More

    2ನೇ ದಿನವೂ ರಸ್ತೆಗಿಳಿಯದ ಬಸ್

    ಶಿವಮೊಗ್ಗ: ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೆಎಸ್​ಆರ್​ಟಿಸಿ ನೌಕರರು ನಡೆಸುತ್ತಿರುವ ಮುಷ್ಕರ ಜಿಲ್ಲಾದ್ಯಂತ ಶನಿವಾರವೂ ಮುಂದುವರಿಯಿತು.

    ರಾಜ್ಯ ಸರ್ಕಾರದ ಸಂಧಾನಕ್ಕೆ ಜಗ್ಗದ ಚಾಲಕರು, ನಿರ್ವಾಹಕರು, ಇತರ ಸಿಬ್ಬಂದಿ ಶನಿವಾರ ಇಡೀ ದಿನ ಬಸ್​ಗಳು ರಸ್ತೆಗಿಳಿಯಲೇ ಇಲ್ಲ. ಇದರಿಂದ ಹೊರ ಜಿಲ್ಲೆಗಳಿಗೆ ಪ್ರಯಾಣ ಬೆಳೆಸಬೇಕಿದ್ದ ಪ್ರಯಾಣಿಕರು ಅನಿವಾರ್ಯವಾಗಿ ಖಾಸಗಿ ಬಸ್ ಅಥವಾ ವಾಹನಗಳ ಮೊರೆ ಹೋಗುವಂತಾಯಿತು.

    ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಾದ ಹಾವೇರಿ, ಗದಗ, ವಿಜಯಪುರ, ಕೊಪ್ಪಳ, ಧಾರವಾಡ, ಬಳ್ಳಾರಿ, ಕರಾವಳಿ ಭಾಗದ ಉತ್ತರ ಕನ್ನಡ, ಇತ್ತ ಬೆಂಗಳೂರು ತುಮಕೂರು, ಹಾಸನ ಒಳಗೊಂಡಂತೆ ಹಲವು ಜಿಲ್ಲೆಗಳಿಗೆ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಹಾಗಾಗಿ ಶುಕ್ರವಾರ ಇಡೀ ದಿನ ಬಸ್ ನಿಲ್ದಾಣದಲ್ಲೇ ಕಾಲ ಕಳೆದಿದ್ದ ಕೆಲ ಪ್ರಯಾಣಿಕರು ಶನಿವಾರವೂ ಬಸ್ ಸಂಚಾರ ಆರಂಭ ಆಗದಿರುವುದನ್ನು ಖಚಿತಪಡಿಸಿಕೊಂಡು ಮತ್ತೆ ಬಂದ ದಾರಿಗೆ ಮರಳಿದರು. ಮತ್ತೆ ಕೆಲವರು ಖಾಸಗಿ ವಾಹನಗಳ ಮೂಲಕ ಪ್ರಯಾಣ ಮುಂದುವರಿಸಿದರು.

    ಕೇವಲ 4 ಬಸ್ ಸಂಚಾರ: ನಾಲ್ಕು ಡಿಪೋ ಒಳಗೊಂಡಿರುವ ಶಿವಮೊಗ್ಗ ವಿಭಾಗದಲ್ಲಿ ಶನಿವಾರ ಇಡೀ ದಿನ ಕೇವಲ ನಾಲ್ಕು ಬಸ್​ಗಳು ಮಾತ್ರ ರಸ್ತೆಗಿಳಿದಿದ್ದವು. ಆದರೆ ಮುಷ್ಕರದ ಬಿಸಿ ಮತ್ತಷ್ಟು ಕಾವೇರುತ್ತಲೇ ಅವೂ ಮಾರ್ಗಮಧ್ಯದಲ್ಲೇ ಸಂಚಾರ ಸ್ಥಗಿತಗೊಳಿಸಿದವು. ಶಿವಮೊಗ್ಗ ಡಿಪೋದಿಂದ 4 ಬಸ್​ಗಳು ಸಂಚಾರ ಆರಂಭಿಸಿ ಕೆಲವೇ ಸಮಯದಲ್ಲಿ ಸ್ಥಗಿತಗೊಳಿಸಿವೆ. ಇನ್ನುಳಿದಂತೆ ಭದ್ರಾವತಿಯಲ್ಲಿ 30, ಸಾಗರದಲ್ಲಿ 27 ಹಾಗೂ ಹೊನ್ನಾಳಿ ಡಿಪೋದಿಂದ 19ರಲ್ಲಿ ಒಂದೇ ಒಂದು ಬಸ್ ಕೂಡ ರಸ್ತೆಗಿಳಿದಿಲ್ಲ. ಇದರಿಂದ ಕೆಎಸ್​ಆರ್​ಟಿಸಿ ಸಂಚಾರ ಪುನರಾರಂಭಗೊಳ್ಳಬಹುದೆಂಬ ನಿರೀಕ್ಷೆಯಲ್ಲಿದ್ದ ಪ್ರಯಾಣಿಕರಿಗೆ ಎರಡನೇ ದಿನವೂ ನಿರಾಸೆ ಎದುರಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts