More

    ಜಾಕ್‌ವೆಲ್‌ಗೆ ಮುತ್ತಿಗೆ ಹಾಕಿದ ರೈತರು

    ಬಾಗಲಕೋಟೆ: ಹುನಗುಂದ ತಾಲೂಕಿನ ಮರೋಳ-ಹಾವನೂರ ಮಧ್ಯದಲ್ಲಿರುವ ಜಿಂದಾಲ್‌ಗೆ ನೀರು ಹರಿಸುವ ಜಾಕ್‌ವೆಲ್‌ಗೆ ಆ ಭಾಗದ ಹತ್ತಾರು ಗ್ರಾಮಗಳ ರೈತರು ಮಂಗಳವಾರ ಸಂಜೆ ಮುತ್ತಿಗೆ ಹಾಕಿದ್ದಲ್ಲದೆ, ಜಾಕ್‌ವೆಲ್ ತಮ್ಮ ವಶಕ್ಕೆ ತೆಗೆದುಕೊಂಡು ರಾತ್ರಿ ಅಲ್ಲಿಯೇ ಠಿಕಾಣಿ ಹೂಡಿದ್ದಾರೆ.

    ರೈತರ ಬೆಳೆಗಳಿಗೆ ನೀರು ಹರಿಸುವುದನ್ನು ನಿಲ್ಲಿಸಿರುವ ಅಧಿಕಾರಿಗಳು, ಜಿಂದಾಲ್‌ಗೆ ಮಾತ್ರ ನೀರು ಹರಿದು ಹೋಗುತ್ತಿದೆ. ದಾಖಲೆಗಳಲ್ಲಿ ನೀರು ಹೋಗುತ್ತಿಲ್ಲ ಎಂದು ತೋರಿಸಿದರೂ ನೀರು ಮಾತ್ರ ಹೋಗುತ್ತಿದೆ ಎನ್ನುವುದು ರೈತರ ಆರೋಪ. ಇದೇ ಕಾರಣಕ್ಕೆ ಮಂಗಳವಾರ ಹುನಗುಂದದಲ್ಲಿ ಪ್ರತಿಭಟನೆ ನಡೆಸಿದ ರೈತರು, ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದ್ದರು. ಬಳಿಕ ಅಲ್ಲಿಂದ ನೇರವಾಗಿ ಮರೋಳ ಬಳಿ ಇರುವ ಜಾಕ್‌ವೆಲ್‌ಗೆ ಮುತ್ತಿಗೆ ಹಾಕಿದ್ದಾರೆ.

    ನಾರಾಯಣಪುರ ಹಿನ್ನೀರಿನಿಂದ ಆ ಭಾಗದ ರೈತರಿಗೆ ಹಾಗೂ ಖಾಸಗಿ ಕಂಪನಿಗೆ ನೀರು ಹರಿಸಲಾಗುತ್ತಿದೆ. ಡಿಸೆಂಬರ್ 6 ರಿಂದ ರೈತರಿಗೆ ನೀರು ಹರಿಸುವುದನ್ನು ಈ ಮೊದಲೇ ತಿಳಿಸಿದಂತೆ ಬಂದ್ ಮಾಡಲಾಗಿದೆ. ಆದರೆ, ಜಿಂದಾಲ್‌ಗೆ ಮಾತ್ರ ನೀರು ಯಥೇಚ್ಛವಾಗಿ ಹರಿದು ಹೋಗುತ್ತಿದೆ ಎನ್ನುವುದು ರೈತರ ಆರೋಪ. ಮಂಗಳವಾರ ಸಂಜೆ ಜಾಕ್‌ವೆಲ್ ಕಾಂಪೌಂಡ್ ಗೇಟ್ ತೆಗೆದು ಒಳನುಗ್ಗಿದ್ದಾರೆ. ಅಲ್ಲಿದ್ದ ಖಾಸಗಿ ಕಂಪನಿ ಸಿಬ್ಬಂದಿ ತಮ್ಮ ಜತೆಗೆ ಇರುವಂತೆ ಸೂಚನೆ ನೀಡಿ ಅವರು ಯಾರೂ ಹೊರಹೋಗದಂತೆ ಮಾಡಿದ್ದಾರೆ. ಜಾಕ್‌ವೆಲ್ ತಮ್ಮ ವಶಕ್ಕೆ ಪಡೆದಿರುವ ರೈತರು, ಸ್ಥಳಕ್ಕೆ ಕಂಪನಿ ಅಧಿಕಾರಿಗಳು ಹಾಗೂ ತಾಲೂಕು ಆಡಳಿತ ಅಧಿಕಾರಿಗಳು ಆಗಮಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ. ನೂರಕ್ಕೂ ಹೆಚ್ಚು ರೈತರು ಇದ್ದು, ಸ್ಥಳದಲ್ಲೇ ರಾತ್ರಿ ಅಡುಗೆ ಮಾಡಿಕೊಂಡು ಊಟ ಮಾಡಿ, ಅಲ್ಲಿಯೇ ವಾಸ್ತವ್ಯ ಮಾಡಿದ್ದಾರೆ.

    ಹುನಗುಂದ, ಇಳಕಲ್ಲ, ಬೆಳಗಲ್ಲ, ಇದ್ದಲಗಿ, ಧನ್ನೂರ, ಹಾವನೂರು, ಮರೋಳ, ಹುಲ್ಲಳ್ಳಿ, ಜಾಕಮಲದಿನ್ನಿ, ಚಿಂತಕಮಲದಿನ್ನಿ ಸೇರಿ ಹತ್ತಿಪ್ಪತ್ತು ಗ್ರಾಮಗಳ ರೈತರು ಜಾಕ್‌ವೆಲ್‌ನಲ್ಲಿ ರಾತ್ರಿ ಠಿಕಾಣಿ ಹೂಡಿದ್ದಾರೆ. ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ವಿವಿಧ ಗ್ರಾಮಗಳ ನೂರಾರು ರೈತರು ಜಾಕ್‌ವೆಲ್‌ನಲ್ಲಿ ವಾಸ್ತವ್ಯ ಮಾಡಿದ್ದಾರೆ. ವಿವಿಧ ಗ್ರಾಮಗಳ ರೈತರಾದ ಮುತ್ತಣ್ಣ ನಂದವಾಡಗಿ, ಮಹಬೂಬ ಹಾವರಗಿ, ಗುರು ಗಾಣಗೇರ, ಪ್ರದೀಪ ಸೂಡಿ, ಅಮರೇಶ ನಾಡಗೌಡ, ಮಲಿಕಸಾಬ ಕಡಿವಾಲ, ಬಸವರಾಜ ನಾಡಗೌಡ, ಪ್ರಲ್ಹಾದ್ ಹುದ್ದಾರ, ಬಸವರಾಜ ಮನಗೂಳಿ ಸೇರಿದಂತೆ ಅನೇಕರು ಸ್ಥಳದಲ್ಲೇ ಠಿಕಾಣಿ ಹೂಡಿದ್ದಾರೆ.

    ರಾತ್ರಿ ವೇಳೆ ಸ್ಥಳಕ್ಕೆ ಬಂದ ಅಧಿಕಾರಿಗಳು

    ರಾತ್ರಿ 9.30 ಗಂಟೆ ಬಳಿಕ ಸ್ಥಳಕ್ಕೆ ನಾರಾಯಣಪುರ ಜಲಾಶಯದ ಎಇಇ ನಾಗೇಶ್, ಸೆಕ್ಷನ್ ಆಫೀಸರ್ ಶಿವರಾಜ ಪಾಟೀಲ ಆಗಮಿಸಿ ರೈತರ ಜತೆ ಮಾತುಕತೆ ನಡೆಸಿದ್ದಲ್ಲದೆ, ಜಿಂದಾಲ್‌ಗೆ ನೀರು ಹರಿಸುವ ಬಗ್ಗೆ ಸರ್ಕಾರದ ಆದೇಶಗಳನ್ನು ಸಹ ರೈತರಿಗೆ ತೋರಿಸಿದ್ದಾರೆ. ಈ ವೇಳೆ ಅಧಿಕಾರಿಗಳನ್ನು ಫೋನ್‌ನಲ್ಲಿ ಸಂಪರ್ಕಿಸಿದ ವಿಜಯವಾಣಿಗೆ ಜಿಂದಾಲ್‌ಗೆ ನೀರು ಬಿಡುವಂತೆ ಸರ್ಕಾರದ ಆದೇಶ ಇರುವುದನ್ನು ರೈತರಿಗೆ ತೋರಿಸಿದ್ದೇವೆ. ಆದರೆ, ರೈತರು ನೀರು ಹರಿಸಬಾರದು ಎಂದು ಪಟ್ಟು ಹಿಡಿದಿದ್ದಾರೆ. ಸದ್ಯ ನಾವು ನೀರು ಬಿಡುವುದನ್ನು ಬಂದ್ ಮಾಡಿದ್ದೇವೆ. ಇಲ್ಲಿನ ಘಟನೆ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು. ಅವರ ಸೂಚನೆಯಂತೆ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು. ಆದರೆ, ರೈತರು ಮಾತ್ರ ಪಟ್ಟು ಸಡಿಲಿಸದೆ ಹೋರಾಟ ಮುಂದುವರಿಸಿದ್ದಾರೆ.

    ಮರೋಳ ಏತ ನೀರಾವರಿ ವ್ಯಾಪ್ತಿಯಲ್ಲಿ ಸಾಕಷ್ಟು ರೈತರು ಲಕ್ಷಾಂತರ ರೂ. ಖರ್ಚು ಮಾಡಿ ಮೆಣಸಿನಕಾಯಿ ಬೆಳೆದಿದ್ದಾರೆ. ಇನ್ನು ಎರಡು ತಿಂಗಳು ಬೆಳೆ ರಕ್ಷಣೆ ಮಾಡಬೇಕಿದೆ. ನೀರು ಸಿಗದಿದ್ದರೆ ಲಕ್ಷಾಂತರ ರೂ. ಲಾಸ್ ಆಗುತ್ತದೆ. ರೈತರಿಗೆ ನೀರು ಇಲ್ಲ ಎನ್ನುವ ಅಧಿಕಾರಿಗಳು ಜಿಂದಾಲ್‌ಗೆ ಮಾತ್ರ ನೀರು ಹರಿಬಿಡುತ್ತಿದ್ದಾರೆ.
    ಮುತ್ತಣ್ಣ ನಂದವಾಡಗಿ, ಮರೋಳ ಗ್ರಾಮದ ರೈತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts