More

    ಕರ್ನಾಟಕ ತಂಡ ತೊರೆದ ಆಲ್ರೌಂಡರ್ ; ಪುದುಚೇರಿಗೆ ಪವನ್ ದೇಶಪಾಂಡೆ ವಲಸೆ

    ವಿಜಯವಾಣಿ ಸುದ್ದಿಜಾಲ, ಬೆಂಗಳೂರು
    ಕರ್ನಾಟಕ ತಂಡದ ಆಲ್ರೌಂಡರ್ ಪವನ್ ದೇಶಪಾಂಡೆ ಮುಂಬರುವ ದೇಶೀಯ ಕ್ರಿಕೆಟ್ ಋತುವಿನಲ್ಲಿ ಪುದುಚೇರಿ ತಂಡದ ಪರ ಕಣಕ್ಕಿಳಿಯಲಿದ್ದಾರೆ. ಎಡಗೈ ಸ್ಪಿನ್ನರ್ ಆಗಿರುವ 31 ವರ್ಷದ ಪವನ್ ದೇಶಪಾಂಡೆ, ಕಳೆದ ಆವೃತ್ತಿಯಲ್ಲಿ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಕರ್ನಾಟಕ ತಂಡದ ಉಪನಾಯಕನಾಗಿದ್ದರು. ಐಪಿಎಲ್‌ನ ಕಳೆದ ಮೂರು ಆವೃತ್ತಿಗಳಿಂದ ಆರ್‌ಸಿಬಿ ತಂಡದಲ್ಲಿದ್ದಾರೆ. 2015ರಲ್ಲಿ ಕೇರಳ ವಿರುದ್ಧ ಟಿ20 ಪಂದ್ಯವಾಡುವ ಮೂಲಕ ದೇಶೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಮತ್ತಷ್ಟು ದೇಶೀಯ ಕ್ರಿಕೆಟ್ ಆಡುವ ಸಲುವಾಗಿ ತವರು ತಂಡ ತೊರೆಯುತ್ತಿರುವುದಾಗಿ ‘ವಿಜಯವಾಣಿ’ಗೆ ಸ್ಪಷ್ಟಪಡಿಸಿದರು.

    ಕಳೆದ 6 ವರ್ಷಗಳಿಂದ ರಾಜ್ಯ ತಂಡದ ಆಡಿದ ಖುಷಿಯಿದೆ. ಇಷ್ಟು ವರ್ಷಗಳ ಕಾಲ ಕರ್ನಾಟಕ ತಂಡದಲ್ಲಿ ಉತ್ತಮ ಅನುಭವ ಪಡೆದಿದ್ದೇನೆ. ತವರು ತಂಡ ತೊರೆಯುತ್ತಿರುವುದು ಬೇಸರ ತರಿಸಿದೆ. ಆದರೆ, ಹೆಚ್ಚು ಅವಕಾಶಕ್ಕಾಗಿ ಪುದುಚೇರಿ ತಂಡ ಸೇರಿಕೊಳ್ಳುತ್ತಿರುವೆ ಎಂದು ಪವನ್ ಹೇಳಿಕೊಂಡರು. ಕಳೆದ ಶನಿವಾರ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯಿಂದ (ಕೆಎಸ್‌ಸಿಎ) ನಿರಾಕ್ಷೇಪಣಾ ಪತ್ರ (ಎನ್‌ಒಸಿ) ಪಡೆದರು. ಯುಎಇಯಲ್ಲಿ ನಡೆಯಲಿರುವ ಐಪಿಎಲ್ ಭಾಗ-2 ಮುಕ್ತಾಯಗೊಂಡ ಬಳಿಕ ಅಕ್ಟೋಬರ್‌ನಲ್ಲಿ ಪುದುಚೇರಿ ತಂಡ ಸೇರ್ಪಡೆಗೊಳ್ಳಲಿದ್ದಾರೆ. ‘ಕಳೆದ ಮೂರು ಆವೃತ್ತಿಗಳಿಂದ ಪುದುಚೇರಿ ತಂಡವನ್ನು ನೋಡುತ್ತಾ ಬಂದಿದ್ದೇನೆ. ಮೂರು ಮಾದರಿಯಲ್ಲೂ ಅಲ್ಲಿ ಉತ್ತಮ ನಿರ್ವಹಣೆ ತೋರುವ ಗುರಿ ಹೊಂದಿದ್ದೇನೆ’ ಎಂದು ಪವನ್ ವಿವರಿಸಿದರು.

    2018-19ರಲ್ಲಿ ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿ ಹಾಗೂ 2019-20ರಲ್ಲಿ ಸಯ್ಯದ್ ಮುಷ್ತಾಕ್ ಟ್ರೋಫಿ ಟಿ20 ಟೂರ್ನಿಯ ವಿಜೇತ ಕರ್ನಾಟಕ ತಂಡದ ಭಾಗವಾಗಿದ್ದರು. ಕರ್ನಾಟಕ ಪರ ಆಡಿರುವ 8 ಪ್ರಥಮ ದರ್ಜೆ ಪಂದ್ಯಗಳಿಂದ 255 ರನ್ ಗಳಿಸಿ, 14 ವಿಕೆಟ್ ಕಬಳಿಸಿದರೆ, 23 ಲಿಸ್ಟ್ ಎ ಪಂದ್ಯಗಳಿಂದ 777 ರನ್, 2 ವಿಕೆಟ್ ಪಡೆದರೆ, 23 ಟಿ20 ಪಂದ್ಯಗಳಿಂದ 463 ರನ್, 4 ವಿಕೆಟ್ ಪಡೆದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts