ಅಮ್ಮ ಬದುಕಬೇಕಿದ್ರೆ ವೆಂಟಿಲೇಟರ್ ಅಗತ್ಯ, ದಯವಿಟ್ಟು ಕೊಡಿಸಿ: ಸಚಿವರಿಗೆ ಕೈಮುಗಿದು ಬೇಡಿಕೊಂಡ ಯುವಕ

Ventilator
ಸಾಂದರ್ಭಿಕ ಚಿತ್ರ
Published on

ಚಾಮರಾಜನಗರ: ರಾಜ್ಯದಲ್ಲಿ ಕರೊನಾ ಸೋಂಕಿತರಿಗೆ ಅಗತ್ಯಕ್ಕೆ ತಕ್ಕಂತೆ ಬೆಡ್​, ಐಸಿಯು, ಆಕ್ಸಿಜನ್ ಸಿಗದ ಪ್ರಕರಣಗಳು ಮುಂದುವರಿದಿದ್ದು, ಈಗಲೂ ಹಲವಾರು ರೋಗಿಗಳು ಮತ್ತು ಅವರ ಸಂಬಂಧಿಕರು ಅವುಗಳಿಲ್ಲದೆ ಪರದಾಡುತ್ತಿದ್ದಾರೆ. ಅಂಥವರ ಪೈಕಿ ಯುವಕನೊಬ್ಬ ತನ್ನ ತಾಯಿಗಾಗಿ ವೆಂಟಿಲೇಟರ್​ ಕೊಡಿಸಿ ಎಂದು ಸಚಿವರಲ್ಲಿ ಕೈಮುಗಿದು ಬೇಡಿಕೊಂಡಿದ್ದಾನೆ.

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯ ಕೃಷ್ಣ ಎಂಬ ಯುವಕ ಜಿಲ್ಲಾ ಉಸ್ತುವಾರಿ ಸಚಿವ ಎಸ್​. ಸುರೇಶ್​ ಕುಮಾರ್ ಅವರ ಬಳಿ ಹೀಗೆ ಕೈ ಮುಗಿದು ಬೇಡಿಕೊಂಡಿದ್ದಾನೆ. ಅಮ್ಮನನ್ನು ಗುಂಡ್ಲುಪೇಟೆ ಆಸ್ಪತ್ರೆಯಲ್ಲಿ ಅಡ್ಮಿಟ್​ ಮಾಡಿಕೊಂಡಿದ್ದಾರೆ. ಅವರು ಬದುಕಬೇಕಿದ್ದರೆ ವೆಂಟಿಲೇಟರ್ ಅಗತ್ಯವಿದೆ, ಕೊಡಿಸಿ ಎಂಬುದಾಗಿ ಅಂಗಲಾಚಿ ಬೇಡಿಕೊಂಡಿದ್ದಾನೆ.

ಈ ಯುವಕನ ತಾಯಿ ಶಾಂತಮ್ಮಗೆ ಮೂರು ದಿನದ ಹಿಂದೆ ಕೋವಿಡ್​ ದೃಢಪಟ್ಟಿದ್ದು, ಗುಂಡ್ಲುಪೇಟೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗುಂಡ್ಲುಪೇಟೆ ಆಸ್ಪತ್ರೆಯಿಂದ ಜಿಲ್ಲಾಸ್ಪತ್ರೆಗೆ, ಜಿಲ್ಲಾಸ್ಪತ್ರೆಯಿಂದ ಮತ್ತೆ ತಾಲೂಕಾಸ್ಪತ್ರೆಗೆ ಅಲೆಸಿದ್ದಾರೆ ಎಂದೂ ಶಾಂತಮ್ಮ ಕಡೆಯವರು ಆರೋಪಿಸಿದ್ದಾರೆ.

ಡಾಕ್ಟರ್ ಹತ್ತಿರ ಕೇಳಿದರೆ ಬೆಡ್​ ಇದೆ, ವೆಂಟಿಲೇಟರ್ ಇಲ್ಲ ಎನ್ನುತ್ತಿದ್ದಾರೆ. ದಯಮಾಡಿ ವೆಂಟಿಲೇಟರ್​ಗೆ ವ್ಯವಸ್ಥೆ ಮಾಡಿ. ನಾನು ಕಮಲಕ್ಕೆ ವೋಟ್​ ಹಾಕಿರುವುದು, ವೋಟ್​ ಕೇಳೋಕೆ ಮನೆ ಬಾಗಿಲಿಗೆ ಬಂದು ಕಾಲಿಗೆ ಬೀಳುತ್ತಾರೆ, ಸಾಯುತ್ತಿದ್ದರೆ ಯಾರು ಬಂದು ನೋಡುತ್ತಾರೆ ಎಂದು ಯುವಕ ಕೃಷ್ಣ ಗೋಳು ಹೇಳಿಕೊಂಡಿದ್ದಾನೆ. ಬಳಿಕ ಸಚಿವರು ಯುವಕನ ಫೋನ್​ ನಂಬರ್ ಪಡೆದು ವೆಂಟಿಲೇಟರ್ ಕೊಡಿಸುವ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net