More

    ಪ್ರಾಬಲ್ಯ ಸಾಧಿಸಲು ಪಕ್ಷಗಳ ತಾಲೀಮು

    ಶಿಗ್ಗಾಂವಿ: ಗ್ರಾಮ ಪಂಚಾಯಿತಿ ಚುನಾವಣೆ ಘೊಷಣೆಯಾದಾಗಿನಿಂದ ಹಳ್ಳಿಗಳಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ರಾಜಕೀಯ ಪಕ್ಷಗಳು ಗ್ರಾಪಂಗಳಲ್ಲಿ ತಮ್ಮ ಬೆಂಬಲಿಗರ ಮೂಲಕ ಪ್ರಾಬಲ್ಯ ಸಾಧಿಸಲು ತಾಲೀಮು ಆರಂಭಿಸಿವೆ.

    ಗ್ರಾಮಗಳ ಹೋಟೆಲ್, ಗೂಡಂಗಡಿಗಳು, ದೇವಸ್ಥಾನ ಕಟ್ಟೆಗಳಲ್ಲಿ ಈಗ ಗ್ರಾಪಂ ಚುನಾವಣೆಯದ್ದೇ ಮಾತು. ಗಲ್ಲಿ ಗಲ್ಲಿಗಳಲ್ಲಿ ಸ್ಪರ್ಧಿಸುವ ವ್ಯಕ್ತಿಗಳ ಕುರಿತು ಚರ್ಚೆಗಳು ತೀವ್ರಗೊಂಡಿವೆ. ಹಳಬರು ಮತ್ತೊಮ್ಮೆ ಕಣಕ್ಕಿಳಿಯುವ ಎಲ್ಲ ತಯಾರಿ ಮಾಡಿಕೊಂಡು ತಮ್ಮ ಹಿಂದಿನ ಸಾಧನೆ ತಿಳಿಸುತ್ತಿದ್ದಾರೆ. ಜತೆಗೆ, ತಮ್ಮೊಂದಿಗೆ ಮನಸ್ತಾಪಗೊಂಡವರ ಮನೆ, ಮನೆಗೆ ಹೋಗಿ ಮನಸ್ಸು ಗೆಲ್ಲುವ ತಂತ್ರಗಾರಿಕೆಯಲ್ಲಿ ತೊಡಗಿದ್ದಾರೆ. ಹೊಸಬರು ಹೊಸ ಹುರುಪಿನಲ್ಲಿ ಓಡಾಡುತ್ತಿದ್ದಾರೆ. ಕರೆಯದವರ ಮನೆ ಅಂಗಳದಲ್ಲೂ ಕಾಣಿಸಿಕೊಳ್ಳುತ್ತಿರುವ ಆಕಾಂಕ್ಷಿಗಳು, ಭರವಸೆಯ ಸುರಿಮಳೆಗೈಯುತ್ತಿರುವುದು ಚುನಾವಣೆ ಕಣ ರಂಗೇರಿಸುವ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ.

    ತಾಲೂಕಿನ ಒಟ್ಟು 28 ಗ್ರಾಪಂಗಳ ಪೈಕಿ ಅವಧಿ ಮುಗಿಯದ ಹನುಮರಹಳ್ಳಿ ಗ್ರಾಪಂ ಹೊರತುಪಡಿಸಿ ಒಟ್ಟು 27 ಪಂಚಾಯಿತಿಗಳಿಗೆ ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಒಟ್ಟು 158 ಮತಗಟ್ಟೆಗಳನ್ನು ಹೊಂದಿರುವ ತಾಲೂಕಿನಲ್ಲಿ ತಡಸ ಗ್ರಾಪಂ ಅತಿ ದೊಡ್ಡದಾಗಿದ್ದು, 27 ಸದಸ್ಯರನ್ನು ಹೊಂದಿದೆ. 54403 ಪುರುಷ, 49484 ಮಹಿಳೆ ಹಾಗೂ ಇತರ 5 ಸೇರಿ ಒಟ್ಟು 1,03892 ಮತದಾರರನ್ನು ಹೊಂದಿದೆ. 27 ಗ್ರಾಪಂಗಳಿಂದ 346 ಸದಸ್ಯರ ಆಯ್ಕೆಗೆ ಚುನಾವಣೆ ನಡೆಯಲಿದೆ.

    ನಾವಿಕನಿಲ್ಲದ ದೋಣಿಯಂತಾದ ಕಾಂಗ್ರೆಸ್: ಕಳೆದ 10 ವರ್ಷಗಳಿಂದ ಸತತ ಸೋಲಿನ ಸುಳಿಯಲ್ಲಿ ಸಿಲುಕಿರುವ ಕಾಂಗ್ರೆಸ್​ನಲ್ಲಿ ಮಾಜಿ ಶಾಸಕ ಅಜೀಮ್ೕರ್ ಖಾದ್ರಿ ಅನುಪಸ್ಥಿತಿ ಈ ಚುನಾವಣೆಯಲ್ಲಿ ಎದ್ದು ಕಾಣುತ್ತಿದೆ. ಪಕ್ಷದ ನಾಯಕರ ಮಧ್ಯೆ ಹೊಂದಾಣಿಕೆ ಕೊರತೆಯಿದ್ದು, ಬಣ ರಾಜಕೀಯ ಜೋರಾಗಿದೆ. ಎಲ್ಲ ನಾಯಕರು ಚುನಾವಣೆ ಕುರಿತು ಪ್ರತ್ಯೇಕ ಸಭೆ ಮಾಡುತ್ತಿರುವುದು ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಿದೆ. ಒಂದೆಡೆ ಬ್ಲಾಕ್ ಕಾಂಗ್ರೆಸ್ ಅವರಿವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವಲ್ಲಿ ಕಾಲಹರಣ ಮಾಡುತ್ತಿದ್ದರೆ, ಇತ್ತ ಕೆಪಿಸಿಸಿ ಸದಸ್ಯ ಷಣ್ಮುಖ ಶಿವಳ್ಳಿ ತಮ್ಮದೆ ಆದ ಕಾರ್ಯಕರ್ತರ ಪಡೆ ಕಟ್ಟಿಕೊಂಡು ಗ್ರಾಪಂಗಳಲ್ಲಿ ಕಾಂಗ್ರೆಸ್ ಬಾವುಟ ಹಾರಿಸಲು ಮುಂದಾಗಿದ್ದಾರೆ.

    ಸಚಿವರ ಅನುಪಸ್ಥಿತಿ: ಶಿಗ್ಗಾಂವಿ ಕ್ಷೇತ್ರದಿಂದ ಸತತ ಮೂರು ಬಾರಿ ಗೆದ್ದು ಈಗ ರಾಜ್ಯದ ಪ್ರಮುಖ ಹುದ್ದೆಯಲ್ಲಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ ರಾಜ್ಯ ರಾಜಕಾರಣದಲ್ಲಿ ತೊಡಗಿಕೊಂಡಿರುವುದರಿಂದ ಕ್ಷೇತ್ರದಲ್ಲಿ ಹೆಚ್ಚು ಸಮಯ ಕಳೆಯಲು ಆಗುತ್ತಿಲ್ಲ. ಏಕೈಕ ಮಹಿಳಾ ಜಿಪಂ ಸದಸ್ಯರನ್ನು ಹೊಂದಿರುವ ಬಿಜೆಪಿ, ವಿಧಾನಸಭೆ ಹೊರತುಪಡಿಸಿ ಜಿಪಂ ಮತ್ತು ತಾಪಂನಲ್ಲಿ ಅಷ್ಟೊಂದು ಉತ್ತಮ ಸಾಧನೆ ತೋರಿಲ್ಲ. ಈಗ ಶಾಸಕರ ಅನುಪಸ್ಥಿತಿಯಲ್ಲಿ ಬಿಜೆಪಿ ಮಂಡಲ, ಯುವ ಮೋರ್ಚಾ ಸೇರಿದಂತೆ ವಿವಿಧ ಘಟಕದ ಪದಾಧಿಕಾರಿಗಳು ಗ್ರಾಮ ಮಟ್ಟದಲ್ಲಿ ಸಮನ್ವಯ ಸಮಿತಿ ರಚಿಸಿ ಅಭ್ಯರ್ಥಿಗಳ ಆಯ್ಕೆಯಲ್ಲಿ ತೊಡಗಿದ್ದಾರೆ.

    ಬಿಜೆಪಿ ಭದ್ರಕೋಟೆ ಬಂಕಾಪುರ ಹೋಬಳಿ

    ತಾಲೂಕಿನ ಮೂರು ಹೋಬಳಿಗಳ ಪೈಕಿ ಬಂಕಾಪುರ ಹೋಬಳಿ ಬಿಜೆಪಿಯ ಭದ್ರಕೋಟೆಯಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಮೂರು ಬಾರಿ ಗೆಲುವು ಸಾಧಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ. ಇಲ್ಲಿನ ಮತದಾರರು ಯಾವ ಪಕ್ಷಕ್ಕೆ ಜೈ ಅನ್ನುತ್ತಾರೋ ಅವರೇ ತಾ.ಪಂ, ಜಿ.ಪಂ. ಹಾಗೂ ಶಾಸಕರಾಗಿರುವ ಉದಾಹರಣೆಗಳಿವೆ. ಮುಂಬರುವ ಚುನಾವಣೆಗಳ ದೃಷ್ಟಿಯಿಂದ ಇಲ್ಲಿನ ಗ್ರಾಪಂಗಳ ಮೇಲೆ ಹಿಡಿತ ಸಾಧಿಸುವುದು ಎಲ್ಲ ರಾಜಕೀಯ ನಾಯಕರ ಲೆಕ್ಕಾಚಾರವಾಗಿದೆ.

    ತಾಲೂಕಿನ ಪ್ರತಿ ಗ್ರಾಮಗಳ ಪ್ರಮುಖರ ಸಭೆ ಕರೆದು ಗೃಹ ಸಚಿವ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ಮಾಡಿದ್ದೇವೆ. ಅವರ ಸೂಚನೆಯಂತೆ ಪ್ರತಿ ಗ್ರಾಪಂ ಮಟ್ಟದಲ್ಲಿ ಗ್ರಾಪಂ ಚುನಾವಣಾ ಪ್ರಮುಖರ ನೇಮಕದ ಜತೆಗೆ ಪ್ರತಿ ಹಂತದಲ್ಲೂ ಗ್ರಾಮ ಮಟ್ಟದಲ್ಲಿ ಸಭೆಗಳನ್ನು ನಡೆಸಿ ಅವಿರೋಧ ಆಯ್ಕೆಯ ಜತೆಗೆ ಗೆಲ್ಲುವ ಪ್ರಕ್ರಿಯೆ ನಡೆಸಿದ್ದು, ಎಲ್ಲ 27 ಗ್ರಾಪಂಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಆಯ್ಕೆಯಾಗುವುದು ಖಚಿತ.
    | ಶಿವಾನಂದ ಮ್ಯಾಗೇರಿ, ಅಧ್ಯಕ್ಷ ಬಿಜೆಪಿ ತಾಲೂಕು ಮಂಡಲ

    ತಾಲೂಕಿನಲ್ಲಿ ಎರಡನೇ ಹಂತದ ಚುನಾವಣೆ ಪ್ರಕ್ರಿಯೆಗೆ ತಾಲೂಕಾಡಳಿತ ಸಕಲ ಸಿದ್ಧತೆ ಕೈಗೊಂಡಿದೆ. ಸದಸ್ಯ ಆಕಾಂಕ್ಷಿ ಹಾಗೂ ಮತದಾರರಿಗೆ ಚುನಾವಣೆ ಸಂಬಂಧಪಟ್ಟ ಎಲ್ಲ ಮಾಹಿತಿ ಸ್ಥಳೀಯವಾಗಿ ಲಭ್ಯವಾಗುವಂತೆ ಕ್ರಮ ಕೈಗೊಳ್ಳಲಾಗಿದೆ.
    | ಪ್ರಕಾಶ ಕುದರಿ ತಹಸೀಲ್ದಾರ್ ಶಿಗ್ಗಾಂವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts