More

    ಆರೋಪಿತ ಪಿಡಿಒ ರವಿಕುಮಾರ್ ನೇಣಿಗೆ ಶರಣು ; ಅಕ್ರಮ ಇ-ಖಾತೆ ಹಗರಣ

    ರಾಮನಗರ: ಕೆಎಎಸ್ ಅಧಿಕಾರಿಯಾಗಿ ಅಧಿಕಾರ ಸ್ವೀಕಾರ ಮಾಡಬೇಕಿದ್ದ ಪಿಡಿಒ ಒಬ್ಬರು ಅಕ್ರಮ ಇ-ಖಾತೆ ಹಗರಣದಲ್ಲಿ ಸಿಲುಕಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

    ರಾಜ್ಯದಲ್ಲಿ ಹಲವಾರು ಅಕ್ರಮ ನೇಮಕಾತಿ ಪ್ರಕರಣಗಳು ಸದ್ದು ಮಾಡುತ್ತಿರುವ ನಡುವೆಯೇ ಅಕ್ರಮ ಇ-ಖಾತೆ ಹಗರಣದ ತನಿಖೆಯೂ ಸದ್ದಿಲ್ಲದೆ ನಡೆದಿತ್ತು. ಇದರಲ್ಲಿ ಭಾಗಿಯಾಗಿದ್ದಾರೆ ಎನ್ನುವ ಆರೋಪ ಹೊತ್ತಿದ್ದ ಬಿಡದಿಯ ಭೈರಮಂಗಲ ಗ್ರಾಮ ಪಂಚಾಯಿತಿ ಪಿಡಿಒ ಆಗಿದ್ದ ಕನಕಪುರ ತಾಲೂಕಿನ ಜಂಪಾಲೇಗೌಡನದೊಡ್ಡಿಯ ಜೆ.ಡಿ. ರವಿಕುಮಾರ್ (41) ಕನಕಪುರ ತಾಲೂಕಿನ ಕೊಳ್ಳಿಗನಹಳ್ಳಿಯ ಅತ್ತೆ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

    ಅಕ್ರಮಕ್ಕೆ ತಳುಕು: 2021ರ ಸೆ.17ರಿಂದ 21ವರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಚನ್ನಹಳ್ಳಿ ಗ್ರಾಪಂ ಪಿಡಿಒ ಮತ್ತು ಇಒ ಅವರ ಇ-ಸ್ವತ್ತು ಲಾಗಿನ್ ಐಡಿಯನ್ನು ಹ್ಯಾಕ್ ಮಾಡಿ 36 ಕಂದಾಯ ಸೈಟುಗಳಿಗೆ ಇ-ಖಾತೆ ವಿತರಿಸಲಾಗಿತ್ತು. ಈ ಕುರಿತು ದೇವನಹಳ್ಳಿ ತಾಪಂ ಇಒ, ಈಶಾನ್ಯ ವಿಭಾಗ ಸಿಇಎನ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ತನಿಖೆ ಕೈಗೊಂಡ ಸೈಬರ್ ಪೊಲೀಸರು, ರಾಮನಗರ ಜಿಲ್ಲೆ ಹಾರೋಹಳ್ಳಿ ಪಟ್ಟಣ ಪಂಚಾಯಿತಿ ಕಂಪ್ಯೂಟರ್ ಆಪರೇಟರ್ ಭರತ್‌ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ಬಿಡದಿ ಬೈರಮಂಗಲ ಪಿಡಿಒ ಆಗಿದ್ದ ರವಿಕುಮಾರ್ ಅವರ ಹೆಸರು ತಳುಕು ಹಾಕಿಕೊಂಡಿತ್ತು. ಸೈಬರ್ ಪೊಲೀಸರು 2022ರ ಮಾರ್ಚ್ 8ರಂದು ಬೈರಮಂಗಲ ಗ್ರಾಪಂ ಕಚೇರಿ ಮೇಲೂ ದಾಳಿ ಮಾಡಿ, ದಾಖಲೆ ಪರಿಶೀಲಿಸಿದ್ದರು. ಈ ವೇಳೆ ರವಿಕುಮಾರ್ ನಾಪತ್ತೆ ಆಗಿದ್ದರು. ಪ್ರಕರಣದಲ್ಲಿ ರವಿಕುಮಾರ್ ಅವರ ವಿರುದ್ಧದ ಆರೋಪ ಸಹ ಮೇಲ್ನೋಟಕ್ಕೆ ಸಾಬೀತಾದ ಕಾರಣ, ಜಿಪಂ ಸಿಇಒ ಇಕ್ರಂ ರವಿಕುಮಾರ್ ಅವರನ್ನು ಅಮಾನತು ಮಾಡಿದ್ದರು.

    ಏನೇನಾಗಿತ್ತು…?: ಹಾರೋಹಳ್ಳಿ ಗ್ರಾಪಂ ಆಗಿದ್ದ ವೇಳೆ, ಅಲ್ಲಿನ ಅಧ್ಯಕ್ಷ ಗುರುಪ್ರಸಾದ್ ಅವರ ಡಾಂಗಲ್ ಮೂಲಕವೇ ದೇವನಹಳ್ಳಿ ಬಳಿ ಇ-ಖಾತೆಗಳು ನಡೆದಿದ್ದವು. ಹೀಗಾಗಿ, ಇವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಇವರೊಂದಿಗೆ ಇತರರ ಹೆಸರುಗಳೂ ಕೇಳಿ ಬಂದಿದ್ದವು. ಇದಲ್ಲದೆ, ಬೆಂಗಳೂರು ದಕ್ಷಿಣ ತಾಲೂಕಿನ ತರಳು, ಸೋಮನಹಳ್ಳಿ, ಕುಂಬಳಗೋಡು ಗ್ರಾಪಂ ಸೇರಿ ಹಲವೆಡೆ ಸಹ ಇ-ಸ್ವತ್ತು ತಂತ್ರಾಂಶ ದುರುಪಯೋಗ ಪಡಿಸಿಕೊಂಡಿರುವ ಕುರಿತು ಪೊಲೀಸ್ ಠಾಣೆಯಲ್ಲಿ ಎ್ಐಆರ್ ದಾಖಲಾಗಿದ್ದವು.

    ಕೆಎಎಸ್ ಆಗಬೇಕಿತ್ತು: ರವಿಕುಮಾರ್ ಬುದ್ದಿವಂತ ಅಧಿಕಾರಿ. 2011ರ ಕೆಎಎಸ್ ಅಧಿಕಾರಿಯಾಗಿಯೂ ನೇಮಕಗೊಂಡಿದ್ದರು. ಕಳೆದ ಮಾ.28ರಂದು ಮುಖ್ಯಾಧಿಕಾರಿಯಾಗಿ ಅಧಿಕಾರವನ್ನೂ ಸ್ವೀಕಾರ ಮಾಡಬೇಕಿತ್ತು ಎನ್ನುತ್ತಾರೆ ಅವರ ಸ್ನೇಹಿತರು. ಆದರೆ, ಪ್ರಕರಣದಲ್ಲಿ ಸಿಲುಕಿಕೊಂಡ ಕಾರಣದಿಂದಾಗಿ ತನಿಖೆ ನಡೆಸುತ್ತಿದ್ದ ಹಿರಿಯ ಅಧಿಕಾರಿಯೊಬ್ಬರು ಕೆಪಿಎಸ್‌ಸಿಗೆ ಪತ್ರ ಬರೆದು ರವಿಕುಮಾರ್ ವಿರುದ್ಧದ ಪ್ರಕರಣದ ಬಗ್ಗೆ ತಿಳಿಸಿದ್ದರು. ಇದರಿಂದ ಒಂದೆಡೆ ಪಿಡಿಒ ಹುದ್ದೆಯಲ್ಲಿ ಅಮಾನತು, ಮತ್ತೊಂದೆಡೆ ಕೆಎಎಸ್ ಅಧಿಕಾರಿಯಾಗಿ ಅಧಿಕಾರ ಸ್ವೀಕಾರ ಮಾಡಲು ರವಿಕುಮಾರ್ ಅವರಿಗೆ ಸಾಧ್ಯವಾಗಿರಲಿಲ್ಲ. ಅಮಾನತುಗೊಂಡ ದಿನದಿಂದಲೂ ಕೊಳ್ಳಿಗನಹಳ್ಳಿಯ ಅತ್ತೆ ಮನೆಯಲ್ಲಿದ್ದರು. ಗುರುವಾರವಷ್ಟೇ ವಿಚಾರಣೆ ಎದುರಿಸಿದ್ದ ರವಿಕುಮಾರ್, ಮತ್ತೊಮ್ಮೆ ಶನಿವಾರ ವಿಚಾರಣೆಗೆ ಹಾಜರಾಗುವ ಮುನ್ನವೇ ಆತ್ಮಹತ್ಯೆ ಮಾಡಿಕೊಂಡಿರುವುದು ಅನುಮಾನಗಳಿಗೆ ಕಾರಣವಾಗಿವೆ.

    ತನಿಖೆಗೆ ನೂರೆಂಟು ವಿಘ್ನ : ಬೆಂಗಳೂರು ಸುತ್ತಮುತ್ತ ಭೂಮಿಗೆ ಚಿನ್ನದ ಬೆಲೆ ಇದೆ. ಈ ಹಿನ್ನೆಲೆಯಲ್ಲಿ ಅಕ್ರಮಗಳ ಸಾಲು ಸಾಲು ಬೆಳಕಿಗೆ ಬರುತ್ತಲೇ ಇರುತ್ತವೆ. ಈ ಬಗ್ಗೆ ವಿಜಯವಾಣಿ ಸಹ ಸಾಕಷ್ಟು ಬೆಳಕು ಚೆಲ್ಲಿದೆ. ಬಹುತೇಕ ಎಲ್ಲ ಪ್ರಕರಣಗಳಲ್ಲಿಯೂ ರಾಜಕಾರಣಿಗಳು ಮತ್ತು ಅವರ ಬೆಂಬಲಿಗರು ನೇರವಾಗಿ ಭಾಗಿಯಾಗಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಇದೇ ರೀತಿ ದೇವನಹಳ್ಳಿಯಿಂದ ರಾಮನಗರದ ಹಾರೋಹಳ್ಳಿ ಭೈರಮಂಗಲದವರೆಗೂ ಅಂಟಿದ್ದ ಅಕ್ರಮದ ನಂಟಿನ ಹಿಂದೆಯೂ ಸಾಕಷ್ಟು ರಾಜಕಾರಣಿಗಳ ಕೈವಾಡ ಇರುವುದು ಪತ್ತೆ ಆಗಿದೆ. ಇದು ಪೊಲೀಸರಿಗೂ ತಲೆಬೇನೆ ತಂದೊಡ್ಡಿದೆ. ಇದರಿಂದಾಗಿ ಮುಕ್ತವಾಗಿ ತನಿಖೆ ನಡೆಸಲು ಸಾಧ್ಯವಾಗದಂತಹ ಪರಿಸ್ಥಿತಿಗೂ ಪೊಲೀಸರು ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಯನ್ನು ಸಿಐಡಿ ಸೇರಿ ಇತರ ತನಿಖಾ ಸಂಸ್ಥೆಗೆ ವಹಿಸುವ ನಿಟ್ಟಿನಲ್ಲೂ ಜಿಲ್ಲಾ ಪೊಲೀಸರು ಚಿಂತನೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts