More

    ಮಾದರಿ ತ್ಯಾಜ್ಯ ನಿರ್ವಹಣೆ ಪಣ: ನಿರ್ವಹಣೆಯ ಸವಾಲು ಎದುರಿಸಲು ಅಧ್ಯಯನ

    ಅನ್ಸಾರ್ ಇನೋಳಿ ಉಳ್ಳಾಲ
    ಉಳ್ಳಾಲ ತಾಲೂಕು ವ್ಯಾಪ್ತಿಯಲ್ಲಿ ಐದು ಕಡೆ ಘನತ್ಯಾಜ್ಯ ಘಟಕಗಳಿದ್ದು, ನಿರ್ವಹಣೆ ಸವಾಲಾಗಿ ಕಾಡಿದೆ. ಈ ನಿಟ್ಟಿನಲ್ಲಿ ರಾಜ್ಯದ ಮೊದಲ ಮಾದರಿ ತ್ಯಾಜ್ಯ ನಿರ್ವಹಣಾ ಘಟಕ ವಂಡ್ಸೆಗೆ ಪಾವೂರು ಗ್ರಾಪಂ ತಂಡ ಅಧ್ಯಯನ ಪ್ರವಾಸ ಕೈಗೊಂಡಿದೆ.

    ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಘನತ್ಯಾಜ್ಯ ಘಟಕ ನಿರ್ಮಾಣಕ್ಕೆ ಜಿಲ್ಲಾ ಪಂಚಾಯಿತಿಯಿಂದ 20 ಲಕ್ಷ ರೂ. ಅನುದಾನ ನೀಡಲಾಗುತ್ತದೆ. ಗ್ರಾಮಸ್ಥರ ಸಹಕಾರದ ಕೊರತೆಯಿಂದ ಬಹುತೇಕ ಗ್ರಾಮಗಳಲ್ಲಿ ಘಟಕ ನಿರ್ಮಾಣ ಮರೀಚಿಕೆಯಾಗಿದೆ. ದ.ಕ. ಜಿಲ್ಲೆಗೆ ಪ್ರಥಮ ಘಟಕ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದ ಕುರ್ನಾಡು ಘಟಕ ಪ್ರಸ್ತುತ ದಿನಗಳಲ್ಲಿ ನಿರ್ವಹಣೆಯ ಕೊರತೆ ಎದುರಿಸುತ್ತಿದೆ. ಮುನ್ನೂರು ಘಟಕ ಒಂದು ಹಂತದಲ್ಲಿ ನಿರ್ವಹಣೆಯಲ್ಲಿದೆ. ಆದರೆ ಇಲ್ಲಿ ಗೊಬ್ಬರ ತಯಾರಿ ಸಾಧ್ಯವಾಗಿಲ್ಲ. ವರ್ಷದ ಹಿಂದೆ ಆರಂಭಗೊಂಡ ಬಾಳೆಪುಣಿ ಘಟಕದಲ್ಲಿ ಒಣತ್ಯಾಜ್ಯ ನಿರ್ವಹಣೆ ಆಗುತ್ತಿದ್ದರೂ ಹಸಿತ್ಯಾಜ್ಯ ಗೊಬ್ಬರ ಹೇಳಿಕೊಳ್ಳುವ ಮಟ್ಟ ತಲುಪಿಲ್ಲ.

    ಪಾವೂರು ಘಟಕ ನಿರ್ವಹಣಾ ತಂಡ ಸಿದ್ಧ: ಪಾವೂರು ಗ್ರಾಮ ಪಂಚಾಯಿತಿ ಆಡಳಿತ ಘಟಕ ಕಾರ್ಯಾರಂಭಕ್ಕೆ ಮುಂದಾಗಿದೆ. ಈಗಾಗಲೇ ಇಲ್ಲಿ ಘಟಕಕ್ಕೆ ಕಟ್ಟಡವೂ ಆಗಿದೆ. ತ್ಯಾಜ್ಯ ಸಂಗ್ರಹ ಆರಂಭದ ಬಳಿಕ ವೈಫಲ್ಯ ಕಾಣುವಂತಾಗಬಾರದು ಎಂದು ಪೂರ್ವ ಯೋಜನೆ ರೂಪಿಸಿದೆ. ಈ ಕಾರ್ಯಕ್ಕೆ ಜನಶಿಕ್ಷಣ ಟ್ರಸ್ಟ್ ಬೆನ್ನೆಲುಬಾಗಿದ್ದು, ಸಮಾಲೋಚನಾ ಸಭೆಗಳ ಬಳಿಕ ನಿರ್ವಹಣಾ ತರಬೇತಿಗಾಗಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕರು ವಂಡ್ಸೆಗೆ ಭೇಟಿ ನೀಡಿ ಪಂಚಾಯಿತಿ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಅವರಿಂದ ಮಾಹಿತಿ ಪಡೆದಿದ್ದಾರೆ. ಘಟಕ ನಿರ್ವಹಣಾ ತಂಡವೂ ಸಿದ್ಧವಾಗುತ್ತಿದ್ದು, ಮುಂದಿನ ದಿನಗಳಲ್ಲಿ ತರಬೇತಿ ಪಡೆಯಲು ಮತ್ತೊಮ್ಮೆ ವಂಡ್ಸೆ ಪ್ರವಾಸ ಕೈಗೊಳ್ಳಲಿದೆ.

    ಉಳ್ಳಾಲ, ಸೋಮೇಶ್ವರದಲ್ಲಿ ಯಶಸ್ಸು: ಉಳ್ಳಾಲ ತಾಲೂಕು ವ್ಯಾಪ್ತಿಯಲ್ಲಿ ಅತಿ ಹೆಚ್ಚು ಜನಸಂಖ್ಯೆ ಮತ್ತು ಹೃದಯ ಎನಿಸಿರುವ ಉಳ್ಳಾಲ ನಗರಸಭೆ, ಸೋಮೇಶ್ವರ ಪುರಸಭೆ ಹಾಗೂ ಕೋಟೆಕಾರ್ ಪಟ್ಟಣ ಪಂಚಾಯಿತಿ ಇದೆ. ಉಳ್ಳಾಲ ನಗರಸಭೆ ಪೌರಾಯುಕ್ತ ರಾಯಪ್ಪ ಮುತುವರ್ಜಿಯಿಂದ ಹಸಿ ತ್ಯಾಜ್ಯದಿಂದ ಗೊಬ್ಬರ ತಯಾರಿಕಾ ಘಟಕವನ್ನು ಉಳಿಯದಲ್ಲಿ ಆರಂಭಿಸಿ ಉಳ್ಳಾಲ ಬ್ರ್ಯಾಂಡ್ ಹೆಸರಿನ ಸಾವಯವ ಗೊಬ್ಬರ ಮಾರಾಟ ಆರಂಭಗೊಂಡಿದೆ. ಸೋಮೇಶ್ವರ ಪುರಸಭೆಯ ಎರಡು ಕಡೆ ಘಟಕ ಇದ್ದು ಗೊಬ್ಬರ ಮಾರಾಟ ಮಾಡಲಾಗುತ್ತಿದೆ. ಕೋಟೆಕಾರ್ ಪಟ್ಟಣ ಪಂಚಾಯಿತಿ ಕಸ ಸಂಗ್ರಹ ಮಾಡುತ್ತಿದ್ದು, ಇಲ್ಲಿಗೆ ಲಘು, ಘನ ವಾಹನಗಳು ಮಾತ್ರವಲ್ಲದೆ ಜೆಸಿಬಿಯೂ ಬಂದಿದೆ. ಆದರೂ ಘಟಕ ಇಲ್ಲದ ಕಾರಣ ಸಾಧನೆ ಶೂನ್ಯ.

    ವಂಡ್ಸೆ ಘಟಕದ ವಿಶೇಷ: 2017ರಲ್ಲಿ ಆರಂಭವಾದ ವಂಡ್ಸೆ ತ್ಯಾಜ್ಯ ನಿರ್ವಹಣಾ ಘಟಕ ರಾಜ್ಯಕ್ಕೆ ಮಾದರಿಯಾಗಿದ್ದು, ಉನ್ನತ ಅಧಿಕಾರಿಗಳು ಸೇರಿದಂತೆ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಅಧ್ಯಯನ ಕೇಂದ್ರದಂತಿದೆ. ಘಟಕದಲ್ಲಿ ಚಾಲಕ ಸೇರಿದಂತೆ ಎಂಟು ಮಂದಿ ಕಾರ್ಯನಿರ್ವಹಿಸುತ್ತಿದ್ದು, ಸಂಗ್ರಹವಾಗುವ ತ್ಯಾಜ್ಯದಲ್ಲಿ 45 ರೀತಿಯ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ವಿಂಗಡಿಸಲಾಗುತ್ತದೆ. ನಂತರ ಟೆಂಡರ್ ಮೂಲಕ ಗುಜರಿಯವರಿಗೆ ನೀಡಲಾಗುತ್ತದೆ. ತ್ಯಾಜ್ಯ ಘಟಕ ಶಾಲೆ, ಅಂಗನವಾಡಿಯ ಮಧ್ಯದಲ್ಲೇ ಇದ್ದರೂ ದುರ್ವಾಸನೆ ರಹಿತವಾಗಿ ಸುಂದರ ವಾತಾವರಣ ಹೊಂದಿದೆ. ತ್ಯಾಜ್ಯ ಘಟಕ ಪರಿಸರದಲ್ಲಿ ಹುಟ್ಟುಹಬ್ಬ ಸೇರಿದಂತೆ ವಿವಿಧ ಕಾರ್ಯಕ್ರಮ ಆಯೋಜಿಸುತ್ತಿರುವುದು ಪರಿಸರ ಸ್ನೇಹಿ ವಾತಾವರಣಕ್ಕೆ ಸಾಕ್ಷಿಯಾಗಿದೆ. ಘಟಕದಲ್ಲಿ ಸಂಗ್ರಹವಾಗುವ ತ್ಯಾಜ್ಯದಿಂದ ಗೊಬ್ಬರ ತಯಾರಿಸಲಾಗುತ್ತಿದ್ದು, ಅದರ ಹಣದಿಂದ ಸಿಬ್ಬಂದಿಗೆ ಸಂಬಳ ಒದಗಿಸಲಾಗುತ್ತಿದೆ.

    ಹಿಂದೆ ತಮಿಳುನಾಡು, ಛತ್ತೀಸ್‌ಗಢದಲ್ಲಿದ್ದ ಯೋಜನೆಯನ್ನು 2017ರ ಸೆಪ್ಟೆಂಬರ್‌ನಲ್ಲಿ ರಾಜ್ಯದಲ್ಲಿ ಪ್ರಥಮ ಬಾರಿಗೆ ವಂಡ್ಸೆ ಗ್ರಾಮ ಪಂಚಾಯಿತಿಯಲ್ಲಿ ಜಾರಿಗೆ ತರಲಾಯಿತು. ನಾಲ್ಕು ವರ್ಷಗಳಿಂದ ಯಾವುದೇ ತೊಂದರೆಯಿಲ್ಲದೆ ನಿರ್ವಹಿಸಲಾಗುತ್ತಿದೆ. ಇಂಥ ಕೆಲಸಕ್ಕೆ ಸಕಾರಾತ್ಮಕ ಯೋಚನೆ ಅಗತ್ಯ.
    ಉದಯಕುಮಾರ್ ಶೆಟ್ಟಿ ಅಧ್ಯಕ್ಷ, ವಂಡ್ಸೆ ಗ್ರಾಪಂ

    ವಂಡ್ಸೆಗೆ ಭೇಟಿ ನೀಡಿದ ಬಳಿಕ ಘನತ್ಯಾಜ್ಯ ನಿರ್ವಹಣಾ ಘಟಕ ಈ ರೀತಿಯೂ ಮಾಡಬಹುದು ಎನ್ನುವ ಅಚ್ಚರಿ ಮೂಡಿತು. ಇದೀಗ ನಮ್ಮ ಗ್ರಾಮದಲ್ಲೂ ಉತ್ತಮ, ಮಾದರಿ ಘಟಕ ನಿರ್ಮಾಣ ಮಾಡಬಹುದು ಎನ್ನುವ ಧೈರ್ಯ ಮೂಡಿದೆ.
    ಖಮರುನ್ನೀಸಾ ಅಧ್ಯಕ್ಷೆ, ಪಾವೂರು ಗ್ರಾಪಂ

    ವಂಡ್ಸೆ ಮಾದರಿಯ ಘನತ್ಯಾಜ್ಯ ನಿರ್ವಹಣಾ ಘಟಕ ಬೇರೆಲ್ಲೂ ಇಲ್ಲ, ಈ ಘಟಕ ಕೇವಲ ನಿರ್ವಹಣೆಗೆ ಮಾತ್ರ ಸೀಮಿತವಾಗದೆ ಸಂಶೋಧನೆಗೂ ಪ್ರೇರಣೆ ನೀಡುತ್ತಿದೆ. ಇದೇ ಮಾದರಿಯ ಘಟಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎದ್ದು ನಿಲ್ಲಬೇಕಿದೆ.
    ಶೀನ ಶೆಟ್ಟಿ ಜಿಲ್ಲಾ ಸ್ವಚ್ಛತಾ ರಾಯಭಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts