More

    ಜನಪ್ರತಿನಿಧಿಗಳು ಕದ್ದುಮುಚ್ಚಿ ಮಾಡುವುದನ್ನೂ ತಿಳಿಯುವ ಹಕ್ಕು ಮತದಾರರಿಗಿದೆ ಎಂದ ಹೈಕೋರ್ಟ್

    ನವದೆಹಲಿ: ತಾವು ಆಯ್ಕೆ ಮಾಡಿ ಕಳುಹಿಸಿರುವ ಜನಪ್ರತಿನಿಧಿಗಳು ಕದ್ದುಮುಚ್ಚಿ ಮಾಡುವುದನ್ನು ತಿಳಿಯುವ ಅಧಿಕಾರ ಪ್ರತಿಯೊಬ್ಬ ಮತದಾರನಿಗೂ ಇದೆ ಎಂದು ದೆಹಲಿ ಹೈಕೋರ್ಟ್​ ಹೇಳಿದೆ.

    ಮುಚ್ಚಿದ ಬಾಗಿಲುಗಳ ಹಿಂದೆ ಅವರು ಯಾರನ್ನು ಭೇಟಿಯಾಗುತ್ತಿದ್ದಾರೆ ಮತ್ತು ಯಾರೊಂದಿಗೆ ಮಾತನಾಡುತ್ತಿದ್ದಾರೆಂದು ತಿಳಿಯುವ ಹಕ್ಕು ಪ್ರಜೆಗಳಿಗೆ ಇದೆ ಎಂದು ನ್ಯಾಯಮೂರ್ತಿ ರಾಜೀವ್ ಸಹಾಯ್​ ಎಂಡ್ಲೋ ನೇತೃತ್ವದ ಪೀಠ ಹೇಳಿದೆ.

    ಇದನ್ನೂ ಓದಿ: ಗಿಳಿ ಹಾರಿಹೋದುದಕ್ಕೆ ಕೆಲಸದ ಬಾಲಕಿಯನ್ನು ಹೊಡೆದು ಸಾಯಿಸಿದ ದಂಪತಿ!

    ಪುರುಷನೊಬ್ಬನ ಜತೆಗಿರುವ ತಮ್ಮ ಫೋಟೋ ಒಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ತಿರುಚಿ ಹಾಕಲಾಗುತ್ತಿದ್ದು, ಇದರಿಂದ ತಮ್ಮ ಚಾರಿತ್ರ್ಯವಧೆಯಾಗಿದೆ ಎಂದು ದೂರಿ ಎಐಎಡಿಎಂಕೆ ರಾಜ್ಯಸಭಾ ಸದಸ್ಯೆಯಾಗಿದ್ದ ಸಂದರ್ಭದಲ್ಲಿ ಶಶಿಕಲಾ ಪುಷ್ಪಾ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಕೋರ್ಟ್​ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

    ಶಶಿಕಲಾ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿಗಳು, ಸಾಮಾಜಿಕ ಮಾಧ್ಯಮದಂಥ ದೈತ್ಯರ ವಿರುದ್ಧ ರಾಜಕಾರಣಿಗಳು ಯಾವುದೇ ರೀತಿಯ ಪರಿಹಾರ ಕೋರುವುದಾಗಲೀ ಅಥವಾ ಜನರಿಗೆ ರಾಜಕಾರಣಿಗಳ ಫೇಸ್​ಬುಕ್​ ಖಾತೆಯ ಪ್ರವೇಶವನ್ನು ನಿರ್ಬಂಧಿಸುವಂತೆಯಾಗಲೀ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ. ಅಷ್ಟೇ ಅಲ್ಲದೇ, ಫೇಸ್​ಬುಕ್​ ಐಎನ್​ಸಿ, ಗೂಗಲ್​ ಎಲ್​ಎಲ್​ಸಿ ಹಾಗೂ ಯೂಟ್ಯೂಬ್​ ಎಲ್​ಎಲ್​ಸಿಗೆ ತಲಾ ಎರಡು ಲಕ್ಷ ರೂಪಾಯಿಗಳನ್ನು ಪಾವತಿಸುವಂತೆ ನ್ಯಾಯಮೂರ್ತಿಗಳು ಶಶಿಕಲಾ ಅವರಿಗೆ ನಿರ್ದೇಶಿಸಿದ್ದಾರೆ.

    ‘ಪುರುಷನ ಜತೆಗಿರುವ ಫೋಟೋ ತಿರುಚಿ ಹಾಕಿರುವ ಕುರಿತು ಯಾವುದೇ ವಿಚಾರಣೆ ನಡೆಸುವ ಅಗತ್ಯವಿಲ್ಲ. ಒಂದು ವೇಳೆ ನಕಲಿ ಫೋಟೋ ಅಥವಾ ತಿರುಚಿರುವ ಫೋಟೋ ಹಾಕಿದ್ದೇ ನಿಜವಾದಲ್ಲಿ, ಅದನ್ನು ಹಾಕಿದ ವ್ಯಕ್ತಿಗಳನ್ನು ಅರ್ಜಿಯಲ್ಲಿ ಪ್ರತಿವಾದಿಯನ್ನಾಗಿಸುವುದು ಅತ್ಯಗತ್ಯ. ಅಷ್ಟೇ ಅಲ್ಲದೇ ಆ ಫೋಟೋದಲ್ಲಿ ಇರುವ ವ್ಯಕ್ತಿಯನ್ನು ಕೂಡ ಅರ್ಜಿಯಲ್ಲಿ ಪ್ರತಿವಾದಿಯಾಗಿಸಿಲ್ಲ. ಆದ್ದರಿಂದ ಯಾವುದೇ ಕಾರಣಕ್ಕೂ ಅರ್ಜಿಯನ್ನು ಮಾನ್ಯ ಮಾಡಲು ಸಾಧ್ಯವಿಲ್ಲ’ ಎಂದು ಪೀಠ ಹೇಳಿದೆ.

    ಇದನ್ನೂ ಓದಿ: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ನೂತನ ಆಯುಕ್ತರಾಗಿ ಡಾ. ಮಹಾದೇವ್​

    ಅಷ್ಟೇ ಅಲ್ಲದೇ ಒಬ್ಬ ರಾಜಕಾರಣಿಯಾಗಿ ಶಶಿಕಲಾ ಅವರು ಅನೇಕ ಜನರನ್ನು ಭೇಟಿಯಾಗುವುದು ಸಹಜ. ಆದರೆ ಪುರುಷನೊಬ್ಬನ ಜತೆಗಿರುವ ಫೋಟೋ ವೈರಲ್​ ಆದರೆ ಅದರಿಂದ ಇವರ ಘನತೆಗೆ ಹೇಗೆ ಕುಂದು ಬಂದಿತು ಎಂಬ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿಯನ್ನೂ ನೀಡಿಲ್ಲ. ಆದ್ದರಿಂದ ಅರ್ಜಿಯನ್ನು ಮಾನ್ಯ ಮಾಡಲು ಆಗುವುದಿಲ್ಲ ಎಂದು ಕೋರ್ಟ್​ ಹೇಳಿದೆ.

    ಈ ಅರ್ಜಿಯನ್ನು 2016ರಲ್ಲಿ ಹಾಕಲಾಗಿತ್ತು. ಆ ಸಂದರ್ಭದಲ್ಲಿ ಅವರು ಎಐಎಡಿಎಂಕೆ ರಾಜ್ಯಸಭಾ ಸದಸ್ಯೆ ಆಗಿದ್ದರು. ಆದರೆ ಅವರನ್ನು ನಂತರದಲ್ಲಿ ಉಚ್ಛಾಟಿಸಲಾಗಿತ್ತು. ಕಳೆದ ಏಪ್ರಿಲ್​ನಲ್ಲಿ ಶಶಿಕಲಾ ಪುಷ್ಪಾ ಬಿಜೆಪಿ ಸೇರಿದ್ದಾರೆ.

    ವಕೀಲ ಡಾ.ಬಿ.ರಾಮಸ್ವಾಮಿ ಅವರು ತಮ್ಮ ಮೊದಲ ಪತ್ನಿಗೆ ವಿಚ್ಛೇದನ ನೀಡುವ ಮೊದಲೇ ಶಶಿಕಲಾ ಪುಷ್ಪಾ ಅವರು ರಾಮಸ್ವಾಮಿ ಅವರನ್ನು ವಿವಾಹವಾಗಿರುವ ಆರೋಪವಿದೆ. (ಏಜೆನ್ಸೀಸ್​)

    ಆಪ್ತ ಸಲಹೆ: ಅಹಂನಿಂದ ಹುಡುಗಿಯರನ್ನ ತಿರಸ್ಕರಿಸಿದ ಮಗ, ಈಗ ಮದ್ವೆಯಾಗದೇ ಕೂಗಾಡ್ತಾನೆ, ಏನು ಪರಿಹಾರ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts