More

    ಈಜುಗೊಳದಲ್ಲೀಗ ಎಣ್ಣೆ ಪಾರ್ಟಿ !

    ರಾಣೆಬೆನ್ನೂರ: ಬೇಸಿಗೆ ಕಾಲದಲ್ಲಿ ಈಜುಗಾರರ ಮನ ತಂಪಾಗಿಸುವ, ಸ್ವಚ್ಛಂದ ಪರಿಸರದಲ್ಲಿ ಮಕ್ಕಳಿಗೆ ಈಜು ಕಲಿಸಿಕೊಡುವ ತಾಣವಾಗಬೇಕಿತ್ತು. ಆದರೆ, ಅಧಿಕಾರಿಗಳ ನಿರ್ಲಕ್ಷ್ಯಂದ ಪುಂಡಪೋಕರಿಗಳ ಅಡ್ಡೆಯಾಗಿದೆ. ರಾತ್ರಿ ಎಣ್ಣೆ ಹೊಡೆಯುವವವರ ಬೀಡು ಆಗಿದೆ.

    ನಗರದ ಮುನ್ಸಿಪಲ್ ಮೈದಾನದಲ್ಲಿ ಒಂದೂವರೆ ಕೋಟಿ ರೂ. ವೆಚ್ಚದಲ್ಲಿ 2017ರಲ್ಲಿ ನಿರ್ವಿುಸಿದ ಈಜುಗೊಳದ ದುಸ್ಥಿತಿಯಿದು.

    ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ವತಿಯಿಂದ ನಿರ್ವಿುಸಿದ ಈಜುಗೊಳವನ್ನು ಆರಂಭದಲ್ಲಿ ಬೆಂಗಳೂರಿನ ಸಾಗರ ಪೂಲ್ಸ್ ಎಂಬ ಖಾಸಗಿ ಕಂಪನಿಗೆ ಗುತ್ತಿಗೆ ನೀಡಲಾಗಿತ್ತು. 2019ರ ಡಿಸೆಂಬರ್​ಗೆ ಅವರ ಗುತ್ತಿಗೆ ಅವಧಿ ಮುಗಿದಿದ್ದು, ಟೆಂಡರ್ ಮೂಲಕ ಜ. 1ರಿಂದ ಬ್ಯಾಡಗಿಯ ಬಸಪ್ಪ ಉಳ್ಳಾಗಡ್ಡಿ ಎಂಬುವವರು ಗುತ್ತಿಗೆ ಪಡೆದುಕೊಂಡಿದ್ದಾರೆ.

    ನಿಯಮಾನುಸಾರ ಹಳೇ ಗುತ್ತಿಗೆದಾರರು ಈಜುಗೊಳವನ್ನು ಸಂಪೂರ್ಣ ಸ್ವಚ್ಛಗೊಳಿಸಿ ಇಲಾಖೆಗೆ ಹಸ್ತಾಂತರಿಸಬೇಕು. ನಂತರ ಇಲಾಖೆಯವರು ಹೊಸ ಗುತ್ತಿಗೆದಾರರಿಗೆ ನೀಡಬೇಕಿತ್ತು. ಆದರೆ, ಹಳೇ ಗುತ್ತಿಗೆದಾರರು ತಮಗೆ ನಷ್ಟವಾಗಿದೆ ಎನ್ನುವ ಕಾರಣ ಹೇಳಿ, ಸ್ವಚ್ಛಗೊಳಿಸದೇ ಹಾಗೆಯೇ ಬಿಟ್ಟು ಹೋಗಿದ್ದಾರೆ. ಅಲ್ಲದೆ, 88 ಸಾವಿರ ರೂ. ವಿದ್ಯುತ್ ಬಿಲ್ ಸಹ ತುಂಬಿಲ್ಲ. ಹೀಗಾಗಿ, ವಿದ್ಯುತ್ ಸಂಪರ್ಕ ಕೂಡ ಕಡಿತಗೊಳಿಸಲಾಗಿದೆ. ಇಲಾಖೆಯಿಂದ ಸ್ವಚ್ಛಗೊಳಿಸಿ ಕೊಡಿ ಎಂದು ಹೊಸ ಗುತ್ತಿಗೆದಾರರು ಕೇಳಿದರೆ, ತಮ್ಮ ಬಳಿ ದುಡ್ಡಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರಂತೆ. ಹೀಗಾಗಿ, ಕಳೆದ ಒಂದೂವರೆ ತಿಂಗಳಿಂದ ಈಜುಗೊಳ ಪಾಳು ಬಿದ್ದಿದೆ.

    ಈಜುಗೊಳ ಸ್ಥಗಿತಗೊಂಡಿದ್ದರಿಂದ ಪುಂಡಪೋಕರಿಗಳಿಗೆ ಮೋಜು-ಮಸ್ತಿಯ ತಾಣವಾಗಿ ಮಾರ್ಪಟ್ಟಿದೆ. ರಾತ್ರಿಯಾಗುತ್ತಿದ್ದಂತೆ ಎಣ್ಣೆ ಪ್ರಿಯರು ಮದ್ಯ ಸೇವನೆಗಾಗಿ ಇಲ್ಲಿಗೆ ಬರುತ್ತಾರೆ. ಮದ್ಯದ ಅಮಲಿನಲ್ಲಿ ಕಿಡಿಗೇಡಿಗಳು ಮಹಿಳಾ ಶೌಚಗೃಹ ಸೇರಿ ಸಂಪೂರ್ಣ ಕಟ್ಟಡದ ಗಾಜುಗಳನ್ನು ಒಡೆದು ಹಾಕಿದ್ದಾರೆ.

    ಈಜುಗೊಳದಲ್ಲಿ ನೀರು ನಿಂತಲ್ಲೇ ಇರುವುದರಿಂದ ಸೆಕ್ಷನ್ ಮಷಿನ್ ಆರಂಭಿಸಬೇಕು. ಅಂದಾಗ ಮಾತ್ರ ನೀರು ಸ್ವಚ್ಛವಾಗಿರುತ್ತದೆ. ಆದರೆ, ಈಜುಗೊಳ ಸ್ಥಗಿತಗೊಂಡಿದ್ದರಿಂದ ಸಂಪೂರ್ಣ ನೀರು ಹಸಿರು ಬಣ್ಣಕ್ಕೆ ತಿರುಗಿದ್ದು, ಗಬ್ಬು ನಾರುತ್ತಿವೆ. ಫಿಲ್ಟರ್ ಮಷಿನ್ ಕೂಡ ಕೆಟ್ಟು ನಿಂತಿದೆ. ಸುತ್ತಲೂ ಕಸದ ಗಿಡಗಳು ಬೆಳೆದಿದ್ದು, ಒಳಗಡೆ ಕಾಲಿಡಲು ಆಗದ ಸ್ಥಿತಿ ನಿರ್ವಣವಾಗಿದೆ.

    ಇಷ್ಟೆಲ್ಲ ಆದರೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಧಿಕಾರಿಗಳು ಮಾತ್ರ ಇತ್ತ ಕಡೆ ಗಮನ ನೀಡಿಲ್ಲ. ಬೇಸಿಗೆ ಕಾಲದಲ್ಲಿ ಮನರಂಜನೆ ತಾಣವಾಗಬೇಕಿದ್ದ ಈಜುಗೊಳ ಇದೀಗ ಪಾಳು ಬಿದ್ದಿರುವುದು ವಾಣಿಜ್ಯ ನಗರಿ ಈಜುಪಟುಗಳಿಗೆ ಬೇಸರ ತಂದಿದೆ.

    ರಾಣೆಬೆನ್ನೂರಿನಲ್ಲಿ ಈಜುಗೊಳ ನಿರ್ವಿುಸಿದಾಗ ಸಂತಸಪಟ್ಟಿದ್ದೇವು. ಆದರೀಗ ಬಂದ್ ಆಗಿದ್ದು, ಅಲ್ಲಿಗೆ ಕಾಲಿಡಲು ಆಗದ ಸ್ಥಿತಿಗೆ ತಲುಪಿದೆ. ಬೇಸಿಗೆ ಆರಂಭವಾಗಿದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಕೂಡಲೆ ಸೂಕ್ತ ಕ್ರಮ ಕೈಗೊಂಡು ಈಜುಗೊಳ ಆರಂಭಿಸಬೇಕು. – ನಿರಂಜನ ಕೆ., ಈಜುಪಟು

    ಈ ಹಿಂದಿನ ಗುತ್ತಿಗೆದಾರರು ನಷ್ಟದ ಸಮಸ್ಯೆ ಹೇಳಿ ಸ್ವಚ್ಛ ಮಾಡಿ ಕೊಟ್ಟು ಹೋಗಲಿಲ್ಲ. ಅವರು 88 ಸಾವಿರ ರೂ. ವಿದ್ಯುತ್ ಬಿಲ್ ಉಳಿಸಿ ಹೋಗಿದ್ದಾರೆ. ಜ. 1ರಿಂದ ಬೇರೆಯವರಿಗೆ ಟೆಂಡರ್ ನೀಡಿದ್ದೇವೆ. ಅವರಿಗೆ ಹಣ ನೀಡಿ, ಈಜುಗೊಳ ಸ್ವಚ್ಛಗೊಳಿಸಿ ಕೊಡುತ್ತೇವೆ ಎಂದು ಹೇಳಿದ್ದೇವೆ. ಎರಡ್ಮೂರು ದಿನದಲ್ಲಿ ಎಲ್ಲವನ್ನೂ ಸರಿಪಡಿಸಿ ಪುನಃ ಆರಂಭಿಸುತ್ತೇವೆ. – ಮಲ್ಲಿಕಾರ್ಜುನ ಜೋಗದಿನಕರ, ವ್ಯವಸ್ಥಾಪಕ ನಿರ್ದೇಶಕ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾವೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts