More

    ಪರಿಷತ್ ಚುನಾವಣೆ ಬಿಜೆಪಿ ವರಿಷ್ಠರ ಗ್ರೀನ್ ಸಿಗ್ನಲ್​ನತ್ತ ಚಿತ್ತ

    ವಿಜಯವಾಣಿ ಸುದ್ದಿಜಾಲ ಬೆಂಗಳೂರು

    ವಿಧಾನ ಪರಿಷತ್​ನ ಆರು ಕ್ಷೇತ್ರಗಳ ಚುನಾವಣೆಗೆ ಗುರುವಾರ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಶುರá-ವಾಗಲಿದ್ದರೆ, ಪ್ರತಿಪಕ್ಷ ಬಿಜೆಪಿ ಅಧಿಕೃತ ಅಭ್ಯರ್ಥಿಗಳ ಹೆಸರು ಘೋಷಣೆಗೆ ಮೀನಮೇಷ ಎಣಿಸುತ್ತಿದೆ.

    ತಲಾ ಮೂರು ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳಿಗೆ ಸಂಭಾವ್ಯ ಅಭ್ಯರ್ಥಿಗಳ ಹೆಸರಿನ ಪಟ್ಟಿಯು ದೆಹಲಿಗೆ ಈಗಾಗಲೆ ರವಾನೆಯಾಗಿದೆ. ಪಕ್ಷದ ವರಿಷ್ಠರ ಗ್ರೀನ್ ಸಿಗ್ನಲ್​ಗಾಗಿ ರಾಜ್ಯ ನಾಯಕರು ಕಾಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಚುನಾವಣೆ ನಡೆಯಲಿರುವ ಆರು ಕ್ಷೇತ್ರಗಳ ಪೈಕಿ ಒಂದು ಕರ್ನಾಟಕದ ಉತ್ತರ ಪ್ರಾಂತಕ್ಕೆ ಸೇರಿದ್ದರೆ, ಉಳಿದ ಐದು ದಕ್ಷಿಣ ಪ್ರಾಂತದಲ್ಲಿವೆ. ಲೋಕಸಭೆ ಚುನಾವಣೆ ಮೇಲೆ ಅಡ್ಡಪರಿಣಾಮ ತಪ್ಪಿಸಲು ದೆಹಲಿ ಪಡೆ ವಿಳಂಬ ತಂತ್ರಕ್ಕೆ ಮೊರೆ ಹೋದರು ಎನ್ನಲಾಗಿದೆ. ಲೋಕಸಭೆಗೆ ಎರಡು ಹಂತದ ಮತದಾಗ ಮುಗಿದಿರುವ ಕಾರಣ ಗುರುವಾರ ಅಥವಾ ಶುಕ್ರವಾರ ಅಧಿಕೃತ ಅಭ್ಯರ್ಥಿಗಳ ಘೋಷಣೆಯಾಗುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ರಾಜ್ಯ ಸಮಿತಿ ಮೇ 11ರಂದು ಪೂರ್ವಸಿದ್ಧತಾ ಸಭೆ ನಡೆಸಲು ಯೋಚಿಸಿದೆ.

    ಆಕಾಂಕ್ಷಿಗಳ ತಳಮಳ: ಟಿಕೆಟ್​ಗೆ ತೀವ್ರ ಪೈಪೋಟಿ, ಕಾಲಾವಕಾಶದ ಕೊರತೆ. ಇವೆರಡು ಅಂಶಗಳು ಆಕಾಂಕ್ಷಿಗಳ ತಳಮಳಕ್ಕೆ ಕಾರಣವಾಗಿದ್ದು, ಕ್ಷೇತ್ರ ಪೂರ್ತಿ ಒಮ್ಮೆ ಸುತ್ತುವುದೂ ಕಷ್ಟ ಸಾಧ್ಯವೆಂಬ ಮಾತು ಕೇಳಿಬರುತ್ತಿದೆ. ಮೇಲ್ಮನೆ ಚುನಾವಣೆಗೆ ಅಭ್ಯರ್ಥಿಗಳ ಹೆಸರು ಪ್ರಕಟಿಸುವಲ್ಲಿ ಬಿಜೆಪಿ ಸದಾ ಮುಂದಿರುತ್ತಿತ್ತು. ಆದರೆ ಈ ಚುನಾವಣೆ ಪ್ರಕ್ರಿಯೆ ಶುರುವಾದರೂ ದೆಹಲಿ ನಾಯಕರು ಸುಳಿವು ಬಿಟ್ಟುಕೊಟ್ಟಿಲ್ಲ. ಮೇ 20ಕ್ಕೆ ನಾಮಪತ್ರ ವಾಪಸ್ ಗಡುವು ಮುಗಿದರೆ ಜೂ.3ಕ್ಕೆ ಮತದಾನ ನಡೆಯಲಿದೆ. ನಾಮಪತ್ರ ಸಲ್ಲಿಸಿದ ನಂತರ ಪ್ರಚಾರಕ್ಕೆ ಬಹಳವೆಂದರೆ 15 ದಿನಗಳು ಸಿಗಲಿವೆ.

    ಪ್ರತಿಯೊಂದು ವಿಧಾನ ಪರಿಷತ್ ಕ್ಷೇತ್ರದಲ್ಲಿ 31 ರಿಂದ 42 ವಿಧಾನಸಭೆ ಕ್ಷೇತ್ರಗಳಿವೆ. ಒಂದು ಸುತ್ತಿನ ಪ್ರವಾಸಕ್ಕೆ ಪ್ರಚಾರ ಸೀಮಿತವಾಗಲಿದೆ ಎಂಬ ಸಂಕಟದಿಂದ ಆಕಾಂಕ್ಷಿಗಳು ತೊಳಲಾಡುತ್ತಿದ್ದಾರೆ. ಈ ಮಧ್ಯೆ ಎರಡಕ್ಕಿಂತ ಹೆಚ್ಚು ಪ್ರಬಲ ಆಕಾಂಕ್ಷಿಗಳಿರುವ ಕ್ಷೇತ್ರಗಳಲ್ಲಿ ಅಭಿಪ್ರಾಯ ಸಂಗ್ರಹವಾಗುತ್ತಿದೆ. ವರಿಷ್ಠರು ತಮ್ಮದೇ ಆದ ನೆಟ್​ವರ್ಕ್ ಬಳಸಿಕೊಂಡು ಈ ಕೆಲಸಕ್ಕೆ ಕೈಹಾಕಿದ್ದಾರೆ ಎಂದು ಮೂಲಗಳು ಹೇಳಿವೆ.

    ಬಿಜೆಪಿ-ದಳ ಮೈತ್ರಿ ಅಬಾಧಿತ: ಪ್ರಜ್ವಲ್ ರೇವಣ್ಣ ಪ್ರಕರಣವು ಜೆಡಿಎಸ್​ಗೆ ಸಂದಿಗ್ಧ, ಬಿಜೆಪಿಗೆ ಮುಜುಗರ ಉಂಟು ಮಾಡಿದ್ದರೂ ಉಭಯ ಪಕ್ಷಗಳ ಮೈತ್ರಿ ಅಬಾಧಿತವೆಂದು ಹಿರಿಯ ನಾಯಕರೊಬ್ಬರು ಹೇಳುತ್ತಾರೆ. ಲೋಕಸಭೆಗೆ ಇನ್ನೂ ನಾಲ್ಕು ಹಂತದ ಮತದಾನ ಬಾಕಿಯಿರುವುದು ಒಂದೆಡೆಯಾದರೆ, ಸಂಕಷ್ಟ ಕಾಲದಲ್ಲಿ ಜೆಡಿಎಸ್ ಪಕ್ಷವನ್ನು ಕೈಬಿಡುವಮಟ್ಟಕ್ಕೆ ವರಿಷ್ಠರ ಆಲೋಚನೆಯಿರುವುದಿಲ್ಲ. ಪ್ರಜ್ವಲ್ ತಪು್ಪ ಮಾಡಿದ್ದರೆ ಕಾನೂನಾತ್ಮಕ ಕ್ರಮವಾಗಲಿ ಎಂದು ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ ಪಕ್ಷದ ನಿಲುವು ದೃಢಪಡಿಸಿದ್ದರೆ, ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಸಹಮತ ವ್ಯಕ್ತಪಡಿಸಿದ್ದಾರೆ. ಕಾನೂನಾತ್ಮಕ ಹೋರಾಟದ ವಿಷಯದಲ್ಲೂ ಎರಡು ಪಕ್ಷಗಳ ಮಧ್ಯೆ ಯಾವುದೇ ತಂಟೆ-ತಕರಾರು ತಲೆ ಎತ್ತುವ ಪ್ರಶ್ನೆಯೇ ಇಲ್ಲ. ಮೈತ್ರಿಯು ವಿಚಾರದಲ್ಲಿ ಉಭಯ ನಾಯಕರ ಮಧ್ಯೆ ಸ್ಪಷ್ಟತೆಯಿದೆ. ಲೋಕಸಭೆ ಚುನಾವಣೆ ಪೂರ್ವ ಮಾತುಕತೆ ಪ್ರಕಾರ ನೈಋತ್ಯ ಪದವೀಧರ ಮತ್ತು ದಕ್ಷಿಣ ಶಿಕ್ಷಕರ ಕ್ಷೇತ್ರವನ್ನು ಜೆಡಿಎಸ್​ಗೆ ಬಿಟ್ಟುಕೊಡುವ ಸಾಧ್ಯತೆಗಳಿವೆ ಎಂದು ಮೂಲಗಳು ಹೇಳಿವೆ.

    ಹೊಣೆ ಹಂಚಿಕೆಗೆ ಕೈ ತಯಾರಿ

    ಬೆಂಗಳೂರು: ಲೋಕಸಭೆ ಚುನಾವಣೆ ಮುಗಿಸಿ ವಿಶ್ರಾಂತಿ ಮೂಡ್​ನಲ್ಲಿರುವ ಕಾಂಗ್ರೆಸ್ ನಾಯಕರು ವಿಧಾನ ಪರಿಷತ್ ಚುನಾವಣೆಗೆ ಶುಕ್ರವಾರ ತಾಲೀಮು ಆರಂಭಿಸಲಿದ್ದಾರೆ.

    ಚ

    ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ವಿಶ್ರಾಂತಿ ಮುಗಿಸಿ ಮರಳಿದ ಬಳಿಕ ಚುನಾವಣೆ ಸಂಬಂಧ ಸಭೆ ನಡೆಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಪಕ್ಷದ ಕಾರ್ಯಾಧ್ಯಕ್ಷರು, ಉಪಾಧ್ಯಕ್ಷರು, ಪ್ರಧಾನಕಾರ್ಯದರ್ಶಿಗಳ ತಂಡ ರಚಿಸುವ ಜತೆಗೆ ಜಿಲ್ಲಾ ಉಸ್ತುವಾರಿ ಸಚಿವರಿಗೂ ಅಭ್ಯರ್ಥಿಗಳನ್ನು ಗೆಲ್ಲಿಸುವ ಹೊಣೆಗಾರಿಕೆ ನೀಡಲಾಗುತ್ತದೆ. ಮೇ 9ರಂದು ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯಲಿದ್ದು, ಪೂರ್ವ ತಯಾರಿ ಮಾಡಿಕೊಳ್ಳುವಂತೆ ಅಭ್ಯರ್ಥಿಗಳಿಗೆ ಸೂಚನೆ ನೀಡಲಾಗಿದೆ.

    ಈಶಾನ್ಯ ಪದವೀಧರ ಕ್ಷೇತ್ರದಿಂದ ಚಂದ್ರಶೇಖರ ಪಾಟೀಲ್, ನೈಋತ್ಯ ಪದವೀಧರ ಕ್ಷೇತ್ರದಿಂದ ಆಯನೂರು ಮಂಜುನಾಥ್, ಬೆಂಗಳೂರು ಪದವೀಧರ ಕ್ಷೇತ್ರದಿಂದ ರಾಮೋಜಿಗೌಡ, ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ಶ್ರೀನಿವಾಸ್ ಹೆಸರು ಅಂತಿಮಗೊಂಡಿದೆ. ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಮರಿತಿಬ್ಬೇಗೌಡ ಹೆಸರು ಘೋಷಣೆ ಬಾಕಿ ಇದೆ. ಈ ನಡುವೆ ನೈಋತ್ಯ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್​ಗೆ ಬಂಡಾಯ ಕಾಣಿಸಿದೆ. ಅದನ್ನು ಶಮನ ಮಾಡುವ ನಿಟ್ಟಿನಲ್ಲಿ ಪ್ರಯತ್ನ ಆರಂಭವಾಗಿದೆ. ಚುನಾವಣೆಯಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿ ಹಾಕಿದರೆ ಮಾಡಬೇಕಾದ ಕಾರ್ಯತಂತ್ರದ ಕುರಿತಂತೆಯೂ ಶುಕ್ರವಾರದ ಬಳಿಕ ನಡೆಯುವ ಪ್ರಮುಖರ ಸಭೆಯಲ್ಲಿ ಚರ್ಚೆ ಮಾಡಲಾಗುತ್ತದೆ. ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ನಡೆಸಿದ ಕಾರ್ಯತಂತ್ರದಂತೆಯೇ ಇಲ್ಲೂ ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡಲಾಗುತ್ತದೆ ಎಂದು ಪಕ್ಷದ ಪ್ರಮುಖ ನಾಯಕರೊಬ್ಬರು ತಿಳಿಸಿದ್ದಾರೆ.

    ಕಾಶ್ಮೀರದಲ್ಲಿ ಮುಂದುವರಿದ ಸೇನಾ ಕಾರ್ಯಾಚರಣೆ: ಓರ್ವ ಉಗ್ರನ ಹತ್ಯೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts