ಸಿನಿಮಾ

ರಾಷ್ಟ್ರಪ್ರೇಮ ಸಾರುವ ಕವಲೂರು ದುರ್ಗಾದೇವಿ ಜಾತ್ರೆ

ಅಳವಂಡಿ: ಕೊಪ್ಪಳ ತಾಲೂಕಿನಲ್ಲಿ ಶ್ರೀ ದುರ್ಗಾದೇವಿಯನ್ನು ಆರಾಧಿಸುವ ಗ್ರಾಮಗಳಲ್ಲಿ ಕವಲೂರು ಸಹ ಒಂದಾಗಿದೆ. ಮೇ 5ರಿಂದ ಐದು ದಿನಗಳ ಕಾಲ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಅಲ್ಲದೆ ರಥೋತ್ಸವದ ವೇಳೆ ಧಾರ್ಮಿಕ ಪಟದ ಬದಲಿಗೆ ರಾಷ್ಟ್ರಧ್ವಜ ಹಾರಿಸುವುದು ಜಾತ್ರೆಯ ವಿಶೇಷವಾಗಿದೆ.

ಬುದ್ಧ ಪೌರ್ಣಿಮೆ ದಿನ ಮೇ 5ರಂದು ಶ್ರೀ ದುರ್ಗಾದೇವಿ ಜಾತ್ರೋತ್ಸವಕ್ಕೆ ಚಾಲನೆ ನೀಡಲಾಗುತ್ತಿದೆ. ಅಂದು ಬೆಳಗ್ಗೆ ಶ್ರೀ ದುರ್ಗಾದೇವಿ ಹಾಗೂ ಪಾರ್ವತಿ ಪರಮೇಶ್ವರಗೆ ಕ್ಷೀರಾಭಿಷೇಕ, ಅಭಿಷೇಕ ಹಾಗೂ ವಿಶೇಷ ಪೂಜೆಗಳು ನಡೆಯಲಿವೆ.

ನಂತರ ಸಾಮೂಹಿಕ ವಿವಾಹ, ಸಂಜೆ ಶ್ರೀ ಪಾರ್ವತಿ ಪರಮೇಶ್ವರ ಲಘು ರಥೋತ್ಸವ ಕಾರ್ಯಕ್ರಮ ಸಕಲ ವಾದ್ಯ ಮೇಳದೊಂದಿಗೆ ನಡೆಯಲಿದೆ. ತದನಂತರ ಕೊಪ್ಪಳ ಗವಿಮಠದ ಶ್ರೀ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಶ್ರೀ ದುರ್ಗಾದೇವಿ ಪಂಚ ಕಳಸ ಮಹಾ ರಥೋತ್ಸವಕ್ಕೆ ಚಾಲನೆ ದೊರೆಯಲಿದೆ.

ಇದನ್ನೂ ಓದಿ: ದ್ಯಾಮವ್ವನ ಜಾತ್ರೆಯಲ್ಲಿ ಮತದಾನ ಅರಿವು

ಮುಂಡರಗಿಯ ಡಾ.ನಾಡೋಜ ಅನ್ನದಾನೇಶ್ವರ ಸ್ವಾಮೀಜಿ, ಕೊಪ್ಪಳದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ, ಮೈನಳ್ಳಿ-ಬಿಕನಳ್ಳಿಯ ಸಿದ್ಧೇಶ್ವರ ಸ್ವಾಮೀಜಿ, ಇಟಗಿಯ ಗುರುಶಾಂತವೀರ ಶಿವಾಚಾರ್ಯರು, ಕುಕನೂರಿನ ಮಹದೇವ ದೇವರು, ಅಳವಂಡಿಯ ಮರುಳಾರಾಧ್ಯ ಶಿವಾಚಾರ್ಯರು ಭಾಗವಹಿಸಲಿದ್ದಾರೆ.

ಮೇ 6ರಂದು ದುರ್ಗಾದೇವಿಗೆ ವಿಶೇಷ ಪೂಜೆ, ಪುನಸ್ಕಾರಗಳು ನಡೆಯಲಿವೆ. ಮಧ್ಯಾಹ್ನ ಅಗ್ನಿಹೊಂಡ ಹಾಯುವುದು, ಅನ್ನ ದಾಸೋಹ ಕಾರ್ಯಕ್ರಮ ಜರುಗಲಿವೆ. 7-8 ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮುಂದುವರಿಯಲಿವೆ. ಮೇ 9ರಂದು ಗ್ರಾಮ ಹಾಗೂ ಸುತ್ತಲಿನ ಹಳ್ಳಿಗಳ ಮುತ್ತೈದೆಯರಿಂದ ದೇವಿಗೆ ಉಡಿ ತುಂಬುವ ಕಾರ್ಯಕ್ರಮ ನೆರವೇರಲಿದೆ.

ರಾಷ್ಟ್ರಧ್ವಜ ಕಟ್ಟುವುದು ವಿಶೇಷ: ಸಾಮಾನ್ಯವಾಗಿ ರಥದ ಮೇಲ್ಗಡೆ ಕಳಸದ ಹತ್ತಿರ ಧಾರ್ಮಿಕ ಧ್ವಜ ಕಟ್ಟಲಾಗುತ್ತದೆ. ಆದರೆ ಈ ಜಾತ್ರೆಯ ರಥೋತ್ಸವ ಅತ್ಯಂತ ವಿಶೇಷತೆಯಿಂದ ಕೂಡಿದೆ. ಅಂದರೆ ರಾಷ್ಟ್ರಧ್ವಜವನ್ನು ತೇರಿನ ಮೇಲೆ ಹಾರಿಸಿ ಭಾವೈಕ್ಯ ಹಾಗೂ ರಾಷ್ಟ್ರಪ್ರೇಮ ಸಾರುತ್ತದೆ. ಇಲ್ಲಿ ಯಾವುದೇ ಧರ್ಮದ ಧ್ವಜದ ಹಾರಿಸುವುದಿಲ್ಲ.

ಸರ್ವಧರ್ಮದವರು ಕೂಡಿಕೊಂಡು ವಿಜೃಂಭಣೆಯಿಂದ ಆಚರಿಸುತ್ತಾರೆ. ತೇರು ಪಂಚ ಕಳಸವನ್ನು ಹೊಂದಿದ್ದು ನವದಂಪತಿಗಳು ನೋಡಿದರೆ, ಜೀವನದಲ್ಲಿ ಸುಖ, ಶಾಂತಿ ಸಿಗಲಿದೆ ಎಂಬ ನಂಬಿಕೆ ಇದೆ. ಆದ್ದರಿಂದ ಈ ಜಾತ್ರೆಗೆ ಹಲವಾರು ನವಜೋಡಿಗಳು ಆಗಮಿಸಿ ದರ್ಶನ ಪಡೆಯುತ್ತಾರೆ.

ಕವಲೂರು ಗ್ರಾಮದ ಶ್ರೀದುರ್ಗಾದೇವಿ ಜಾತ್ರೆ ಅತ್ಯಂತ ವಿಶಿಷ್ಟವಾಗಿದ್ದು, ರಾಷ್ಟ್ರಪ್ರೇಮ ಸಾರುತ್ತದೆ. ರಥದ ಮೇಲೆ ಧಾರ್ಮಿಕ ಧ್ವಜ ಬದಲಿಗೆ ಭಾರತದ ಹೆಮ್ಮೆಯ ತ್ರಿವರ್ಣ ಧ್ವಜ ಹಾರಾಡಲಿದೆ. ಇದು ಹಿರಿಯರಿಂದ ಆಚರಿಸಿಕೊಂಡು ಬಂದ ಸಂಪ್ರದಾಯವಾಗಿದೆ.
| ಮಹಾಂತೇಶ ಸಿಂದೋಗಿಮಠ, ಕವಲೂರು ಗ್ರಾಮಸ್ಥ

ಕವಲೂರು ಗ್ರಾಮದ ಶ್ರೀ ದುರ್ಗಾದೇವಿ ಜಾತ್ರೆ ಈ ಭಾಗದಲ್ಲಿ ಪ್ರಸಿದ್ಧಿ ಪಡೆದಿದೆ. ಸುತ್ತಲಿನ ತಾಲೂಕುಗಳಿಂದ ಭಕ್ತರು ಆಗಮಿಸಲಿದ್ದಾರೆ. ಅದರಲ್ಲೂ ನೂತನ ದಂಪತಿಗಳು ಪಂಚ ಕಳಸ ಹೊಂದಿದ ಶ್ರೀ ದುರ್ಗಾದೇವಿ ರಥೋತ್ಸವದಲ್ಲಿ ಭಾಗವಹಿಸಲಿದ್ದಾರೆ. ದೇಶಪ್ರೇಮ ಸಾರುವ ರಥೋತ್ಸವ ಇದಾಗಿದೆ.
| ರವಿಪ್ರಸಾದ ಕುರಿ, ಕವಲೂರು ಗ್ರಾಮಸ್ಥ

Latest Posts

ಲೈಫ್‌ಸ್ಟೈಲ್