More

    ಕಾರ್ಖಾನೆಗಳಿಗೆ ರೈತ ಸಂಘದ ಹಕ್ಕೊತ್ತಾಯ; ಹೆಚ್ಚುವರಿ 150 ರೂ. ಪಾವತಿಸಿ ಕಬ್ಬು ಖರೀದಿಸಿ

    ಧಾರವಾಡ: ಸಕ್ಕರೆ ಕಾರ್ಖಾನೆ ಆರಂಭಕ್ಕೆ ಮುನ್ನ ಕಳೆದ ವರ್ಷದ ಹೆಚ್ಚುವರಿ 150೦ ರೂ. ಪಾವತಿಸಿ ಈ ವರ್ಷದ ಕಬ್ಬು ಖರೀದಿಸಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರ ಶಾಂತಕುಮಾರ ಒತ್ತಾಯಿಸಿದರು.
    ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಮಳೆ ಅಭಾವದಿಂದ ಶೇ. 50ರಷ್ಟು ಉತ್ಪಾದನೆ ಕಡಿಮೆಯಾಗಿದೆ. ಆದಾಗ್ಯೂ ಸಕ್ಕರೆ ಕಾರ್ಖಾನೆಗಳು ಪೈಪೋಟಿಗೆ ಬಿದ್ದು ಕಬ್ಬು ಖರೀದಿಸಲು ಮುಂದಾಗುತ್ತಿವೆ. ರೈತರು ಜಾಗೃತರಾಗಿ ಕಳೆದ ವರ್ಷದ ಹೆಚ್ಚುವರಿ 150 ರೂ. ಪಾವತಿಸುವ ಮತ್ತು ಪ್ರಸಕ್ತ ವರ್ಷ ಹೆಚ್ಚು ಬೆಲೆ ನೀಡುವ ಕಾರ್ಖಾನೆಗಳಿಗೆ ಕಬ್ಬು ಪೂರೈಸುತ್ತೇವೆ ಎಂದು ಎಚ್ಚರಿಕೆ ನೀಡಬೇಕು. ಸರ್ಕಾರಗಳು ರೈತರಿಗೆ ನ್ಯಾಯ ನೀಡುತ್ತವೆ ಎಂಬುದು ಹಸಿ ಸುಳ್ಳು. ಇಬ್ಬಗೆಯ ನೀತಿ ಅನುಸರಿಸಿ ರೈತರನ್ನು ನಾಶ ಮಾಡಲು ಹೊರಟಿದ್ದು, ರೈತರು ಒತ್ತಡಕ್ಕೆ ಬಲಿಯಾಗಬಾರದು ಎಂದರು.
    ರಾಜ್ಯದಲ್ಲಿ ಬರಪೀಡಿತ ತಾಲೂಕುಗಳ ಘೋಷಣೆಯಾಗಿದೆ. ಸುಮಾರು 30,000 ಕೋಟಿ ರೂ. ರೈತರ ಹೂಡಿಕೆ ಹಣ ನಷ್ಟವಾಗಿದೆ. ಮಳೆ ಕಡಿಮೆಯಾದ ಕಾರಣ ಕಬ್ಬಿನ ಬೆಳೆ ಒಣಗಿ ಹಾಳಾಗಿದೆ. ಕಬ್ಬಿಗೂ ಎನ್‌ಡಿಆರ್‌ಎಫ್ ಮಾನದಂಡಗಳ ಅನ್ವಯ ಬೆಳೆ ನಷ್ಟ ಪರಿಹಾರ ನೀಡಬೇಕು ಎಂದರು ಆಗ್ರಹಿಸಿದರು.
    ಚುನಾವಣೆಗೂ ಮುನ್ನ ಕಾಂಗ್ರೆಸ್ ರೈತರಿಗೆ ಹಗಲು ಹೊತ್ತಿನಲ್ಲಿ 10 ಗಂಟೆ ತ್ರಿಫೇಸ್ ವಿದ್ಯುತ್ ನೀಡುವ ಭರವಸೆ ಕೊಟ್ಟಿತ್ತು. ಮಹದಾಯಿ ಮತ್ತು ಕಾವೇರಿ ನೀರಿನ ವಿವಾದ ರಾಜಕೀಯ ಪಕ್ಷಗಳಿಗೆ ಚುನಾವಣಾ ಅಸ್ತಗಳಾಗಿವೆ. ಮುಂದಿನ ಚುನಾವಣೆಗಳಲ್ಲಿ ರೈತರು ಜಾಗೃತರಾಗಬೇಕು ಎಂದರು.
    ಸುರೇಶ ಮಾ. ಪಾಟೀಲ, ದೇವಕುಮಾರ್, ಹತ್ತಳ್ಳಿ ದೇವರಾಜ, ಪರಶುರಾಮ ಎತ್ತಿನಗುಡ್ಡ, ಉಳವಪ್ಪ ಬಳಗೇರ, ಗುರುಸಿದ್ದಪ್ಪ ಕೂಟಗಿ, ರಮೇಶ ಉಗಾರ, ಭುವನೇಶ್ವರ, ನಿಜಗುಣ ಕೆಲಗೇರಿ, ಕಲ್ಲಪ್ಪ ಬಿರಾದಾರ, ಎಸ್.ಬಿ. ಸಿದ್ನಾಳ, ಇತರರು ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts