More

    ಕವಿಯಾದವನಿಗೆ ಪ್ರಾಸ ಕಾಡುವುದು ಸಹಜ

    ಕಲಬುರಗಿ: ಕಾವ್ಯದ ಕೆಲವೆಡೆ ಪ್ರಾಸಗಳು ಹೊಂದಾಣಿಕೆಗೆ ಕಟ್ಟು ಬಿದ್ದು ಅರ್ಥಕ್ಕೆ ಸ್ಪಷ್ಟತೆ ಸಿಗದೆ ಪ್ರಮುಖ ಉದ್ದೇಶ ಸೊರಗಿದ್ದು ಕಂಡುಬರುತ್ತದೆ. ಕವಿಯಾದವನಿಗೆ ಪ್ರಾಸ ಕಾಡುವುದು ಸಹಜ. ಆದರೆ ಪ್ರಾಸದ ಭರಾಟೆಯಲ್ಲಿ ಕಾವ್ಯ ರಸಾನುಭವಕ್ಕೆ ಕುಂದು ಬಾರದಂತೆ ಎಚ್ಚರ ವಹಿಸುವುದು ಮುಖ್ಯ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಕುಲಪತಿ ಡಾ.ಟಿ.ಎಂ. ಭಾಸ್ಕರ್ ಹೇಳಿದರು.

    ನಗರದ ರಂಗಾಯಣ ಸಭಾಂಗಣದಲ್ಲಿ ಬಸವ ಪ್ರಭು ಪ್ರಕಾಶನ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಲ್ಲಮ್ಮ ಶಿವರಾಜ ಕಾಳಗಿ ವಿರಚಿತ ಪಾತಾಳ ಗಂಗೆ ಕವನ ಸಂಕಲನ ಬಿಡುಗಡೆ ಮಾಡಿದ ಅವರು, ಲೇಖಕಿ ತಮ್ಮ ಪ್ರಥಮ ಕವನ ಸಂಕಲನದಲ್ಲಿ ತಡವರಿಸುತ್ತಲೇ ಗಟ್ಟಿ ಹೆಜ್ಜೆಗಳನ್ನಿಡಲು ಪ್ರಯತ್ನಿಸಿದ್ದಾರೆ. ಇಲ್ಲಿಯ ಕವನಗಳು ವಿಷಯ ವೈವಿಧ್ಯದಿಂದ ಕೂಡಿವೆ. ಹೆಚ್ಚಿನ ಕವನಗಳು ಸಾಮಾಜಿಕ ಕಳಕಳಿ, ಪ್ರಗತಿಪರ ವಿಚಾರಧಾರೆ, ಮಾನವೀಯ ಮೌಲ್ಯಗಳಿಂದ ಕೂಡಿದ್ದು ಕಂಡುಬರುತ್ತದೆ ಎಂದರು.

    ಡಾ.ಸುಜಾತಾ ಪಾಟೀಲ್ ಮಾತನಾಡಿ, ಮಲ್ಲಮ್ಮನವರ ಕವಿ ಮನಸ್ಸು ಜಾಗೃತವಾಗಿ ಸಣ್ಣಪುಟ್ಟ ಪ್ರಸಂಗಗಳಿಗೂ ಸ್ಪಂದಿಸಿ ಕಾವ್ಯ ರಚಿಸಿದ್ದು ಮೆಚ್ಚುವ ಸಂಗತಿ. ಮಹಿಳೆಯಾಗಿ ಸ್ತ್ರೀಯರ ನೋವು-ನಲಿವುಗಳಿಗೆ ಧ್ವನಿಯಾಗಿ ಸಕಾರಾತ್ಮಕ ನೆಲೆಯಲ್ಲಿ ಕವನಗಳನ್ನು ಕಟ್ಟಿದ್ದಾರೆ. ಅಲ್ಲಲ್ಲಿ ನಿರಾಸೆ ಎಳೆಗಳು ಬಂದರೂ ಆಧುನಿಕ ಯುಗದಲ್ಲಿ ಮಹಿಳೆಯರಿಗೆ ಏನೆಲ್ಲ ದಕ್ಕಿದೆ, ಅದಕ್ಕೆ ಸಮಾಜದ ಪ್ರತಿಕ್ರಿಯೆ ಏನು ಎಂದು ಹೇಳುವ ಪ್ರಯತ್ನ ಮಾಡಿದ್ದಾರೆ ಎಂದು ಶ್ಲಾಘಿಸಿದರು.

    ಶ್ರೀನಿವಾಸ ಸರಡಗಿಯ ಶ್ರೀ ರೇವಣಸಿದ್ದ ಶಿವಾಚಾರ್ಯ, ಮಹಾಗಾಂವ್ ಕಳ್ಳಿಮಠದ ಶ್ರೀ ವಿರೂಪಾಕ್ಷ ದೇವರು ಸಾನ್ನಿಧ್ಯದಲ್ಲಿ ಮಕ್ಕಳ ಹಿರಿಯ ಸಾಹಿತಿ ಎ.ಕೆ. ರಾಮೇಶ್ವರ ಉದ್ಘಾಟಿಸಿದರು. ರೇವಣಸಿದ್ಧಪ್ಪ ಕಾಳಗಿ ಅಧ್ಯಕ್ಷತೆ ವಹಿಸಿದ್ದರು. ಉಸ್ಮಾನಿಯಾ ವಿವಿ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಲಿಂಗಣ್ಣ ಗೋನಾಳ, ಲೇಖಕಿ ಮಲ್ಲಮ್ಮ ಶಿವರಾಜ ಕಾಳಗಿ ಇದ್ದರು.

    ಡಾ.ಶರಣಬಸಪ್ಪ ವಡ್ಡನಕೇರಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ಅಂಬರಾಯ ಮಡ್ಡೆ ನಿರೂಪಿಪಣೆ ಮಾಡಿದರು. ವಿವಿಧ ಕ್ಷೇತ್ರದ ಸಾಧಕರಾದ ಡಾ.ವಿಜಯಲಕ್ಷೀ ಕೋಸಗಿ, ನೀಲಾಂಬಿಕಾ ಮಹಾಗಾಂವಕರ್, ಬಿ.ಎಚ್. ನಿರಗುಡಿ, ಶರಣಗೌಡ ಪಾಟೀಲ್ ಪಾಳ, ಶಿವಕುಮಾರ ತಡಕಲ್, ಶರಣಬಸಪ್ಪ ವೀರಶೆಟ್ಟಿ, ಜೈಪ್ರಕಾಶ ಓಕಳಿ, ಶ್ರೀಕಾಂತ ಪಾಟೀಲ್, ಬಸವರಾಜ ಶಿರಡಿ, ಅಣ್ಣಪ್ಪ ಭದ್ರಶೆಟ್ಟಿ, ಶೈಲಜಾ ಮಠಪತಿ, ಸುರೇಖಾ ಮಠ ಅವರನ್ನು ಸತ್ಕರಿಸಲಾಯಿತು.

    ಲೇಖಕಿ ಮಲ್ಲಮ್ಮನವರು ತಮ್ಮ ಸುತ್ತಮುತ್ತ ಕಂಡು ಬರುವ ಪ್ರಸಂಗಗಳಿಗೆ ಮಿಡಿದಿದ್ದು, ನಾಡು-ನುಡಿ, ದೇಶ, ಗ್ರಾಮ, ಶಾಲೆ, ಸಾಮಾಜಿಕ ಸಮಸ್ಯೆ, ರಾಜಕೀಯ, ಧಾರ್ಮಿಕ, ವ್ಯಕ್ತಿತ್ವ ದರ್ಶನ ಹೀಗೆ ಬಿಡಿ ಬಿಡಿ ಭಾವನೆಗಳನ್ನು ಕವಿತೆ ರೂಪದಲ್ಲಿ ಹಿಡಿದಿಟ್ಟಿರುವುದು ಮೆಚ್ಚುವಂಥದ್ದು.
    | ಡಾ.ಟಿ.ಎಂ.ಭಾಸ್ಕರ್ ಕುಲಪತಿ, ಜಾನಪದ ವಿವಿ ಹಾವೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts