More

    ಸ್ಟೇಟ್‌ಬ್ಯಾಂಕ್ ಅಡ್ಡಾದಿಡ್ಡಿ ಪಾರ್ಕಿಂಗ್, ಜನ, ವಾಹನ ಸಂಚಾರ ದುಸ್ತರ

    ಮಂಗಳೂರು: ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕೋಟ್ಯಂತರ ರೂಪಾಯಿ ವಿನಿಯೋಗಿಸಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಆದರೆ ಅವೈಜ್ಞಾನಿಕ ಯೋಜನೆಗಳಿಂದಾಗಿ ಸಂಚಾರ ಸಮಸ್ಯೆಗಳಿಗೆ ಕಾರಣವಾಗುತ್ತಿದೆ ಎನ್ನುವುದು ಸಾರ್ವಜನಿಕರ ಆರೋಪ.

    ಕ್ಲಾಕ್ ಟವರ್‌ನಿಂದ ರಾವ್ ಆ್ಯಂಡ್ ರಾವ್ ಸರ್ಕಲ್ ತನಕ ಇದ್ದ ರಸ್ತೆ ವಿಭಜಕಗಳನ್ನು ತೆರವು ಮಾಡಿದ್ದು, ಯದ್ವಾ ತದ್ವಾ, ಅತಿ ವೇಗದ ವಾಹನ ಚಾಲನೆ ಹೆಚ್ಚಾಗಿದೆ. ಇದರಿಂದ ಅಪಘಾತಗಳು ಸಂಭವಿಸುತ್ತಿದೆ. ಅಮಾಯಕ ಜೀವಗಳು ಬಲಿಯಾಗುತ್ತಿವೆ. ಹ್ಯಾಮಿಲ್ಟನ್ ಸರ್ಕಲ್‌ನಿಂದ ರಾವ್ ಆ್ಯಂಡ್ ರಾವ್ ತನಕ ರಸ್ತೆಗಳಲ್ಲಿದ್ದ ವಿಭಜಕಗಳನ್ನು ತೆಗೆದಿರುವುದರಿಂದ ಸಿಟಿ ಬಸ್‌ಗಳನ್ನು ರಸ್ತೆಯ ನಡು ಭಾಗದಲ್ಲಿ ಪಾರ್ಕಿಂಗ್ ಮಾಡಲಾಗುತ್ತಿದೆ. ಇದರಿಂದ ಇತರ ವಾಹನಗಳಿಗೆ ಸಂಚರಿಸಲು ಸಾಧ್ಯವಾಗದೆ ವಾಹನ ದಟ್ಟಣೆ ಉಂಟಾಗುತ್ತಿದೆ.

    ಈ ಹಿಂದೆ ರಸ್ತೆಯ ಒಂದು ಬದಿಯಲ್ಲಿ ಸಿಟಿ ಬಸ್‌ಗಳನ್ನು ನಿಲ್ಲಿಸುತ್ತಿದ್ದಾಗ ಇನ್ನೊಂದು ರಸ್ತೆಯಲ್ಲಿ ಇತರ ವಾಹನಗಳು ಸುಗಮವಾಗಿ ಸಂಚರಿಸುತ್ತಿದ್ದವು. ಈಗ ಇತರ ವಾಹನಗಳ ಪಾರ್ಕಿಂಗ್, ಬಸ್ ಪಾರ್ಕಿಂಗ್, ಬೀದಿ ಬದಿ ವ್ಯಾಪಾರಸ್ಥರು ರಸ್ತೆಯನ್ನು ಆಕ್ರಮಿಸಿಕೊಂಡಿರುವುದರಿಂದ ಆಗಾಗ ವಾಹನ ದಟ್ಟಣೆ ಉಂಟಾಗುತ್ತಿದೆ.

    ಪ್ರಯಾಣಿಕರ ಪರದಾಟ: ಸ್ಟೇಟ್‌ಬ್ಯಾಂಕ್‌ಗೆ ಬಸ್‌ಗಳಲ್ಲಿ ಬರುವ ಪ್ರಯಾಣಿಕರು ಇಳಿದು ರಸ್ತೆ ದಾಟಲು ಹಾಗು ಬಸ್ ಹತ್ತಲು ಇನ್ನೊಂದು ಭಾಗದಿಂದ ಬರಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ರಸ್ತೆ ವಿಭಜಕ ಇದ್ದಾಗ ರಸ್ತೆ ದಾಟುವವರಿಗೂ ಅನುಕೂಲ ಇತ್ತು. ಸಿಟಿ ಬಸ್‌ಗಳು ಅತಿ ವೇಗವಾಗಿ ಚಲಾಯಿಸಿಕೊಂಡು ಬರುವುದರಿಂದ ಈ ಸ್ಥಳ ಅಪಾಯಕಾರಿಯಾಗಿ ಪರಿಣಮಿಸಿದೆ. 2008 ಮಾರ್ಚ್ 10ರಂದು ಇಲ್ಲಿ ಸ್ನಾತಕೋತ್ತರ ವಿದ್ಯಾರ್ಥಿನಿ ಸಹಿತ ಇಬ್ಬರು ಪಾದಚಾರಿಗಳು ಬಸ್‌ನಡಿಗೆ ಬಿದ್ದು ಮೃತಪಟ್ಟಿದ್ದರು. ಹಲವರು ಗಾಯಗೊಂಡಿದ್ದರು. ಸೂಕ್ತ ಮುನ್ನೆಚ್ಚರಿಕೆ ವಹಿಸದಿದ್ದರೆ ಮತ್ತೊಮ್ಮೆ ಇಂತಹ ದುರ್ಘಟನೆ ನಡೆಯುವ ಸಾಧ್ಯತೆಗಳಿವೆ.

    ತಂಗುದಾಣವಿಲ್ಲ: ಸ್ಟೇಟ್‌ಬ್ಯಾಂಕ್‌ನಲ್ಲಿ ಪ್ರತಿದಿನ ಸಾವಿರಾರು ಪ್ರಯಾಣಿಕರು ಓಡಾಡುತ್ತಾರೆ. ಆದರೆ ಇಲ್ಲಿ ಬಸ್‌ಗೆ ಕಾಯುವ ಪ್ರಯಾಣಿಕರಿಗೆ ಬಸ್ ತಂಗುದಾಣ ಇಲ್ಲ. ಗಾಳಿ, ಮಳೆ, ಬಿಸಿಲಿಗೆ ಧೂಳು ಸೇವಿಸುತ್ತಾ ರಸ್ತೆ ಬದಿಯಲ್ಲೇ ನಿಲ್ಲಬೇಕಾದ ಅನಿವಾರ್ಯತೆ. ಮೂಲ ಸೌಕರ್ಯ ಒದಗಿಸಬೇಕಾದ ಸ್ಥಳೀಯಾಡಳಿತ ಗಮನವೇ ನೀಡುತ್ತಿಲ್ಲ. ಕೆಲವು ತಿಂಗಳ ಹಿಂದೆ ಸಿಟಿ ಬಸ್‌ಗಳನ್ನು ಸರ್ವೀಸ್ ಬಸ್ ತಂಗುದಾಣದ ಒಳಗೆ ಹೋಗಲು ಅವಕಾಶ ಕಲ್ಪಿಸಲಾಗಿತ್ತು. ಆದರೆ ಬಸ್ ಮಾಲೀಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದ ಕಾರಣ ಪ್ರಯಾಣಿಕರು ಸಮಸ್ಯೆ ಅನುಭವಿಸುವಂತಾಗಿದೆ.

    ಸ್ಟೇಟ್‌ಬ್ಯಾಂಕ್‌ನಲ್ಲಿ ಸಂಚರಿಸುವುದು ದುಸ್ತರವಾಗಿದೆ. ಬಸ್‌ಗಳಲ್ಲಿ ಹೋಗುವ ಬಡ, ಮಧ್ಯಮ ವರ್ಗದ ಜತೆ ಶಿಕ್ಷೆ ಅನುಭವಿಸುವಂತಾಗಿದೆ. ಅಲ್ಲಿ ಬಸ್ ತಂಗುದಾಣ ಇಲ್ಲ. ಬಸ್‌ಗಳನ್ನು ರಸ್ತೆಯ ನಡುವೆಯೇ ನಿಲುಗಡೆ ಮಾಡಲಾಗುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿ, ಮೇಯರ್, ಶಾಸಕರ ಗಮನಕ್ಕೆ ತರಲಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಸಾರ್ವಜನಿಕರಿಗೆ ಉಪಯೋಗವಾಗುವ ಕೆಲಸ ನಡೆಯುತ್ತಿಲ್ಲ.

    ಜಿ.ಗೋಪಾಲಕೃಷ್ಣ ಭಟ್
    ಸಾಮಾಜಿಕ ಕಾರ್ಯಕರ್ತ

    ಸ್ಟೇಟ್‌ಬ್ಯಾಂಕ್‌ನಲ್ಲಿರುವ ಸರ್ವೀಸ್ ಬಸ್‌ಸ್ಟಾೃಂಡನ್ನು ವಿಸ್ತರಣೆಗೊಳಿಸಿ ಅಲ್ಲಿ ಸಿಟಿ, ಸರ್ವೀಸ್ ಹಾಗು ಸರ್ಕಾರಿ ಬಸ್‌ಗಳನ್ನು ನಿಲುಗಡೆ ಮಾಡುವ ಯೋಚನೆ ಇದೆ. ಆಗ ಹ್ಯಾಮಿಲ್ಟನ್ ಸರ್ಕಲ್‌ನಿಂದ ರಾವ್ ಆ್ಯಂಡ್ ರಾವ್ ಸರ್ಕಲ್ ತನಕ ರಸ್ತೆಯಲ್ಲಿ ದಟ್ಟಣೆ ಕಡಿಮೆಯಾಗಲಿದೆ.

    ಪ್ರೇಮಾನಂದ ಶೆಟ್ಟಿ
    ಮೇಯರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts