More

    ಪಿಡಿಒ, ಡೇಟಾ ಎಂಟ್ರಿ ಆಪರೇಟರ್ ವರ್ಗಾವಣೆಗೆ ಪಟ್ಟು

    ತರೀಕೆರೆ: ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಡೇಟಾ ಎಂಟ್ರಿ ಆಪರೇಟರ್ ಸಾರ್ವಜನಿಕರ ಜತೆ ದುರ್ವರ್ತಿಸುತ್ತಾರೆ, ಆಡಳಿತ ಮಂಡಳಿ ಜತೆ ಅಸಹಕಾರ ತೋರುತ್ತಿದ್ದಾರೆ ಎಂದು ಆರೋಪಿಸಿ ಬೇಲೇನಹಳ್ಳಿ ಗ್ರಾಪಂ ಅಧ್ಯಕ್ಷರು, ಸದಸ್ಯರು ಮತ್ತು ಗ್ರಾಮಸ್ಥರು ಮಂಗಳವಾರ ಗ್ರಾಪಂ ಎದುರು ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.

    ಪಿಡಿಒ ಹಾಗೂ ಡೇಟಾ ಎಂಟ್ರಿ ಆಪರೇಟರ್ ಬಹತೇಕ ಸದಸ್ಯರೊಂದಿಗೆ ಸಮನ್ವಯತೆ ಸಾಧಿಸದೆ, ಸಕಾಲದಲ್ಲಿ ಸಾರ್ವಜನಿಕರ ಸಮಸ್ಯೆ ಬಗೆಹರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಸದಸ್ಯ ಇ.ನಾಗರಾಜ್ ಮಾತನಾಡಿ, ಪಿಡಿಒ ಹಾಗೂ ಡೇಟಾ ಎಂಟ್ರಿ ಆಪರೇಟರ್ ಯಾವುದೇ ಕೆಲಸಕ್ಕೆ ಸಹಕರಿಸುತ್ತಿಲ್ಲ. ಸಮಸ್ಯೆಗೆ ಸ್ಪಂದಿಸದಿರುವುದು ಬೇಜಬ್ದಾರಿತನದ ಪರಮಾವಧಿ. ಜನರೊಂದಿಗೆ ದುರ್ವರ್ತನೆ ತೋರುವುದು ಮಾತ್ರವಲ್ಲ, ಸಣ್ಣ ಕಾರ್ಯಕ್ಕೂ ಅಲೆದಾಡಿಸುತ್ತಾರೆ ಎಂದು ಆರೋಪಿಸಿದರು.
    ಎ.ರಾಮನಹಳ್ಳಿ ಹಾಗೂ ಇಟ್ಟಿಗೆ ಗ್ರಾಮದಲ್ಲಿ ಇ-ಸ್ವತ್ತಿನ ಸಮಸ್ಯೆ ಮುಂದಿಟ್ಟು ವಿದ್ಯುತ್ ಸಂಪರ್ಕಕ್ಕೆ ಅಗತ್ಯವಾಗಿ ಬೇಕಿರುವ ನಿರಾಕ್ಷೇಪಣಾ ಪತ್ರ, ವ್ಯಾಪಾರ ಪರವಾನಗಿ, ಪೌತಿ ಖಾತೆ ಮಾಡಲು ಪಿಡಿಒ ನಿರಾಕರಿಸುತ್ತಿದ್ದಾರೆ. ಈ ಸಂಬಂಧ ಫೆ.13ರಂದೇ ಮೇಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಗಮನ ಹರಿಸದ ಹಿನ್ನೆಲೆಯಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದೇವೆ. ಪಿಡಿಒ ಹಾಗೂ ಡೇಟಾ ಎಂಟ್ರಿ ಆಪರೇಟರ್ ಅವರನ್ನು ವರ್ಗಾಯಿಸಬೇಕು ಎಂದು ಆಗ್ರಹಿಸಿದರು.
    ಸದಸ್ಯ ಬಿ.ವಿ.ಶಿವಕುಮಾರಸ್ವಾಮಿ ಮಾತನಾಡಿ, ಬೇಲೇನಹಳ್ಳಿ ನವಗ್ರಾಮದಲ್ಲಿ ವಸತಿ ರಹಿತರಿಗೆ ನಿವೇಶನ ಕಲ್ಪಿಸಿ ವಿವಿಧ ವಸತಿ ಯೋಜನೆಯಡಿ ಮನೆ ನಿರ್ಮಿಸಿಕೊಡಲಾಗಿದೆ. ಗ್ರಾಪಂನಿಂದ ಕೆಲವರಿಗೆ ಇ-ಸ್ವತ್ತು ಮಾಡಿಕೊಟ್ಟಿದ್ದರೂ ಉಳಿದವರಿಗೆ ಇ-ಸ್ವತ್ತು ನೀಡಲು ಮೀನಾಮೇಷ ಎಣಿಸಲಾಗುತ್ತಿದೆ ಎಂದು ಆರೋಪಿಸಿದರು.
    ಪ್ರತಿಭಟನಾ ಸ್ಥಳಕ್ಕೆ ನರೇಗಾ ಸಹಾಯಕ ನಿರ್ದೇಶಕ ಸಿ.ಟಿ.ಯೋಗೀಶ್ ಭೇಟಿ ನೀಡಿ, ಧರಣಿನಿರತರೊಂದಿಗೆ ಚರ್ಚಿಸಿದರು. ಇ-ಸ್ವತ್ತಿನ ಸಮಸ್ಯೆ ರಾಜ್ಯದ ಸಮಸ್ಯೆ. ಒತ್ತಡದಲ್ಲೇ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು ಏನೇ ಕೆಲಸವಾದರೂ, ಕಾನೂನಿನ ಚೌಕಟ್ಟಿನಲ್ಲಿ ನಿರ್ವಹಿಸಿ ಪಾರದರ್ಶಕತೆಗೆ ಆದ್ಯತೆ ನೀಡಬೇಕಿದೆ ಎಂದು ಮನವರಿಕೆ ಮಾಡಿದರು. ಮನವಿ ಸ್ವೀಕರಿಸಿ ಧರಣಿ ಹಿಂಪಡೆದುಕೊಳ್ಳುವಂತೆ ನಡೆಸಿದ ಮನವೊಲಿಕೆ ಪ್ರಯತ್ನ ಸಫಲವಾಗಲಿಲ್ಲ.
    ಗ್ರಾಪಂ ಉಪಾಧ್ಯಕ್ಷೆ ಡಿ.ಸಿ.ಶ್ರುತಿ, ಸದಸ್ಯರಾದ ಆರ್.ಬಲರಾಮ, ನೇತ್ರಮ್ಮ, ಸುಮಿತ್ರಮ್ಮ, ವನಜಾಕ್ಷಿಬಾಯಿ, ಜೆ.ಆರ್.ದಿವ್ಯಾ, ಬಿ.ಎಸ್.ದೀಪಾ, ಸುಂಕಮ್ಮ, ಎಚ್.ಆರ್.ಉಮೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts