More

    ಅತಂತ್ರರಾಗಿದ್ದ 150 ಪ್ರಯಾಣಿಕರು ಮಂಗಳೂರಿಗೆ

    ಮಂಗಳೂರು: ದುಬೈಯಿಂದ ಕೇರಳದ ಕಣ್ಣೂರು ವಿಮಾನ ನಿಲ್ದಾಣಕ್ಕೆ ಶನಿವಾರ ಬಂದಿಳಿದು ಕಾಸರಗೋಡು ಜಿಲ್ಲಾಡಳಿತದ ಅಮಾನವೀಯ ವರ್ತನೆಯಿಂದ ಅತಂತ್ರರಾಗಿದ್ದ ಕರ್ನಾಟಕದ ಗರ್ಭಿಣಿಯರು, ರೋಗಿಗಳು, ಮಕ್ಕಳ ಸಹಿತ 150 ಪ್ರಯಾಣಿಕರನ್ನು ಮಂಗಳೂರಿನ ವಿವಿಧ ಹೋಟೆಲ್‌ಗಳಲ್ಲಿ ನಿಗಾವಣೆಯಲ್ಲಿರಿಸಲಾಗಿದೆ.

    ಈ ಚಾರ್ಟರ್ಡ್ ವಿಮಾನ ಶನಿವಾರ ಮಂಗಳೂರು ವಿಮಾನ ನಿಲ್ದಾಣಕ್ಕೆ ಬರಬೇಕಿತ್ತು, ಈ ಸಂಬಂಧ ಪ್ರಯತ್ನಗಳೂ ನಡೆದಿದ್ದವು, ಆದರೆ ಆಗಲೇ ಮೂರು ವಿಮಾನ ಬರಲಿರುವ ಕಾರಣದಿಂದ ಹೆಚ್ಚುವರಿ ಪ್ರಯಾಣಿಕರನ್ನು ನಿರ್ವಹಣೆ ಮಾಡಲಾಗದು ಎಂದು ದ.ಕ. ಜಿಲ್ಲಾಡಳಿತ ಅನುಮತಿ ನಿರಾಕರಿಸಿತ್ತು. ಬಳಿಕ ಈ ವಿಮಾನವನ್ನು ಗೊತ್ತುಪಡಿಸಿದ್ದ ಸಂಘಟಕರು ಕಣ್ಣೂರು ಏರ್‌ಪೋರ್ಟ್‌ನಲ್ಲಿ ಇಳಿಸಿದ್ದರು.
    ಕೇರಳ ಸರ್ಕಾರ ವಿಮಾನ ಪ್ರಯಾಣಿಕರಿಗೆ ಹೋಂ ಕ್ವಾರಂಟೈನ್ ವಿಧಿಸುತ್ತಿದ್ದು, ಹೆಚ್ಚು ತಪಾಸಣೆ ಮಾಡುವುದಿಲ್ಲ. ಅದರಂತೆ ಕರ್ನಾಟಕದ ಪ್ರಯಾಣಿಕರನ್ನು ಮಂಗಳೂರಿಗೆ ಕಳುಹಿಸುವ ಪ್ರಯತ್ನ ಆರಂಭಗೊಂಡಿತ್ತು. ಈ ಬಗ್ಗೆ ಮಾಹಿತಿ ಪಡೆದ ದ.ಕ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್, ನಮ್ಮ ಅನುಮತಿ, ಮಾಹಿತಿ ಇಲ್ಲದೆ ನಿಮ್ಮ ಏರ್‌ಪೋರ್ಟ್‌ನಲ್ಲಿ ಪ್ರಯಾಣಿಕರನ್ನು ಇಳಿಸಿದ್ದೀರಿ. ಹಾಗಾಗಿ ಅಲ್ಲೇ 7 ದಿನ ಕ್ವಾರಂಟೈನ್ ಮಾಡಿದರೆ ಮಾತ್ರ ಮಂಗಳೂರು ಪ್ರವೇಶಿಸಲು ಅನುಮತಿ ನೀಡುವುದಾಗಿ ಕಣ್ಣೂರು ಜಿಲ್ಲಾಡಳಿತಕ್ಕೆ ತಿಳಿಸಿದ್ದರು. ಅದಕ್ಕೆ ಆ ಕಡೆಯಿಂದ ಒಪ್ಪಿಗೆ ದೊರೆತಿತ್ತು.

    ಆದರೆ ಇದರ ನಡುವೆ ಪ್ರಯಾಣಿಕರ ಏಜೆಂಟರು ಪ್ರಯಾಣಿಕರನ್ನು ಕಾಸರಗೋಡಿಗೆ ಕರೆತಂದು ಅಲ್ಲಿನ ಮೂರು ಹೋಟೆಲ್‌ಗಳಲ್ಲಿ ಇರಿಸಿದ್ದಾರೆ. ಇದನ್ನು ಅರಿತ ಕಾಸರಗೋಡು ಡಿಸಿ ಹಾಗೂ ಎಸ್ಪಿ, ಹೋಟೆಲ್‌ನವರನ್ನು ತರಾಟೆಗೆ ತೆಗೆದುಕೊಂಡು ಪ್ರಯಾಣಿಕರನ್ನು ಹೊರಗೆ ಕಳುಹಿಸಿದ್ದಾರೆ. ಗರ್ಭಿಣಿಯರು, ವೃದ್ಧರು, ಮಕ್ಕಳೆಂದೂ ಪರಿಗಣಿಸದೆ ಅಮಾನವೀಯವಾಗಿ ವರ್ತಿಸಿದ್ದಾರೆ.
    ವಿಚಾರ ತಿಳಿದ ದ.ಕ ಡಿಸಿ ಕೊನೆಗೂ ಅವರನ್ನು ಮಂಗಳೂರಿಗೆ ಕರೆತಂದು ಕ್ವಾರಂಟೈನ್ ಮಾಡುವಂತೆ ಹೇಳಿದ್ದಾರೆ. ಅದರಂತೆ ಸೋಮವಾರ ತಡರಾತ್ರಿ ವೇಳೆಗೆ ಎಲ್ಲ 150 ಮಂದಿಯನ್ನೂ ಮಂಗಳೂರಿನ ಮೂರು ಹೋಟೆಲ್‌ಗಳಲ್ಲಿ ನಿಗಾವಣೆ ಮಾಡಲಾಗಿದೆ

    ವಸತಿಗೃಹ ಮುಚ್ಚಲು ಆದೇಶ
    ಕಾಸರಗೋಡು: ವಿದೇಶದಿಂದ ಕಣ್ಣೂರು ವಿಮಾನ ನಿಲ್ದಾಣದ ಮೂಲಕ ಕಾಸರಗೋಡಿಗೆ ಆಗಮಿಸಿದವರಿಗೆ ಅಧಿಕಾರಿಗಳ ಗಮನಕ್ಕೆ ಬಾರದ ರೀತಿಯಲ್ಲಿ ವಾಸ್ತವ್ಯಕ್ಕೆ ಅನುಮತಿ ಮಾಡಿಕೊಟ್ಟ ನಗರದ ಮೂರು ವಸತಿಗೃಹಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದು, ಒಂದು ವಾರ ಮುಚ್ಚಲು ಆದೇಶಿಸಿದ್ದಾರೆ.

    ನಮ್ಮ ಅನುಮತಿ ಇಲ್ಲದೆ ವಿಮಾನವನ್ನು ಕಣ್ಣೂರಿನಲ್ಲಿ ಇಳಿಸಿದ್ದಾರೆ, ನಿಯಮ ಪ್ರಕಾರ ಅಲ್ಲೇ ಕ್ವಾರಂಟೈನ್ ಮಾಡಬೇಕಿತ್ತು. ಯಾವುದೇ ಮಾಹಿತಿ ನಮಗೆ ಕೊಟ್ಟಿರಲಿಲ್ಲ, ಕ್ವಾರಂಟೈನ್ ಮಾಡದೆ ಕಳುಹಿಸಿದ್ದಾರೆ. ಮೂರು ಬಸ್ಸಲ್ಲಿ ಬಂದವರನ್ನು ಮಂಗಳೂರಿನಲ್ಲಿ ಕ್ವಾರಂಟೈನ್ ಮಾಡಿದ್ದೇವೆ.
    -ಸಿಂಧೂ ಬಿ.ರೂಪೇಶ್, ದ.ಕ ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts