More

    ಕೊರೊನಾ ಭಯದಲ್ಲಿರುವ ಭಾರತೀಯರನ್ನು ಚೀನಾದಿಂದ ಕರೆತರಲು ಹೊರಟ ಬೋಯಿಂಗ್747​ ವಿಮಾನ

    ನವದೆಹಲಿ: ಚೀನಾದಲ್ಲಿ ಕೊರೊನಾ ವೈರಸ್​ನಿಂದ ಮೃತರಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದ್ದು, ಚೀನಾದಲ್ಲಿರುವ ಭಾರತೀಯರನ್ನು ದೇಶಕ್ಕೆ ಕರೆತರಲು ಇಂದು ಬೋಯಿಂಗ್​ ವಿಮಾನ ತೆರಳಲಿದೆ.


    ಚೀನಾದಲ್ಲಿ 325 ಭಾರತೀಯರು ಕೊರೊನಾ ವೈರಸ್​ನಿಂದ ಪ್ರಾಣರಕ್ಷಣೆ ಮಾಡಿಕೊಳ್ಳುವುದಕ್ಕೆ ಕಾಯುತ್ತಿದ್ದು, ಅವರನ್ನು ಭಾರತಕ್ಕೆ ಕರೆತರಲೆಂದು ಇಂದು ಬೋಯಿಂಗ್​ 747 ವಿಮಾನ ರಾಷ್ಟ್ರ ರಾಜಧಾನಿ ದೆಹಲಿಯಿಂದ ತೆರಳಲಿದೆ. ಮೊದಲು ಮುಂಬೈನಿಂದ ಹೊರಡಲಿರುವ ವಿಮಾನ, ದೆಹಲಿಯಿಂದ ಮಧ್ಯಾಹ್ನ 12.30ಕ್ಕೆ ಹೊರಡಲಿದೆ. ಒಟ್ಟು ಆರು ಗಂಟೆಗಳ ಪ್ರಯಾಣ ಮಾಡಲಿರುವ ವಿಮಾನವು ಚೀನಾದ ವುಹಾನ್​ ನಗರದಲ್ಲಿ ಭೂಸ್ಪರ್ಶ ಮಾಡಲಿದೆ.


    ಮಾಸ್ಕ್, ಗ್ಲೌಸ್​, ಔಷಧಿಗಳನ್ನು ವಿಮಾನದ ಪ್ರತಿ ಆಸನದಲ್ಲೂ ಇರಿಸಲಾಗಿದ್ದು, ಇಬ್ಬರು ವಿಶೇಷ ವೈದ್ಯರನ್ನು ಸಹ ಜತೆಯಲ್ಲಿ ಕಳುಹಿಸಿಕೊಡಲಾಗುತ್ತಿದೆ. ವುಹಾನ್​ನಲ್ಲಿ ವಿಮಾನಕ್ಕೆ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವಾಗ ಅಗತ್ಯ ವೈದ್ಯಕೀಯ ಪರೀಕ್ಷೆಗಳನ್ನು ಮಾಡಲಾಗುವುದು. ಒಂದು ವೇಳೆ ಯಾವುದೇ ವ್ಯಕ್ತಿಯಲ್ಲಿ ಕೊರೊನಾ ವೈರಸ್​ ಕಂಡುಬಂದಲ್ಲಿ ಅಂತಹ ವ್ಯಕ್ತಿಯನ್ನು ವಿಮಾನದೊಳಗೆ ಬಿಡಲಾಗುವುದಿಲ್ಲ ಎಂದು ತಿಳಿಸಲಾಗಿದೆ.


    ಚೀನಾದಲ್ಲಿ ಕೊರೊನಾ ವೈರಸ್​ನಿಂದಾಗಿ ಈಗಾಗಲೇ 200ಕ್ಕೂ ಹೆಚ್ಚು ಮಂದಿ ಮೃತರಾಗಿದ್ದಾರೆ. 9,000ಕ್ಕೂ ಹೆಚ್ಚಿನ ಜನರಲ್ಲಿ ವೈರಸ್​ ಕಂಡುಬಂದಿರುವುದಾಗಿ ಅಲ್ಲಿನ ವೈದ್ಯರು ತಿಳಿಸಿದ್ದಾರೆ. ಒಟ್ಟಾರೆಯಾಗಿ 15 ದೇಶಗಳಲ್ಲಿ ಕೊರೊನಾ ವೈರಸ್​ ಪತ್ತೆಯಾಗಿರುವುದು ದಾಖಲಾಗಿದೆ. ನಿನ್ನೆ ಸಂಜೆ ಕೇರಳದಲ್ಲಿ ದೇಶದ ಮೊದಲ ಕೊರೊನಾ ಪ್ರಕರಣ ಬೆಳಕಿಗೆ ಬಂದಿತ್ತು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts