More

    ವಿವಿಗೆ ವೇತನ ಹೊರೆ!, ಅತಿಥಿ ಉಪನ್ಯಾಸಕರಿಗೆ ಮಾಸಿಕ 1.50 ಕೋಟಿ, ನಿವೃತ್ತರಿಗೆ 1.15 ಕೋಟಿ ರೂ.ಪೆನ್ಶನ್

    ಶ್ರವಣ್ ಕುಮಾರ್ ನಾಳ, ಮಂಗಳೂರು

    ರಾಜ್ಯದ ಪ್ರಮುಖ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಕೇಂದ್ರವಾಗಿರುವ ಮಂಗಳೂರು ವಿಶ್ವವಿದ್ಯಾಲಯ ಮೀಸಲು ನಿಧಿ ಸಹಿತ ವಿವಿಧ ಆಂತರಿಕ ನಿಧಿ ಖಾಲಿಯಾದ ಪರಿಣಾಮ ದಿವಾಳಿಯತ್ತ ಸಾಗಿದ್ದು, ಸಿಬ್ಬಂದಿಗೆ ವೇತನ ನೀಡಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

    ಮಂಗಳೂರು ವಿಶ್ವವಿದ್ಯಾನಿಲಯದ 2014-18 ಹಾಗೂ 2018-22ರ ಆರ್ಥಿಕ ವರ್ಷಾವಧಿಯಲ್ಲಿ ವಿವಿ ತನ್ನ ಆದಾಯಕ್ಕಿಂತ ಜಾಸ್ತಿ ಆಡಂಬರ, ದುಂದುವೆಚ್ಚ ಮಾಡಿದ್ದರ ಪರಿಣಾಮ ಖಜಾನೆ ಬರಿದಾಗಿದೆ. ಈ ಕಾರಣದಿಂದ ಸಿಬ್ಬಂದಿಗೆ ನೀಡುವ ವೇತನವನ್ನೂ ತಡೆಹಿಡಿಯಲಾಗಿದೆ. ಕಳೆದ ಜುಲೈ ತಿಂಗಳಿನಿಂದ ಅತಿಥಿ ಉಪನ್ಯಾಸಕರು ಹಾಗೂ ಬೋಧಕೇತರ ಸಿಬ್ಬಂದಿಗೆ 2-3 ತಿಂಗಳ ವೇತನ ನೀಡಿಲ್ಲ. ಕೊಡಗು ವಿವಿಯ 3ರಿಂದ 6 ಸೆಮಿಷ್ಟರ್‌ಗೆ ಮಂಗಳೂರು ವಿವಿಯಿಂದ ಆಯ್ಕೆ ಮಾಡಿರುವ 31 ಅತಿಥಿ ಉಪನ್ಯಾಸಕರ 4 ತಿಂಗಳ ವೇತನ ನೀಡಿಲ್ಲ. ಮಂಗಳೂರು ಹಾಗೂ ಕೊಡಗು ವಿವಿ ವ್ಯಾಪ್ತಿಯ ಒಟ್ಟು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯ ವೇತನಕ್ಕೆ ಆರ್ಥಿಕ ಕ್ರೋಡೀಕರಣ ಸದ್ಯಕ್ಕೆ ಮಂಗಳೂರು ವಿವಿಗೆ ಹೊರೆಯಾಗಿದೆ.

    *ವೇತನ ಹಾಗೂ ಪೆನ್ಶನ್ ಹೊರೆ: ಮಂಗಳೂರು ವಿವಿಯಲ್ಲಿ 400 ಅತಿಥಿ ಉಪನ್ಯಾಸಕರಿಗೆ ಮಾಸಿಕ 1.50 ಕೋಟಿ ರೂ.ಮೊತ್ತ ವೇತನಕ್ಕೆಂದೇ ಪಾವತಿಯಾಗುತ್ತಿದೆ. 409 ನಿವೃತ್ತರಿಗೆ 1.15 ಕೋಟಿ ರೂ.ಪೆನ್ಶನ್ ನೀಡಬೇಕು. ಇದರಲ್ಲಿ ಸರ್ಕಾರದ ಪಾಲು 83 ಲಕ್ಷ ರೂ. ಮಾತ್ರ. ಉಳಿದ ಮೊತ್ತವನ್ನು ವಿವಿಯೇ ಭರಿಸಬೇಕಿರುವುದು ಹೊರೆ.

    *358 ಹುದ್ದೆ ಖಾಲಿ: ವಿವಿಯಲ್ಲಿ 1980ರಲ್ಲಿ ಮಂಜೂರಾದ 273 ಕಾಯಂ ಹುದ್ದೆಗಳ ಪೈಕಿ 144 ಭರ್ತಿಯಾಗಿವೆ. 129 ಹುದ್ದೆ ಖಾಲಿ. ಬೋಧಕೇತರರಲ್ಲಿ ಮಂಜೂರಾದ 547 ಹುದ್ದೆ ಪೈಕಿ 189 ಹುದ್ದೆ ಭರ್ತಿಯಾಗಿ, 358 ಹುದ್ದೆ ಖಾಲಿ ಇವೆ. ಈಗ ವಿವಿಯಲ್ಲಿ ಕೋರ್ಸ್‌ಗಳ ಕಾರ್ಯಭಾರ ಜಾಸ್ತಿಯಾಗಿದ್ದು, ಅದಕ್ಕೆ ಅನುಗುಣವಾಗಿ ಬೋಧಕರ ನೇಮಕವೂ ಅನಿವಾರ್ಯವಾಗಿದೆ. ಹಾಗಾಗಿ ಇದು ವಿವಿಗೆ ಹೊರೆಯಾಗುತ್ತಿದೆ. ಯುಜಿಸಿ ಅನುದಾನವೂ ಕೆಲವು ವರ್ಷಗಳಿಂದ ಬರುತ್ತಿಲ್ಲ. ಹೀಗಾಗಿ ಸರ್ಕಾರವೇ ಪದವಿ ಕಾಲೇಜುಗಳಂತೆ ವಿವಿ ಅತಿಥಿ ಉಪನ್ಯಾಸಕರಿಗೆ ವೇತನ ನೀಡಿದರೆ, ವಿವಿ ಹೊರೆ ತಗ್ಗಲಿದೆ.

    ಕೋವಿಡ್ ಕಾಲದ ವೇತನವೂ ಸಿಕ್ಕಿಲ್ಲ!

    ಅತಿಥಿ ಉಪನ್ಯಾಸಕರಿಗೆ ಕೋವಿಡ್ ಸಂದರ್ಭದ ಬಾಕಿ ಉಳಿದಿರುವ ವೇತನ ಪಾವತಿಸುವ ಅಂತಿಮ ದಿನಾಂಕವನ್ನು ಹಲವು ಬಾರಿ ವಿವಿ ನೀಡಿದ್ದರೂ, ಪಾವತಿ ಆಗಿಲ್ಲ. ಹಿಂದಿನ ಉಪಕುಲಪತಿ ಪ್ರೊ.ಯಡಪಡಿತ್ತಾಯ 2023ರ ಏ.30ರ ಒಳಗೆ ಪೂರ್ತಿಯಾಗಿ ನೀಡಲು ಕ್ರಮ ಕೈಗೊಳ್ಳಾಗಿದೆ ಎಂದು ಹೇಳಿಕೆ ನೀಡಿದ್ದರೂ, ವೇತನ ಪಾವತಿಯಾಗಿಲ್ಲ. ಆದರೆ ಈಗ ಕೋವಿಡ್ ಸಂದರ್ಭದ ಬಾಕಿ ವೇತನ ಪಾವತಿಸಲು ವಿವಿಯಲ್ಲಿ ದುಡ್ಡಿಲ್ಲ, ಕೋವಿಡ್ ಸಂದರ್ಭದ ವೇತನ ನೀಡಲು ಸಾಧ್ಯವಿಲ್ಲ ಎಂದು ವಿವಿ ಹಣಕಾಸು ಅಧಿಕಾರಿ ಡಾ.ಸಂಗಪ್ಪ ಇತ್ತೀಚೆಗೆ ಅತಿಥಿ ಉಪನ್ಯಾಸಕರಿಗೆ ತಿಳಿಸಿರುವುದು ಟೀಕೆಗೆ ಗುರಿಯಾಗಿತ್ತು. ಪ್ರತೀ ತಿಂಗಳ 10ನೇ ತಾರೀಕಿನ ಒಳಗೆ ಅತಿಥಿ ಉಪನ್ಯಾಸಕರ ವೇತನ ನೀಡಬೇಕೆಂಬ ಸಿಂಡಿಕೇಟ್ ನಿರ್ಣಯಕ್ಕೂ ಕಿಮ್ಮತ್ತಿಲ್ಲ. ಪ್ರಸ್ತುತ ವಿವಿಯಲ್ಲಿ ಕಾರ್ಯನಿರ್ವಹಿಸುವ ಅತಿಥಿ ಉಪನ್ಯಾಸಕರು ತಿಂಗಳ ಸಂಬಳಕ್ಕಾಗಿ 2-3 ತಿಂಗಳು ಕಾಯುವ ಸ್ಥಿತಿಯಿದೆ.

    ——————–

    ಅತಿಥಿ ಉಪನ್ಯಾಸಕರ ವೇತನ ಪಾವತಿಗೆ ಮುಂದಾಗುವಂತೆ ಸರ್ಕಾರಕ್ಕೆ ಮಂಗಳೂರು ವಿವಿ ಮನವಿ ಸಲ್ಲಿಸಿದೆ. ಉನ್ನತ ಶಿಕ್ಷಣ ಸಚಿವ ಸುಧಾಕರ್ ಮಂಗಳೂರು ವಿವಿಗೆ ಇತ್ತೀಚೆಗೆ ಭೇಟಿ ನೀಡಿದ ಸಂದರ್ಭ ಈ ಕುರಿತು ಮನವಿ ಸಲ್ಲಿಸಲಾಗಿದೆ. ಬೆಂಗಳೂರಿಗೆ ತೆರಳಿ ಅಲ್ಲಿ ಮತ್ತೊಮ್ಮೆ ಸರ್ಕಾರಕ್ಕೆ ಮನವಿ ಮಾಡಲು ನಿರ್ಧರಿಸಲಾಗಿದೆ.

    – ಪ್ರೊ.ಜಯರಾಜ್ ಅಮೀನ್, ವಿವಿ ಕುಲಪತಿ(ಪ್ರಭಾರ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts