒ ಶೇಖ್ ತನ್ವೀರ್ ಆಸೀಫ್ ಮಾತನಾಡಿ, ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಇ-ಸ್ವತ್ತು ಆಂದೋಲನ ನಡೆಸಲಾಗುತ್ತಿದ್ದು, ಪ್ರತಿ ತಿಂಗಳು 100ರ ಗುರಿ ಇಟ್ಟುಕೊಳ್ಳಲಾಗಿದೆ. ಇದರ ಯಶಸ್ಸಿಗೆ ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ಮನವಿ ಮಾಡಿದರು.

    ಸಭೆಯಲ್ಲಿ ಜಿಪಂ ಯೋಜನಾ ನಿರ್ದೇಶಕ ಸಂಜೀವಪ್ಪ, ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ, ತಾಪಂ ಇಒ ವೇಣು, ಬಿಇಒ ಅನಂತರಾಜು, ಕಿರಂಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಂಜಿನಿ, ಕಿರಂಗೂರು ಪಿಡಿಒ ಪ್ರಶಾಂತ್ ಬಾಬು, ದರಸಗುಪ್ಪೆ ಪಿಡಿಒ ಕೃಷ್ಣಮೂರ್ತಿ , ರಾಜಸ್ವ ನೀರಿಕ್ಷಕರಾದ ಭಾಸ್ಕರ್, ಮಂಜುನಾಥ್, ಇನ್ಸ್‌ಪೆಕ್ಟರ್ ಸುರೇಶ್ ಉಪಸ್ಥಿತರಿದ್ದರು.

    ನಿರ್ಗತಿಕರಿಗೆ ಹಕ್ಕುಪತ್ರ ವಿತರಿಸಿ
    ಮಿಣಜಿಬೋರನಕೊಪ್ಪಲು ಗ್ರಾಮದ ಚಿಕ್ಕಲಿಂಗೇಗೌಡ ಮಾತನಾಡಿ, ಸಿಡಿಎಸ್ ಉಪನಾಲೆ ಕುಂಬಾರಗುಂಡಿ ಪಕ್ಕದ ನೀರಾವರಿ ಇಲಾಖೆಯ ಜಮೀನಿನಲ್ಲಿ ಗ್ರಾಮದ ಕೆಲ ನಿರ್ಗತಿಕರು ಮನೆ ನಿರ್ಮಿಸಿಕೊಂಡಿದ್ದಾರೆ. ಆದರೆ ಇವರಿಗೆ ನೀರಾವರಿ ಇಲಾಖೆ ಯಾವುದೇ ಅನುಮತಿ ಹಾಗೂ ಹಕ್ಕುಪತ್ರ ವಿತರಿಸದ ಕಾರಣ ಅತಂತ್ರರಾಗಿದ್ದಾರೆ. ಆದರೆ ಕಿರಂಗೂರು ಸರ್ವೇ ನಂ.193 ರಲ್ಲಿ 100 ಗುಂಟೆ ಹುಲ್ಲುಬನಿ ಸರ್ಕಾರಿ ಭೂಮಿ ಇದ್ದರೂ ಬಡ ಕುಟುಂಬಗಳಿಗೆ ನಿವೇಶನ ಒದಗಿಸಿಲ್ಲ ಎಂದು ಜಿಲ್ಲಾಡಳಿತದ ಗಮನ ಸೆಳೆದರು. ನೀರಾವರಿ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ಪರಿಶೀಲಿಸಿ ವರದಿ ನೀಡಬೇಕು ಶಾಸಕರು ಸೂಚಿಸಿದರು.

    ದೂರುಗಳ ಸುರಿಮಳೆ
    ಜನಸಂಪರ್ಕ ಸಭೆಯಲ್ಲಿ ನಾಗರಿಕರು ವಿವಿಧ ಸಮಸ್ಯೆಗಳನ್ನು ತೆರೆದಿಟ್ಟರು. ಗ್ರಾಮ ಸಮೀಪದ ಪಿಎಸ್‌ಎಸ್‌ಕೆ ಸಕ್ಕರೆ ಕಾರ್ಖಾನೆಯಿಂದ ನಿತ್ಯ ಧೂಳು ಬರುತ್ತಿದೆ. ಜತೆಗೆ ಕಾರ್ಖಾನೆಯು ರಾಸಾಯನಿಕ ನೀರನ್ನು ನಾಲೆಗೆ ಬಿಡುತ್ತಿದ್ದು, ಈ ನೀರನ್ನು ಕುಡಿಯುವ ಜನ-ಜಾನುವಾರುಗಳು ಚರ್ಮದ ಕಾಯಿಲೆ ಸೇರಿದಂತೆ ಇತರ ವ್ಯಾಧಿಗೆ ಸಿಲುಕಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು. ಗ್ರಾಮಕ್ಕೆ ಸಮರ್ಪಕವಾಗಿ ಬಸ್ ಸೇವೆ ಇಲ್ಲದೆ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ತೆರಳಲು ಹಾಗೂ ನೌಕರರು ಕೆಲಸಕ್ಕೆ ಹೋಗಲು ಪರದಾಡುತ್ತಿದ್ದಾರೆ. ಸಣ್ಣಪುಟ್ಟ ಅಂಗಡಿಗಳಲ್ಲೂ ಮದ್ಯ ಮಾರಾಟ ಮಿತಿ ಮೀರಿದ್ದು, ಯುವ ಜನರು ಸೇರಿದಂತೆ ಗ್ರಾಮಸ್ಥರು ವ್ಯಸನಕ್ಕೆ ತುತ್ತಾಗುತ್ತಿದ್ದಾರೆ. ಈ ಬಗ್ಗೆ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಕೋರಿದರು. ಉಳಿದಂತೆ ಸಶ್ಮಾನ, ಕೆಲ ಸರ್ಕಾರಿ ಭೂಮಿಗಳ ಒತ್ತುವರಿ ಪರಿಶೀಲನೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಗ್ರಾಮಸ್ಥರು ಅಧಿಕಾರಿಗಳ ಮುಂದಿಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts