More

    ಮಳೆಯಿಂದ ಜನಜೀವನ ಅಸ್ತವ್ಯಸ್ತ

    ರಾಣೆಬೆನ್ನೂರ: ಶನಿವಾರ ರಾತ್ರಿ ನಗರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಥಗೊಂಡಿದ್ದು, ಜನತೆ ಊಟ ಹಾಗೂ ರಾತ್ರಿಯಿಡಿ ನಿದ್ದೆ ಇಲ್ಲದೆ ನರಕಯಾತನೆ ಅನುಭವಿಸುವಂತಾಯಿತು.

    ಕೊಟ್ಟೂರೇಶ್ವರ ನಗರ, ಚೌಡೇಶ್ವರಿ ಬಡಾವಣೆ, ವಿಕಾಸ ನಗರ, ಗೌರಿಶಂಕರ ನಗರ, ಪಂಪಾನಗರ ನೂರಾರು ಮನೆಗಳಿಗೆ ಮಳೆ ಹಾಗೂ ಚರಂಡಿ ನೀರು ನುಗ್ಗಿ ರಾತ್ರಿಯಿಡಿ ಜನತೆ ನಿದ್ದೆ ಮಾಡದ ಸ್ಥಿತಿ ನಿರ್ಮಾಣವಾಗಿತ್ತು. ಮನೆಯಲ್ಲಿನ ಪಾತ್ರೆ, ಟಿವಿ, ಬಟ್ಟೆ, ಪಠ್ಯಪುಸ್ತಕ ಎಲ್ಲವೂ ನೀರಿನಲ್ಲಿ ತೋಯ್ದು ಹೋಗಿದ್ದು, ಅಲ್ಲಿನ ನಿವಾಸಿಗಳು ಅಕ್ಕಪಕ್ಕದ ಬಡಾವಣೆಗಳಲ್ಲಿರುವ ಪರಿಚಯಸ್ಥರ ಮನೆಯಲ್ಲಿ ಆಶ್ರಯ ಪಡೆದುಕೊಂಡರು.

    ನಗರದ ಮೇಡ್ಲೇರಿ ರಸ್ತೆಯ ಚೌಡೇಶ್ವರಿ ದೇವಸ್ಥಾನದ ಮುಂಭಾಗದ ರಸ್ತೆಯಲ್ಲಿ ರಾಜಕಾಲುವೆ ನೀರು ಹರಿದ ಪರಿಣಾಮ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಅಕ್ಕಪಕ್ಕದ ಮನೆಗಳಿಗೆ ನೀರು ನುಗ್ಗಿದ್ದರಿಂದ ಮನೆ ಬಿಟ್ಟು ಬೇರೆಡೆ ಹೋಗಿ ವಾಸ ಮಾಡಿದರು. ದೊಡ್ಡಕೆರೆ ಕೋಡಿ ಬಿದ್ದ ಪರಿಣಾಮ ಕೊಟ್ಟೂರೇಶ್ವರ ನಗರದಲ್ಲಿನ 20ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿ ಕುಸಿದು ಬಿದ್ದಿವೆ. ಅಡವಿ ಆಂಜನೇಯ ಬಡಾವಣೆಯ ರಸ್ತೆ ಸಂಚಾರ ಕೂಡ ಸ್ಥಗಿತಗೊಂಡಿದೆ. ಕೊಟ್ಟೂರೇಶ್ವರ ಮಠದ ಮೈದಾನ ಸಂಪೂರ್ಣ ನೀರಿನಿಂದ ಆವರಿಸಿಕೊಂಡಿದೆ.

    ಕಾಳಜಿ ಕೇಂದ್ರದಲ್ಲಿ ಆಶ್ರಯ: ತಾಲೂಕು ಆಡಳಿತದ ವತಿಯಿಂದ ಕೊಟ್ಟೂರೇಶ್ವರ ಮಠದ ಹಿಂಭಾಗದಲ್ಲಿ ಕಾಳಜಿ ಕೇಂದ್ರ ತೆರೆದಿದ್ದು, 160ಕ್ಕೂ ಅಧಿಕ ನಿರಾಶ್ರಿತರಿಗೆ ಊಟ, ವಸತಿ ವ್ಯವಸ್ಥೆ ಮಾಡಲಾಗಿದೆ. ಸ್ಥಳಕ್ಕೆ ಶಾಸಕ ಅರುಣಕುಮಾರ ಪೂಜಾರ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ನರಸಗೊಂಡರ, ತಹಸೀಲ್ದಾರ್ ಶಂಕರ ಜಿ.ಎಸ್. ಭೇಟಿ ನೀಡಿ ಪರಿಶೀಲಿಸಿದರು.

    ಕೊಳೆತು ಹೋದ ತರಕಾರಿ: ಭಾನುವಾರ ರಾಣೆಬೆನ್ನೂರ ನಗರದಲ್ಲಿ ಸಂತೆಯ ದಿನವಾಗಿದ್ದರಿಂದ ಒಳ್ಳೆಯ ವ್ಯಾಪಾರ ಆಗಲಿದೆ ಎಂದು ರೈತರು ಶನಿವಾರ ರಾತ್ರಿಯೇ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ತರಕಾರಿ ತಂದಿದ್ದರು. ಆದರೆ, ಭಾರಿ ಮಳೆ ಸುರಿದ ಪರಿಣಾಮ ತರಕಾರಿ ಕೊಳೆತು ಹೋಗಿ, ರೈತರು ಅಪಾರ ಪ್ರಮಾಣದ ನಷ್ಟ ಅನುಭವಿಸಿದರು.

    ಗ್ರಾಮೀಣರ ಪರದಾಟ: ನಗರದಲ್ಲಿ 3, ತಾಲೂಕಿನ ಕರೂರ ಗ್ರಾಮದಲ್ಲಿ 2, ತುಮ್ಮಿನಕಟ್ಟಿ 1, ನಿಟ್ಟೂರ 1, ಜೋಯಿಸರಹರಳಹಳ್ಳಿಯಲ್ಲಿ 1 ಸೇರಿ ತಾಲೂಕಿನಲ್ಲಿ 10ಕ್ಕೂ ಅಧಿಕ ಮನೆಗಳು ಶನಿವಾರ ರಾತ್ರಿ ಸುರಿದ ಮಳೆಗೆ ಸಂಪೂರ್ಣ ಬಿದ್ದು ಹೋಗಿವೆ. ತಾಲೂಕಿನ ಕಜ್ಜರಿ ಗ್ರಾಮದ ಶಾಂತೇಶ ಭಜಂತ್ರಿ ಎಂಬುವರ ಮನೆ ಕುಸಿದು ಬಿದ್ದ ಪರಿಣಾಮ 12 ಕೋಳಿಗಳು ಮೃತಪಟ್ಟಿವೆ. ಕರೂರ ಗ್ರಾಮದ ಕೈಲಾಸ ನಗರದಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿದ ಪರಿಣಾಮ ಜನತೆ ರಾತ್ರಿಯಿಡಿ ನೀರನ್ನು ಹೊರಹಾಕಿದ್ದಾರೆ. ಅಲ್ಲದೆ, ಮಕ್ಕಳನ್ನು ಕರೆದುಕೊಂಡು ಮಂಚದ ಮೇಲೆ ಕುಳಿತುಕೊಳ್ಳುವ ಸ್ಥಿತಿ ನಿರ್ವಣವಾಗಿತ್ತು. ಚಳಗೇರಿ ಗ್ರಾಮದಲ್ಲಿ ನೀರು ಮನೆಗಳಿಗೆ ನುಗ್ಗಿ ಜನಜೀವನ ಅಸ್ತವ್ಯಸ್ಥಗೊಂಡಿದೆ. ಅಲ್ಲದೆ ಚಳಗೇರಿ ಹಾಗೂ ಕರೂರ ಗ್ರಾಮ ವ್ಯಾಪ್ತಿಯ 150ಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಮೆಕ್ಕೆಜೋಳ, ಹತ್ತಿ, ರೇಷ್ಮೆ ಬೆಳೆ ಸಂಪೂರ್ಣ ನೀರಿನಲ್ಲಿ ಕೊಚ್ಚಿ ಹೋಗಿದೆ ಎಂದು ತಹಸೀಲ್ದಾರ್ ಶಂಕರ ಜಿ.ಎಸ್. ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts