More

    ಮಾವಿನ ಪರಿಮಳ ಕ್ಕೆ ಮನಸೋತ ಜನ !

    ಕುಮಟಾ: ಜಿಲ್ಲೆಯಲ್ಲಿ ಈ ಭಾರಿ ಮಾವಿನ ಇಳುವರಿ ಕಡೆಮೆಯಾಗಿ ದರದಲ್ಲಿ ಅಪಾರ ಏರಿಕೆಯಾಗಿದೆ. ಆದರೆ, ಹಣ್ಣಿನ ಪರಿಮಳ , ರುಚಿಗೆ ಮನಸೋತ ಜನ ತುಟ್ಟಿಯಾದರೂ ಮಾವು ಸವಿಯಬೇಕೆಂದು ಖರೀದಿಗೆ ದುಂಬಾಲು ಬಿದ್ದಿದ್ದಾರೆ.

    ಪಟ್ಟಣದ ಗಿಬ್ ಸರ್ಕಲ್ ಹಾಗೂ ಮುಖ್ಯ ಬಸ್ ನಿಲ್ದಾಣದ ಬಳಿ ಮಾವಿನಹಣ್ಣುಗಳ ಮಾರಾಟ ನಿತ್ಯ ಜೋರಾಗಿ ನಡೆಯುತ್ತಿದ್ದು, ಜಿಲ್ಲೆಯ ಕರಿ ಈಶಾಡಿ, ಮಾಣಿಬಟ್ಟ ಮುಂತಾದವುಗಳ ಜತೆಗೆ ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಬಂದ ಆಪೂಸ್, ಪೈರಿ, ತೋತಾಪುರಿ, ರತ್ನಗಿರಿ, ನೆಕ್ಕರೆ, ಕಲ್ಯಾಣ ಮುಂತಾದ ಬಗೆಬಗೆಯ ಮಾವಿನ ಹಣ್ಣುಗಳ ಬುಟ್ಟಿಗಳ ಸಾಲು ಸಾಲು ನೋಡಲು ಸಿಗುತ್ತಿದೆ.

    ಮಾವಿನ ಹಣ್ಣಿನ ದರ ವಿಚಾರಿಸಲು ಹೊರಟವರಿಗೆ ಹಣ್ಣುಗಳ ಘಮ ಖರೀದಿಗೆ ಪ್ರೇರೇಪಿಸುತ್ತಿದೆ. ಈ ಪೈಕಿ ಕರಿ ಈಶಾಡು ಗ್ರಾಹಕರ ಅಚ್ಚುಮೆಚ್ಚಿನ ಖರೀದಿಯಾಗಿದೆ.

    ಪ್ರತಿ ವರ್ಷಕ್ಕಿಂತ ಶೇ. 40-45 ರಷ್ಟು ಇಳುವರಿ ಕಡಿಮೆಯಾಗಿರುವುದು ಮಾವಿನ ಹಣ್ಣಿನ ದರ ಏರಿಕೆಗೆ ಕಾರಣ ಎಂದರೂ ಪ್ರತಿ ವರ್ಷ ಮಾವು ದುಬಾರಿಯೇ ಎಂಬುದು ಕೆಲ ಗ್ರಾಹಕರ ಅನಿಸಿಕೆ.

    ಕರಿ ಈಶಾಡು ದೊಡ್ಡ ಹಣ್ಣುಗಳು ಡಜನ್‌ಗೆ 300 ರೂ., ಮಧ್ಯಮ ಗಾತ್ರದವು 200 ರೂ. ಹಾಗೂ ಸಣ್ಣ ಗಾತ್ರದ ಹಣ್ಣು ರೂ. 80 ರಿಂದ ರೂ. 100ರಂತೆ ಮಾರಾಟವಾಗುತ್ತಿವೆ.

    ಸ್ಥಳೀಯ ತಳಿಗಳಲ್ಲಿ ಪ್ರಮುಖವಾದ ಮುಸ್ರಾದ್ ಮಾವು ಕೂಡ ಮಾರುಕಟ್ಟೆಯಲ್ಲಿದ್ದು ಡಜನ್‌ಗೆ 330ರಿಂದ 450ರವರೆಗೂ ಇದೆ. ಆಪೂಸ್ 300 ರಿಂದ 350 ರೂ. ವರೆಗೆ ಮಾರಾಟವಾಗುತ್ತಿದೆ.

    ಕರಿ ಈಶಾಡಿ ಇಳುವರಿ ಕೊರತೆಯಿಂದಾಗಿ ದರ ನಿಗದಿ ಕಷ್ಟವಾಗುತ್ತಿದೆ. ಅಂಕೋಲಾದಿಂದ ತಂದು ಮಾರಾಟ ಮಾಡುತ್ತಿದ್ದೇವೆ. ದರ ಹೆಚ್ಚು ಎಂದು ಗ್ರಾಹಕರು ಖರೀದಿಸಲು ಉತ್ಸಾಹ ತೋರುತ್ತಿಲ್ಲ. — ಮಹಾಲಕ್ಷ್ಮೀ ಗೌಡ, ಮಾವಿನ ಹಣ್ಣಿನ ವ್ಯಾಪಾರಿ

    ಮಾವಿನ ಹಣ್ಣಿನ ಸ್ವಾದ ಬೇರೆ ಯಾವ ಹಣ್ಣಲ್ಲೂ ಸಿಗುವುದಿಲ್ಲ. ಮಾವು ಎಲ್ಲರಿಗೂ ಇಷ್ಟ. ಹೀಗಾಗಿ ದರ ಹೆಚ್ಚಾದರೂ ಖರೀದಿಸಿ ಸವಿಯುವುದು ಅನಿವಾರ್ಯ.
    — ಗಣಪತಿ ಹೆಗಡೆ, ಗ್ರಾಹಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts